2024ರ ಜನವರಿ 22ರಂದು ಆಧುನಿಕ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ದಿನ ಪರಿಗಣಿಸಲ್ಪಡುತ್ತದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಅದ್ದೂರಿಯಾಗಿ ಬಾಲರಾಮನ (ರಾಮಲಲ್ಲಾ) ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಶತಮಾನಗಳಿಂದ ವಿವಾದದ ಸುಳಿಯೊಳಗೇ ತಿರುಗುತ್ತಿದ್ದ ರಾಮ ಮಂದಿರದ ಉದ್ಘಾಟನೆ ವಿಶ್ವದ ಗಮನ ಸೆಳೆದವು. ಆದರೆ, ಈ ಮಂದಿರ ಉದ್ಘಾಟನೆಯ ದಿನದಿಂದ ಹಿಡಿದು ಇಂದಿಗೂ ಚರ್ಚೆಯ ವಿಷಯವಾಗುತ್ತಲೇ ಇದೆ.
ಮಂದಿರ ಉದ್ಘಾಟನೆಯಾಗಿ ಎರಡು ವರೆ ವರ್ಷಗಳು ಕಳೆಯುತ್ತಿರುವ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ , “ರಾಮ ಮಂದಿರಕ್ಕೆ ವಿಶ್ವದಾದ್ಯಂತ ಇರುವ ಕೋಟ್ಯಂತರ ಸನಾತನ ಧರ್ಮೀಯರು ನೀಡಿರುವ ದೇಣಿಗೆಯ ನಿಧಿಯಲ್ಲಿ ಕೋಟ್ಯಂತರ ರೂಪಾಯಿ ಹಣ ನಾಪತ್ತೆಯಾಗಿದೆ. ಇದು ಭಕ್ತರ ನಂಬಿಕೆಗೆ ಎಸಗಿದ ದ್ರೋಹ. ಈ ಹಗರಣದ ಕುರಿತು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು. ಈ ವಿಷಯದಲ್ಲಿ ಸರ್ಕಾರದ ಮೌನವು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಆರೋಪವನ್ನು ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಳ್ಳಿಹಾಕಿದ್ದಾರೆ. ಟ್ರಸ್ಟ್ ಮತ್ತು SBI ಪ್ರತಿನಿಧಿಗಳ ನೇತೃತ್ವದಲ್ಲಿ ಕಾಲಕಾಲಕ್ಕೆ ಆಂತರಿಕ ಆಡಿಟ್ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಪ್ರಸ್ತುತವೂ ಆಡಿಟ್ ಪ್ರಗತಿಯಲ್ಲಿದೆ. ಈವರೆಗೆ ನಡೆದಿರುವ ತಪಾಸಣೆಯಲ್ಲಿ ಯಾವುದೇ ರೀತಿಯ ಹಣದ ವ್ಯತ್ಯಾಸ ಅಥವಾ ಅಕ್ರಮಗಳು ಕಂಡುಬಂದಿಲ್ಲ ಮತ್ತು ಟ್ರಸ್ಟ್‌ನ ಎಲ್ಲಾ ಆರ್ಥಿಕ ವಹಿವಾಟುಗಳು ಸಂಪೂರ್ಣ ಪಾರದರ್ಶಕವಾಗಿವೆ ಎಂದು ತಿಳಿಸಿದ್ದಾರೆ.

ಅಯೋಧ್ಯೆ ರಾಮನ ವಿವಾದ ಮಂದಿರದ ಉದ್ಘಾಟನೆಗೂ ಮೊದಲು, ಉದ್ಘಾಟನೆ ದಿನ ಮತ್ತು ಇಂದಿಗೂ ಮುಂದುವರೆದಿದೆ. ಆ ದಿನವನ್ನು ಭಾರತ ಸರ್ಕಾರ ಒಂದು ಐತಿಹಾಸಿಕ ರಾಷ್ಟ್ರೀಯ ಹಬ್ಬದಂತೆ ಆಚರಿಸಿತ್ತು. ಇಡೀ ದೇಶದ ಗಮನವನ್ನು ಈ ಒಂದು ಘಟನೆಯತ್ತ ಸೆಳೆಯಲು ಭಾರತದ ಷೇರು ಮಾರುಕಟ್ಟೆಗೆ ರಜೆ ಘೋಷಿಸಲಾಗಿತ್ತು. ಕೇಂದ್ರ ಸರ್ಕಾರಿ ಕಚೇರಿಗಳು ಅರ್ಧ ದಿನ ಮುಚ್ಚಲ್ಪಟ್ಟಿದ್ದವು. ದೇಶ-ವಿದೇಶಗಳ ಮೂಲೆ ಮೂಲೆಗಳಲ್ಲಿ ಲೈವ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ವತಿಯಿಂದ ದೇಶದ ಪ್ರಮುಖ ರಾಜಕಾರಣಿಗಳು, ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಜಾಗತಿಕ ಉದ್ಯಮಿಗಳು, ಸಚಿನ್ ತೆಂಡೂಲ್ಕರ್ ಅವರಂತಹ ಕ್ರೀಡಾ ತಾರೆಗಳು ಮತ್ತು ಬಾಲಿವುಡ್‌ನ ದಿಗ್ಗಜರು ಸೇರಿದಂತೆ ಸುಮಾರು 8,000 ಗಣ್ಯರನ್ನು ಆಹ್ವಾನಿಸಲಾಗಿತ್ತು.
ಈ ವೈಭವದ ನಡುವೆ ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಜಾಗತಿಕ ರಾಜಕೀಯ ವಿಶ್ಲೇಷಕರು ಭಾರತದ ಸಾಂವಿಧಾನಿಕ ಸ್ವರೂಪದ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸದೇ ಬಿಡಲಿಲ್ಲ. ರಾಜಕೀಯ ಮತ್ತು ಧರ್ಮವನ್ನು ದೂರವಿಡುವ ಜಾತ್ಯತೀತ ತತ್ವಗಳ ಗೋಡೆಗಳು ಈ ಘಟನೆಯಿಂದ ಸಂಪೂರ್ಣವಾಗಿ ಕರಗಿಹೋದವು ಎಂದು ವಿಶ್ಲೇಷಿಸಲಾಯಿತು. 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 2 ಲೋಕಸಭಾ ಸೀಟುಗಳನ್ನು ಗೆದ್ದಿದ್ದ BJP, ಈ ರಾಮ ಮಂದಿರ ಆಂದೋಲನವನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡು ಹೇಗೆ ಇಂದು ದೇಶದ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿದೆ ಎಂಬುದನ್ನು ಇಡೀ ಜಗತ್ತು ಈ ದಿನದಂದು ಮತ್ತೊಮ್ಮೆ ಅವಲೋಕಿಸಿತು.
ಈಮಂದಿರ ತಲೆಎತ್ತಿರುವ ಜಾಗವೂ ಕೂಡ ಅತ್ಯಂತ ಹಿಂಸಾತ್ಮಕ ಮತ್ತು ಕರಾಳ ಇತಿಹಾಸವನ್ನೇ ಒಳಗೊಂಡಿದೆ. ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳ ಎಂದು ನಂಬುವ ಇದೇ ಜಾಗದಲ್ಲಿ 1528 ರಲ್ಲಿ ಮೊಘಲ್ ದೊರೆ ಬಾಬರನ ಹೆಸರಿನಲ್ಲಿ ‘ಬಾಬರಿ ಮಸೀದಿ’ಯನ್ನು ನಿರ್ಮಿಸಲಾಗಿತ್ತು. ದಶಕಗಳ ಕಾಲ ನಡೆದ ತೀವ್ರ ಹೋರಾಟದ ನಂತರ, 1992ರ ಡಿಸೆಂಬರ್ 6ರಂದು ಹಿಂದೂ ರಾಷ್ಟ್ರವಾದಿಗಳ ಉದ್ರಿಕ್ತ ಗುಂಪೊಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿತು. ಈ ಘಟನೆಯು ದೇಶಾದ್ಯಂತ ಭೀಕರ ಕೋಮು ಗಲಭೆಗಳಿಗೆ ಕಾರಣವಾಗಿ ಸುಮಾರು 2,000ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು, ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ನಂತರ ನವೆಂಬರ್ 2019ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಈ ವಿವಾದಿತ ಭೂಮಿಯನ್ನು ಹಿಂದೂ ಮಂದಿರ ನಿರ್ಮಾಣಕ್ಕಾಗಿ ವಿಶೇಷ ಟ್ರಸ್ಟ್‌ಗೆ ಹಸ್ತಾಂತರಿಸಿ, ಮುಸ್ಲಿಮರಿಗೆ ಪರ್ಯಾಯವಾಗಿ ಅಯೋಧ್ಯೆಯ ಹೊರವಲಯದ ಧನ್ನಿಪುರ ಗ್ರಾಮದಲ್ಲಿ 5 ಎಕರೆ ಜಾಗವನ್ನು ನೀಡಿ ತೀರ್ಪು ಪ್ರಕಟಿಸಿತು.
ಮಂದಿರದ ಉದ್ಘಾಟನೆ ರಾಜಕೀಯ ಪಕ್ಷಗಳ ನಡುವಿನ ಸಂಘರ್ಷವಾಗಿ ಮಾತ್ರ ಉಳಿಯಲಿಲ್ಲ. ಹಿಂದೂ ಧರ್ಮದ ಅತ್ಯುನ್ನತ ಮತ್ತು ಸರ್ವೋಚ್ಚ ಗುರುಗಳೆಂದು ಕರೆಯಲಾಗುವ ಉತ್ತರಾಖಂಡದ ಬದರಿನಾಥದ ಜ್ಯೋತಿರ್ಮಠ, ಪುರಿಯ ಗೋವರ್ಧನ ಪೀಠ, ಕರ್ನಾಟಕದ ಶೃಂಗೇರಿ ಶಾರದಾ ಪೀಠ ಹಾಗೂ ದ್ವಾರಕಾ ಶಾರದಾ ಪೀಠದ ಶಂಕರಾಚಾರಯರು ಉದ್ಘಾಟನಾ ಸಮಾರಂಭಕ್ಕೆ ಬರಲು ನಿರಾಕರಿಸಿದ್ದರು. ಜನವರಿ 2024ರಲ್ಲಿ ಉದ್ಘಾಟನೆಯಾಗಿದ್ದು ಕೇವಲ ಮಂದಿರದ ನೆಲಮಹಡಿ ಮಾತ್ರವಾಗಿದ್ದು, ಗರ್ಭಗುಡಿಯ ಮೇಲಿನ ಗೋಪುರ ಮತ್ತು ಇತರ ಭಾಗಗಳ ನಿರ್ಮಾಣ ಕಾರ್ಯ ಇನ್ನೂ ಅಪೂರ್ಣವಾಗಿತ್ತು. “ಶಾಸ್ತ್ರಗಳ ಪ್ರಕಾರ, ಸಂಪೂರ್ಣವಾಗಿ ನಿರ್ಮಾಣವಾಗದ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಸನಾತನ ಧರ್ಮದ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಅದು ದೇಶಕ್ಕೆ ಒಳ್ಳೆಯದಲ್ಲ” ಎಂದು ಶಂಕರಾಚಾರ್ಯರು ವಾದಿಸಿದ್ದರು. ಈ ಧಾರ್ಮಿಕ ಭಿನ್ನಾಭಿಪ್ರಾಯ ಮಂದಿರ ಉದ್ಘಾಟನೆಯ ರಾಜಕೀಯ ಧಾವಂತವನ್ನು ಎತ್ತಿ ತೋರಿಸಿತ್ತು.

ಪ್ರಾಣ ಪ್ರತಿಷ್ಠಾಪನೆಯ ದಿನದಂದು ದೇಶಾದ್ಯಂತ ವಿಜಯೋತ್ಸವದ ಹೆಸರಿನಲ್ಲಿ ಬಲಪಂಥೀಯ ಸಂಘಟನೆಗಳು ನಡೆಸಿದ ಮೆರವಣಿಗೆಗಳು ಹಲವೆಡೆ ಹಿಂಸಾಚಾರಕ್ಕೆ ಕಾರಣವಾದವು. ಜಾಗತಿಕ ಮಾನವ ಹಕ್ಕುಗಳ ಸಂಸ್ಥೆ ‘ಹ್ಯೂಮನ್ ರೈಟ್ಸ್ ವಾಚ್’ (HRW) ತನ್ನ ವರದಿಯಲ್ಲಿ ಇದನ್ನು ತೀವ್ರವಾಗಿ ಖಂಡಿಸಿತು. ಮಹಾರಾಷ್ಟ್ರದ ಮುಂಬೈ ಉಪನಗರ ಮೀರಾ ರೋಡ್‌ನಲ್ಲಿ ಮಂದಿರದ ಮೆರವಣಿಗೆಯಲ್ಲಿದ್ದ ಯುವಕರು ಮುಸ್ಲಿಂ ಬಡಾವಣೆಗಳಿಗೆ ನುಗ್ಗಿ ಕತ್ತಿ, ಕೋಲುಗಳನ್ನು ಝಳಪಿಸುತ್ತಾ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದರಿಂದ ಭಾರಿ ಘರ್ಷಣೆ ನಡೆಯಿತು. ಇದರ ಬೆನ್ನಲ್ಲೇ ಮುನ್ಸಿಪಾಲಿಟಿ ಅಧಿಕಾರಿಗಳು ‘ಅಕ್ರಮ ಕಟ್ಟಡ’ ಎಂಬ ನೆಪದಲ್ಲಿ ದಶಕಗಳಿಂದ ಇದ್ದ ಮುಸ್ಲಿಮರ ಅಂಗಡಿ-ಮುಂಗಟ್ಟುಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದರು, ಇದನ್ನು ‘ಸಾಮೂಹಿಕ ಶಿಕ್ಷೆ’ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಟೀಕಿಸಿದರು.
ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಹಾಕಿದ್ದಕ್ಕಾಗಿ 17 ವರ್ಷದ ದಲಿತ ಹುಡುಗನಿಗೆ ಹಲ್ಲೆ ನಡೆಸಿ, ಬಲವಂತವಾಗಿ ‘ಜೈ ಶ್ರೀರಾಮ್’ ಎಂದು ಕೂಗಿಸಲಾಯಿತು. ಉತ್ತರ ಪ್ರದೇಶದ ಆಗ್ರಾದಲ್ಲಿ ಮೊಘಲ್ ಕಾಲದ ಮಸೀದಿಯೊಂದರ ಮೇಲೆ ಬಲವಂತವಾಗಿ ಕೇಸರಿ ಧ್ವಜವನ್ನು ಹಾರಿಸಲಾಯಿತು. ಬಿಹಾರದಲ್ಲಿ ಮುಸ್ಲಿಂ ಸ್ಮಶಾನಕ್ಕೆ ಬೆಂಕಿ ಹಚ್ಚಿದ ಆರೋಪ ಕೇಳಿಬಂದಿತು. ಈ ಆಂದೋಲನದ ಹಿಂದಿನ ಕರಾಳ ಮುಖವನ್ನು ತೋರಿಸುವ ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸಲು ಯತ್ನಿಸಿದ ಪುಣೆ (FTII), ಹೈದರಾಬಾದ್ ಮತ್ತು ಕೇರಳದ ಚಲನಚಿತ್ರ ಸಂಸ್ಥೆಗಳ ವಿದ್ಯಾರ್ಥಿಗಳ ಮೇಲೂ ಉದ್ರಿಕ್ತ ಗುಂಪುಗಳು ದಾಳಿ ನಡೆಸಿದವು.
ಮಂದಿರ ಉದ್ಘಾಟನೆಯಾದ ನಂತರ ಅಯೋಧ್ಯೆಯು ಅತ್ಯಂತ ವೇಗವಾಗಿ ಬೆಳೆಯತೊಡಗಿತು. ರೈಲ್ವೆ ನಿಲ್ದಾಣವನ್ನು ನವೀಕರಿಸಿ ‘ವಂದೇ ಭಾರತ್’ ರೈಲುಗಳ ಸಂಪರ್ಕ ಕಲ್ಪಿಸಲಾಯಿತು. ತಾಜ್ ಮತ್ತು ರೇಡಿಸನ್‌ನಂತಹ ಪಂಚತಾರಾ ಹೋಟೆಲ್‌ಗಳು ಅಯೋಧ್ಯೆಯಲ್ಲಿ ತಲೆ ಎತ್ತಿದವು. ಪ್ರವಾಸೋದ್ಯಮದಿಂದಾಗಿ ಸ್ಥಳೀಯ ಹೋಟೆಲ್, ಸಾರಿಗೆ ಮತ್ತು ವ್ಯಾಪಾರಿಗಳ ಆದಾಯ ಚಿಗುರಿತು. ದೇಶದಾದ್ಯಂತ ಭಕ್ತರು ಸಮರ್ಪಿಸಿದ ಕಾಣಿಕೆ ಮತ್ತು ಆನ್‌ಲೈನ್ ದೇಣಿಗೆಗಳ ಒಟ್ಟು ಮೊತ್ತ 3,000 ಕೋಟಿ ರೂಪಾಯಿ ದಾಟಿತು.

ಆದರೆ, ಈ ಭಾರಿ ಅಭಿವೃದ್ಧಿ ಭ್ರಮೆಯ ಹಿಂದಿನ ವಾಸ್ತವ ಬಯಲಿಗೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. 2024 ರ ಮೊದಲ ಮುಂಗಾರು ಮಳೆಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ‘ರಾಮಪಥ್’ ರಸ್ತೆಗಳು ಹಲವೆಡೆ ಕುಸಿದು ಬಿದ್ದಾಗ ಕಾಮಗಾರಿಯ ಭ್ರಷ್ಟಾಚಾರದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಮಂದಿರದ ಗರ್ಭಗುಡಿಯ ಮೇಲ್ಛಾವಣಿಯಿಂದ ನೀರು ಸೋರುತ್ತಿದೆ ಎಂದು ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರೇ ಆರೋಪಿಸಿದರು. ಇದು ಟ್ರಸ್ಟ್ ಮತ್ತು ಸರ್ಕಾರದ ಇಂಜಿನಿಯರಿಂಗ್ ವೈಫಲ್ಯದ ಮೇಲಿನ ಟೀಕೆಗಳಿಗೆ ಆಹಾರವಾಯಿತು.
ರಾಮ ಮಂದಿರದ ಅಲೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಭಾರಿ ಬಹುಮತ ಪಡೆಯುವ ಬಿಜೆಪಿಯ ತಂತ್ರಕ್ಕೆ ಸ್ವತಃ ಅಯೋಧ್ಯೆಯ ಜನರೇ ಭಾರಿ ಆಘಾತ ನೀಡಿದರು. ಅಯೋಧ್ಯೆಯನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಮಾಡಲು ರಸ್ತೆಗಳನ್ನು ಅಗಲಗೊಳಿಸುವಾಗ, ನೂರಾರು ವರ್ಷಗಳಿಂದ ಅಲ್ಲೇ ಬದುಕುತ್ತಿದ್ದ ಸ್ಥಳೀಯ ಬಡವರು ಮತ್ತು ಮಧ್ಯಮ ವರ್ಗದ ಜನರ ಮನೆ ಹಾಗೂ ಅಂಗಡಿಗಳನ್ನು ಬಲವಂತವಾಗಿ ಧ್ವಂಸಗೊಳಿಸಲಾಗಿತ್ತು. ಸರ್ಕಾರ ನೀಡಿದ ನಷ್ಟ ಪರಿಹಾರವು ಅತ್ಯಂತ ಕಡಿಮೆಯಾಗಿದ್ದರಿಂದ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮನೆಮಾಡಿತ್ತು. ಈ ಬಲವಂತದ ಅಭಿವೃದ್ಧಿ ಮತ್ತು ಬಡವರ ಕಣ್ಣೀರಿನ ಪರಿಣಾಮವಾಗಿ, ಅಯೋಧ್ಯೆ ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಅವರು ಸಮಾಜವಾದಿ ಪಕ್ಷದ (SP) ದಲಿತ ನಾಯಕ ಅವಧೇಶ್ ಪ್ರಸಾದ್ ವಿರುದ್ಧ ಸೋಲೊಪ್ಪಿಕೊಂಡರು. ಇದು ಬಿಜೆಪಿಯ ಧಾರ್ಮಿಕ ರಾಜಕಾರಣಕ್ಕೆ ಬಿದ್ದ ಬಹುದೊಡ್ಡ ಹೊಡೆತವಾಗಿತ್ತು.
ವಿಶ್ಲೇಷಕರು ಮುಂಚೆಯೇ ಊಹಿಸಿದಂತೆ, ಅಯೋಧ್ಯೆ ಮಂದಿರದ ಉದ್ಘಾಟನೆಯು ದೇಶದ ಇತರ ಭಾಗಗಳಲ್ಲಿರುವ ವಿವಾದಿತ ಧಾರ್ಮಿಕ ತಾಣಗಳ ಹೋರಾಟಕ್ಕೆ ತೀವ್ರ ವೇಗ ನೀಡಿತು. ವಾರಣಾಸಿಯ ಜ್ಞಾನವಾಪಿ ಮಸೀದಿಯ ಒಳಗಿರುವ ನೆಲಮಹಡಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿತು. ಇದನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದವು. ಇತ್ತ ಮಥುರಾದ ಶಾಹಿ ಇದ್ಗಾ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ಹೈಕೋರ್ಟ್ ಹಸಿರು ನಿಶಾನೆ ನೀಡಿತು. ಅಯೋಧ್ಯೆಯ ತೀರ್ಪು ದೇಶದಲ್ಲಿ “ಮಥುರಾ ಮತ್ತು ಕಾಶಿ ಇನ್ನೂ ಬಾಕಿ ಇವೆ” ಎಂಬ ಬಲಪಂಥೀಯ ಘೋಷಣೆಗಳಿಗೆ ಕಾನೂನಾತ್ಮಕ ಶಕ್ತಿ ನೀಡುವಂತೆ ಮಾಡಿತು. ಮತ್ತೊಂದೆಡೆ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮುಸ್ಲಿಂ ಸಮುದಾಯಕ್ಕೆ ಧನ್ನಿಪುರ ಗ್ರಾಮದಲ್ಲಿ ನೀಡಲಾದ 5 ಎಕರೆ ಜಮೀನಿನಲ್ಲಿ ಪರ್ಯಾಯ ಮಸೀದಿ ನಿರ್ಮಾಣ ಕಾರ್ಯವು ಹಣದ ಕೊರತೆ ಮತ್ತು ಅನುಮೋದನೆಯ ವಿಳಂಬದಿಂದಾಗಿ ಇಂದಿಗೂ ಆಮೆಗತಿಯಲ್ಲೇ ಸಾಗಿದೆ.

ಅಯೋಧ್ಯೆಯ ರಾಮ ಮಂದಿರವು ಭಾರತದ ಸಾಂಸ್ಕೃತಿಕ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಒಂದು ವರ್ಗ ಪ್ರತಿಪಾದಿಸುತ್ತಿದ್ದರೆ, ಮತ್ತೊಂದು ವರ್ಗ, ಇದು ದೇಶದ ಜಾತ್ಯತೀತ ತತ್ವಗಳಿಗೆ ತಂದಿರುವ ಧಕ್ಕೆ ಮತ್ತು ಅಲ್ಪಸಂಖ್ಯಾತರಲ್ಲಿ ಸೃಷ್ಟಿಸಿರುವ ಆತಂಕವನ್ನು ಎತ್ತಿ ತೋರಿಸುತ್ತಿದೆ ಎಂದಿದೆ. ಇದೇ ಅವಧಿಯಲ್ಲಿ ಮುನ್ನೆಲೆಗೆ ಬಂದ ಕೋಮು ಘರ್ಷಣೆಗಳು, ನ್ಯಾಯಾಂಗದ ಮುಂದಿರುವ ಹೊಸ ಮಸೀದಿ-ಮಂದಿರ ವಿವಾದಗಳ ಸರಣಿ ಮತ್ತು ಅಲ್ಪಸಂಖ್ಯಾತರಲ್ಲಿ ಮೂಡಿರುವ ಆತಂಕಗಳು ಭಾರತದ ಬಹುತ್ವ ಹಾಗೂ ಜಾತ್ಯತೀತ ತತ್ವಗಳ ಭವಿಷ್ಯವನ್ನ ಅಲುಗಾಡಿಸಿವೆ. ಅಯೋಧ್ಯೆಯ ರಾಮ ಮಂದಿರವು ಎಲ್ಲರನ್ನೂ ಒಳಗೊಳ್ಳುವ ‘ರಾಮರಾಜ್ಯ’ದ ನಿಜವಾದ ಆದರ್ಶವಾದ ಸೌಹಾರ್ದತೆ, ನ್ಯಾಯ ಮತ್ತು ನೈತಿಕತೆಗೆ ಸಾಕ್ಷಿಯಾಗಬೇಕಿದೆ. ಧಾರ್ಮಿಕ ವಿಜಯೋತ್ಸವಗಳ ಆಚೆಗೂ ದೇಶದ ಸಂವಿಧಾನ, ಭ್ರಷ್ಟಾಚಾರ ರಹಿತ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡಾಗ ಮಾತ್ರ ಭಾರತವು ಜಾಗತಿಕ ಮಟ್ಟದಲ್ಲಿ ʼವಿಶ್ವಗುರುʼವಾಗಿ ಹೊರಹೊಮ್ಮಲು ಸಾಧ್ಯ.





