ಈಗಾಗಲೇ ಭಾರತ ಬಹುತೇಕ ಮಾರಾಟವಾಗಿದೆ. ಇನ್ನುಳಿದಿರುವ ಸರ್ಕಾರಿ ಸೊತ್ತನ್ನೂ ಮುಂದಿನ ನಾಲ್ಕು ವರ್ಷದಲ್ಲೇ ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗೆ ಮಾರಿ ದೇಶವನ್ನು 'ಖಾಸಗಿ ಆಸ್ತಿ'ಯನ್ನಾಗಿಸಬಹುದು!
ದೇಶದ ಎಲ್ಲ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಖಾಸಗಿ ವಲಯಕ್ಕೆ ಮೋದಿ ಸರ್ಕಾರ ವರ್ಗಾಯಿಸುತ್ತಿದೆ. ಈಗ, ಕರ್ನಾಟಕದ ಒಂದು ವಿಮಾನ ನಿಲ್ದಾಣ ಸೇರಿ ಒಟ್ಟು 11 ವಿಮಾನ ನಿಲ್ದಾಣಗಳನ್ನು ಖಾಸಗಿ ಸಂಸ್ಥೆಗಳ ಸುಪರ್ದಿಗೆ ನೀಡಲು ಮುಂದಾಗಿದೆ. ಖಾಸಗೀಕರಣದ ದುಷ್ಪರಿಣಾಮಗಳ ಬಗ್ಗೆ ವಿಪಕ್ಷಗಳು, ತಜ್ಞರುಗಳು ನಿರಂತರವಾಗಿ ಎಚ್ಚರಿಕೆ ನೀಡುವುದರ ಹೊರತಾಗಿಯೂ ಇಂದಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗಿ ದೊರೆಗಳ ಕೈಯಲ್ಲಿ ಸರ್ಕಾರಿ ಸೊತ್ತು ನೀಡಿ, ಜೋಪಾನವಾಗಿ ಕಾಪಾಡಿಕೊಳ್ಳಿ ಎನ್ನುತ್ತಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 11 ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಲು ನಿರ್ಧರಿಸಿದೆ. ಇದರಲ್ಲಿ 5 ಅಂತಾರಾಷ್ಟ್ರೀಯ ಮತ್ತು 6 ಸ್ಥಳೀಯ ವಿಮಾನ ನಿಲ್ದಾಣಗಳಾಗಿವೆ. ಹುಬ್ಬಳ್ಳಿ, ಕ್ಯಾಲಿಕಟ್, ಕೊಯಮತ್ತೂರು, ತಿರುಪತಿ, ಮಧುರೈ, ಚೆನ್ನೈ, ವಿಜಯವಾಡ, ಪಾಟ್ನಾ, ಸೂರತ್, ಜೋಧ್‌ಪುರ್, ವಡೋದರ, ನಾಗ್ಪುರ, ರಾಂಚಿ, ರಾಜಮಂಡ್ರಿ, ಇಂಫಾಲ, ಅರ್ಗತಾಲ, ಭೋಪಾಲ, ಇಂಧೋರ್ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳ ಕೈಗಿಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದನ್ನು ಓದಿದ್ದೀರಾ? ಸರ್ಕಾರವನ್ನೇ ಖಾಸಗೀಕರಣಗೊಳಿಸುತ್ತಿರುವ ‘ಅರ್ಬನ್ ನಾಜಿ’ಗಳು!
ಖಾಸಗೀಕರಣದ ವಿರುದ್ಧ ಕಾಂಗ್ರೆಸ್, ಸಿಪಿಐಎಂ, ಸಿಪಿಐ ಸೇರಿದಂತೆ ಹಲವು ವಿಪಕ್ಷಗಳು ಧ್ವನಿ ಎತ್ತಿದೆ. ಈ ಹಿಂದೆ ನಡೆದಿರುವ ವಿಮಾನ ನಿಲ್ದಾಣಗಳ ಖಾಸಗೀಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, 90ರ ದಶಕದಲ್ಲಿ ‘ಖಾಸಗೀಕರಣ, ಜಾಗತೀಕರಣ, ಉದಾರೀಕರಣ’ (ಎಲ್‌ಪಿಜಿ) ನೀತಿಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ. ಆರಂಭದಿಂದಲೂ ಎಲ್‌ಪಿಜಿ ನೀತಿಯನ್ನು ವಿರೋಧಿಸುತ್ತಾ ಬಂದಿರುವ ಎಡಪಕ್ಷಗಳು ಇಂದು ಬಿಜೆಪಿ ಸರ್ಕಾರ ಖಾಸಗೀಕರಣವನ್ನು ವಿಸ್ತರಿಸುತ್ತಿರುವುದನ್ನು ಕೂಡಾ ನಿರಂತರವಾಗಿ ವಿರೋಧಿಸುತ್ತಿವೆ.
ಖಾಸಗೀಕರಣ, ಜಾಗತೀಕರಣ, ಉದಾರೀಕರಣ ನೀತಿ
1991ರಲ್ಲಿ ಪಿ.ವಿ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಖಾಸಗೀಕರಣ, ಜಾಗತೀಕರಣ, ಉದಾರೀಕರಣ ನೀತಿಯನ್ನು ಜಾರಿಗೆ ತಂದಿತು. ಇದಾದ ಬಳಿಕ ಸರ್ಕಾರ ಬದಲಾದಂತೆ ಖಾಸಗೀಕರಣವು ಇಡೀ ದೇಶವನ್ನು ನುಂಗುತ್ತಿದೆ. ಬ್ಯಾಂಕುಗಳ ಖಾಸಗೀಕರಣ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಹಿಡಿದು ವಿಮಾನ ನಿಲ್ದಾಣದ ಖಾಸಗೀಕರಣದವರೆಗೂ ಸಾಗಿದೆ. ಇಂದಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಹುತೇಕ ಎಲ್ಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣದತ್ತ ದೂಡುತ್ತಿದೆ. ಅಂದಾನಿ, ಅಂಬಾನಿಗಳ ಜೇಬು ತುಂಬಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ.
ಹಣಕಾಸು ವರ್ಷ 1991-92ರಿಂದ 2017-18ರವರೆಗೆ ಕೇಂದ್ರ ಸರ್ಕಾರವು ಸುಮಾರು 3,47,439 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸೌಮ್ಯದ ಆಸ್ತಿಯನ್ನು ಖಾಸಗಿ ವಲಯಕ್ಕೆ ಮಾರಾಟ ಮಾಡಿದೆ. ಅದರಲ್ಲೂ 2014-2018ರ ಅವಧಿಯಲ್ಲಿಯೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು 1,94,646 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ವಲಯಕ್ಕೆ ನೀಡಿದೆ. ಇದು ಬರೀ 2018ರವರೆಗಿನ ಲೆಕ್ಕಾಚಾರ. ಅದಾದ ಬಳಿಕ ಎಷ್ಟೋ ಸರ್ಕಾರಿ ಸಂಸ್ಥೆಗಳು, ಆಸ್ತಿಗಳು ಕಾರ್ಪೋರೇಟ್ ದೊರೆಗಳ ಸುಪರ್ದಿಗೆ ಸೇರಿದೆ.
ಇದನ್ನು ಓದಿದ್ದೀರಾ? ಮೋದಿ ಮಸಲತ್ತು | ರೈಲ್ವೇ ಅಪಘಾತಗಳ ಹಿಂದಿದೆಯೇ ಖಾಸಗೀಕರಣದ ಕರಿ ನೆರಳು?
ಖಾಸಗಿ ಸಂಸ್ಥೆಗಳ ಬೆಳವಣಿಗೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಾ ಬರುತ್ತಿರುವ ಕೇಂದ್ರ ಸರ್ಕಾರ, ಸರ್ಕಾರಿ ಸಂಸ್ಥೆಯ ನಷ್ಟದ ನೆಪದಲ್ಲಿ ಖಾಸಗೀಕರಣಕ್ಕೆ ಜೋತು ಬೀಳುತ್ತಿದೆ. ಈಗಾಗಲೇ ಎಲ್‌ಐಸಿಯ ಶೇಕಡ 3.5ರಷ್ಟು ಷೇರನ್ನು ಐಪಿಒ ಮೂಲಕ ಮಾರಾಟ ಮಾಡಿ, ಸರ್ಕಾರ 20,557 ಕೋಟಿ ರೂಪಾಯಿ ಗಳಿಸಿದೆ. ಆದರೆ ಇಲ್ಲಿ ಗಳಿಕೆಗಿಂತ ಖಾಸಗಿ ಪಾಲಾದ ಷೇರಿನ ಬಗ್ಗೆ ಚಿಂತನೆ ನಡೆಸುವುದು ಮುಖ್ಯ.
ಅದಾನಿ ಪಾಲಾಗಿರುವ ವಿಮಾನ ನಿಲ್ದಾಣಗಳು
ಸರ್ಕಾರದ ಮಾಹಿತಿ ಪ್ರಕಾರ ಪ್ರಸ್ತುತ ‘ಸಾರ್ವಜನಿಕ- ಖಾಸಗಿ ಸಹಭಾಗಿತ್ವ’ (ಪಿಪಿಪಿ) ಮಾದರಿಯಲ್ಲಿ ನಿರ್ವಹಣೆ ಹೆಸರಿನಲ್ಲಿ ಭಾರತದ 14 ವಿಮಾನ ನಿಲ್ದಾಣಗಳು ಈಗಾಗಲೇ ಖಾಸಗಿ ಸಂಸ್ಥೆಗಳ ಪಾಲಾಗಿವೆ. ಈ ಪೈಕಿ 7 ಅದಾನಿ ಸಂಸ್ಥೆಯ ಸುಪರ್ದಿಯಲ್ಲಿವೆ. ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್‌ಎಲ್) ಸಂಸ್ಥೆಯು ಮುಂಬೈ, ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ, ಗುವಾಹಟಿ, ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುತ್ತಿದೆ. ನವಿ ಮುಂಬೈನಲ್ಲಿನ ವಿಮಾನ ನಿಲ್ದಾಣವನ್ನು ಕೂಡಾ ಶೀಘ್ರವೇ ಅದಾನಿ ಸಂಸ್ಥೆಯ ಅಧೀನಕ್ಕೆ ಒಳಪಡಲಿದೆ. ಇದೀಗ, 11 ವಿಮಾನ ನಿಲ್ದಾಣಗಳೂ ಕೂಡಾ ಅದಾನಿ ಪಾಲಾಗುವ ಸಾಧ್ಯತೆಗಳಿವೆ.
ವಿಮಾನ ನಿಲ್ದಾಣಗಳು ಅದಾನಿ ಸಂಸ್ಥೆ ಪಾಲಾಗುತ್ತಿದ್ದಂತೆ ಅದೆಷ್ಟೋ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಹಲವು ವಿಮಾನ ನಿಲ್ದಾಣಗಳಲ್ಲಿ ಸಂಪೂರ್ಣ ವ್ಯವಸ್ಥೆಯನ್ನೇ ಬದಲಾಯಿಸಲಾಗಿದೆ. ಹೆಸರನ್ನೂ ಕೂಡಾ ಬದಲಾಯಿಸಿ ಸ್ಥಳೀಯರ ಕೆಂಗಣ್ಣಿಗೆ ಅದಾನಿ ಸಂಸ್ಥೆ ಗುರಿಯಾಗಿದೆ. ಇದೀಗ 11 ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತೆ ಅದಾನಿ ಪಾಲಾದರೆ ಖಂಡಿತವಾಗಿಯೂ ಉದ್ಯೋಗಿಗಳು ಮನೆ ಕಡೆ ಮುಖ ಮಾಡಬೇಕಾಗುತ್ತದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಮೋದಿ ಸರ್ಕಾರ ಭಾರತೀಯ ರೈಲ್ವೆಯನ್ನು ಖಾಸಗೀಕರಣದತ್ತ ದೂಡುತ್ತಿದೆಯೇ?
ಇನ್ನು ಅದಾನಿ ಸಂಸ್ಥೆಗೆ ತಾನೇನು ಕಡಿಮೆಯಿಲ್ಲ ಎಂಬಂತೆ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ ಕೂಡಾ ವಿಮಾನ ನಿಲ್ದಾಣದ ನಿರ್ವಹಣೆ ಎಂಬ ಉದ್ಯಮಕ್ಕೆ ಇಳಿದಿದೆ. ನಂದೆಡ್, ಲಾತೂರ್, ಬರಾಮತಿ, ಯಾವತ್ಮಾಲ್, ಒಸ್ಮಾನಾಬಾದ್ ವಿಮಾನ ನಿಲ್ದಾಣಗಳನ್ನು ರಿಲಯನ್ಸ್ ಏರ್‌ಪೋರ್ಟ್ಸ್ ಡೆವಲಪರ್ ಲಿಮಿಟೆಡ್ (ಆರ್‌ಎಡಿಎಲ್) ನಿರ್ವಹಣೆ ಮಾಡುತ್ತದೆ.
ಖಾಸಗೀಕರದಿಂದ ಏಕಸ್ವಾಮತ್ಯೆ ಕಡೆಗೆ ಹೆಜ್ಜೆ
ಖಾಸಗೀಕರಣ ಮುಂದುವರೆದಂತೆ ಸರ್ಕಾರಿ ಸಂಸ್ಥೆಗಳೆಲ್ಲವೂ ಖಾಸಗಿ ಸಂಸ್ಥೆಗಳ ಪಾಲಾಗುತ್ತದೆ. ಇದರಿಂದಾಗಿ ಎಲ್ಲ ಕಡೆಯೂ ಬೆಲೆ ಏರಿಕೆಯಾಗುತ್ತದೆ. ಅದು ಕೂಡಾ ಒಂದೇ ಸಂಸ್ಥೆ ವಿಸ್ತೀರ್ಣವಾಗಿ ಬೆಳೆಯುತ್ತಾ ಹೋದರೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆ ಹೆಚ್ಚುತ್ತದೆ ಎಂಬುದು ಖಾಸಗೀಕರಣವನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ತಜ್ಞರ ಅಭಿಪ್ರಾಯವಾಗಿದೆ. ಇಂದು ಅದು ನಿಜ ಕೂಡಾ ಹೌದು. ಪ್ರಸ್ತುತ ಕೃಷಿಯಿಂದ ಹಿಡಿದು ಕೈಗಾರಿಕೆವರೆಗೂ, ಆನ್‌ಲೈನ್ ಸಿನಿಮಾ ಪ್ಲಾಟ್‌ಫಾರ್ಮ್‌ಗಳಿಂದ ಹಿಡಿದು ವಿಮಾನ ನಿಲ್ದಾಣದವರೆಗೂ ಕೇಳಿ ಬರುವ ಹೆಸರು ಎರಡೇ. ಒಂದು ಅದಾನಿ ಸಂಸ್ಥೆ ಮತ್ತೊಂದು ಅಂಬಾನಿಯ ರಿಲಯನ್ಸ್ ಸಂಸ್ಥೆ.
ಅಷ್ಟು ಮಾತ್ರವಲ್ಲದೆ ದೇಶದ ಮಾರುಕಟ್ಟೆಯ ಹತೋಟಿ ವಿದೇಶಿ ಸಂಸ್ಥೆಗಳ ಕೈ ಸೇರುವ ಆತಂಕವೂ ಈ ಖಾಸಗೀಕರಣದಿಂದಾಗಿ ಅಧಿಕವಾಗುತ್ತದೆ. ಈಗಾಗಲೇ ವಿದೇಶಿ ಹೂಡಿಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಯಾವುದೇ ಸಂಸ್ಥೆಯಲ್ಲೂ ಶೇಕಡ 51ಕ್ಕಿಂತ ಅಧಿಕ ವಿದೇಶಿ ಸಂಸ್ಥೆಗಳ ಹೂಡಿಕೆಯಿದ್ದರೆ ಅದು ಸಂಪೂರ್ಣವಾಗಿ ವಿದೇಶಿಗರ ಪಾಲಾಗುತ್ತದೆ. ಇದರಿಂದಾಗಿ ಲಾಭವೂ ಕೂಡಾ ವಿದೇಶಕ್ಕೆ ಹೋಗುತ್ತದೆ. ಇದು ಖಂಡಿತವಾಗಿ ನಮ್ಮ ಆರ್ಥಿಕತೆಗೆ ಉತ್ತಮವಲ್ಲ.
ಇದನ್ನು ಓದಿದ್ದೀರಾ? ಸೈನಿಕ ಶಾಲೆಗಳ ಖಾಸಗೀಕರಣದ ವಿರುದ್ಧ ರಾಷ್ಟ್ರಪತಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಾಲೇಜು, ಸರ್ಕಾರಿ ಕಚೇರಿ, ಸರ್ಕಾರಿ ಬಸ್ ಹೀಗೆ – ನಾವೆಲ್ಲ ಬೆಳೆದ ರೀತಿಯಿದು. ಆದರೆ ಇಂದು ಎಲ್ಲವೂ ಖಾಸಗೀಕರಣ. ಆಸ್ಪತ್ರೆ, ಕಾಲೇಜುಗಳಲ್ಲಿ ನಡೆಯುವ ಖಾಸಗೀಕರಣ ಒಂದು ರೀತಿಯದ್ದಾದರೆ, ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಪದ್ಧತಿ ತಂದು ಕ್ರಮೇಣವಾಗಿ ಸರ್ಕಾರಿ ಉದ್ಯೋಗಿಗಳನ್ನು ಖಾಸಗಿ ನೇಮಕಾತಿ ಸಂಸ್ಥೆಯೊಂದರಡಿಯಲ್ಲಿ ಕೊರಗುವಂತೆ ಮಾಡುವುದು ಇನ್ನೊಂದು ರೀತಿಯ ಪರೋಕ್ಷ ಖಾಸಗೀಕರಣ.
ಬಂಡವಾಳಿಗರ ಲಾಭಕ್ಕಾಗಿ ಎಲ್ಲೆಡೆ ಖಾಸಗೀಕರಣವೆಂಬ ದೈತ್ಯವನ್ನು ಸಲೀಸಾಗಿ ಸಾಗುವಂತೆ ಮಾಡುತ್ತಿರುವುದು ನಮ್ಮ ಸರ್ಕಾರಗಳು. ಅಂದು ಖಾಸಗೀಕರಣದ ಲಾಭವನ್ನು ಟಾಟಾ- ಬಿರ್ಲಾ ಪಡೆದರೆ, ಇಂದು ಆ ಸ್ಥಾನಕ್ಕೆ ಅಂಬಾನಿ -ಅದಾನಿ ಬಂದಿದ್ದಾರೆ. ಈ ಹಿಂದಿನ ಕಾರ್ಪೋರೇಟ್ ಸಂಸ್ಥೆಗಳಿಗಿದ್ದ ಒಂದು ಗುಟುಕಿನಷ್ಟು ಮಾನವೀಯತೆ ಇಂದಿನ ಅಂಬಾನಿ-ಅದಾನಿಗಿಲ್ಲ. ರೈಲ್ವೇಯನ್ನು ಕೂಡಾ ಖಾಸಗೀಕರಣ ಮಾಡಲು ಎಲ್ಲ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಭಾರತ ಬಹುತೇಕ ಮಾರಾಟವಾಗಿದೆ. ಇನ್ನುಳಿದಿರುವ ಸರ್ಕಾರಿ ಸೊತ್ತನ್ನೂ ಮುಂದಿನ ನಾಲ್ಕು ವರ್ಷದಲ್ಲೇ ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗೆ ಮಾರಿ ದೇಶವನ್ನು ‘ಖಾಸಗಿ ಆಸ್ತಿ’ಯನ್ನಾಗಿಸಬಹುದಾದ ಆತಂಕವಿದೆ!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.
ಖಡಕ್ ಬರಹ.