ದಾವಣಗೆರೆ ಉಪಚುನಾವಣೆ ಮುಗಿದರೂ, ಮುಸ್ಲಿಮರು ಟಿಕೆಟ್ ಸಿಗದೆ ನಿರಾಸೆಯಾದರೂ, ಕಾಂಗ್ರೆಸ್ ಪಕ್ಷ ಈಗ ಶಿಸ್ತು ಉಲ್ಲಂಘನೆಯ ನೆಪದಲ್ಲಿ ಜಬ್ಬಾರ್, ನಸೀರ್ ಅಹಮದ್ರನ್ನು ಬಲಿ ಹಾಕಿದೆ. ಈ ನಡುವೆ ಸಚಿವ ಜಮೀರ್ ಅವರನ್ನು ಜೆಡಿಎಸ್ನ ಕುಮಾರಸ್ವಾಮಿ ಸಂಪರ್ಕಿಸಿ, ಪಕ್ಷಕ್ಕೆ ಮರಳುವಂತೆ ಕೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ...
ಅದು 2023ರ ವಿಧಾನಸಭಾ ಚುನಾವಣಾ ಸಂದರ್ಭ. ಆಗ ಬಹಿರಂಗ ಸಭೆಯೊಂದರಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು, ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮುಸ್ಲಿಮರ ಅಭಿವೃದ್ಧಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿ ಮೀಸಲಿಡ್ತೇನೆ’ ಎಂದು ಭರವಸೆ ನೀಡಿದ್ದರು.
ಅದಕ್ಕೆ ಪ್ರತಿಯಾಗಿ ಜೆಡಿಎಸ್ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಮುಸ್ಲಿಮರನ್ನೇ ಸಿಎಂ ಮಾಡ್ತೇನೆ’ ಎಂದು ಘೋಷಿಸಿದ್ದರು. ಅದನ್ನು ಪುಷ್ಟೀಕರಿಸಲು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಸಿ.ಎಂ. ಇಬ್ರಾಹಿಂ ಅವರನ್ನ ನೇಮಕ ಮಾಡಿ, ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದರು.
ಕುತೂಹಲಕರ ಸಂಗತಿ ಎಂದರೆ, ರಾಷ್ಟ್ರೀಯ ಪಕ್ಷವೆನಿಸಿಕೊಂಡಿರುವ ಭಾರತೀಯ ಜನತಾ ಪಕ್ಷ ಮುಸ್ಲಿಮರನ್ನು ಅನ್ಯರಂತೆ ಪರಿಗಣಿಸಿತು. 10 ಸಾವಿರ ಕೋಟಿ ಕೊಡುವುದಿರಲಿ, ಸಿಎಂ ಮಾಡುವುದಿರಲಿ, ಒಬ್ಬನೇ ಒಬ್ಬ ಮುಸ್ಲಿಂ ನಾಯಕನಿಗೂ ಟಿಕೆಟ್ ಕೊಡದೇ ನಿರ್ಲಕ್ಷಿಸಿತ್ತು.
ಅಂದರೆ, ಕರ್ನಾಟಕದ ಮೂರು ಮುಖ್ಯ ರಾಜಕೀಯ ಪಕ್ಷಗಳಲ್ಲಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಮುಸ್ಲಿಮರು ಬೇಕು, ಬಿಜೆಪಿಗೆ ಬೇಡ ಎನ್ನುವುದು ಸ್ಪಷ್ಟವಾಗಿತ್ತು. ಹಾಗೆಯೇ ಸುಮಾರು ಒಂದು ಕೋಟಿ ಜನಸಂಖ್ಯೆಯಿರುವ, ನಿರ್ಣಾಯಕ ಸ್ಥಾನದಲ್ಲಿರುವ ಮುಸ್ಲಿಮ್ ಸಮುದಾಯ, ಒಂದು ಕಾಂಗ್ರೆಸ್ ಬೆಂಬಲಿಸಬೇಕು, ಇಲ್ಲ ಜೆಡಿಎಸ್ ಪರ ನಿಲುವು ತಳೆಯಬೇಕು ಎಂಬ ಡೋಲಾಯಮಾನ ಸ್ಥಿತಿ ತಲುಪಿತ್ತು. ಸಮರ್ಥ ನಾಯಕರಿಲ್ಲದೆ ಸೊರಗಿರುವ ರಾಜ್ಯ ಮುಸ್ಲಿಂ ಸಮುದಾಯ ಕೊನೆಗೆ ಅಳೆದು ಸುರಿದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾರಾಸಗಟಾಗಿ ಕಾಂಗ್ರೆಸ್ ಬೆಂಬಲಿಸಿತ್ತು. ಮುಸ್ಲಿಮರ ಬೆಂಬಲದಿಂದ ಕಾಂಗ್ರೆಸ್ ಬಹುಮತ ಪಡೆದು, ಅಧಿಕಾರಕ್ಕೂ ಏರಿತ್ತು.
ಇದನ್ನು ಓದಿದ್ದೀರಾ?: ‘ಅಹಿಂದ’ದಿಂದ ಬೆಳೆದ ಸಿದ್ದರಾಮಯ್ಯ, ‘ಅಹಿಂದ’ಕ್ಕೆ ಬದ್ಧರಾಗಿದ್ದಾರೆಯೇ?
ಗೆದ್ದ ಕಾಂಗ್ರೆಸ್ ಮಾತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದಿಂದ ಗೆದ್ದ 7 ಮಂದಿ ಶಾಸಕರಲ್ಲಿ ಯು.ಟಿ. ಖಾದರ್ ಅವರನ್ನು ಸ್ಪೀಕರ್ ಕುರ್ಚಿಯಲ್ಲಿ ಕೂರಿಸಿದರೆ, ಜಮೀರ್ ಅಹಮದ್ ಖಾನ್ರಿಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವರನ್ನಾಗಿಸಿತು. ರಹೀಂ ಖಾನ್ರನ್ನು ಹಜ್ ಮತ್ತು ಪೌರಾಡಳಿತ ಸಚಿವರನ್ನಾಗಿ ಮಾಡಿತು. ಹ್ಯಾರಿಸ್ ಅವರನ್ನು ಬಿಡಿಎ ಚೇರ್ಮನ್ ಮಾಡಿದರೆ, ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹಮದ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಅಬ್ದುಲ್ ಜಬ್ಬಾರ್ ಅವರನ್ನು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿಸಿತು.
ಇನ್ನು ಚುನಾವಣೆಗೆ ಮುನ್ನ, ಕಾಂಗ್ರೆಸ್ ಗೆದ್ದರೆ ಪ್ರತಿವರ್ಷ 10 ಸಾವಿರ ಕೋಟಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದ ಸಿದ್ದರಾಮಯ್ಯನವರೇ, ಮತ್ತೊಮ್ಮೆ ಮುಖ್ಯಮಂತ್ರಿಗಳಾದರು. ಮುಸ್ಲಿಂ ಸಮುದಾಯ ಕೂಡ ಅವರತ್ತ ಆಸೆಗಣ್ಣಿನಿಂದ ನೋಡುತ್ತಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, 2023-24ರಲ್ಲಿ 3,409 ಕೋಟಿ, 2024-25ರಲ್ಲಿ 4,535 ಕೋಟಿ ಮತ್ತು 2025-26ರಲ್ಲಿ 4,500 ಕೋಟಿಯನ್ನು ಬಜೆಟ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಿಟ್ಟರು. ಆದರೆ ಖರ್ಚಾದದ್ದು ಹಾಗೂ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಬಳಕೆಯಾದದ್ದು ಎಷ್ಟು ಎನ್ನುವುದು ಯಾರಿಗೂ ಗೊತ್ತಿಲ್ಲ.
ಈ ನಡುವೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಯಿತು. ವಂಶ ಪಾರಂಪರ್ಯ ರಾಜಕಾರಣಕ್ಕೆ ತಲೆಬಾಗಿದ ಕಾಂಗ್ರೆಸ್ ಪಕ್ಷ, ಸಾಹುಕಾರ್ ಶಾಮನೂರು ಶಿವಶಂಕರಪ್ಪನವರ ಮೊಮ್ಮಗನಿಗೆ ಟಿಕೆಟ್ ನೀಡಿ, ರಾಜಕೀಯ ಮೌಲ್ಯ, ಸಿದ್ಧಾಂತಕ್ಕೆ ಎಳ್ಳುನೀರು ಬಿಟ್ಟಿತು. ದಾವಣಗೆರೆ ದಕ್ಷಿಣ ಮುಸ್ಲಿಮರು ಗೆಲ್ಲುವ ಕ್ಷೇತ್ರವಾಗಿದ್ದರೂ, ಕಾಂಗ್ರೆಸ್ ಟಿಕೆಟ್ ನೀಡದೆ ಮುಸ್ಲಿಮರನ್ನು ಕಡೆಗಣಿಸಿತು.
ಅಷ್ಟೇ ಅಲ್ಲ, ಮೊದಲಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಪ್ರದರ್ಶಿಸುತ್ತಿರುವ, ಬೆನ್ನಿಗೆ ನಿಂತು ಬೆಂಬಲಿಸುತ್ತಿರುವ ರಾಜ್ಯದ ಮುಸ್ಲಿಂ ಸಮುದಾಯವನ್ನು, ಮುಸ್ಲಿಂ ಮುಖಂಡರನ್ನು ಪಕ್ಷ ಈಗ ಅನುಮಾನದಿಂದ ನೋಡುತ್ತಿದೆ. ಸಂಪೂರ್ಣ ಸಹಕಾರ ನೀಡಲಿಲ್ಲ, ಪಕ್ಷದ ಶಿಸ್ತನ್ನು ಪಾಲಿಸಲಿಲ್ಲ ಎಂಬ ಕಾರಣವೊಡ್ಡಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ರಾಜೀನಾಮೆ ಪಡೆದಿದೆ ಮತ್ತು ಪಕ್ಷವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಕ್ಷದಿಂದಲೇ ಅಮಾನತು ಮಾಡಿದೆ. ಮುಂದುವರೆದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹಮದ್ ಅವರನ್ನು ವಜಾ ಮಾಡಿ ಅವಮಾನಿಸಿದೆ.
ಏತನ್ಮಧ್ಯೆ, ದಾವಣಗೆರೆ ದಕ್ಷಿಣ ಕ್ಷೇತ್ರದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ನಡುವೆಯೇ ಮಂಗಳವಾರ ಸಚಿವ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಒಂದೂವರೆ ತಾಸು ಮಾತುಕತೆ ನಡೆಸಿದ್ದಾರೆ. ಈ ವೇಳೆ ಯಾವುದೇ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಜಮೀರ್ ಅವರಿಗೆ ಸಿಎಂ ಅಭಯ ನೀಡಿದ್ದರೂ, ಹೈಕಮಾಂಡ್ ಅಪೇಕ್ಷಿಸಿರುವ ಹಿನ್ನೆಲೆಯಲ್ಲಿ ಸೂಕ್ತ ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಈ ಸಂಬಂಧ ವರಿಷ್ಠರೊಂದಿಗೆ ಮಾತನಾಡಬೇಕಾಗುತ್ತದೆ ಎಂದು ಸಿಎಂ ಸೂಚಿಸಿದರು ಎನ್ನಲಾಗಿದೆ.
ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ ಸುಮಾರು ಒಂದು ಕೋಟಿಯಷ್ಟಿದೆ. ಕಡಿಮೆ ಎಂದರೂ 20 ಕ್ಷೇತ್ರಗಳಲ್ಲಿ ಗೆಲ್ಲುವ, 50 ಕ್ಷೇತ್ರಗಳಲ್ಲಿ ಪೈಪೋಟಿ ನೀಡುವ ಮಟ್ಟದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ, 2023ರ ಚುನಾವಣೆಯಲ್ಲಿ 15 ಮಂದಿಗೆ ಟಿಕೆಟ್ ನೀಡಿತು. ಅದರಲ್ಲಿ ಗೆದ್ದ 9 ಶಾಸಕರಲ್ಲಿ ಕೆಲವರಿಗಷ್ಟೇ ಅಧಿಕಾರ ಸ್ಥಾನಗಳನ್ನು ನೀಡಿದೆ. ಈಗ ಅದನ್ನೂ ಕಾಂಗ್ರೆಸ್, ಪಕ್ಷ ನಿಷ್ಠೆ ಮತ್ತು ಶಿಸ್ತಿನ ನಡವಳಿಕೆಯನ್ನು ಮುಂದೆ ಮಾಡಿ ಕಿತ್ತುಕೊಳ್ಳುತ್ತಿದೆ. ಶಿಸ್ತನ್ನು ಉಲ್ಲಂಘಿಸಿದ ಶಾಮನೂರು ಕುಟುಂಬದ ವಿರುದ್ಧ ಚಕಾರವೆತ್ತದೆ, ರಾಜಕೀಯವಾಗಿ ಹಿಂದುಳಿದ ಮುಸ್ಲಿಮರನ್ನು ಬಲಿಹಾಕಲು ಮುಂದಾಗಿದೆ. ಸಾಮಾಜಿಕ ನ್ಯಾಯಕ್ಕೆ ಕೊಳ್ಳಿ ಇಡುತ್ತಿದೆ.

ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಿದ ರಾಜ್ಯ ಮುಸ್ಲಿಂ ಸಮುದಾಯ ಈಗ ಕವಲು ಹಾದಿಯಲ್ಲಿದೆ. ಇಂತಹ ಅನಿಶ್ಚಿತ ಸಂದರ್ಭವನ್ನು ರಾಜಕೀಯವಾಗಿ ಬಳಸಿಕೊಳ್ಳಲು, ಮುಸ್ಲಿಂ ನಾಯಕರನ್ನು ತನ್ನತ್ತ ಸೆಳೆಯಲು, ಅದರಿಂದ ಅಧಿಕಾರದತ್ತ ದಾಪುಗಾಲು ಹಾಕಲು ಜೆಡಿಎಸ್ ಹವಣಿಸುತ್ತಿದೆ.
ಒಂದು ಮೂಲದ ಪ್ರಕಾರ, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿಯವರ ಸೂಚನೆಯಂತೆ, ಜೆಡಿಎಸ್ನ ಹಿರಿಯ ನಾಯಕರೊಬ್ಬರು ನಿನ್ನೆ ಮಂಗಳವಾರವೇ ಸಚಿವ ಜಮೀರ್ ಅಹಮದ್ ಅವರನ್ನು ಸಂಪರ್ಕಿಸಿ, ‘ನೀವು ಪಕ್ಷಕ್ಕೆ ಹಿಂದಿರುಗಿದರೆ, ಬಿಜೆಪಿ ಮೈತ್ರಿಯನ್ನು ಕಡಿದುಕೊಂಡು, 2028ರ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ. ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿ ಉದ್ಭವವಾಗುತ್ತದೆ. ಅಧಿಕಾರಕ್ಕೇರುವ ಸಂಭವವೂ ಇದೆ. ನಿಮಗೆ ಉತ್ತಮ ಸ್ಥಾನಮಾನ ನೀಡಲಾಗುವುದು’ ಎಂಬ ಕುಮಾರಸ್ವಾಮಿಯವರ ಸಂದೇಶವನ್ನು ತಲುಪಿಸಿದ್ದಾರೆಂಬ ಸುದ್ದಿ ಇದೆ.
ಹಾಗೆ ನೋಡಿದರೆ, ಜಮೀರ್ ಅಹಮದ್ ಖಾನ್ ರಾಜಕಾರಣಕ್ಕೆ ಬಂದದ್ದೇ ದೇವೇಗೌಡರ ಕಡೆಯಿಂದ. ಮಂತ್ರಿಯಾಗಿದ್ದು ಕೂಡ ಕುಮಾರಸ್ವಾಮಿ ಕೃಪೆಯಿಂದ. ಇಬ್ಬರ ನಡುವೆ ರಾಜಕಾರಣಕ್ಕೂ ಮೀರಿದ ಗೆಳೆತನವಿದೆ. ಆ ಹಳೆಯ ಗೆಳೆತನವನ್ನು ಮುಂದಿಟ್ಟೇ ಸಂಪರ್ಕಿಸಲಾಗಿದೆ. ಇದು ರಾಜಕೀಯ ವಲಯದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಜಮೀರ್ ನಡೆ ಏನು ಎನ್ನುವುದು ಎಲ್ಲರ ಕುತೂಹಲವಾಗಿದೆ. ಮುಸ್ಲಿಂ ಸಮುದಾಯ ಗೊಂದಲದಲ್ಲಿದೆ.
ಒಂದಂತೂ ಸತ್ಯ, ಕೋಮುವಾದಿ ಬಿಜೆಪಿಯನ್ನು ಬಿಟ್ಟು ಜಾತ್ಯತೀತ ನಿಲುವು ಹೊಂದಿರುವ ಪಕ್ಷಗಳತ್ತ ಮುಸ್ಲಿಮರು ಒಲವು ತಳೆಯುವುದು, ಆ ಪಕ್ಷಗಳು ಆ ಸಮುದಾಯವನ್ನು ಬಳಸಿಕೊಂಡು ಬಿಸಾಡುವುದು, ಮುಸ್ಲಿಮರ ದುರಂತದಂತೆ ಕಾಣತೊಡಗಿದೆ.
ಮುಸ್ಲಿಮರಲ್ಲಿ ಸಮರ್ಥ ನಾಯಕರ ಕೊರತೆ ಇರಬಹುದು. ಇದ್ದರೂ ಒಗ್ಗಟ್ಟಿಲ್ಲದಿರಬಹುದು. ಆ ಸಮುದಾಯಕ್ಕೆ ಸೂಕ್ತ ಶಿಕ್ಷಣ ಇಲ್ಲದಿರಬಹುದು. ಮೌಲ್ವಿಗಳ ಮಾತು ಕೇಳಬಹುದು. ನಮ್ಮ ಮಾತುಗಳು ಇಲ್ಲಿ ನಡೆಯುವುದಿಲ್ಲವೆಂದು ಬುದ್ಧಿಜೀವಿ-ಚಿಂತಕರು ಸೈಲೆಂಟಾಗಿರಬಹುದು. ಆದರೆ ಈ ಕೊರತೆಗಳನ್ನು ರಾಜಕೀಯ ಪಕ್ಷಗಳು ದುರಪಯೋಗಪಡಿಸಿಕೊಳ್ಳಬಹುದೇ? ಇಡೀ ಒಂದು ಸಮುದಾಯವನ್ನೇ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳಬಹುದೇ? ಹಾಗಾದರೆ, ಈ ದೇಶದ ಪ್ರಜೆಗಳಾದ ಮುಸ್ಲಿಮರು ಎಲ್ಲಿಗೆ ಹೋಗಬೇಕು, ಯಾರನ್ನು ಬೆಂಬಲಿಸಬೇಕು?
ಇದನ್ನು ಓದಿದ್ದೀರಾ?: ಏಳು ಕೊಲೆ ಆರೋಪಿ ಈಗ ಬಿಹಾರದ ಮುಖ್ಯಮಂತ್ರಿ!
ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ತಮ್ಮ ಸ್ವಾರ್ಥಕ್ಕಾಗಿ ಜೆಡಿಎಸ್ ಎಂಬ ಪ್ರಾದೇಶಿಕ ಪಕ್ಷವನ್ನು ಪ್ರಧಾನಿ ಮೋದಿಯವರ ಪದತಲಕ್ಕೆ ಒಪ್ಪಿಸಿಯಾಗಿದೆ. ಅದಕ್ಕೆ ಪ್ರತಿಫಲವಾಗಿ ಕುಟುಂಬದ ಕುಡಿಯನ್ನು ಕೇಂದ್ರ ಸಚಿವರನ್ನಾಗಿಸಿದ್ದೂ ಆಗಿದೆ. ಅಷ್ಟೇ ಅಲ್ಲ, ಈಗ ಮತ್ತೊಮ್ಮೆ ರಾಜ್ಯಸಭಾ ಸದಸ್ಯರಾಗಬೇಕೆಂಬ ದುರಾಸೆಯಿಂದ ಗೌಡರು, ಮೋದಿಯನ್ನು ಹಾಡಿ ಹೊಗಳುವುದೂ ನಡೆಯುತ್ತಿದೆ. ಅಂದರೆ, ಇಂದು ಸಮಾಜವಾದಿ ನಿತೀಶ್ ಕುಮಾರ್, ಬಿಹಾರವನ್ನು ಕೋಮುವಾದಿ ಬಿಜೆಪಿಗೆ ಧಾರೆ ಎರೆದುಕೊಟ್ಟಂತೆ; ಕರ್ನಾಟಕ ಹಾಳಾದರೂ ಪರವಾಗಿಲ್ಲ ತಾವು ತಮ್ಮ ಕುಟುಂಬ ಸುರಕ್ಷಿತವಾಗಿರಬೇಕೆಂಬ ಧಾವಂತದಲ್ಲಿದ್ದಾರೆ ದೊಡ್ಡಗೌಡರು.
ಇಂತಹ ಜೆಡಿಎಸ್ ಎಂಬ ಬೆಂಕಿಯ ಸಹವಾಸಕ್ಕೆ ಮುಸ್ಲಿಂ ನಾಯಕರು ಹೋದರೆ, ಬರಿ ಬಳಸಿಕೊಳ್ಳುವುದಲ್ಲ, ಸುಟ್ಟು ಕರಕಲಾಗುವುದು ಖಂಡಿತ. ಹಾಗಾಗಿ ಇದ್ದುದರಲ್ಲಿಯೇ ಕಡಿಮೆ ಕಳ್ಳರನ್ನು, ಸುಳ್ಳರನ್ನು ಹೊಂದಿರುವ ಕಾಂಗ್ರೆಸ್ ಎಂಬ ಸುಡುವ ಬಾಣಲೆಯನ್ನು ಆಯ್ಕೆ ಮಾಡಿಕೊಳ್ಳುವುದು- ಇದು ಅನ್ಯಾಯದ ಮಾರ್ಗವಾದರೂ ಮುಸ್ಲಿಮರಿಗೆ ಅನಿವಾರ್ಯವಾಗಿದೆ.

ಲೇಖಕ, ಪತ್ರಕರ್ತ



