ಸ್ಪಿನ್ನರ್ ಆರ್ ಅಶ್ವಿನ್ ದಾಳಿಗೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಸರದಿ ಸಾಲಿನಲ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. 259 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೆನ್ ಸ್ಟೋಕ್ಸ್ ನೇತೃತ್ವದ ಪ್ರವಾಸಿ ತಂಡ 195 ರನ್‌ಗಳಿಗೆ ಆಲೌಟ್ ಆಗಿ ಭಾರತಕ್ಕೆ ಇನಿಂಗ್ಸ್ ಹಾಗೂ 64 ರನ್‌ಗಳ ಗೆಲುವಿನ ಕಾಣಿಕೆ ನೀಡಿತು.
ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಭಾರತ ಮೊದಲ ಇನಿಂಗ್ಸ್‌ನಲ್ಲಿ 124.1 ಓವರ್‌ಗಳಲ್ಲಿ 477 ರನ್‌ಗಳಿಗೆ ಆಲೌಟ್ ಆಗಿ 259 ರನ್‌ಗಳ ಮುನ್ನಡೆ ಪಡೆಯಿತು. ಎರಡನೆ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ 48.1 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 4-1 ಸರಣಿ ಜಯಿಸಿತು.
ಎರಡನೇ ಓವರ್‌ನಿಂದಲೇ ದಾಳಿ ಆರಂಭಿಸಿದ ಸ್ಪಿನ್ನರ್ ಮಾಂತ್ರಿಕ ಆರ್ ಅಶ್ವಿನ್ ಐದು ವಿಕೆಟ್ ಕಬಳಿಸಿದರು. 2ನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವುದರೊಂದಿಗೆ ತಮ್ಮ ನೂರನೇ ಟೆಸ್ಟ್‌ನಲ್ಲಿ 9 ವಿಕೆಟ್ ಗೊಂಚಲನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.
ತಮ್ಮ 100ನೇ ಟೆಸ್ಟ್‌ನಲ್ಲಿ 5 ವಿಕೆಟ್ ಕಬಳಿಸಿದ ಭಾರತದ ಎರಡನೇ ಬೌಲರ್ ಎಂಬ ಕೀರ್ತಿಗೂ ಅಶ್ವಿನ್ ಭಾಜನರಾದರು. ಈ ಮೊದಲು ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಸಾಲಿನಲ್ಲಿ ಅಶ್ವಿನ್ (36 ಬಾರಿ) ಮೂರನೇ ಸಾಲಿನಲ್ಲಿ ರಿಚರ್ಡ್ ಹ್ಯಾಂಡ್ಲಿ ಜೊತೆ ಸ್ಥಾನ ಪಡೆಸಿದ್ದಾರೆ. ಮೊದಲ ಎರಡರ ಸ್ಥಾನದಲ್ಲಿ ಮುತ್ತಯ್ಯ ಮುರಳೀಧರನ್ (67 ಬಾರಿ) ಹಾಗೂ ಶೇನ್ ವಾರ್ನ್ (37 ಬಾರಿ) ಇದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ʼಮಹಿಳಾ ದಿನʼ ಅರ್ಥಪೂರ್ಣವಾಗೋದು ಆಕೆಗೆ ಘನತೆಯಿಂದ ಬದುಕಲು ಬಿಟ್ಟಾಗ ಮಾತ್ರ
ಜಾಕ್ ಕ್ರಾಲಿ, ಬೆನ್ ಡೆಕೆಟ್, ನಾಯಕ ಬೆನ್ ಸ್ಟೋಕ್ಸ್, ಬೆನ್ ಫೋಕ್ಸ್ ಸೇರಿದಂತೆ ಐವರು ಪ್ರಮುಖ ಬ್ಯಾಟರ್‌ಗಳನ್ನು ಅಶ್ವಿನ್ ಔಟ್ ಮಾಡಿ ಪೆವಿಲಿಯನ್ ಕಡೆ ಅಟ್ಟಿದ್ದಾರೆ. ಜಾನಿ ಬೈರ್‌ಸ್ಟೋ ಅವರನ್ನು ಕುಲ್‌ದೀಪ್ ಯಾದವ್ ಎಲ್‌ಬಿ ಬಲೆಗೆ ಬೀಳಿಸುವುದರ ಮೂಲಕ ವಿಕೆಟ್ ತನ್ನದಾಗಿಸಿಕೊಂಡರು. 20 ರನ್ ಕಬಳಿಸಿದ್ದ ಟಾಮ್ ಹಾರ್ಟ್ಲಿ ಹಾಗೂ ಮಾರ್ಕ್ ವುಡ್ ಅವರನ್ನು ಬುಮ್ರಾ ಔಟ್ ಮಾಡಿದರು.
ಟೀಂ ಇಂಡಿಯಾ ಪರ ಆರ್ ಅಶ್ವಿನ್ 77/5, ಬುಮ್ರಾ 38/2, ರವೀಂದ್ರ ಜಡೇಜಾ 24/1 ಹಾಗೂ ಕುಲ್‌ದೀಪ್ ಯಾದವ್ 40/2 ವಿಕೆಟ್ ಕಬಳಿಸಿದರು.
ತಮ್ಮ 137ನೇ ಟಸ್ಟ್ ಆಡಿದ 41 ವರ್ಷದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಭಾರತ ಮೊದಲ ಇನಿಂಗ್ಸ್ ಆಡುವಾಗ ಕುಲದೀಪ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ 700 ವಿಕೆಟ್‌ಗಳ ಸಾಧನೆ ಮಾಡಿದರು. ಟೆಸ್ಟ್ ವೃತ್ತಿ ಜೀವನದಲ್ಲಿ 700 ವಿಕೆಟ್ ಪಡೆದ ಮೊದಲ ವೇಗಿ ಎಂಬ ಶ್ರೇಯಕ್ಕೂ ಆಂಡರ್ಸನ್ ಪಾತ್ರರಾದರು.
500ಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಆಸೀಸ್‌ನ ಶೇನ್ ವಾರ್ನ್(708) ಎರಡನೇ ಸ್ಥಾನದಲ್ಲಿದ್ದಾರೆ. ಆ್ಯಂಡರ್‌ಸನ್ 700 ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಉಳಿದಂತೆ ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 619, ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ 604, ಆಸೀಸ್‌ನ ಗ್ಲೆನ್ ಮೆಕ್‌ಗ್ರಾಥ್ 563, ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 527, ವೆಸ್ಟ್ ಇಂಡೀಸ್ ಕರ್ಟ್ನಿ ವಾಲ್ಶ್ 519, ಭಾರತದ ಆರ್ ಅಶ್ವಿನ್ 513 ವಿಕೆಟ್ ಪಡೆದಿದ್ದು, ಅಗ್ರ 10ರೊಳಗಿನ ಪಟ್ಟಿಯಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನಿಂಗ್ಸ್ 477
ಇಂಗ್ಲೆಂಡ್ 218 ಮತ್ತು 195
ಫಲಿತಾಂಶ: ಭಾರತಕ್ಕೆ ಇನಿಂಗ್ಸ್ ಹಾಗೂ 64 ರನ್ ಜಯ
