ನಮಗೆ ನಿಮ್ಮ ಈ ವಂದನೆ ಸಾಕಾಗಿದೆ. ಈಗ ಈ ನಾಟಕಗಳನ್ನು ಬಿಡಿ. ಯಾರು ವಂದನೆ ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ಅವರ ಹೆಸರುಗಳು ಎಪ್ಸ್ಟೀನ್ ಫೈಲ್ಗಳಲ್ಲಿ ಬರುತ್ತಿವೆ ಅಥವಾ ಈಗಾಗಲೇ ಬಂದಿವೆ. ದೇಶೀ ಎಪ್ಸ್ಟೀನ್ ಫೈಲ್ಗಳೂ ಅವರ ಮುಂದೆ ತೆರೆಯಲ್ಪಟ್ಟಿವೆ.
ಸರ್ಕಾರದ ಲಾಜಿಕ್ ಹೀಗಿದೆ: ಜನಗಣತಿ ಮುಗಿಯಬೇಕು. ಅದರ ಆಧಾರದ ಮೇಲೆ ಕ್ಷೇತ್ರಗಳನ್ನು ಮರು ವಿನ್ಯಾಸಗೊಳಿಸಬೇಕು. ನಂತರವೇ 33% ಮಹಿಳಾ ಮೀಸಲಾತಿ ಜಾರಿಗೆ ಬರಬೇಕು. ಆದರೆ ಮೀಸಲಾತಿಯನ್ನು ಇಂದಿನ ಕ್ಷೇತ್ರಗಳಲ್ಲಿಯೇ ಜಾರಿಗೊಳಿಸಬಹುದು ಎಂಬುದಕ್ಕೆ ಇವರಲ್ಲಿ ಉತ್ತರವಿಲ್ಲ.
2023ರಲ್ಲಿ ಮಸೂದೆ ಅಂಗೀಕಾರಗೊಂಡು ಕಾಯ್ದೆಯೂ ಆಗಿದೆ. ಅದು ಜಾರಿಯಾಗಲು ಜನಗಣತಿ ನಡೆಯಬೇಕು. Delimitation ಅಥವಾ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಒಂದು ಪ್ರತ್ಯೇಕ ಪ್ರಕ್ರಿಯೆ, ಅದು ಅಧಿಕಾರದ ಹಂಚಿಕೆಯನ್ನು ಮರು ಸಮೀಕರಿಸುತ್ತದೆ. ಈ ಎರಡನ್ನು ಕಟ್ಟಿ ಹಾಕುವುದು ಎಲ್ಲಿಯ ನ್ಯಾಯ? ಇದು ಕೇವಲ ವಿಳಂಬ ಮಾಡುವ ಸುಲಭ ಮಾರ್ಗ – ಅಂದರೆ, “ಹಕ್ಕಿಗೆ ಒಂದು ಹೊಸ ಷರತ್ತು ಸೇರಿಸಿ, ಅದನ್ನು ಭವಿಷ್ಯಕ್ಕೆ ತಳ್ಳುವುದು.”
ಸರಳವಾಗಿ ಹೇಳುವುದಾದರೆ — ಹೌದು, ಇದು ವಿಳಂಬದ ಮೂಲಕ ಅನ್ಯಾಯ.
ಯಾಕೆಂದರೆ: ಮಹಿಳೆಯರ ಪ್ರತಿನಿಧಿತ್ವ ಈಗಲೇ ಕಡಿಮೆ ಇದೆ. ಅದನ್ನು ತಕ್ಷಣ ಸರಿಪಡಿಸಬಹುದಾದ ಅವಕಾಶ ಇರುವಾಗ, ಅದನ್ನು ಮುಂದೂಡಲಾಗಿದೆ. ರಾಜಕೀಯ ಇಚ್ಛಾಶಕ್ತಿ ಇದ್ದರೆ, ಪಕ್ಷಗಳು ಈಗಲೇ ಹೆಚ್ಚಿನ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸಬಹುದು. ಕೇವಲ ಮಹಿಳಾ ಮೀಸಲಾತಿಯ ವಿಷಯವನ್ನು ಭಾವನಾತ್ಮಕ ಸಂಗತಿಯಾಗಿಸಿ, ಕಣ್ಣೀರು ಸುರಿಸಿ ಮತ ಬಾಚಿಕೊಳ್ಳುವ ಹುನ್ನಾರ ಮಾತ್ರ. ಇದೇ ಪಕ್ಷದ ಮಹಿಳೆಯರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಜನರನ್ನು ಹಾದಿ ತಪ್ಪಿಸಲು, ತಪ್ಪು ಸಂದೇಶ ರವಾನಿಸಲು! ಇದಕ್ಕಿಂತ ನಾಚಿಕೆಗೇಡಿನ ವಿಷಯವೇನಿದೆ?
ಇನ್ನು ಈ ‘ವಂದನ’ ಎಂಬ ಪದ ನಾಟಕೀಯ ಎನಿಸುತ್ತದೆ. ಸ್ತ್ರೀಯರಿಗೆ ಅವರ ನ್ಯಾಯಸಮ್ಮತ ಹಕ್ಕನ್ನು ಸಂಸತ್ತು ನೀಡುತ್ತಿದೆ — ಅದೂ ದಶಕಗಳ ವಿಳಂಬದ ಬಳಿಕ! ಮಹಿಳೆಯರಿಗೆ ಪುರುಷರ ವಂದನೆಯ ಅಗತ್ಯವಿಲ್ಲ. ಹಿಂದಿನ ಕಾಲದ ಕವಿಗಳು ಮಹನೀಯರು ಸಾಕಷ್ಟು ವಂದನೆಗಳನ್ನು ಮಾಡಿದ್ದಾರೆ; ಆದರೂ ಇಂದಿನ ಸಮಾಜದಲ್ಲಿ ಸ್ತ್ರೀಯರ ಸ್ಥಿತಿ ಏನು? ಅತ್ಯಾಚಾರಗಳ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. ಒಂದು ವರ್ಷದ ಮಗುವಿನಿಂದ, ನಾಲ್ಕು ವರ್ಷದ ಬಾಲಕಿಯರ ಮೇಲೂ ಅತ್ಯಾಚಾರ ಮತ್ತು ಹತ್ಯೆಗಳು ನಡೆಯುತ್ತಿವೆ. ಧರ್ಮ ಮತ್ತು ಅಧ್ಯಾತ್ಮದ ಹೆಸರಿನಲ್ಲಿ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಯುತ್ತಿದೆ; ಅತ್ಯಾಚಾರಿ, ಬಲಾತ್ಕಾರಿಗಳಿಗೆ ಪಕ್ಷದ ಟಿಕೆಟ್ ಸಿಗುತ್ತವೆ. ಚುನಾಯಿತರಾಗಿ ಸಂಸತ್ತಿನಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಇಂತಹವರು ಸರ್ಕಾರದ ಪೋಷಣೆ ಮತ್ತು ಆಶ್ರಯದಲ್ಲಿ ಬೆಳೆದು, ಬೇಕಾದಾಗ ಪೆರೋಲ್ ಮೇಲೆ ಬಿಡುಗಡೆಯಾಗುತ್ತಿದ್ದಾರೆ. ಅತ್ಯಾಚಾರಿಗಳು ಮತ್ತು ಹಂತಕರಿಗೆ ಬಹಿರಂಗವಾಗಿ ಬೆಂಬಲ ನೀಡಲಾಗುತ್ತಿದೆ; ಹೂಮಾಲೆ ಹಾಕಿ ಸಮ್ಮಾನಿಸಲಾಗುತ್ತದೆ? ಇಂತಹ ಸಂದರ್ಭದಲ್ಲೂ ನೀವು “ನಾರಿ ಶಕ್ತಿ ವಂದನ” ಮಾಡುತ್ತಾ ನಿಮ್ಮ ಪಾಪಗಳ ಮೇಲೆ ಪರದೆ ಹಾಕಲು ಯತ್ನಿಸುತ್ತಿಲ್ಲವೇ!
ನಮಗೆ ನಿಮ್ಮ ಈ ವಂದನೆ ಸಾಕಾಗಿದೆ. ಈಗ ಈ ನಾಟಕಗಳನ್ನು ಬಿಡಿ. ಯಾರು ವಂದನೆ ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ — ಅವರ ಹೆಸರುಗಳು ಎಪ್ಸ್ಟೀನ್ ಫೈಲ್ಗಳಲ್ಲಿ ಬರುತ್ತಿವೆ ಅಥವಾ ಈಗಾಗಲೇ ಬಂದಿವೆ. ದೇಶೀ ಎಪ್ಸ್ಟೀನ್ ಫೈಲ್ಗಳೂ ಅವರ ಮುಂದೆ ತೆರೆಯಲ್ಪಟ್ಟಿವೆ.
ಬೇಕಾದರೆ ದೇವ-ದೇವತೆಗಳ ವಂದನೆ ಮಾಡಿಕೊಳ್ಳಿ, ಅದರಲ್ಲಿ ಯಾರಿಗೂ ತೊಂದರೆಯಿಲ್ಲ. ಆದರೆ ಸ್ತ್ರೀಯರನ್ನು ಈ ‘ವಂದನೆಯ ಭಾರ’ದಿಂದ ಮುಕ್ತಗೊಳಿಸಿ. ಮಹಿಳಾ ಮೀಸಲಾತಿ ಎಂದರೆ ಅವರ ವಂದನೆ ಅಲ್ಲ; ಅದು ಅವರ ರಾಜಕೀಯ ಪಾಲುದಾರಿಕೆಯನ್ನು ಒಪ್ಪಿಕೊಳ್ಳುವಿಕೆ ಮತ್ತು ಮಾನ್ಯತೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




