ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್, ಪಾಕಿಸ್ತಾನ ಮತ್ತು ಟಿರ್ಕಿ ಯಾವುದೂ ಇಲ್ಲ. ಕೊಲ್ಲಿ ರಾಷ್ಟ್ರಗಳು ಒಂದಾಗಿದ್ದರೆ, ಸೌದಿಗೆ ಇಂತಹ ಹೀನಾಯ ಸ್ಥಿತಿ ಎದುರಾಗುತ್ತಿತ್ತೇ?
ಜುಲೈ ತಿಂಗಳ ಮಧ್ಯಭಾಗದಲ್ಲಿ ಸೌದಿ ಅರೇಬಿಯಾ ಯೆಮನ್‌ನ ಅನ್ಸಾರ್ ಅಲ್ಲಾ ಸರ್ಕಾರ ಮತ್ತು ಹೌತಿ ಚಳವಳಿಗಾರರ ವಿರುದ್ಧದ ಯುದ್ಧವನ್ನು ಮತ್ತೆ ಆರಂಭಿಸಿತು. ಸನಾ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸೌದಿ ನೇತೃತ್ವದ ಪಡೆಗಳು ಬಾಂಬ್ ದಾಳಿ ನಡೆಸಿದವು.
ಸೌದಿ ಮತ್ತು ಯೆಮನ್ ದೇಶಗಳ ನಡುವಿನ ಕದನ ಇವತ್ತಿನದಲ್ಲ. 2012ರಿಂದ 2022ರವರೆಗೆ ಸೌದಿ ಅರೇಬಿಯಾ, ಯೆಮನ್ ಮೇಲೆ ನಿರಂತರ ದಾಳಿ ಮಾಡುತ್ತಲೇ ಬಂದಿದೆ. ಹೀಗೆ ಯೆಮನ್ ಮೇಲೆ ಸೌದಿ ದಾಳಿ ಮಾಡಲು ಪ್ರಮುಖ ಕಾರಣ- ಯೆಮನ್ ಚಿಕ್ಕ ರಾಷ್ಟ್ರ, ಅದು ಯಾವಾಗಲೂ ತನ್ನ ಹಿಡಿತದಲ್ಲಿರಬೇಕೆಂಬ ದುಷ್ಟ ಆಲೋಚನೆ. ಆ ದುಷ್ಟ ಬುದ್ಧಿಗೆ ಬಲಿಯಾದ ಬಡ ಯೆಮನ್ ನಿರಂತರ ದಮನ-ದಬ್ಬಾಳಿಕೆಗೆ ಬಲಿಯಾಗುತ್ತಲೇ ಬಂದಿದೆ. ಜೊತೆಗೆ ಯೆಮನ್ ಪ್ಯಾಲೆಸ್ತೀನ್ ಪರ ನಿಲುವು ಹಾಗೂ ಹೌತಿ ಚಳವಳಿಗೆ ಸಹಕರಿಸುತ್ತಿರುವುದು ಸೌದಿಗೆ ಸಹಿಸದಾಗಿದೆ. ಆದರೂ 2022ರಲ್ಲಿ ಎರಡು ದೇಶಗಳ ನಡುವೆ ಶಾಂತಿ ಒಪ್ಪಂದವಾಗಿತ್ತು.
10 ವರ್ಷಗಳ ನಿರಂತರ ದಾಳಿಗೆ ಒಳಗಾದ ಯೆಮನ್, ಮೊದಲೇ ಬಡ ರಾಷ್ಟ್ರವಾಗಿದ್ದು, ಈಗ ದಾಳಿಯ ನಂತರ ಅತ್ಯಂತ ಬಡ ದೇಶವಾಗಿ ಮಾರ್ಪಟ್ಟಿದೆ. ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ಯೆಮನ್‌ನಲ್ಲಿ, ಷಿಯಾಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಷಿಯಾಗಳ ಒಂದು ಗುಂಪಿನ ಯುವಕರು ಹೌತಿ ಚಳವಳಿಯಲ್ಲಿದ್ದಾರೆ. 1990ರಲ್ಲಿ ಜನ್ಮತಳೆದ ಈ ಹೌತಿ ಹವಾಯ್ ಚಪ್ಪಲಿ ಧರಿಸುವ ಯುವಕರ ಪಡೆ, ತನ್ನ ದೇಶದ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯ ವಿರುದ್ಧ ಸೆಟೆದು ನಿಲ್ಲುವ ತಂಡವಾಗಿತ್ತು. ಈಗ ಈ ಹೌತಿಗಳ ಕೈಯಲ್ಲಿ ಎಕೆ-47, ಡ್ರೋಣ್ ಮತ್ತು ಕ್ಷಿಪಣಿಗಳಿವೆ. ಇವರು ಸುಲಭಕ್ಕೆ ಬಗ್ಗುವ-ಜಗ್ಗುವ ಜನರಲ್ಲ.
ಇಷ್ಟಾದರೂ, ಶಾಂತಿ ಒಪ್ಪಂದದ ನಡುವೆಯೂ, ಜುಲೈ ತಿಂಗಳಲ್ಲಿ ಸುಖಾಸುಮ್ಮನೆ ಯೆಮನ್ ಮೇಲೆ ಸೌದಿ ಅರೇಬಿಯಾ ದಾಳಿ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಅನ್ಸಾರ್ ಅಲ್ಲಾದ ಸೈನಿಕ ವಕ್ತಾರ ಯಾಹ್ಯಾ ಸಾರೀ, ‘ಎರಡೂ ಬದಿಗಳ ನಡುವಿನ ಉದ್ವಿಗ್ನತೆ ಕಡಿಮೆ ಮಾಡುವ ಕಾಲ ಮುಗಿದಿದೆ, ಯೆಮನ್ ಪ್ರತಿದಾಳಿ ನಡೆಸಲಿದೆ’ ಎಂದು ಘೋಷಿಸಿದರು.

ಘೋಷಿಸಿದ್ದಷ್ಟೇ ಅಲ್ಲ, ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ತೈಲ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಇದರ ಜೊತೆಗೆ ಅನ್ಸಾರ್ ಅಲ್ಲಾ ಕೆಂಪು ಸಮುದ್ರದಲ್ಲಿ ಸೌದಿ ಸಂಬಂಧಿತ ಹಡಗು ಸಂಚಾರವನ್ನು ತಡೆಯಿತು. ಸಾಗಲು ಪ್ರಯತ್ನಿಸಿದ ಹಲವು ಹಡಗುಗಳ ಮೇಲೆ ಕ್ಷಿಪಣಿ ದಾಳಿಗಳನ್ನೂ ನಡೆಸಲಾಯಿತು.
ಈ ದಾಳಿಯಲ್ಲಿ ಯೆಮನ್ ಮತ್ತು ಹೌತಿ ಪಡೆಗಳು ಸೌದಿಯ ಬಹುಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡವು. ಮೊಖಾ ಬಂದರು, ಕೆಂಪು ಸಮುದ್ರ ಮತ್ತು ಬಾಬ್ ಎಲ್-ಮಂದೆಬ್ ಜಲಸಂಧಿಯಲ್ಲಿರುವ ಹಲವು ದ್ವೀಪಗಳನ್ನು ಕೈವಶ ಮಾಡಿಕೊಂಡವು.
ಯೆಮನ್‌ನ ಹೌತಿ ಪಡೆಗಳು ಬಾಬ್ ಅಲ್-ಮಂದೆಬ್ ಜಲಸಂಧಿ ಮತ್ತು ಕೆಂಪು ಸಮುದ್ರದ ದಕ್ಷಿಣ ಭಾಗದಲ್ಲಿ ತಮ್ಮ ಹಿಡಿತವನ್ನು ವಿಸ್ತರಿಸಿವೆ. ಬಾಬ್ ಅಲ್-ಮಂದೆಬ್ ಅರಬ್ಬೀ ಸಮುದ್ರ–ಕೆಂಪು ಸಮುದ್ರವನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಸಮುದ್ರದ ಕಿರಿದಾದ ದ್ವಾರ. ಹೌತಿಗಳು ಸೌದಿ ಬಂದರುಗಳಿಗೆ ತೆರಳುವ ಟ್ಯಾಂಕರ್‌ಗಳಿಗೂ ಬೆದರಿಕೆ ಹಾಕಿದ್ದಲ್ಲದೆ, ನೌಕಾ ದಿಗ್ಬಂಧನ ಹಾಕಿವೆ.
ಇದೀಗ ಬಿಕ್ಕಟ್ಟಿನ ಮತ್ತೊಂದು ಮಜಲೆಂದರೆ ಸೌದಿಯ ತೈಲ ಮೂಲಸೌಕರ್ಯಗಳ ಮೇಲೂ ದಾಳಿಯಾಗಿದೆ. ಇತ್ತೀಚಿನ ದಾಳಿಯ ನಂತರ ಸೌದಿ ತನ್ನ ಸುಮಾರು 1,200 ಕಿ.ಮೀ. ಉದ್ದದ ಈಸ್ಟ್-ವೆಸ್ಟ್ ತೈಲ ಪೈಪ್‌ಲೈನ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಪೈಪ್‌ಲೈನ್ ಪರ್ಷಿಯನ್ ಕೊಲ್ಲಿಯ ತೈಲವನ್ನು ಕೆಂಪು ಸಮುದ್ರದ ಯನ್ಬು ಬಂದರಿಗೆ ಕೊಂಡೊಯ್ಯುವ ಮೂಲಕ ಹಾರ್ಮುಜ್ ಜಲಸಂಧಿಯನ್ನು ತಪ್ಪಿಸುವ ಪರ್ಯಾಯ ಮಾರ್ಗವಾಗಿತ್ತು.
ಇದನ್ನು ಓದಿದ್ದೀರಾ?: ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯಿಂದ ಜಗತ್ತಿಗೆ ತೈಲ ಸಾಗಿಸುವ ಪ್ರಮುಖ ದ್ವಾರ. ಬಾಬ್ ಅಲ್-ಮಂದೆಬ್ ಅರಬ್ಬೀ ಸಮುದ್ರದಿಂದ ಕೆಂಪು ಸಮುದ್ರ, ನಂತರ ಸುಯೇಜ್ ಕಾಲುವೆ ಮೂಲಕ ಯುರೋಪ್‌ಗೆ ಹೋಗುವ ಪ್ರಮುಖ ಮಾರ್ಗ. ಆದರೆ, ಇರಾನ್-ಇಸ್ರೇಲ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿ ಸ್ಥಗಿತಗೊಂಡಿದೆ.
ಹೀಗಾಗಿ ಹಾರ್ಮುಜ್‌ನಲ್ಲಿ ಅಡಚಣೆ ಉಂಟಾದಾಗ ಸೌದಿ ಅರೇಬಿಯಾ ತನ್ನ ತೈಲವನ್ನು ಈಸ್ಟ್-ವೆಸ್ಟ್ ತೈಲ ಪೈಪ್‌ಲೈನ್ ಮೂಲಕ ಯನ್ಬು ಬಳಸಿ ಕೆಂಪು ಸಮುದ್ರ ಮಾರ್ಗದಲ್ಲಿ ಕಳುಹಿಸಬಹುದಾಗಿತ್ತು. ಆದರೆ ಈಗ ಆ ಪರ್ಯಾಯ ಮಾರ್ಗವೂ ಅಪಾಯಕ್ಕೆ ಸಿಲುಕಿದೆ. ಪರಿಣಾಮವಾಗಿ ಸೌದಿಯ ಕೆಂಪು ಸಮುದ್ರದತ್ತ ಸಾಗುವ ಆಂತರಿಕ ತೈಲ ಹರಿವು ತೀವ್ರವಾಗಿ ಕುಸಿತ ಕಂಡಿದೆ. ಅಂದರೆ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದ್ದ ಪ್ಲಾನ್ ಬಿ ಕೂಡ ಅಪಾಯದಲ್ಲಿದೆ.

ಇದು ಆ ಭಾಗದ ಅಂತಾರಾಷ್ಟ್ರೀಯ ವ್ಯಾಪಾರ ಮಾರ್ಗ ಹಾಗೂ ಸೌದಿಯ ಭದ್ರತೆಗೆ ಭಾರೀ ಆತಂಕ ತಂದೊಡ್ಡಿದೆ. ಇದು ಜಾಗತಿಕ ತೈಲ ಸಾಗಣೆ, ಸಮುದ್ರ ಮಾರ್ಗಗಳು, ಇಂಧನ ಬೆಲೆ ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರುವ ಹೊಸ ಭೌಗೋಳಿಕ-ರಾಜಕೀಯ ಬಿಕ್ಕಟ್ಟಾಗಿ ರೂಪುಗೊಳ್ಳುತ್ತಿದೆ.
ಯೆಮನ್ ಮತ್ತು ಹೌತಿ ತಂಡದ ಈ ಕ್ಷಿಪ್ರ ದಾಳಿಯಿಂದ ಕಂಗೆಟ್ಟ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಅಮೆರಿಕದ ನೆರವಿಗಾಗಿ ತುರ್ತು ಮೊರೆ ಹೋಗಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ಯುವರಾಜರು ಒಂದೇ ದಿನದಲ್ಲಿ ಎರಡು ಬಾರಿ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಹೌತಿಗಳ ನೆಲೆಗಳ ಮೇಲೆ ಅಮೆರಿಕ ನೇರವಾಗಿ ವೈಮಾನಿಕ ಹಾಗೂ ಮಿಲಿಟರಿ ದಾಳಿ ನಡೆಸಬೇಕು ಎಂದು ಅವರು ತೀವ್ರವಾಗಿ ಒತ್ತಾಯಿಸಿದ್ದರು.
ಆದರೆ, ಯುವರಾಜನ ಈ ತುರ್ತು ಬೇಡಿಕೆಯನ್ನು ಟ್ರಂಪ್ ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ್ದಾರೆ. ಹೌತಿಗಳ ವಿರುದ್ಧದ ಹೋರಾಟದಲ್ಲಿ ಅಮೆರಿಕವು ತನ್ನ ಸೇನೆಯನ್ನು ಕಣಕ್ಕಿಳಿಸುವುದಿಲ್ಲ ಎಂದು ನಾಜೂಕಾಗಿ ನುಣುಚಿಕೊಂಡಿದ್ದಾರೆ. ಈಗ ಆಘಾತಕ್ಕೆ ಒಳಗಾಗುವ ಸರದಿ ಸೌದಿ ಅರೇಬಿಯಾದಾಗಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ಬ್ರೆಂಟ್ ಕ್ರೂಡ್ ಆಯಿಲ್ 100 ಡಾಲರ್ ಗಿಂತ ಮೇಲಕ್ಕೆ ದಾಟಿದೆ. ಸೆಪ್ಟೆಂಬರ್ 14ರಂದು ಏಷ್ಯಾದ ತೈಲ ವ್ಯಾಪಾರಿಗಳು ಬೆಲೆಗಳು ಇನ್ನಷ್ಟು ಏರಬಹುದು ಎಂದು ಅಂದಾಜಿಸಿದ್ದಾರೆ.
ಸೌದಿಯ ಈಸ್ಟ್-ವೆಸ್ಟ್ ಪೈಪ್ ಲೈನ್ ಸಾಮಾನ್ಯವಾಗಿ ದಿನಕ್ಕೆ ಸುಮಾರು 5 ಮಿಲಿಯನ್ ಬ್ಯಾರೆಲ್ ತೈಲ ಸಾಗಿಸುವ ಸಾಮರ್ಥ್ಯ ಹೊಂದಿದೆ. ಈಗ ಅದು ಸ್ಥಗಿತಗೊಂಡಿದೆ. ಕೆಂಪು ಸಮುದ್ರದ ಮೂಲಕ ಸುಮಾರು ಶೇ. 15, ಹಾರ್ಮುಜ್ ಮೂಲಕ ಶೇ. 30ರಷ್ಟು ತೈಲ ಸರಬರಾಜು ಆಗುತ್ತಿತ್ತು. ಅದೀಗ ಸ್ಥಗಿತಗೊಂಡಿದೆ. ಇದು ಜಾಗತಿಕ ತೈಲ ಸರಬರಾಜು ಮತ್ತು ಸಂಗ್ರಹಣೆ ಹಾಗೂ ಮಾರುಕಟ್ಟೆ ಮೇಲೆ ತೀವ್ರ ಏರುಪೇರು ಉಂಟು ಮಾಡಿದೆ. ಈಗ ಎದುರಾಗಿರುವ ಅಡಚಣೆ ಅಕಸ್ಮಾತ್ ದೀರ್ಘ ಕಾಲದವರೆಗೆ ಸಾಗಿದರೆ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಲಭ್ಯವಿರುವ ತೈಲದ ಪ್ರಮಾಣ ಕಡಿಮೆಯಾಗಿ, ಅದು ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ತೈಲ ಮಾರುಕಟ್ಟೆ ವಾಸ್ತವಿಕ ಕೊರತೆಗಿಂತ ಭವಿಷ್ಯದ ಕೊರತೆಯ ಭಯಕ್ಕೆ ಒಳಗಾಗುವುದೇ ಹೆಚ್ಚು.
ಹೌತಿ ದಾಳಿಯಿಂದ ಟ್ಯಾಂಕರ್‌ಗಳಿಗೆ ಅಪಾಯ ಒದಗುತ್ತದೆ. ಅದು ವಿಮಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಡಗುಗಳ ಮಾರ್ಗ ಬದಲಾವಣೆ ಸಾಗಣೆ ಸಮಯದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ತೈಲ ಪೂರೈಕೆಯಲ್ಲಿ ಅನಿಶ್ಚಿತತೆಗೆ ಕಾರಣವಾಗುತ್ತದೆ. ಅದು ಸಹಜವಾಗಿಯೇ ವ್ಯಾಪಾರಿಗಳು ಹೆಚ್ಚು ಬೆಲೆಗೆ ಖರೀದಿ ಮಾಡುವಂತಹ ಸಂದರ್ಭವನ್ನು ಸೃಷ್ಟಿಸುತ್ತದೆ. ಬ್ರೆಂಟ್ ಬೆಲೆ ಏರಿಕೆಯಾಗುತ್ತದೆ.
ಈಗಾಗಲೇ ಕೆಲವು ಹಡಗು ಕಂಪನಿಗಳು ಕೆಂಪು ಸಮುದ್ರ ಮತ್ತು ಬಾಬ್ ಅಲ್-ಮಂದೆಬ್ ಮಾರ್ಗವನ್ನು ತಪ್ಪಿಸುತ್ತಿವೆ. ಈ ಮಾರ್ಗದ ಸಾಗಣೆ ಪ್ರಮಾಣವು ಸಾಮಾನ್ಯ ಮಟ್ಟಕ್ಕಿಂತ ಶೇ. 40ರಿಂದ 60ರಷ್ಟು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು- ಎರಡು ಜಲಸಂಧಿಗಳ ಬಿಕ್ಕಟ್ಟು; ಬಹಳ ಅಪಾಯಕಾರಿ ಬೆಳವಣಿಗೆಯಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ. ಏಕೆಂದರೆ ಎರಡೂ ಒಂದೇ ಸಮಯದಲ್ಲಿ ಗಂಭೀರವಾಗಿ ಅಸ್ತವ್ಯಸ್ತವಾದರೆ, ಜಾಗತಿಕ ತೈಲ ಮಾರುಕಟ್ಟೆಗೆ ಇದು ಸಾಮಾನ್ಯವಾದ ಜಿಯೋ ಪೊಲಿಟಿಕಲ್ ಶಾಕ್ ಆಗಿರದೆ, ನಿಜವಾದ ತೈಲ ಸರಬರಾಜು ಶಾಕ್ ಆಗಿ ಪರಿಣಮಿಸಲಿದೆ.

ಇಷ್ಟೆಲ್ಲ ಅನಾಹುತ ಕೇವಲ ಒಂದೇ ಒಂದು ದಾಳಿಯಿಂದ. ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ತಿರುಗಿ ದಾಳಿ ಮಾಡಲು ಶಕ್ತಿಯಿಲ್ಲದ ಸೌದಿ ರಾಜರು, ಸಹಜವಾಗಿಯೇ ಅಮೆರಿಕದ ಮೊರೆ ಹೋಗಿದ್ದಾರೆ. ಅಮೆರಿಕ ಕೂಡ ಹಣದುಬ್ಬರ, ನಿರುದ್ಯೋಗ ಮತ್ತು ಆಂತರಿಕ ಸಂಘರ್ಷಗಳಿಗೆ ತುತ್ತಾಗಿ ಕೂತಿದ್ದು, ಸೌದಿಯ ನೆರವಿಗೆ ನಿಲ್ಲದೆ ನಿರಾಕರಿಸಿದೆ.
ಈಗ ಸೌದಿ ಅರೇಬಿಯಾದ ನೆರವಿಗೆ ದೂರದ ಅಮೆರಿಕಾವೂ ಇಲ್ಲ, ಹತ್ತಿರದ ಇಸ್ರೇಲೂ ಇಲ್ಲ. ಅಷ್ಟೇ ಅಲ್ಲ, ಸೌದಿ ಬೆಂಬಲಕ್ಕಿದ್ದ ಪಾಕಿಸ್ತಾನ ಮತ್ತು ಟಿರ್ಕಿ ಕೂಡ ದೃಢ ನಿಲುವು ತಳೆಯುತ್ತಿಲ್ಲ. ಕೊಲ್ಲಿ ರಾಷ್ಟ್ರಗಳು ಒಂದಾಗಿದ್ದರೆ, ಸೌದಿಗೆ ಇಂತಹ ಹೀನಾಯ ಸ್ಥಿತಿ ಎದುರಾಗುತ್ತಿತ್ತೇ? ಅದು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತಿತ್ತೇ?



