ಈ ದಿನ ಸಂಪಾದಕೀಯ | ʼಮಹಿಳಾ ದಿನʼ ಅರ್ಥಪೂರ್ಣವಾಗೋದು ಆಕೆಗೆ ಘನತೆಯಿಂದ ಬದುಕಲು ಬಿಟ್ಟಾಗ ಮಾತ್ರ

Date:

ಯುವ ಸಮುದಾಯ ಅಪರಾಧ ಕೃತ್ಯವೊಂದರ ಸಂತ್ರಸ್ತರಾಗೋದು ಮತ್ತು ಅಪರಾಧಿಗಳಾಗೋದು ಎರಡೂ  ಸ್ವಸ್ಥ ಸಮಾಜದ ಲಕ್ಷಣವಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಿತ ವರ್ಗ ಈ ವಾಸ್ತವ ಸ್ಥಿತಿಯನ್ನು ಗ್ರಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

 


ಮಾರ್ಚ್‌ 8
ವಿಶ್ವ ಮಹಿಳಾ ದಿನ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಮಾರ್ಚ್‌ ತಿಂಗಳು ಪೂರ್ತಿ ಮಹಿಳಾ ದಿನಾಚರಣೆಯ ಹೆಸರಿನಲ್ಲಿ ಭಾಷಣ, ಸನ್ಮಾನ, ಹೊಗಳಿಕೆಯ ಮಹಾಪೂರ ಹರಿಸಲಾಗುತ್ತದೆ. ಎಲ್ಲ ಆಚರಣೆ, ಘೋಷಣೆ, ಸಮಾರಂಭಗಳನ್ನು ವ್ಯಾಪಾರ ಮತ್ತು ಉಳ್ಳವರ ದೃಷ್ಟಿಯಿಂದಷ್ಟೇ ನೋಡಲಾಗುತ್ತಿದೆ. ವಾಸ್ತವದಲ್ಲಿ ಸಮಾಜ ಪ್ರಗತಿ ಹೊಂದಿದಂತೆಲ್ಲ ಹೆಣ್ಣುಮಕ್ಕಳ ವಿಚಾರದಲ್ಲಿ ಅತ್ಯಂತ ಅಸೂಕ್ಷ್ಮವಾಗುವುದರೆಡೆಗೆ ಸಾಗುತ್ತಿದೆ ಎಂಬುದು ಆತಂಕಕಾರಿ ಬೆಳವಣಿಗೆ. ದಿನ ಕಳೆದಂತೆ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಲೇ ಸಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ ಒಂದೆಡೆಯಾದರೆ, ಅಪ್ರಾಪ್ತ ಬಾಲಕರೇ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಾರ್ಚ್‌ ಮೊದಲ ವಾರದಲ್ಲೇ ಬಂದ ಈ ನಾಲ್ಕು ಪ್ರಕರಣಗಳನ್ನು ನೋಡಿದರೆ ಯುವ ಸಮೂಹ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಆತಂಕವಾಗದೇ ಇರದು. ಅದರಲ್ಲೂ ಹೆಣ್ಣುಮಕ್ಕಳ ಬದುಕು ಬಹಳ ಅಗ್ಗ ಎನ್ನುವಂತಾಗಿದೆ. ಮಹಿಳಾ ಸಬಲೀಕರಣ, ಸುರಕ್ಷತೆ ಇವೆಲ್ಲವೂ ಸರ್ಕಾರಗಳ ಘೋಷಣೆಗಳಷ್ಟೇ ಆಗಿವೆ.

ಮಾರ್ಚ್‌ 1ರಂದು ಜಾರ್ಖಂಡ್‌ನಲ್ಲಿ ಸ್ಪೇನ್‌ ಮೂಲದ ಪ್ರವಾಸಿ ಮಹಿಳೆಯನ್ನು ಪತಿ ಜೊತೆ ಟೆಂಟ್‌ನಲ್ಲಿ ತಂಗಿದ್ದಾಗಲೇ ಏಳು ಮಂದಿ ಯುವಕರ ತಂಡ ಟೆಂಟ್‌ನೊಳಗೆ ನುಗ್ಗಿ ದರೋಡೆ ಮಾಡಿದ್ದಲ್ಲದೇ ಆಕೆಯನ್ನು ಪತಿಯ ಮುಂದೆಯೇ ಸಾಮೂಹಿಕ ಅತ್ಯಾಚಾರಗೈದಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಲೇ ಹಲವು ವಿದೇಶೀಯರು ಭಾರತದಲ್ಲಿ ಮಹಿಳೆಯರ ಅಸುರಕ್ಷತೆಯ ಬಗ್ಗೆ ಟೀಕೆ ಮಾಡಿದ್ದರು. ಸಂತ್ರಸ್ತ ದಂಪತಿ “ಎಲ್ಲ ಭಾರತೀಯರನ್ನು ನಾವು ಟೀಕಿಸಲ್ಲ. ಆರೋಪಿಗಳು ಮಾತ್ರ ಕೆಟ್ಟವರು” ಎಂದು ಹೇಳಿ ದೇಶದ ಅರ್ಧ ಮಾನ ಉಳಿಸಿದ್ದಾರೆ. ಆತಂಕಪಡಬೇಕಾದ ಸಂಗತಿಯೆಂದರೆ ಈ ಪ್ರಕರಣದಲ್ಲೂ ಸಣ್ಣ ಪ್ರಾಯದ ಯುವಕರೇ ಆರೋಪಿಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಾರ್ಚ್‌ 3 ರಂದು ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಗೆ ಗೆಳೆಯನ ಜೊತೆ ಹೋಗುತ್ತಿದ್ದ ಬಾಲಕಿಯನ್ನು ಮಾರ್ಗ ಮಧ್ಯೆಯೇ ಬೈಕ್‌ನಲ್ಲಿ ಅಪಹರಿಸಿ ಕೊಠಡಿಯೊಳಗೆ ಕೂಡಿ ಹಾಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಮೂವರು ಆರೋಪಿಗಳು ಅದೇ ಮಠದಲ್ಲಿ ಕ್ಯಾಟರಿಂಗ್‌ ಕೆಲಸ ಮಾಡುತ್ತಿದ್ದ 20-23 ವಯೋಮಾನದವರು. ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಆಸ್ಪತ್ರೆ ಸೇರಿದ್ದಾಳೆ. ಯುವಕರು ಜೈಲು ಪಾಲಾಗಿದ್ದಾರೆ.

ಮಾರ್ಚ್‌ 4 ರಂದು ದಕ್ಷಿಣ ಕನ್ನಡದ ಕಡಬ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆ ಬರೆಯಲು ಕಾಲೇಜಿನ ಹೊರಗೆ ತಯಾರಿ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಆಸಿಡ್‌ ಎರಚಿದ್ದು ಆ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಾಗದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರೀತಿ ನಿರಾಕರಿಸಿದ ಓರ್ವ ಯುವತಿಯನ್ನು ಗುರಿಯಾಗಿಸಿ ಆಸಿಡ್‌ ಎರಚಿದ ಯುವಕ ಕಾಲೇಜು ವಿದ್ಯಾರ್ಥಿ, ಈಗ ಜೈಲು ಸೇರಿದ್ದಾನೆ.

ಈ ಮೂರು ಘಟನೆಗಳನ್ನು ಅವಲೋಕಿಸಿದರೆ ಎಲ್ಲ ಅಪರಾಧಿಗಳೂ ಇಪ್ಪತ್ತೈದರ ಒಳಗಿನವರು. ಅಷ್ಟೇ ಅಲ್ಲ ಅತ್ಯಾಚಾರ, ಆಸಿಡ್‌ ದಾಳಿಗೆ ಒಳಗಾದವರೂ ಇಪ್ಪತ್ತರ ಆಸುಪಾಸಿನವರು (ಜಾರ್ಖಂಡ್‌ನಲ್ಲಿ ಅತ್ಯಾಚಾರಗೊಂಡ ವಿದೇಶಿ ಮಹಿಳೆಯ ವಯಸ್ಸು 28).

ಇದರ ನಡುವೆ ಮಠದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ಬಳಿಯ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಬಾಲಮಂಜುನಾಥ ಸ್ವಾಮೀಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಮಾರ್ಚ್‌ 7ರಂದು ಸ್ವಾಮೀಜಿ ಮತ್ತು ಅವರ ಆಪ್ತ ಸಹಾಯಕನನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಇಡೀ ಯುವ ಭಾರತ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದೇ ಅರ್ಥೈಸಬೇಕಿದೆ. ಯುವ ಸಮುದಾಯ ಅಪರಾಧ ಕೃತ್ಯವೊಂದರ ಸಂತ್ರಸ್ತರಾಗೋದು ಮತ್ತು ಅಪರಾಧಿಗಳಾಗೋದು, ದುಶ್ಚಟಗಳ ದಾಸರಾಗೋದು ಇವೆಲ್ಲ ಸ್ವಸ್ಥ ಸಮಾಜದ ಲಕ್ಷಣವಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಿತ ವರ್ಗ ಈ ವಾಸ್ತವ ಸ್ಥಿತಿಯನ್ನು ಗ್ರಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಶಾಸನ ರೂಪಿಸುವವರು ಅಪರಾಧ ಹಿನ್ನೆಲೆಯವರೇ ಆಗಿರುವಾಗ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಕಾನೂನು ಜಾರಿ ಮಾಡುವ ಕೈಗಳಾದರೂ ಬಿಗಿಯಾಗಬೇಕು. ಜೀವಾವಧಿ ಶಿಕ್ಷೆಯಲ್ಲಿರುವವರಿಗೆ ಆಗಾಗ ಪೆರೋಲ್‌ನಲ್ಲಿ ಹೊರಬರಲು ಅವಕಾಶ ನೀಡುವುದು, ಅತ್ಯಾಚಾರಿಗಳಲ್ಲಿ ಸನ್ನಡತೆಯನ್ನು ಕಾಣುವುದು ಇವೆಲ್ಲ ಕಾನೂನಿನ ಭಯ ಇಲ್ಲದಂತೆ ಮಾಡುತ್ತಿವೆ.

ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಅಂತವರ ದೃಷ್ಟಿಯಲ್ಲಿ ಭಾರತವನ್ನು ನೋಡಿದರೆ, ಅಳೆದರೆ ದೇಶ ಸುಭಿಕ್ಷವಾಗಿ, ಸಮೃದ್ಧವಾಗಿಯೇ ಕಾಣಿಸುತ್ತದೆ. ಆದರೆ, ಒಂದು ಜವಾಬ್ದಾರಿಯುತ ಸಮಾಜ, ಪ್ರಭುತ್ವ ನೋಡಬೇಕಿರುವುದು ಸಾಮಾನ್ಯರ ಕಣ್ಣುಗಳಿಂದ. ಸಂವಿಧಾನದ ಆಶಯದಂತೆ ಸಂಪತ್ತಿನ ಸಮಾನ ಹಂಚಿಕೆ, ಸಮಾನ ಅಧಿಕಾರ-ಅವಕಾಶ ನಿರೀಕ್ಷೆಯಷ್ಟೆ. ಅದು ನಿಜವಾಗುವ ಕಾಲ ಬಹಳ ದೂರವಿದೆ. ಆದರೆ, ಎಲ್ಲರಿಗೂ ಅವರವರ ಶಕ್ತಿಗನುಸಾರವಾಗಿ ಘನತೆ, ಗೌರವದಿಂದ ಬದುಕು ನಡೆಸುವ ಹಕ್ಕಾದರೂ ಸಿಗುವಂತಾಗಬೇಕು. ಆ ಹಕ್ಕು ಯಾರೂ ಯಾರಿಗೂ ಕೊಡಬೇಕಿಲ್ಲ. ಹುಟ್ಟುತ್ತಲೇ ಮೂಲಭೂತ ಹಕ್ಕುಗಳು ನಮ್ಮ ಜೊತೆಗೆ ಇರುತ್ತವೆ. ಅಂತಹ ಹಕ್ಕನ್ನು ಅತ್ಯಾಚಾರ, ಆಸಿಡ್‌ದಾಳಿಯಂತಹ ವಿಕೃತ ಕೃತ್ಯಗಳಿಂದ ಕಿತ್ತುಕೊಳ್ಳಲು ಬಿಡಬಾರದು. ಅಂತಹ ಒಂದು ಸಮಾಧಾನಕರ ಸ್ಥಿತಿ ನಿರ್ಮಾಣವಾಗದ ಹೊರತು ಮಹಿಳಾ ದಿನಾಚರಣೆ, ಹೆಣ್ಣುಮಕ್ಕಳ ದಿನಾಚರಣೆಗಳಿಗೆಲ್ಲ ಅರ್ಥವೇ ಇಲ್ಲ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...