ಈ ಸಂದರ್ಭದಲ್ಲಿ ನಾವು ಸಾಚಾರ್ ಸಮಿತಿ ವರದಿಯತ್ತ ಕಣ್ಣು ಹಾಯಿಸುವುದು ಮುಖ್ಯ. ಮುಸ್ಲಿಂ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅತ್ಯಂತ ಪ್ರಮುಖವಾದ ಅಂಶಗಳನ್ನು ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿ ವರದಿಯು (2006) ಬಿಚ್ಚಿಟ್ಟಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ನೀಡುವ ಮಸೂದೆಯ ಬಗ್ಗೆ ಸದ್ಯ ಬಿರುಸಿನಿಂದ ಚರ್ಚೆ ನಡೆಯುತ್ತಿದೆ. ಸದ್ಯ ವಿಧಾನಸಭೆ ಚುನಾವಣೆಗಳ ನಡುವೆ ದಿಢೀರ್ ಆಗಿ ಈ ಮಸೂದೆಯನ್ನು ಮುನ್ನೆಲೆಗೆ ತಂದಿರುವುದು ಬಿಜೆಪಿಯ ರಾಜಕೀಯ ಗಿಮಿಕ್ ಎಂಬುದು ಸ್ಪಷ್ಟ. ಅದೇನೇ ಆದರೂ ಸದ್ಯ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಯ ವಿಚಾರವೂ ಚರ್ಚೆಗೆ ಗ್ರಾಸವಾಗುತ್ತಿದೆ. ಮಹಿಳಾ ಮೀಸಲಾತಿಯಲ್ಲಿ ಒಬಿಸಿ, ಎಸ್ಸಿ-ಎಸ್ಟಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬುದು ಎಷ್ಟು ಅತಿಮುಖ್ಯವೋ, ಅದೇ ರೀತಿ ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂಬುದು ಮುಖ್ಯ.
ಸಾಮಾನ್ಯ ಮಹಿಳಾ ಮೀಸಲಾತಿ ಬಂದಾಗ, ಅದು ಕೇವಲ ಮೇಲ್ವರ್ಗದ ಅಥವಾ ರಾಜಕೀಯವಾಗಿ ಪ್ರಭಾವಿ ಹಿನ್ನೆಲೆ ಹೊಂದಿದ ಮಹಿಳೆಯರಿಗಷ್ಟೇ ಸೀಮಿತವಾಗುವ ಆತಂಕವಿದೆ. ಆದ್ದರಿಂದ “ಮುಸ್ಲಿಂ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು” ಎಂದು ಮೊದಲು ಆಗ್ರಹಿಸಿದವರು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್. ಜತೆಗೆ ಹಿಂದುಳಿದ ವರ್ಗದ ಮಹಿಳೆಯರಿಗೂ ಪ್ರತ್ಯೇಕ ಕೋಟಾ ನೀಡಬೇಕು ಎಂದು ಒತ್ತಾಯಿಸಿದ್ದಾರೆ. “ಮೀಸಲಾತಿಯ ಲಾಭವು ಕೇವಲ ಮೇಲ್ವರ್ಗದ ಮಹಿಳೆಯರಿಗೆ ಸೀಮಿತವಾಗಬಾರದು” ಎಂದು ಯಾದವ್ ಅಭಿಪ್ರಾಯಿಸಿದ್ದಾರೆ. ಆದರೆ ಸದಾ ತನ್ನ ಕೋಮುವಾದಿ ಕನ್ನಡಕದಲ್ಲೇ ನೋಡುವ ಬಿಜೆಪಿ ಸದ್ಯ ಯಾದವ್ ಆಗ್ರಹವನ್ನು ವಿರೋಧಿಸಲು ಶುರು ಮಾಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳಾ ಮೀಸಲಾತಿ ಮರೆಯಲ್ಲಿ ಮೋದಿ ಸರ್ಕಾರದ ಮಸಲತ್ತು!
ಲೋಕಸಭೆಯಲ್ಲೇ ಅಖಿಲೇಶ್ ಯಾದವ್ ಅವರಿಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ವಿರೋಧ ಪಕ್ಷಗಳು ಇಂತಹ ಬೇಡಿಕೆಯನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಇಡುತ್ತಿವೆ” ಎಂದು ಟೀಕಿಸಿದರು. “ನಿಮ್ಮ ಪಕ್ಷದ ಎಲ್ಲಾ ಟಿಕೆಟ್ಗಳನ್ನು ಮುಸ್ಲಿಂ ಮಹಿಳೆಯರಿಗೆ ನೀಡಬಹುದು, ಅದರಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ” ಎಂದು ಅಮಿತ್ ಶಾ ವ್ಯಂಗ್ಯವೂ ಆಡಿದ್ದಾರೆ. ಇವೆಲ್ಲ ವಾಗ್ವಾದಗಳ ನಡುವೆ ನಾವು ನೈಜವಾಗಿ ಕೇಳಬೇಕಾದ ಪ್ರಶ್ನೆ ಮುಸ್ಲಿಂ ಮಹಿಳೆಯರಿಗೆ ಒಳಮೀಸಲಾತಿ ನೀಡುವುದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಮುಸ್ಲಿಂ ಮಹಿಳೆಯರು ಧರ್ಮ, ಲಿಂಗ ಮತ್ತು ಸಾಮಾಜಿಕವಾಗಿ ಹಿಂದುಳಿದವರಲ್ಲವೇ?
ಈ ಬಗ್ಗೆ ಈ ದಿನ. ಕಾಮ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ, “ಬಿಜೆಪಿ ಆಗಲಿ ಅಥವಾ ಆರ್ಎಸ್ಎಸ್ ಆಗಲಿ ತಮ್ಮ ರಾಜಕೀಯದ ಸರಕಾಗಿ ಮುಖ್ಯವಾಗಿ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಾ ಬಂದಿದೆ. ಮುಸ್ಲಿಂ ಹೆಣ್ಣುಮಕ್ಕಳು ನಾಲ್ಕು ಗೋಡೆಯ ಮಧ್ಯೆ ಇಡಲಾಗುತ್ತದೆ, ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂಬುದು ಬಿಜೆಪಿಗರದ್ದೇ ವಾದ. ಜತೆಗೆ ಸಾಮಾಜಿಕ, ಶೈಕ್ಷಣಿಕವಾಗಿ ತೆರೆದುಕೊಳ್ಳಲು ಪ್ರಯತ್ನ ಪಟ್ಟಾಗ ಹಿಜಾಬ್, ಮತ್ಯಾವುದೋ ವಿಷಯ ತಂದು ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ದಬ್ಬಾಳಿಕೆಯ ತಂತ್ರವನ್ನು ಮಾಡುವವರೂ ಇವರೇ” ಎಂದು ದೂರಿದ್ದಾರೆ.
“ನಮ್ಮ ರಾಜ್ಯ ಕರ್ನಾಟಕದಲ್ಲೇ ಮುಸ್ಲಿಂ ಮಹಿಳೆಯರು ಬಿಡಿ ಮಹಿಳೆಯರು ರಾಜಕಾರಣದಲ್ಲಿ ಇರುವುದು ಅತಿ ಕಡಿಮೆ. ಅದರಲ್ಲೂ ಯಾವುದೇ ಕೌಟುಂಬಿಕ ರಾಜಕೀಯ ಹಿನ್ನೆಲೆ ಇಲ್ಲದೆ ಶಾಸಕಿಯರು ಆಗಿರುವುದು ಅತಿ ಕಡಿಮೆ. ಅದರಲ್ಲೂ ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ, ಕುಟುಂಬದಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಶಾಸಕಿಯಾಗಿರುವುದು ಇಲ್ಲವೇ ಇಲ್ಲ ಎನ್ನಬಹುದು” ಎಂದರು.

“ಬೇರೆ ಕಾನೂನುಗಳನ್ನು ತರುವಾಗ ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಉಕ್ಕುವಂತಹ ಕರುಣೆ ಈ ಸಂದರ್ಭದಲ್ಲಿ ಯಾಕೆ ಬರುತ್ತಿಲ್ಲ? ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಒಳಮೀಸಲಾತಿಯನ್ನು ಹಾಗೆಯೇ ಕೊಡಿ ಎಂದು ನಾವು ಕೇಳುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಸ್ಲಿಂ ಮಹಿಳೆಯರು ಎಷ್ಟು ಹಿಂದೆ ಉಳಿದಿದ್ದೇವೆ ಎಂಬ ಒಂದು ಸಮೀಕ್ಷೆಯನ್ನು ಮಾಡಲಿ. ಈಗ ಮಾಡುವ ಜನಗಣತಿಯಲ್ಲೇ ಅದನ್ನೂ ಸೇರಿಸಿಕೊಳ್ಳಲಿ. ಸಮೀಕ್ಷೆ ಮಾಡಿದರೆ ಮುಸ್ಲಿಂ ಮಹಿಳೆಯರು ಎಲ್ಲ ರೀತಿಯಲ್ಲೂ ಹಿಂದೆ ಉಳಿದಿದ್ದೇವೆ ಎಂಬುದು ಅರ್ಥವಾಗುತ್ತದೆ. ಅದನ್ನು ಅರ್ಥಮಾಡಿಕೊಂಡಾದರೂ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿಯನ್ನು ಕಲ್ಪಿಸುವಂತಹ ಕೆಲಸವನ್ನು ಮಾಡಲಿ” ಎಂದು ಆಗ್ರಹಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) -ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ʼಈ ದಿನ ಡಾಟ್ ಕಾಮ್ʼಗೆ ಪ್ರತಿಕ್ರಿಯಿಸಿ, “ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕು. ರಾಜಕೀಯದಲ್ಲಿ ಮುಸ್ಲಿಂ ಮಹಿಳೆಯರಿಗೂ ಸ್ಥಾನಮಾನ ದೊರೆಯಬೇಕು. ಆದರೆ ಪ್ರಸ್ತುತ ರಾಜಕೀಯದಲ್ಲಿ ಒಟ್ಟಾರೆಯಾಗಿ ಮುಸ್ಲಿಮರಿಗೆ ಅವಕಾಶವಿಲ್ಲದಂತಾಗಿದೆ. ಕಳೆದ ಒಂದು ದಶಕದಲ್ಲಿ ಲೋಕಸಭೆಯ ಸಂಖ್ಯಾಬಲವನ್ನು ನೋಡಿದಾಗ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ನಿರಂತರವಾಗಿ ಮುಸ್ಲಿಮರನ್ನು ಹಿಂದೆ ತಳ್ಳುವ ಈ ಬಿಜೆಪಿ ಇದೀಗ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡುವ ಸಾಧ್ಯತೆಯೇ ಇಲ್ಲ” ಎಂದು ಹೇಳಿದರು.
ಇನ್ನು ಬಿಜೆಪಿ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, “ದೇಶದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನ ಅವಕಾಶ ನೀಡಲ್ಲ. ಈ ಕಾರಣದಿಂದಾಗಿಯೇ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ, ಮೀಸಲಾತಿ ಮೀಸಲಾತಿ ವರ್ಗೀಕರಣದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದರು. ಮುಸ್ಲಿಂ ಸಮುದಾಯಕ್ಕೆ (2ಬಿ ಅಡಿಯಲ್ಲಿ) ಇದ್ದ ಶೇ. 4ರ ಮೀಸಲಾತಿಯನ್ನು ರದ್ದುಗೊಳಿಸಿದ್ದರು. ಒಕ್ಕಲಿಗ ಮತ್ತು ಇತರ ಸಮುದಾಯಗಳಿಗೆ 2ಸಿ (2C) ಪ್ರವರ್ಗದಡಿ ಶೇ.4ರಿಂದ ಶೇ.6ಕ್ಕೆ ಮೀಸಲಾತಿ ಹೆಚ್ಚಿಸಿದರು. 2ಡಿ (2D) ಪ್ರವರ್ಗದಡಿ ಪಂಚಮಸಾಲಿ ಸೇರಿದಂತೆ ವೀರಶೈವ-ಲಿಂಗಾಯತ ಸಮುದಾಯಗಳಿಗೆ ಶೇ. 5 ರಿಂದ ಶೇ. 7ಕ್ಕೆ ಮೀಸಲಾತಿ ಹೆಚ್ಚಿಸಿದರು” ಎಂದು ಸಮರ್ಥಿಸಿಕೊಂಡಿದ್ದಾರೆ. (ಆದರೆ, ಇದಕ್ಕೆ ಕೋರ್ಟ್ ತಡೆ ನೀಡಿದೆ)
ಇದನ್ನು ಓದಿದ್ದೀರಾ? ಮಹಿಳಾ ಮೀಸಲಾತಿ | ಯುಟರ್ನ್ ಹೊಡೆದ ಪಿಎಂ ಮೋದಿ ಕ್ಷಮೆಯಾಚಿಸಲಿ: ಕಾಂಗ್ರೆಸ್ ಒತ್ತಾಯ
“ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಬಾರದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಾವು ಅದನ್ನು ಪಾಲಿಸುತ್ತಿದ್ದೇವೆ. ಕಾಂಗ್ರೆಸ್ನವರು ಈ ಸಂವಿಧಾನವನ್ನು ಪಾಲಿಸುತ್ತಿಲ್ಲ. ಮುಸ್ಲಿಂ ಮಹಿಳೆಯರು ರಾಜಕೀಯವಾಗಿ ಹಿಂದುಳಿದ್ದಿದ್ದರೂ ನಮ್ಮ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿಲ್ಲ. ತುಷ್ಟೀಕರಣ ರಾಜಕಾರಣ ಮಾಡುವವರು ಎಲ್ಲ ಸೀಟುಗಳನ್ನು ಬೇಕಾದರೆ ಮುಸ್ಲಿಂ ಮಹಿಳೆಯರಿಗೆ ನೀಡಲಿ” ಎಂದು ಹೇಳಿದರು.
ಆದರೆ, ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ಯಾಕೆ ಮುಖ್ಯ?
ದೇಶದಲ್ಲಿ ಜನಸಂಖ್ಯೆಯಲ್ಲಿ ಮುಸ್ಲಿಮರು ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯ. ಆದರೆ ರಾಜಕೀಯ ಪ್ರಾತಿನಿಧ್ಯ ಇಂದಿಗೂ ಅತ್ಯಂತ ಶೋಚನೀಯವಾಗಿದೆ. ಅದರಲ್ಲೂ ಮುಸ್ಲಿಂ ಮಹಿಳೆಯರ ಸ್ಥಿತಿ ‘ಅದೃಶ್ಯ’ ಎನ್ನುವಂತಿದೆ. ನಾವು ಸ್ವಾತಂತ್ರ್ಯೋತ್ತರದ ಲೋಕಸಭೆ ಇತಿಹಾಸವನ್ನು ಗಮನಿಸಿದರೆ, ನಮಗೆ ಸಿಗುವುದು ಮುಸ್ಲಿಂ ಮಹಿಳೆಯರ ಸಂಖ್ಯಾಬಲ ಬೆರಳೆಣಿಕೆಯಷ್ಟು. ಸಾಮಾನ್ಯ ಮಹಿಳಾ ಮೀಸಲಾತಿ ಬಂದಾಗ ಕೇವಲ ಮೇಲ್ವರ್ಗದ ಅಥವಾ ರಾಜಕೀಯವಾಗಿ ಪ್ರಭಾವಿ ಹಿನ್ನೆಲೆ ಹೊಂದಿರುವ ಮಹಿಳೆಯರಿಗಷ್ಟೇ ಸೀಮಿತವಾಗಬಹುದು.
ಸಾಚಾರ್ ಸಮಿತಿ ವರದಿಯತ್ತ ಕಣ್ಣಾಯಿಸೋಣ
ಈ ಸಂದರ್ಭದಲ್ಲಿ ನಾವು ಸಾಚಾರ್ ಸಮಿತಿ ವರದಿಯತ್ತ ಕಣ್ಣಾಯಿಸುವುದು ಮುಖ್ಯ. ಮುಸ್ಲಿಂ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅತ್ಯಂತ ಪ್ರಮುಖವಾದ ಅಂಶಗಳನ್ನು ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿ ವರದಿಯು (2006) ಬಿಚ್ಚಿಟ್ಟಿದೆ. ಮುಸ್ಲಿಂ ಮಹಿಳೆಯರು ಕೇವಲ ಮಹಿಳೆಯರಾಗಿ ಮಾತ್ರವಲ್ಲದೆ, ಒಂದು ಹಿಂದುಳಿದ ಸಮುದಾಯದವರಾಗಿ ಮತ್ತು ಅಲ್ಪಸಂಖ್ಯಾತರಾಗಿ ಮೂರು ಹಂತದ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ.
ಸಾಚಾರ್ ಸಮಿತಿ ವರದಿ ಪ್ರಕಾರ ಮುಸ್ಲಿಂ ಮಹಿಳೆಯರಲ್ಲಿ ಸಾಕ್ಷರತಾ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ. ಅದರಲ್ಲೂ ಗ್ರಾಮೀಣ ಭಾಗದ ಮುಸ್ಲಿಂ ಮಹಿಳೆಯರು ಹೆಚ್ಚಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಉನ್ನತ ಶಿಕ್ಷಣದಲ್ಲಿ ಮುಸ್ಲಿಂ ಮಹಿಳೆಯರ ಪ್ರಾತಿನಿಧ್ಯವು ಅತ್ಯಂತ ಶೋಚನೀಯ. ಆರ್ಥಿಕ ಸಂಕಷ್ಟ ಮತ್ತು ಶಾಲಾ ಸೌಲಭ್ಯಗಳ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎಂದು ವರದಿ ಹೇಳಿದೆ.
ಮುಸ್ಲಿಂ ಮಹಿಳೆಯರು ಉದ್ಯೋಗದಲ್ಲಿ ಭಾಗವಹಿಸುವಿಕೆ ದರವು ಇತರ ಸಮುದಾಯಗಳ ಮಹಿಳೆಯರಿಗಿಂತ ಬಹಳ ಕಡಿಮೆ ಇದೆ. ಹೆಚ್ಚಿನ ಮುಸ್ಲಿಂ ಮಹಿಳೆಯರು ಅಸಂಘಟಿತ ವಲಯಗಳಲ್ಲಿ ಅಥವಾ ಮನೆಯಲ್ಲೇ ಮಾಡುವಂತಹ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲ. ರಾಜಕೀಯ ವಿಚಾರಕ್ಕೆ ಬಂದರೆ ಮುಸ್ಲಿಂ ಮಹಿಳೆಯರು ರಾಜಕೀಯದಲ್ಲಿ ‘ಅದೃಶ್ಯ’ರಾಗಿದ್ದಾರೆ ಎಂದು ವರದಿ ಬೆಟ್ಟು ಮಾಡಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮುಸ್ಲಿಂ ಮಹಿಳೆಯರು ಸಂಖ್ಯೆ ಬೆರಳೆಣಿಕೆಯಷ್ಟಿದೆ. ರಾಜಕೀಯವಾಗಿ ಮುಸ್ಲಿಂ ಮಹಿಳೆಯರಿಗೆ ಒಳಮೀಸಲಾತಿ ಇಲ್ಲದ ಕಾರಣ, ಪ್ರಬಲ ಸಮುದಾಯದ ಮಹಿಳೆಯರೊಂದಿಗೆ ಸ್ಪರ್ಧಿಸಲು ಮುಸ್ಲಿಂ ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ ಎಂದು ಸಾಚಾರ್ ಸಮಿತಿ ವರದಿ ಹೇಳುತ್ತದೆ. ಆದ್ದರಿಂದ ಹಿಂದುಳಿದ ವರ್ಗಗಳ (OBC) ಅಡಿಯಲ್ಲಿ ಮುಸ್ಲಿಂ ಮಹಿಳೆಯರಿಗೂ ಆದ್ಯತೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಮಹಿಳಾ ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡುವ ಸಂದರ್ಭದಲ್ಲಿ ಅನ್ವಯಿಸುವುದು ಸಮಂಜಸ.
ಒಟ್ಟಾರೆಯಾಗಿ ಮಹಿಳಾ ಮೀಸಲಾತಿ ಕೇವಲ ಸಂಖ್ಯಾತ್ಮಕ ಪ್ರಾತಿನಿಧ್ಯವಲ್ಲ. ಮೀಸಲಾತಿಯ ಉದ್ದೇಶ ಪೂರ್ಣವಾಗಬೇಕಾದರೆ ಸಮಾಜದ ಕಟ್ಟಕಡೆಯ ಮಹಿಳೆಗೂ ಅಧಿಕಾರವನ್ನು ಹಂಚುವಂತಾಗಬೇಕು. ಮಹಿಳಾ ಮೀಸಲಾತಿ ಸ್ವಾಗತಾರ್ಹವಾದರೂ ಅದರಲ್ಲಿ ಮುಸ್ಲಿಂ, ಒಬಿಸಿ, ಎಸ್ಸಿ-ಎಸ್ಟಿ ಮಹಿಳೆಯರಿಗೆ ಒಳಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅನಿವಾರ್ಯ.
ಎಲ್ಲ ವಿಚಾರವನ್ನೂ ಕೋಮು ಬಣ್ಣ ಬಳಿದು ನೋಡುವ ಬಿಜೆಪಿಗರು ಇದನ್ನು “ಧರ್ಮ ಆಧಾರಿತ ಮೀಸಲಾತಿ” ಎಂದು ಟೀಕಿಸಬಹುದು. ಆದರೆ ನಾವು ಕೋಮು ಆಧಾರದಲ್ಲಿ ನೋಡುವ ಬದಲಾಗಿ ‘ರಾಜಕೀಯವಾಗಿ ಹಿಂದುಳಿಯುವಿಕೆ’ ಆಧಾರದಲ್ಲಿ ನೋಡುವುದು ಉತ್ತಮ. ಮಹಿಳಾ ಮೀಸಲಾತಿಯು ಕೇವಲ ‘ಲಿಂಗ’ ಆಧಾರಿತ ಹೋರಾಟವಾಗಬಾರದು. ಅದು ‘ಜಾತಿ’ ಮತ್ತು ‘ವರ್ಗ’ಗಳನ್ನು ಒಳಗೊಂಡ ಸಮಗ್ರ ಹೋರಾಟವಾಗಬೇಕು.
ಅಷ್ಟಕ್ಕೂ ಸಮಾನತೆಯನ್ನು ತರುವುದು ಸಂವಿಧಾನದ ಆಶಯ. ಹಾಗಿರುವಾಗ ಒಂದು ಸಮುದಾಯದ ಮಹಿಳೆಯರನ್ನು ಮುಖ್ಯವಾಹಿನಿಯಿಂದ ಹೊರಗಿಟ್ಟು ಪ್ರಗತಿ ಅಸಾಧ್ಯ. ಮುಸ್ಲಿಂ ಮಹಿಳೆಯರು ರಾಜಕೀಯವಾಗಿ ಸಬಲರಾದಾಗ ಮಾತ್ರ ಭಾರತದ ಪ್ರಜಾಪ್ರಭುತ್ವವು ಪರಿಪೂರ್ಣವೆನಿಸಿಕೊಳ್ಳುತ್ತದೆ. ಅಧಿಕಾರವು ಹಂಚಿಕೆಯಾದಾಗ ಮಾತ್ರ ಪ್ರಜಾಪ್ರಭುತ್ವವು ಜೀವಂತವಾಗಿರುತ್ತದೆ. ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಂ ಮಹಿಳೆಯರ ಒಳ ಮೀಸಲಾತಿ ನೀಡುವುದು ತುಳಿತಕ್ಕೊಳಗಾದ ಧ್ವನಿಗೆ ಸಿಗುವ ನ್ಯಾಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



