17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಸೂಚಿಸಿದೆ. ವಿಪಕ್ಷಗಳ ವಿರೋಧಕ್ಕೆ ಮಣಿದು ಕೊನೆಗೂ ಓದಲು ಸಾಧ್ಯವಾಗುವ PDF ಪ್ರತಿಗಳನ್ನು ರಾಜಕೀಯ ಪಕ್ಷಗಳಿಗೆ ಒದಗಿಸುವಂತೆ ನಿರ್ದೇಶಿಸಿದೆ. ಹಾಗಾದರೆ, ಇಲ್ಲಿವರೆಗೂ ಮತದಾರರ ಪಟ್ಟಿಯಲ್ಲಿ ನಕಲಿ ಹೆಸರುಗಳನ್ನು ತುರುಕಿ ಅಕ್ರಮ ಎಸಗಲಾಗುತ್ತಿತ್ತೇ? 'ಮಶೀನ್ ರೀಡಬಲ್' ಪಟ್ಟಿ ಕೇಳುತ್ತಿದ್ದ ವಿಪಕ್ಷಗಳಿಗೆ ಡಿಜಿಟಲ್ ಡೇಟಾ ನಿರಾಕರಿಸಿ 'ಮೋಶಾ' ಸರ್ಕಾರ ಮಾಡಿದ್ದೇನು? ಖಾಸಗಿತನದ ನೆಪವೊಡ್ಡಿ ವಿಪಕ್ಷಗಳ ಕಣ್ಣಿಗೆ ಮಣ್ಣೆರಚುತ್ತಿದ್ದ ಚುನಾವಣಾ ಆಯೋಗ ಕೊನೆಗೂ ಹೋರಾಟಕ್ಕೆ ಮಣಿದಿದ್ದೇಕೆ?
SIR ಪ್ರಕ್ರಿಯೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚಾದ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗವು ಅಕ್ಟೋಬರ್ 15ರಂದು ನೀಡಿರುವ ಹೊಸ ನಿರ್ದೇಶನ ತೀವ್ರ ಸಂಚಲನ ಮೂಡಿಸಿದೆ. ಪಂಜಾಬ್, ಉತ್ತರ ಪ್ರದೇಶ ಮತ್ತು ಮಣಿಪುರ ಸೇರಿದಂತೆ ಒಟ್ಟು 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು ಆಯೋಗ ಸೂಚನೆ ನೀಡಿದ್ದು, ‘ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ (SSR) ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಮತದಾರರ ಪಟ್ಟಿಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ‘ಯಂತ್ರ-ಓದಬಹುದಾದ’ (Machine-Readable) ಡಿಜಿಟಲ್ ಪಟ್ಟಿ ನೀಡಬೇಕೆಂಬ ಕಾಂಗ್ರೆಸ್ ಪಕ್ಷದ ಸುದೀರ್ಘ ಹೋರಾಟ ಹಾಗೂ ಬೇಡಿಕೆ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರುಗಳನ್ನು ಸೇರಿಸುವುದು ಹಾಗೂ ವಿಪಕ್ಷಗಳ ಬೆಂಬಲಿತ ಮತದಾರರ ಹೆಸರುಗಳನ್ನು ರಹಸ್ಯವಾಗಿ ಕೈಬಿಡುವುದನ್ನು ಸಾಕ್ಷಿ ಸಮೇತ ಪತ್ತೆಹಚ್ಚಲು ‘ಮಿಷನ್-ರೀಡಬಲ್’ ಪಟ್ಟಿ ಅತ್ಯಗತ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದ್ದರು. ಇದೀಗ ಚುನಾವಣಾ ಆಯೋಗದ ಹೊಸ ಆದೇಶದಲ್ಲಿ, ಪ್ರತಿಯೊಂದು ಮಾನ್ಯತೆ ಪಡೆದ ರಾಜಕೀಯ ಪಕ್ಷಕ್ಕೂ ಕರಡು ಹಾಗೂ ಅಂತಿಮ ಮತದಾರರ ಪಟ್ಟಿಯ ಎರಡು ಪ್ರತಿಗಳನ್ನು (ಒಂದು ಮುದ್ರಿತ ಹಾರ್ಡ್ ಕಾಪಿ ಮತ್ತು ಮತ್ತೊಂದು ಕಂಪ್ಯೂಟರ್ ಗ್ರಹಿಸಬಹುದಾದ ‘Readable PDF’ ಸಾಫ್ಟ್ ಕಾಪಿ) ಉಚಿತವಾಗಿ ನೀಡಲೇಬೇಕು ಎಂದು ಕಡ್ಡಾಯಗೊಳಿಸಲಾಗಿದೆ.
ಸುಮಾರು ಎಂಟು ವರ್ಷಗಳಿಂದ “ಖಾಸಗಿತನದ ರಕ್ಷಣೆ” ಎಂಬ ನೆಪವೊಡ್ಡಿ ‘ಮಿಷನ್-ರೀಡಬಲ್’ ಪಟ್ಟಿ ನೀಡಲು ಹಟಮಾರಿ ಧೋರಣೆ ತಳೆದಿದ್ದ ಚುನಾವಣಾ ಆಯೋಗವು, ಕೊನೆಗೂ ವಿಪಕ್ಷಗಳ ತೀವ್ರ ಪ್ರತಿಭಟನೆ ಹಾಗೂ ಜನಾಗ್ರಹದ ಮುಂದೆ ಸೋಲೊಪ್ಪಿಕೊಂಡು ಮಂಡಿಯೂರಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಇಷ್ಟು ದಿನ ಆಡಳಿತಾರೂಢ ‘ಮೋಶಾ’ ಸರ್ಕಾರದ ಕುಮ್ಮಕ್ಕಿನಿಂದ ವಿಪಕ್ಷಗಳ ಕಣ್ಣಿಗೆ ಮಣ್ಣೆರಚಿ, ಡಿಜಿಟಲ್ ಆಡಿಟ್ಗೆ ತಡೆ ಒಡ್ಡಲಾಗುತ್ತಿತ್ತು. ಆದರೆ ಈಗ ಆಯೋಗ ಹೊರಡಿಸಿರುವ ಈ ನಿರ್ದೇಶನವು ಪ್ರಜಾಪ್ರಭುತ್ವದ ಸುದೀರ್ಘ ತಾಂತ್ರಿಕ ಹೋರಾಟಕ್ಕೆ ಸಿಕ್ಕ ಬೃಹತ್ ಜಯ ಹಾಗೂ ಪ್ರತಿಪಕ್ಷಗಳ ವಾದಕ್ಕೆ ಸಿಕ್ಕ ಐತಿಹಾಸಿಕ ಮನ್ನಣೆಯಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ಏನಿದು ಮಶೀನ್ ರೀಡಬಲ್ ಮತದಾರರ ಪಟ್ಟಿ? ಇದರ ತಾಂತ್ರಿಕ ಮಹತ್ವವೇನು?
ಮಶೀನ್ ರೀಡಬಲ್ ಅಥವಾ ಯಂತ್ರ-ಓದಬಹುದಾದ (Machine-Readable) ಮತದಾರರ ಪಟ್ಟಿ ಎಂದರೆ, ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಡಿಜಿಟಲ್ ಅಲ್ಗಾರಿದಮ್ಗಳ ಮೂಲಕ ಮತದಾರರ ಹೆಸರು, ವಿಳಾಸ ಹಾಗೂ ಇತರೆ ಸಂಪೂರ್ಣ ವಿವರಗಳನ್ನು ಸುಲಭವಾಗಿ ಹುಡುಕಲು (Search), ವಿಶ್ಲೇಷಿಸಲು ಮತ್ತು ಆಡಿಟ್ ಮಾಡಲು ಸಾಧ್ಯವಾಗುವ ಅತ್ಯಾಧುನಿಕ ಡಿಜಿಟಲ್ ಪಟ್ಟಿ. ಪ್ರಸ್ತುತ ಚುನಾವಣಾ ಆಯೋಗವು ಒದಗಿಸುತ್ತಿರುವ ಅನೇಕ ಮತದಾರರ ಪಟ್ಟಿಗಳು ಕೇವಲ ಮುದ್ರಿತ ಕಾಗದಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿದ ‘ಚಿತ್ರ ಪಿಡಿಎಫ್’ (Image PDFs) ರೂಪದಲ್ಲಿರುತ್ತವೆ. ಇಂತಹ ಚಿತ್ರರೂಪದ ಕಡತಗಳಲ್ಲಿ ನಿರ್ದಿಷ್ಟ ಹೆಸರನ್ನು ಹುಡುಕುವುದು ಕಷ್ಟವಾಗುವುದಲ್ಲದೆ, ಸಾವಿರಾರು ಪುಟಗಳ ಮಾಹಿತಿಯನ್ನು ಒಟ್ಟಾಗಿ ಸ್ವಯಂಚಾಲಿತವಾಗಿ ವಿಶ್ಲೇಷಿಸುವುದು ಅಸಾಧ್ಯದ ಮಾತಾಗುತ್ತದೆ.
ಆದರೆ, ಕರಾರುವಾಕ್ಕಾಗಿ ಪಠ್ಯ ರೂಪದಲ್ಲಿರುವ ಅಥವಾ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ತಂತ್ರಜ್ಞಾನದ ಮೂಲಕ ಡಿಜಿಟಲ್ ಪಠ್ಯಕ್ಕೆ ಪರಿವರ್ತಿಸಲಾದ ‘ರೀಡಬಲ್ PDF’ ಪಟ್ಟಿಗಳಲ್ಲಿ ಪ್ರತಿ ಅಕ್ಷರವೂ ಕಂಪ್ಯೂಟರ್ಗೆ ಗ್ರಹಿಸಲು ಸಾಧ್ಯವಾಗುತ್ತದೆ. ಇದರಿಂದ ವಿವಿಧ ಮತಗಟ್ಟೆಗಳ ಪಟ್ಟಿಗಳನ್ನು ಕ್ಷಣಾರ್ಧದಲ್ಲಿ ಪರಸ್ಪರ ಹೋಲಿಕೆ ಮಾಡುವುದು, ಒಂದೇ ವ್ಯಕ್ತಿಯ ಹೆಸರು ಬೇರೆ ಬೇರೆ ಕಡೆಗಳಲ್ಲಿ ಪುನರಾವರ್ತನೆಯಾಗಿರುವುದನ್ನು (Duplicates) ಪತ್ತೆಹಚ್ಚುವುದು ಮತ್ತು ಮತದಾರರ ಪಟ್ಟಿಯಲ್ಲಿರುವ ಸಂಭಾವ್ಯ ಅಸಂಗತತೆಗಳು ಅಥವಾ ಲೋಪದೋಷಗಳನ್ನು ಅತ್ಯಂತ ನಿಖರವಾಗಿ ಪರಿಶೀಲಿಸುವುದು ಸಾಧ್ಯವಾಗುತ್ತದೆ.
ವಿಪಕ್ಷಗಳ ಕಳವಳಕ್ಕೆ ಕಾರಣವೇನು?
ಕಳೆದ ವರ್ಷ ಆಗಸ್ಟ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ವಿಭಾಗದ ಮತದಾರರ ಪಟ್ಟಿಯಲ್ಲಿ ಬೃಹತ್ ಪ್ರಮಾಣದ ನಕಲಿ ಮತದಾರರ ಹೆಸರುಗಳನ್ನು ರಹಸ್ಯವಾಗಿ ಸೇರಿಸಲಾಗಿದೆ ಎಂದು ಸಾಕ್ಷಿ ಸಮೇತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇಡೀ ದೇಶದಾದ್ಯಂತ ಮತದಾರರ ಪಟ್ಟಿಗಳಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ಹಾಗೂ ಸಾಂಸ್ಥಿಕ ಲೋಪಗಳನ್ನು ಪತ್ತೆಹಚ್ಚಬೇಕಾದರೆ, ಚುನಾವಣಾ ಆಯೋಗವು ಎಲ್ಲಾ ಕ್ಷೇತ್ರಗಳ ಪಟ್ಟಿಗಳನ್ನು ಕಡ್ಡಾಯವಾಗಿ ಡಿಜಿಟಲ್ ಹಾಗೂ ‘ಯಂತ್ರ-ಓದಬಹುದಾದ’ (Machine-Readable) ರೂಪದಲ್ಲೇ ನೀಡಬೇಕು ಎಂದು ಅವರು ಆಗ್ರಹಿಸುತ್ತಿದ್ದರು.
ಈ ಕುರಿತು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, “ದೇಶದಾದ್ಯಂತ ಮತದಾರರ ಪಟ್ಟಿಗಳ ನಿಖರತೆಯನ್ನು ಪಾರದರ್ಶಕವಾಗಿ ಆಡಿಟ್ ಮಾಡಲು ಇರುವ ಏಕೈಕ ಮಾರ್ಗವೆಂದರೆ ಈ ಪರಿಶೀಲನಾ ಪ್ರಕ್ರಿಯೆಯನ್ನು ಸಾಫ್ಟ್ವೇರ್ ಮೂಲಕ ಸ್ವಯಂಚಾಲಿತಗೊಳಿಸುವುದು (Automate). ‘ಮಶೀನ್ ರೀಡಬಲ್’ ಪಟ್ಟಿಗಳು ಲಭ್ಯವಾದರೆ, ನಿಷ್ಪಕ್ಷಪಾತ ಕಂಪ್ಯೂಟರ್ ಪ್ರೋಗ್ರಾಂಗಳು ಕ್ಷಣಾರ್ಧದಲ್ಲಿ ಕ್ಷೇತ್ರದಿಂದ ಕ್ಷೇತ್ರಕ್ಕೆ ಮಾಹಿತಿಯನ್ನು ತುಲನೆ ಮಾಡಿ, ಪಟ್ಟಿಯ ಸತ್ಯಾಸತ್ಯತೆಯನ್ನು ಸಾರ್ವಜನಿಕವಾಗಿ ಬಯಲಿಗಿಡಬಲ್ಲವು” ಎಂದು ಪ್ರತಿಪಾದಿಸಿದ್ದರು. ಪ್ರಸ್ತುತ ಆಯೋಗ ಒದಗಿಸುತ್ತಿರುವ ಕಾಗದದ ಸ್ಕ್ಯಾನ್ ಪ್ರತಿಗಳನ್ನು (Image PDFs) ಕೈಯಾರೆ (Manually) ಪರಿಶೀಲಿಸುವ ಹಳೆಯ ವಿಧಾನವು ಅತಿಯಾದ ಸಮಯ ಮತ್ತು ಶ್ರಮವನ್ನು ಬೇಡುತ್ತದೆ. ಇದರಿಂದಾಗಿ ಹಲವು ರಾಜ್ಯಗಳ ಸಾಲು ಸಾಲು ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಆಡಿಟ್ ಮಾಡಲು ಬದ್ಧವಾಗಿದ್ದ ಕಾಂಗ್ರೆಸ್ನ ತಾಂತ್ರಿಕ ತಂಡವು, ಕೇವಲ ಒಂದು ಲೋಕಸಭಾ ಕ್ಷೇತ್ರದ ಒಂದೇ ಒಂದು ವಿಧಾನಸಭಾ ವಿಭಾಗದ ಪಟ್ಟಿಯನ್ನು ಪೂರ್ಣಗೊಳಿಸಲು ಬರೋಬ್ಬರಿ ಆರು ತಿಂಗಳು ಮತ್ತು ಸಾವಿರಾರು ಮಾನವ-ಗಂಟೆಗಳನ್ನು (Man-hours) ವ್ಯರ್ಥ ಮಾಡಬೇಕಾಯಿತು! ಆಡಳಿತಾರೂಢ ‘ಮೋಶಾ’ ಸರ್ಕಾರವು ಈ ತಾಂತ್ರಿಕ ತೊಡಕನ್ನೇ ಅಸ್ತ್ರವಾಗಿಸಿಕೊಂಡು, ವಿಪಕ್ಷಗಳು ಅಕ್ರಮಗಳನ್ನು ಪತ್ತೆ ಮಾಡದಂತೆ ಡಿಜಿಟಲ್ ಡೇಟಾ ನಿರಾಕರಿಸಿ ವಂಚಿಸುತ್ತಿತ್ತು ಎಂಬುದು ಕಾಂಗ್ರೆಸ್ನ ಗಂಭೀರ ಆರೋಪ.
2018ರಲ್ಲಿ ಸುಪ್ರೀಂ ಕೋರ್ಟ್ ಕಾದಾಡಿದ್ದು ಯಾರ ಪರವಾಗಿ?
ಮತದಾರರ ಪಟ್ಟಿಯನ್ನು ಕಡ್ಡಾಯವಾಗಿ ಡಿಜಿಟಲ್ ಹಾಗೂ ಪಠ್ಯ ರೂಪದಲ್ಲಿ (Searchable PDF) ಒದಗಿಸಬೇಕೆಂಬ ಪ್ರಮುಖ ಬೇಡಿಕೆಯು ಮೊದಲ ಬಾರಿಗೆ 2018ರಲ್ಲಿಯೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕಾಂಗ್ರೆಸ್ನ ಹಿರಿಯ ನಾಯಕರಾದ ಕಮಲ್ ನಾಥ್ ಮತ್ತು ಸಚಿನ್ ಪೈಲಟ್ ಸೇರಿದಂತೆ ಪ್ರಮುಖರು ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳು ಹಾಗೂ ಸಾಂಸ್ಥಿಕ ಕಾರ್ಯವಿಧಾನಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದರು.
ಇದನ್ನೂ ಓದಿ: SIR ಅಕ್ರಮ ಆರೋಪ: ಎಸ್ಐಟಿ ತನಿಖೆಗೆ ಎಸ್ಡಿಪಿಐ ಆಗ್ರಹ
ಆಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಅರ್ಜಿದಾರರ ಪರವಾದ ವಾದವನ್ನು ತಳ್ಳಿಹಾಕಿತ್ತು. ಚುನಾವಣಾ ಆಯೋಗವು ಅರ್ಜಿದಾರರಿಗೆ ಒದಗಿಸುತ್ತಿರುವ ಕರಡು ಮತದಾರರ ಪಟ್ಟಿಯ ಸ್ವರೂಪವು ಅಂದಿನ ಚುನಾವಣಾ ಕೈಪಿಡಿಯಲ್ಲಿನ (Election Manual) ನಿಯಮಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಅಂದರೆ, ಕರಡು ಪಟ್ಟಿಯನ್ನು ಮುಖ್ಯ ಚುನಾವಣಾ ಅಧಿಕಾರಿಯ ಅಧಿಕೃತ ವೆಬ್ಸೈಟ್ನಲ್ಲಿ ಪಠ್ಯ ರೂಪದಲ್ಲಿ ಪ್ರಕಟಿಸಬೇಕು ಎಂಬ ನಿಯಮವಿದ್ದರೂ ಸಹ, ಅದನ್ನು ಕಡ್ಡಾಯವಾಗಿ ಡಿಜಿಟಲ್ ‘ಹುಡುಕಬಹುದಾದ PDF’ (Searchable PDF) ರೂಪದಲ್ಲೇ ನೀಡಿಬೇಕು ಎಂದು ಯಾವುದೇ ನಿಯಮದಲ್ಲಿ ಹೇಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಕೋಟ್ಯಂತರ ಮತದಾರರ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ರಕ್ಷಣೆಯನ್ನು (Data Privacy) ದೃಷ್ಟಿಯಲ್ಲಿಟ್ಟುಕೊಂಡು, ರಾಜಕೀಯ ಪಕ್ಷಗಳಿಗೆ ಸ್ಕ್ಯಾನ್ ಮಾಡಬಹುದಾದ ಪಠ್ಯ ರೂಪದಲ್ಲಿ ಅಥವಾ ನೇರ ಡಿಜಿಟಲ್ ಡೇಟಾವನ್ನು ನೀಡುವುದಿಲ್ಲ ಎಂದು ಇಸಿಐ ತಿಳಿಸಿತ್ತು. ಆಯೋಗದ ಈ ವಾದವನ್ನು ಪುಷ್ಟೀಕರಿಸಿದ್ದ ಸುಪ್ರೀಂ ಕೋರ್ಟ್, ಒಂದು ವೇಳೆ ಅರ್ಜಿದಾರರಿಗೆ ‘Searchable PDF’ ಬೇಕಿದ್ದರೆ, ಅವರು ತಮ್ಮದೇ ಆದ ತಾಂತ್ರಿಕ ಪ್ರಯತ್ನ ಮತ್ತು ಶ್ರಮವನ್ನು ಹಾಕಿ ಆ ಪಟ್ಟಿಯನ್ನು ಪರಿವರ್ತಿಸಿಕೊಳ್ಳಬಹುದೇ ಹೊರತು, ಅದನ್ನು ಆಯೋಗದಿಂದ ಹಕ್ಕಾಗಿ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತೀರ್ಪು ನೀಡಿತ್ತು.
2025ರಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದ ವಿವಾದ
2025ರಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸೇರಿದಂತೆ ಹಲವು ಅರ್ಜಿದಾರರು SIR ಪ್ರಕ್ರಿಯೆಯ ಸಿಂಧುತ್ವವನ್ನು ಪ್ರಶ್ನಿಸಿದಾಗ, 2003ರ ಮತದಾರರ ಪಟ್ಟಿಯನ್ನು ಯಂತ್ರ-ಓದಬಹುದಾದ ರೂಪದಲ್ಲಿ ನೀಡದಿರುವ ವಿಚಾರ ಮತ್ತೆ ಚರ್ಚೆಗೆ ಬಂದಿತ್ತು. ಈ ಸಂದರ್ಭದಲ್ಲಿ ಮತದಾರರ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ದೊಡ್ಡ ಪ್ರಮಾಣದ ದತ್ತಾಂಶವನ್ನು ವಿಶ್ಲೇಷಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ದತ್ತಾಂಶವನ್ನು ವ್ಯಾಪಕವಾಗಿ ಬಳಸುವುದರಿಂದ ವ್ಯಕ್ತಿಗಳ ಗೌಪ್ಯತೆ ಹಾಗೂ ಭಾರತೀಯ ನಾಗರಿಕರ ಮಾಹಿತಿಯ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅಭಿಪ್ರಾಯಪಟ್ಟಿದ್ದರು.
ವರ್ಷಗಳಿಂದಲೂ ಮುಂದಿಡುತ್ತಿರುವ ವಿಪಕ್ಷಗಳ ಬೇಡಿಕೆಯನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಸರ್ಕಾರ ತಳ್ಳಿಹಾಕಿತ್ತು. ಸರ್ಕಾರದ ಪರೋಕ್ಷ ನಿಯಂತ್ರಣ ಹಾಗೂ ಪ್ರಭಾವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚುನಾವಣಾ ಆಯೋಗವು, ವಿಪಕ್ಷಗಳ ಈ ನ್ಯಾಯಯುತ ಬೇಡಿಕೆಯನ್ನು ಸತತವಾಗಿ ತಿರಸ್ಕರಿಸುತ್ತಾ ಬಂದಿತ್ತು. ಶೋಧಿಸಬಹುದಾದ (Searchable) ಪಟ್ಟಿಯನ್ನು ನೀಡಲು ನಿರಾಕರಿಸಲು ಆಯೋಗ ಮುಂದಿಟ್ಟಿದ್ದ ಏಕೈಕ ಕಾರಣ, ಮತದಾರರ ಖಾಸಗಿತನದ ರಕ್ಷಣೆ (Privacy concerns). ಈ ಕಾರಣವನ್ನು ಮುಂದಿಟ್ಟುಕೊಂಡು, ಆಯೋಗವು ಡಿಜಿಟಲ್ ರೂಪದ ಡೇಟಾವನ್ನು ರಾಜಕೀಯ ಪಕ್ಷಗಳಿಗೆ ಹಂಚಿಕೊಳ್ಳಲು ಹಿಂದೇಟು ಹಾಕಿತ್ತು. ಆದರೆ, ಆಯೋಗದ ಈ ವಾದವೇ ಮತ್ತಷ್ಟು ಅನುಮಾನಗಳಿಗೆ ಕಾರಣವಾಯಿತು.
ಅವರ ನಿರಾಕರಣೆಗೂ ಪ್ರಮುಖವಾಗಿ ಎರಡು ಕಾರಣಗಳಿದ್ದವು. ಮೊದಲನೆಯದಾಗಿ, ಒಂದು ವೇಳೆ ‘ಮಶೀನ್ ರೀಡಬಲ್’ ಪಟ್ಟಿಗಳು ವಿಪಕ್ಷಗಳ ಕೈ ಸೇರಿದ್ದರೆ, ಅತ್ಯಾಧುನಿಕ ಸಾಫ್ಟ್ವೇರ್ಗಳು ಹಾಗೂ ಅಲ್ಗಾರಿದಮ್ಗಳ ಬಳಕೆಯಿಂದ ದೇಶದ ಪ್ರತಿಯೊಂದು ಕ್ಷೇತ್ರದ ಮತದಾರರ ಪಟ್ಟಿಯ ಡಿಜಿಟಲ್ ಆಡಿಟ್ ಕ್ಷಣಾರ್ಧದಲ್ಲಿ ನಡೆಯುತ್ತಿತ್ತು. ಇದರಿಂದ ಆಡಳಿತ ಪಕ್ಷದ ಲಾಭಕ್ಕಾಗಿ ತುರುಕಲಾಗಿರುವ ಲಕ್ಷಾಂತರ ನಕಲಿ ಮತದಾರರನ್ನು ಮತ್ತು ಒಂದೇ ವ್ಯಕ್ತಿಯ ಹೆಸರು ಹಲವೆಡೆ ಪುನರಾವರ್ತನೆಯಾಗಿರುವುದನ್ನು ತಜ್ಞರು ಸುಲಭವಾಗಿ ಪತ್ತೆಹಚ್ಚಿ ಸಾರ್ವಜನಿಕವಾಗಿ ಬಯಲು ಮಾಡುತ್ತಿದ್ದರು ಎಂಬ ಆತಂಕ ಆಯೋಗ ಮತ್ತು ಸರ್ಕಾರದ ಹಿಂದಿತ್ತು.
ಎರಡನೆಯದಾಗಿ, ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತೆ SIR ನಂತಹ ವಿವಾದಾತ್ಮಕ ಪ್ರಕ್ರಿಯೆಗಳ ಮೂಲಕ ವಿರೋಧ ಪಕ್ಷಗಳನ್ನು ಬೆಂಬಲಿಸುವ ಪ್ರಮುಖ ಮತಕ್ಷೇತ್ರಗಳಲ್ಲಿ ನೈಜ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು ಮತ್ತು ತಮ್ಮ ಸ್ವಂತ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ರಹಸ್ಯ ತಂತ್ರಗಾರಿಕೆಯನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿತ್ತು. ಈ ಬೃಹತ್ ಆಟವನ್ನು ಮುಚ್ಚಿಹಾಕಲು ಮತ್ತು ಸಾಕ್ಷ್ಯಾಧಾರಗಳೊಂದಿಗೆ ಸಿಕ್ಕಿಬೀಳದಂತೆ ತಡೆಯಲು ‘ಇಮೇಜ್ ಪಿಡಿಎಫ್’ ಎಂಬ ತಾಂತ್ರಿಕ ತಡೆಗೋಡೆಯನ್ನು ಉದ್ದೇಶಪೂರ್ವಕವಾಗಿ ಬಳಸಲಾಗುತ್ತಿತ್ತು ಎಂಬುದು ವಿಪಕ್ಷಗಳ ಆರೋಪ.
ಮತದಾರರ ಪಟ್ಟಿಯ ಪಾರದರ್ಶಕತೆ ಎಂಬುದು ಪ್ರಜಾಪ್ರಭುತ್ವದ ಅಡಿಪಾಯ. ಖಾಸಗಿತನದ ನೆಪವೊಡ್ಡಿ ‘ಇಮೇಜ್ ಪಿಡಿಎಫ್’ ತಡೆಗೋಡೆಯ ಮೂಲಕ ಡಿಜಿಟಲ್ ಆಡಿಟ್ಗೆ ಇಷ್ಟು ದಿನ ತಡೆ ಒಡ್ಡಲಾಗುತ್ತಿತ್ತು ಎಂಬ ವಿಪಕ್ಷಗಳ ಆರೋಪಗಳ ನಡುವೆಯೇ, ಚುನಾವಣಾ ಆಯೋಗವು ‘ಓದಬಹುದಾದ ಪಿಡಿಎಫ್’ (Readable PDF) ಒದಗಿಸಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಈ ‘ಮಶೀನ್ ರೀಡಬಲ್’ ಪಟ್ಟಿಗಳ ಮೂಲಕ ಚುನಾವಣಾ ಅಕ್ರಮಗಳು, ನಕಲಿ ಮತದಾರರ ಸೇರ್ಪಡೆ ಹಾಗೂ ಕಾನೂನುಬಾಹಿರ ಹೆಸರು ತೆಗೆಯುವಿಕೆಗಳಿಗೆ ಪೂರ್ಣಪ್ರಮಾಣದ ತಡೆ ಬಿದ್ದು, ಚುನಾವಣೆಗಳು ಮತ್ತಷ್ಟು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲಿವೆ ಎಂಬ ಭರವಸೆ ಮೂಡಿಸಿದೆ.





