ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅವರಿಗೆ ಶಿಕ್ಷಣ ಹಾಗೂ ಆಡಳಿತ ಕ್ಷೇತ್ರಕ್ಕೆ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಠಿತ ‘ಮಾತೋಶ್ರೀ ಶಂಕರಮ್ಮ ಪಿ. ಬಳಿಗಾರ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮಾಜಿ ಸಚಿವೆ ರಾಣಿ ಸತೀಶ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ. ಆರ್. ಸುನಂದಮ್ಮ, ಹಿರಿಯ ಲೇಖಕಿ ಡಾ. ವಸುಂಧರಾ ಭೂಪತಿ ಸೇರಿದಂತೆ ಗಣ್ಯರು ಪ್ರೊ. ವಿಜಯಾ ಕೋರಿಶೆಟ್ಟಿ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರೊ. ವಿಜಯಾ ಕೋರಿಶೆಟ್ಟಿ, “ಈ ಪ್ರಶಸ್ತಿ ನನಗೆ ಗೌರವದ ಜೊತೆಗೆ ಹೊಸ ಜವಾಬ್ದಾರಿಯನ್ನೂ ನೀಡಿದೆ. ಶಿಕ್ಷಣ, ಸಂಶೋಧನೆ, ಸಾಹಿತ್ಯ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಈ ವೇದಿಕೆಯಲ್ಲಿ ವ್ಯಕ್ತಪಡಿಸುತ್ತೇನೆ” ಎಂದರು.
ಈ ಗೌರವವನ್ನು ತಮ್ಮ ಪಾಲಕರು, ಗುರುಗಳು, ಕುಟುಂಬದವರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಬೆಂಬಲಿಸಿದ ಎಲ್ಲರಿಗೂ ಅರ್ಪಿಸುವುದಾಗಿ ತಿಳಿಸಿದ ಅವರು, ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೂ ಈ ಪ್ರಶಸ್ತಿಯನ್ನು ಸಮರ್ಪಿಸುವುದಾಗಿ ಹೇಳಿದರು.
“ಸಾಹಿತ್ಯವು ಸಮಾಜದ ಆತ್ಮವಾಗಿದೆ. ಸಮಾಜದ ನೋವು-ನಲಿವು, ಹೋರಾಟ, ಕನಸು ಮತ್ತು ಆಶಯಗಳನ್ನು ದಾಖಲಿಸುವ ಜವಾಬ್ದಾರಿಯನ್ನು ಸಾಹಿತ್ಯ ಹೊತ್ತಿದೆ. ವಿಶೇಷವಾಗಿ ಮಹಿಳಾ ಸಾಹಿತ್ಯವು ಸಮಾನತೆ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವ ಕರ್ನಾಟಕ ಲೇಖಕಿಯರ ಸಂಘದ ಕಾರ್ಯ ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾವ್ಯ ವಿಭಾಗದಲ್ಲಿ ಸಾಧನೆಗೈದ ಮಾಧವಿ ಭಂಡಾರಿ ಹಾಗೂ ಗದ್ಯ ಸಾಹಿತ್ಯ ವಿಭಾಗದಲ್ಲಿ ಸಾಧನೆಗೈದ ಬಿ.ಟಿ. ಜಾಹ್ನವಿ ಅವರಿಗೂ ‘ಮಾತೋಶ್ರೀ ಶಂಕರಮ್ಮ ಪಿ. ಬಳಿಗಾರ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಳಿಗಾರ ಕುಟುಂಬದ ಸದಸ್ಯೆ ಡಾ. ಮೇಘಾ ಸಿದ್ದಾರ್ಥ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.




