“ಇರಾನ್ ಪ್ರಪಂಚದಲ್ಲಿಯೇ ಅತಿ ಹೆಚ್ಚು ಅಪಾರ್ಥಕ್ಕೆ ಒಳಗಾದ ದೇಶವಾಗಿದೆ. ಆದರೆ, ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕಾದ ದೇಶ ಇರಾನ್” ಎಂದು ‘ The Red Mike’ ಸ್ವತಂತ್ರ ಮಾಧ್ಯಮ ಸಂಸ್ಥೆ ಸಂಸ್ಥಾಪಕ ಸೌರಭ್ ಶುಕ್ಲಾ ಹೇಳಿದರು.
ಮಧ್ಯಪ್ರಾಚ್ಯ ಯುದ್ಧದ ಸಂದರ್ಭದಲ್ಲಿ ಇರಾನ್‌ಗೆ ಭೇಟಿ ನೀಡಿ ಅಲ್ಲಿಂದ ಯುದ್ಧ ವರದಿ ಮಾಡಿದ್ದ ಅವರು ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.
ಯುದ್ಧದ ದಿನಗಳಲ್ಲಿ ಗೋದಿ ಮಾಧ್ಯಮದ ಪತ್ರಕರ್ತರು ಇಸ್ರೇಲ್ ಗೆ ಪ್ರಾಯೋಜಿತ ಪ್ರವಾಸಗಳಲ್ಲಿ ಭಾಗವಹಿಸಿದರು. ಆದರೆ ಇರಾನ್ ಗೆ ಭೇಟಿ ನೀಡಿ ಅಲ್ಲಿನ ನಿಜಗಳನ್ನು ನುಡಿಯಲು ಒಬ್ಬರೂ ಮುಂದಾಗಲಿಲ್ಲ. ಅಂತಹ ದಿನಗಳಲ್ಲಿ ತಮ್ಮ ಕಷ್ಟಾರ್ಜಿತ ದುಡಿಮೆಯ ಹಣದಲ್ಲಿ, ಹಲವು ಅಡೆತಡೆಗಳ ನಡುವೆಯೂ ಇರಾನಿಗೆ ಭೇಟಿ ನೀಡಿ ದೃಶ್ಯ ವರದಿಗಳನ್ನು ನೀಡಿದ ಏಕೈಕ ಭಾರತೀಯ ಪತ್ರಕರ್ತ ಸೌರಭ್ ಮತ್ತು ಆತನ ಮಿತ್ರ ಪತ್ರಕರ್ತ ಸೌರಭ್ ಶಾಹಿ.
‘ರೆಡ್ ಮೈಕ್’ ಆರಂಭಿಸುವ ಮುನ್ನ ದೇಶದ ಪ್ರಸಿದ್ಧ ಸುದ್ದಿ ಛಾನೆಲ್ ಆಗಿದ್ದ ಪ್ರಣಯ್ ರಾಯ್ ಅವರ ಎನ್.ಡಿ.ಟಿವಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದು ವರದಿ ಮಾಡುತ್ತಿದ್ದ ಪತ್ರಕರ್ತ ಸೌರಭ್ ಶುಕ್ಲಾ, ಮೋದಿ ಮಿತ್ರ ಅದಾನಿ ರಾತ್ರೋರಾತ್ರಿ ಎನ್.ಡಿ.ಟಿವಿಯನ್ನು ಕೈವಶ ಮಾಡಿಕೊಂಡ ನಂತರ ಆ ಛಾನೆಲ್ಲನ್ನು ತೊರೆದ ಕೆಲವೇ ಪತ್ರಕರ್ತರ ಪೈಕಿ ಶುಕ್ಲಾ ಕೂಡ ಒಬ್ಬರು. ತತ್ವ ಮೌಲ್ಯಗಳನ್ನು ಗೌರವಿಸಲೆಂದು ಕಷ್ಟದ ದಾರಿಯನ್ನು ತುಳಿದ ಪತ್ರಿಕೋದ್ಯೋಗಿ.
ಇರಾನ್ ಗೆ ಭೇಟಿ ನೀಡಿದ ಅವರು ಇರಾನ್ ಮತ್ತು ಅದರ ರಾಜಕಾರಣ, ಸಂಸ್ಕೃತಿ, ನಾಗರಿಕತೆಯ ಕುರಿತು ಆಳವಾಗಿ ಮಾತಾಡಬಲ್ಲವರಾಗಿದ್ದಾರೆ.
“ಇರಾನ್ ಅದ್ಭುತವಾದ ದೇಶ. ಅಲ್ಲಿ ಸುಂದರ ಬೆಟ್ಟಗಳಿವೆ, ನದಿಯಿದೆ, ಸಾಗರವಿದೆ. ಭಾರತೀಯರು ಗೋವಾ, ಲಂಡನ್, ನ್ಯೂಯಾರ್ಕ್ ಮುಂತಾದ ಸ್ಥಳಗಳಿಗೆ ಪ್ರವಾಸ ಹೋಗುವ ಬದಲು ಇರಾನ್‌ಗೆ ಹೋದರೆ ಅದ್ಭುತ ಮತ್ತು ಸಮೃದ್ಧ ಅನುಭವ ಸಿಗಲಿದೆ” ಎಂದು ಅವರು ಹೇಳಿದರು.
ಬೆಂಗಳೂರಿನ ನಾಗರಿಕರನ್ನು ಉದ್ದೇಶಿಸಿ ಮಾತಾಡಲೆಂದು ಸೌರಭ್ ಶುಕ್ಲಾ ಅವರನ್ನು ಬೆಂಗಳೂರಿಗೆ ಕರೆಯಿಸಿದ್ದವರು ಸಿ.ಎಂ.ಫೈಜ್ ಎಂಬ ಮರಿ ರಾಜಕಾರಣಿ. ಸಿ.ಎಂ.ಇಬ್ರಾಹಿಂ ಅವರ ಮಗ.
ತದೇಕಚಿತ್ತರಾಗಿ ಆಲಿಸಿದ ಸಭಿಕರನ್ನು ಉದ್ದೇಶಿಸಿ ಸುಮಾರು ಎರಡು ತಾಸುಗಳ ಕಾಲ ಮಾತಾಡಿ, ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು ಸೌರಭ್ ಶುಕ್ಲಾ.
ಪಾಶ್ಚಿಮಾತ್ಯ ದೇಶಗಳ ಮಾಧ್ಯಮಗಳು ಮತ್ತು ಭಾರತದ ಮಾಧ್ಯಮಗಳು ಇರಾನನ್ನು ಬಿಂಬಿಸಿದ ರೀತಿಗೂ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ. ಇರಾನ್‌ನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ ಎಂದು ಪುಕಾರು ಹಬ್ಬಿಸಲಾಗಿದೆ. ಆದರೆ, ನಾನು ವರದಿಗೆ ಹೋಗಿದ್ದಾಗ, ಯುದ್ಧದ ಆತಂಕದ ನಡುವೆಯೂ ಮಾರುಕಟ್ಟೆಯೊಂದಕ್ಕೆ ಸಂಜೆಯ ವೇಳೆಯಲ್ಲಿ ನೂರಾರು ಮಹಿಳೆಯರು ದಿನಸಿ ಖರೀದಿಸಲು ಹೋಗುತ್ತಿದ್ದರು. ಆದರೆ ಅವರಲ್ಲಿ ಯಾರೊಬ್ಬರೂ ಹಿಜಾಬ್ ಧರಿಸಿರಲಿಲ್ಲ. ಇರಾನ್‌ನಲ್ಲಿ ಹಿಜಾಬ್ ಧರಿಸಬೇಕು ಎಂಬ ನಿಯಮ ಇದೆ. ಆದರೆ ಒತ್ತಾಯದ ಅನುಷ್ಠಾನ ಇಲ್ಲ. ಅಷ್ಟೇ ಅಲ್ಲ, ಅಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗಿದೆ. ಶಿಕ್ಷಣದಲ್ಲಿ ಹೆಣ್ಣುಮಕ್ಕಳು ಕಿಕ್ಕಿರಿದಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಗಂಡುಮಕ್ಕಳಿಗೆ ಮೀಸಲಾತಿ ಕೊಡಬೇಕಾದ ಪರಿಸ್ಥಿತಿ ಇದೆ. ಇರಾನಿ ಹೆಣ್ಣುಮಕ್ಕಳು ಎಷ್ಟು ಸ್ವತಂತ್ರರೆಂದರೆ ತಮ್ಮ ಗಂಡನನ್ನು ತಾವೇ ಆರಿಸಿಕೊಳ್ಳುತ್ತಾರೆ. ಅವರು ರೊಟ್ಟಿ ಬೇಯಿಸುತ್ತ ಕುಳಿತುಕೊಳ್ಳಬೇಕಿಲ್ಲ. ಸರ್ಕಾರಿ ಅಂಗಡಿಗಳಲ್ಲಿ ಸಿದ್ಧಪಡಿಸಿದ ತಾಜಾ ರೊಟ್ಟಿಗಳನ್ನು ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವಿವರಿಸಿದರು.
ವಿಶೇಷವೆಂದರೆ, ಅಲ್ಲಿನ ರಾಜಕಾರಣಿಗಳು ಕೂಡ ಸುಶಿಕ್ಷಿತರು. ಹಾಗಾಗಿಯೇ ಶಿಕ್ಷಣಕ್ಕೆ ಬಹಳ ಮಹತ್ವ ನೀಡಲಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಅತ್ಯುತ್ತಮ ಪುಸ್ತಕ ಪ್ರಕಟವಾದರೆ ಕೆಲವೇ ದಿನಗಳಲ್ಲಿ ಆ ಪುಸ್ತಕ ಇರಾನ್‌ನಲ್ಲಿ ಸಿಗುತ್ತದೆ ಮತ್ತು ಎಲ್ಲರೂ ಖರೀದಿಸಬಹುದಾದ ಕೈಗೆಟುಕುವ ದರಗಳಲ್ಲಿ ದೊರೆಯುತ್ತದೆ ಎಂದರು.
ಇರಾನ್‌ನಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಉದಾಹರಣೆಗಳಿಲ್ಲ. ಇಸ್ರೇಲ್, ಅಮೆರಿಕ ಇರಾನ್ ಮೇಲೆ ಯುದ್ಧ ನಡೆಸಿದರೂ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ಒಂದೇ ಒಂದು ದಾಳಿ ನಡೆದ ವರದಿಯಿಲ್ಲ. ಧಾರ್ಮಿಕ ಸಹಿಷ್ಣುತೆಗೆ ಹೆಸರಾದ ದೇಶ ಇರಾನ್. ಇಲ್ಲಿನ ನಗರಗಳನ್ನು ವಿಶ್ವದ ಯಾವುದೇ ಉತ್ತಮ ನಗರಗಳಿಗೆ ಹೋಲಿಸಬಹುದಾಗಿದೆ.
ಒಂಬತ್ತೂವರೆ ಕೋಟಿಯಷ್ಟಿರುವ ಇರಾನಿನ ಜನಸಂಖ್ಯೆಯಲ್ಲಿ 20 ಸಾವಿರದಷ್ಟು ಯಹೂದಿಗಳು, ಮೂರು ಲಕ್ಷದಷ್ಟು ಕ್ರೈಸ್ತರು ನಿರ್ಭಯವಾಗಿ ಬದುಕಿ ಬಾಳಿದ್ದಾರೆ. ಅಲ್ಲಿನ ಮೆಟ್ರೋ ನಿಲ್ದಾಣಕ್ಕೆ ಮೇರಿ ಮಾತೆಯ ಹೆಸರಿಡಲಾಗಿದೆ. ನಿಲ್ದಾಣದ ಗೋಡೆಗಳ ಮೇಲೆ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಚಿತ್ರಗಳನ್ನು, ಯೇಸು ಕ್ರಿಸ್ತನ ಸಂದೇಶಗಳನ್ನು ಕೆತ್ತಲಾಗಿದೆ ಎಂದು ವಿವರಿಸಿದರು.
ಇರಾನಿಯನ್ನರು ನಿರ್ಭೀತ ದೇಶಪ್ರೇಮಿಗಳು. ತೆರೆದ ಹೃದಯಿಗಳು. ತ್ಯಾಗ ಬಲಿದಾನವನ್ನು ಗೌರವಿಸುವವರು. ದಿನವಿಡೀ ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಸಂಜೆ ಮನೆಗೆ ಮರಳಿ, ಆಯಾ ನಗರಗಳು ಊರುಗಳ ವೃತ್ತಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಕಲೆಯುತ್ತಾರೆ. ಅಮೆರಿಕ ಮತ್ತು ಇಸ್ರೇಲಿನ ಆಕ್ರಮಣಕಾರಿ ನೀತಿಯನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಾರೆ. ಈ ಪ್ರತಿಭಟನೆಯಲ್ಲಿ ತಾಯಂದಿರು ತಮ್ಮ ಹಸುಗೂಸುಗಳನ್ನು ಕೂಡ ಕರೆತಂದು ಭಾಗವಹಿಸುತ್ತಾರೆ. ಕೇವಲ 500 ಗಜ ದೂರದಲ್ಲಿ ಬಾಂಬ್ ಬಿದ್ದರೂ ಪ್ರತಿಭಟನೆಯನ್ನು ತೊರೆಯುವುದಿಲ್ಲ, ಚೆದುರಿ ಚೆಲ್ಲಾಪಿಲ್ಲಿ ಆಗುವುದಿಲ್ಲ.
ಸಾವಿರಾರು ವರ್ಷಗಳಷ್ಟು ಪುರಾತನ ನಾಗರಿಕತೆಯಾದ ಇರಾನ್, ತನ್ನಷ್ಟೇ ಸಮೃದ್ಧ ನಾಗರಿಕತೆ ಹೊಂದಿದ ಭಾರತವನ್ನು ತನ್ನ ಮಿತ್ರನೆಂದು ತಿಳಿದು ಅನವರತ ಮೆಚ್ಚುತ್ತ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಂಬಿಕೆ-ಸ್ನೇಹ-ವಿಶ್ವಾಸಗಳು ಕೊಂಚ ಕದಲಿವೆ. ಇರಾನಿನ ಪರಮೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಅವರನ್ನು ಅಮೆರಿಕ ಹತ್ಯೆ ಮಾಡಿದಾಗ ಭಾರತ ದಿನಗಟ್ಟಲೆ ತನ್ನ ಸಂತಾಪ ಸೂಚಿಸಲಿಲ್ಲ. ಐದನೆಯ ದಿನ ಅಳೆದೂ ತೂಗಿದ ಮೋದಿ ಸಂತಾಪ ಹೊರಬಿತ್ತು. ಭಾರತ ಸರ್ಕಾರದ ಉಚ್ಚ ನಾಯಕತ್ವ ಖಮೇನಿ ಅಂತ್ಯಕ್ರಿಯೆಯಿಂದ ದೂರ ಉಳಿಯಿತು. ವಿದೇಶಾಂಗ ಸಚಿವರು ಕೂಡ ಹಾಜರಾಗಲಿಲ್ಲ. ಮೋದಿಯವರು ಇಸ್ರೇಲಿಗೆ ತೆರಳಿ ನೆತನ್ಯಾಹು ಅವರನ್ನು ಅಲಿಂಗಿಸಿಕೊಂಡು, ಇಸ್ರೇಲ್ ಪಿತೃದೇಶವಾದರೆ, ಭಾರತ ಮಾತೃದೇಶ ಎಂದು ಬಣ್ಣಿಸಿದರು. ಪರಮ ಮುಸ್ಲಿಮ್ ದ್ವೇಷಿಯಾದ ಇಸ್ರೇಲ್ ನೀಡಿದ ಬಿರುದು ಗೌರವಗಳನ್ನು ಸ್ವೀಕರಿಸಿದರು. ಮರುದಿನವೇ ಇಸ್ರೇಲ್, ಇರಾನಿನ ಮೇಲೆ ದಾಳಿ ನಡೆಸಿತು. ಇತ್ತೀಚಿನ ಇಂತಹ ಅನೇಕ ಬೆಳವಣಿಗೆಗಳು ಇರಾನಿನಲ್ಲಿ ಭಾರತದ ಜನಪ್ರಿಯತೆಯನ್ನು ತಗ್ಗಿಸಿವೆ.
ಆದರೆ, ದೈನಂದಿನ ಪ್ರತಿಭಟನೆಗಳಲ್ಲಿ ಇರಾನಿನಲ್ಲಿ ನೆಲೆಸಿರುವ ಭಾರತೀಯರು ಭಾಗವಹಿಸುತ್ತಿದ್ದಾರೆ. ಭಾರತದ ತ್ರಿವರ್ಣ ಧ್ವಜ ಮತ್ತು ಇರಾನಿನ ರಾಷ್ಟ್ರಧ್ವಜವನ್ನು ಒಟ್ಟೊಟ್ಟಿಗೆ ಹಿಡಿದು ಹೆಮ್ಮೆಯಿಂದ ಬೀಸುತ್ತಾರೆ. ಪ್ರತಿಭಟನೆಯಲ್ಲಿ ತೊಡಗಿದ ಇರಾನಿ ಪ್ರಜೆಗಳಿಗೆ ಷರಬತ್ತು-ಸಮೋಸ- ವಡಾ ಪಾವ್ ಹಂಚಿ ಸತ್ಕರಿಸುತ್ತಾರೆ. ಈ ಪ್ರೀತಿ ವಿಶ್ವಾಸವು ಮೋದಿ ಸರ್ಕಾರ ಉಂಟು ಮಾಡಿರುವ ನೋವಿನ ಮೇಲೆ ತುಸು ಮಟ್ಟಿಗಾದರೂ ಮುಲಾಮು ಸವರಿದೆ ಎಂದರು ಸೌರಭ್ ಶುಕ್ಲಾ.


ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.



