ಪಾಸ್‌ಪೋರ್ಟ್‌ನಲ್ಲಿ ಜನ್ಮಸ್ಥಳದ ವಿವರವನ್ನು ಏಳು ದಿನಗಳೊಳಗೆ ಸ್ಪಷ್ಟಪಡಿಸಬೇಕು, ಅಲ್ಲಿಯವರೆಗೂ ಪಾಸ್‌ಪೋರ್ಟ್ ಬಳಸಬಾರದು ಎಂದು ಚೆನ್ನೈನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ, ಕಾಕ್ರೋಚ್ ಜನತಾ ಪಾರ್ಟಿಯ ಸಹ ಸಂಚಾಲಕ ಸೌರವ್ ದಾಸ್ ಅವರಿಗೆ ಸೂಚಿಸಿದೆ.
ಸೋಮವಾರ ಸೌರವ್ ದಾಸ್ ಅವರು ದೆಹಲಿ ನಿಲ್ದಾಣದಲ್ಲಿ ಲಂಡನ್‌ಗೆ ತೆರಳಲು ಸಿದ್ದರಾಗಿದ್ದಾಗ, ಮುಂಜಾನೆ 1 ಗಂಟೆಯ ವಿಮಾನ ಹತ್ತುವುದಕ್ಕೂ ಮುನ್ನ ತಮ್ಮನ್ನು ತಡೆದಿರುವುದಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಚಿವಾಲಯ ಈ ಹೇಳಿಕೆ ನೀಡಿದೆ.
ನವೆಂಬರ್ 23ರಂದು ಕಾನೂನು ಜಾರಿ ಸಂಸ್ಥೆಗಳಿಂದ ಬಂದ ವರದಿಗಳ ಆಧಾರದ ಮೇಲೆ ಪಾಸ್‌ಪೋರ್ಟ್ ಕಚೇರಿ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ಮಾಹಿತಿ ಮರೆಮಾಚಿರುವುದು ಅಥವಾ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ವರದಿ ಬಂದಾಗ, ಸಂಬಂಧಪಟ್ಟ ವ್ಯಕ್ತಿಯಿಂದ ವಿವರಣೆ ಕೇಳಿ ನೋಟಿಸ್ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಸಂವಾದದಲ್ಲಿ ʼಕಾಕ್ರೋಚ್ ಚಳವಳಿʼ ಕುರಿತು ಮಾತನಾಡಲು ಬ್ರಿಟನ್‌ಗೆ ಸೌರವ್ ತೆರಳುತ್ತಿದ್ದರು. ಈ ಸಮಯದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ತಡೆದಿರುವುದಾಗಿ ಆರೋಪಿಸಿದ್ದರು. ವಲಸೆ ಅಧಿಕಾರಿಗಳು ತಮ್ಮ ಪಾಸ್‌ಪೋರ್ಟ್‌ಗೆ ತಡೆ ಸೂಚನೆ ಹಾಕಲಾಗಿದೆ ಎಂದು ತಿಳಿಸಿರುವುದಾಗಿ ಅವರು ಪಿಟಿಐಗೆ ಹೇಳಿದ್ದರು.
ಈ ವಿಷಯವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸೌರವ್ ದಾಸ್ “ತಮ್ಮ ಪ್ರಯಾಣಕ್ಕೆ ಅಡ್ಡಿಪಡಿಸಿರುವುದಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದರು. ಕೇಂಬ್ರಿಡ್ಜ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಎಡಿನ್‌ಬರ್ಗ್ ವಿಶ್ವವಿದ್ಯಾಲಯಗಳಲ್ಲಿಯೂ ಮಾತನಾಡಲು ಆಹ್ವಾನ ಬಂದಿರುವುದಾಗಿ ಅವರು ತಿಳಿಸಿದ್ದರು. ಈ ಘಟನೆ ತಮ್ಮ ಕೆಲಸಕ್ಕೆ ಅಥವಾ ಮುಂದಿನ ವಿದೇಶಿ ಪ್ರಯಾಣಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಸೌರವ್ ದಾಸ್ ಹೇಳಿದ್ದಾರೆ.
ಸರ್ಕಾರದ ಈ ಕ್ರಮವನ್ನು CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಕೂಡ ಟೀಕಿಸಿದ್ದಾರೆ. ಸೌರವ್ ದಾಸ್ ಅವರಿಗೆ ಆಕ್ಸ್‌ಫರ್ಡ್‌ನಿಂದ ಬಂದ ಆಹ್ವಾನವನ್ನು ಅಧಿಕಾರದಲ್ಲಿರುವ ಯಾರೋ ಸಹಿಸಿಕೊಳ್ಳಲಾಗದೆ ಅಸೂಯೆಯಿಂದ ಈ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.




