ಇಂಗ್ಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿ ಹಾಗೂ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಪ್ರಕಟಿಸಲಾಗಿದ್ದ ಭಾರತ ತಂಡದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎರಡು ದಿಢೀರ್ ಬದಲಾವಣೆಗಳನ್ನು ಮಾಡಿದೆ. ಗಾಯಗೊಂಡಿರುವ ವೇಗದ ಬೌಲರ್ ಹರ್ಷಿತ್ ರಾಣಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಸರಣಿಯಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಅನುಕ್ರಮವಾಗಿ ಪ್ರಿನ್ಸ್ ಯಾದವ್ ಮತ್ತು ರವಿ ಬಿಷ್ಣೋಯ್ ಅವರನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಹೆಸರಿಸಿದೆ.
ಇಂಗ್ಲೆಂಡ್ ವಿರುದ್ಧ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದ ವೇಳೆ ಹರ್ಷಿತ್ ರಾಣಾ ಅವರು ಬಲಗಾಲಿನ ಸ್ನಾಯುಸೆಳೆತಕ್ಕೆ (ಗ್ರೇಡ್ 1 ಹ್ಯಾಮ್‌ಸ್ಟ್ರಿಂಗ್) ಒಳಗಾಗಿದ್ದಾರೆ. ಹೀಗಾಗಿ, ಅವರು ಇಂಗ್ಲೆಂಡ್ ವಿರುದ್ಧದ ಮುಂಬರುವ 50 ಓವರ್‌ಗಳ ಸರಣಿಯಿಂದ ಹೊರಗುಳಿಯಲಿದ್ದಾರೆ. ಮುಂದಿನ ಚಿಕಿತ್ಸೆ ಹಾಗೂ ತಪಾಸಣೆಗಾಗಿ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (COE) ಗೆ ವರದಿ ಮಾಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅದೇ ಮೂರನೇ ಟಿ20 ಪಂದ್ಯದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೂ ಎಡಗಾಲಿನ ಸ್ನಾಯುಸೆಳೆತ (ಗ್ರೇಡ್ 2 ಹ್ಯಾಮ್‌ಸ್ಟ್ರಿಂಗ್) ಉಂಟಾಗಿರುವುದು ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ ದೃಢಪಟ್ಟಿದೆ. ವೈದ್ಯಕೀಯ ತಜ್ಞರ ಸಲಹೆಯ ಮೇರೆಗೆ ಅವರನ್ನು ಮುಂಬರುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಕೈಬಿಡಲಾಗಿದೆ. 2026ರ ಟಿ20 ವಿಶ್ವಕಪ್‌ನಿಂದಲೂ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವರುಣ್ ಅವರಿಗೂ ಬಿಸಿಸಿಐನ COE ನಲ್ಲಿ ಅಗತ್ಯ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತದೆ.
ಇತ್ತೀಚೆಗೆ ಮುಕ್ತಾಯಗೊಂಡ 2026ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಯುವ ಆಟಗಾರ ಪ್ರಿನ್ಸ್ ಯಾದವ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೆಲವು ಹಂತಗಳಲ್ಲೂ ಗಮನ ಸೆಳೆದಿದ್ದರು. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಗೆಲುವು ಕಾಣದಿದ್ದರೂ, ಪ್ರಿನ್ಸ್ ಅವರ ಪ್ರದರ್ಶನ ಆಯ್ಕೆಗಾರರ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಅವರನ್ನು ಏಕದಿನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಇನ್ನು ವರುಣ್ ಬದಲಿಗೆ ಅನುಭವಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಜಿಂಬಾಬ್ವೆ ಪ್ರವಾಸಕ್ಕೆ ತಂಡ ಸೇರಿಕೊಂಡಿದ್ದಾರೆ.
ಇಂಗ್ಲೆಂಡ್ ಏಕದಿನ ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್.
ಜಿಂಬಾಬ್ವೆ ಟಿ20 ಸರಣಿಗೆ ಭಾರತ ತಂಡ
ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ಪ್ರಭಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್.




