ಐಪಿಎಲ್‌ 2023 | ಫೈನಲ್‌ನಲ್ಲಿ ಮತ್ತೆ ಮಳೆ ಬಂದರೆ ಸೂಪರ್‌ ಓವರ್‌? ನಿಯಮ ಏನು ಹೇಳುತ್ತದೆ?

Date:

  • ಫೈನಲ್‌ ಪಂದ್ಯ ರಾತ್ರಿ 12.50ರೊಳಗೆ ಆರಂಭವಾಗದಿದ್ದರೆ ಸೂಪರ್‌ ಓವರ್‌ ಆಡಿಸುವ ಸಾಧ್ಯತೆ
  • ಗುಜರಾತ್ ಟೈಟಾನ್ಸ್ VS ಚೆನ್ನೈ ಸೂಪರ್ ಕಿಂಗ್ಸ್ ಉದ್ಘಾಟನೆ ಮತ್ತು ಫೈನಲ್‌ನಲ್ಲೂ ಮುಖಾಮುಖಿ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 28) ನಡೆಯಬೇಕಿದ್ದ ಐಪಿಎಲ್‌ 2023ರ 16ನೇ ಆವೃತ್ತಿಯ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವಿನ ಫೈನಲ್‌ ಪಂದ್ಯ ಮಳೆಗೆ ಆಹುತಿಯಾಗಿ ಮೀಸಲು ದಿನವಾದ ಸೋಮವಾರಕ್ಕೆ (ಮೇ 29) ಮುಂದೂಡಲಾಗಿದೆ. ಪಂದ್ಯ ಮಳೆಗೆ ಆಹುತಿಯಾದರೆ ನಿಯಮ ಏನು ಹೇಳುತ್ತದೆ?

ಐಪಿಎಲ್‌ ಟೂರ್ನಿಯ 16 ವರ್ಷಗಳ ಇತಿಹಾಸದಲ್ಲಿ ಫೈನಲ್‌ ಪಂದ್ಯ ಮೀಸಲು ದಿನಕ್ಕೆ ಮುಂದೂಡಲಾಗಿದ್ದು ಇದೇ ಮೊದಲು. ಹವಾಮಾನ ವರದಿಯ ಪ್ರಕಾರ ಸೋಮವಾರವೂ ಮಳೆ ಬರುವ ಸಾಧ್ಯತೆಯಿದೆ.

ಐಪಿಎಲ್‌ ನಿಯಮ ಹೇಳುವುದೇನು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪಂದ್ಯವು ರಾತ್ರಿ 9.40ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಮಳೆಯಿಂದ ವಿಳಂಬವಾಗಿ ರಾತ್ರಿ 9.40ರ ನಂತರ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ನಿಯಮಗಳ ಪ್ರಕಾರ ಒಂದು ವೇಳೆ 9.45ಕ್ಕೆ ಪಂದ್ಯ ಆರಂಭವಾದರೆ 19 ಓವರ್‌ಗಳ ಪಂದ್ಯ,10 ಗಂಟೆಗೆ ಶುರುವಾದರೆ 17 ಓವರ್‌ಗಳು, 10.30ಕ್ಕೆ ಆದರೆ 15 ಓವರ್‌ಗಳ ಪಂದ್ಯ ಆಡಿಸಲಾಗುತ್ತದೆ.

ನಿಗದಿತ ಅವಧಿಯೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲಾಗುತ್ತದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ. 11.56ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ನಡೆಸುವ ಸಾಧ್ಯತೆಯಿದೆ.

ಅಲ್ಲದೆ ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳ ಆಟವಾಡಿರಬೇಕು.

ಐಪಿಎಲ್ 2022ರಲ್ಲಿ ಫೈನಲ್ ಪಂದ್ಯಕ್ಕಾಗಿ ಮೀಸಲು ದಿನವನ್ನು ಘೋಷಿಸಲಾಗಿತ್ತು. ಅದರಂತೆ ಈ ಬಾರಿ ಕೂಡ ನಿಗದಿತ ಸಮಯದೊಳಗೆ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಸೋಮವಾರ ಪಂದ್ಯವನ್ನು ಆಯೋಜಿಸಲಿದೆ ಎಂದು ಗುಜರಾತ್ ಟೈಟಾನ್ಸ್ ತಿಳಿಸಿದೆ.

ಒಂದು ವೇಳೆ ಮಳೆಯಿಂದಾಗಿ ಸೋಮವಾರ ಕೂಡ ಕನಿಷ್ಠ ಸೂಪರ್ ಓವರ್ ಪಂದ್ಯ ನಡೆಯದಿದ್ದರೆ, ಐಪಿಎಲ್‌ ಪ್ಲೇಯಿಂಗ್ ಷರತ್ತುಗಳ ನಿಯಮದ ಪ್ರಕಾರ ಕಾಯ್ದಿರಿಸಿದ ದಿನವೂ ಆಟ ಸಾಧ್ಯವಾಗದೇ ಇದ್ದರೆ, ಲೀಗ್ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಮೇಲಿರುವ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.

ಈಗಾಗಲೇ  ಎಲಿಮನೇಟರ್‌ ಪಂದ್ಯವೂ ಸೇರಿ ಒಟ್ಟು 11 ಪಂದ್ಯವನ್ನು ಗೆದ್ದು ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿರುವ ಗುಜರಾತ್‌ ಟೈಟಾನ್ಸ್‌ ತಂಡವನ್ನು ವಿಜಯಿ ತಂಡ ಎಂದು ಘೋಷಿಸಲಾಗುತ್ತದೆ. ಚೆನ್ನೈ ತಂಡ ಕ್ವಾಲಿಫೈಯರ್‌ ಪಂದ್ಯವು ಸೇರಿ ಒಟ್ಟು 9 ಪಂದ್ಯಗಳಲ್ಲಿ ಜಯಗಳಿಸಿದೆ.

ಹಿಂದಿನ ಟಿಕೆಟ್‌ಗಳಿಗೆ ಮಾನ್ಯತೆ

ಭಾನುವಾರ ಫೈನಲ್ ವೀಕ್ಷಿಸಲು ಕ್ರೀಡಾಂಗಣಕ್ಕೆ ಮಳೆ ನಡುವೆಯೂ ಆಗಮಿಸಿದ್ದ ಪ್ರೇಕ್ಷಕರು, ಅದೇ ಟಿಕೆಟ್‌ಗಳನ್ನು ಬಳಸಿ ಸೋಮವಾರ ಕೂಡ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಬಹುದಾಗಿದೆ. ಮಳೆ ಆರ್ಭಟ ನಿಂತರೆ ಮಾತ್ರವೇ ಆಟ ನಡೆಸಲು ಸಾಧ್ಯವಾಗಲಿದೆ.

ಐಪಿಎಲ್‌ನ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನಡೆಯಬೇಕಿತ್ತು. ದೇಶ-ವಿದೇಶಗಳ ಹಲವು ಜನಪ್ರಿಯ ಗಾಯಕರು ಕಾರ್ಯಕ್ರಮ ನಡೆಸಿಕೊಡಬೇಕಿತ್ತು. ಆದರೆ, ಮಳೆ ಕಾರಣ ಯಾವುದೇ ಕಾರ್ಯಕ್ರಮ ಆಯೋಜನೆಯಾಗಲಿಲ್ಲ. 7 ಗಂಟೆಗೆ ಟಾಸ್‌ ಹಾಕಬೇಕು ಎನ್ನುವಾಗ 15 ನಿಮಿಷ ಮುಂಚೆ ಶುರುವಾದ ಮಳೆಯ ಆರ್ಭಟ ಕಡಿಮೆಯಾಗಲಿಲ್ಲ.

ಸಬ್‌ ಏರ್‌ ಸಿಸ್ಟಮ್ ವ್ಯವಸ್ಥೆ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಳವಡಿಸಿರುವ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ, ಸಬ್ ಏರ್‌ ಸಿಸ್ಟಮ್‌ ತಂತ್ರಜ್ಞಾನವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೂ ಅಳವಡಿಸಲಾಗಿದೆ. ಹೀಗಾಗಿ ಎಷ್ಟೇ ಮಳೆ ಬಂದರೂ ಅಂಗಣದದಲ್ಲಿ ನೀರು ನಿಲ್ಲುವುದಿಲ್ಲ. 10-15 ನಿಮಿಷಗಳಲ್ಲಿ ಹುಲ್ಲುಹಾಸಿನ ಮೇಲಿನ ನೀರು ಮಾಯವಾಗಿ, ಒಣಗಿದಂತ್ತಾಗುತ್ತದೆ. ಹೀಗಾಗಿ ಮಳೆ ನಿಂತರೆ 30 ನಿಮಿಷಗಳಲ್ಲಿ ಆಟ ಆರಂಭಿಸುವ ಸಾಧ್ಯತೆಯಿದೆ. ಆದರೆ ಮಳೆ ನಿಂತರೆ ಮಾತ್ರ ಇದು ಸಾಧ್ಯ.

ಈ ಸುದ್ದಿ ಓದಿದ್ದೀರಾ? ಐಪಿಎಲ್‌ 2023 | ಗುಜರಾತ್‌ vs ಚೆನ್ನೈ: ಉಭಯ ತಂಡಗಳ ಫೈನಲ್‌ವರೆಗಿನ ಪಯಣ

ಬಹುಮಾನ ಮೊತ್ತವೆಷ್ಟು?

ಫೈನಲ್‌ ವಿಜೇತ ತಂಡ ₹20 ಕೋಟಿ ಬಹುಮಾನ ಪಡೆಯುತ್ತದೆ. ರನ್ನರ್ಸ್ ಅಪ್ ತಂಡಕ್ಕೆ ₹15 ಕೋಟಿ ನೀಡಲಾಗುತ್ತದೆ. ಋತುವಿನಲ್ಲಿ ಮೂರನೇ ಸ್ಥಾನ ಪಡೆದ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ₹7 ಕೋಟಿ ಪಡೆಯುತ್ತದೆ. ನಾಲ್ಕನೇ ಸ್ಥಾನಪಡೆದ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ₹6.5 ಕೋಟಿ ನೀಡಲಾಗುತ್ತದೆ.

ಆರಂಭ -ಅಂತ್ಯಕ್ಕೆ ಒಂದೇ ತಂಡಗಳು

ಮಾರ್ಚ್‌ 31ರಂದು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಯಿತು ಮತ್ತು ಈಗ ಅದೇ ಎರಡು ತಂಡಗಳು ಫೈನಲ್ ಪಂದ್ಯದಲ್ಲೂ ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯದಲ್ಲಿ ಗುಜರಾತ್ ತಂಡವು ಗೆದ್ದರೆ ಸತತ 2ನೇ ಟ್ರೋಫಿ ಗೆದ್ದ ತಂಡವಾಗಲಿದೆ. ಮತ್ತೊಂದೆಡೆ ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ಗೆದ್ದರೆ ಮುಂಬೈನ 5 ಬಾರಿ ಪ್ರಶಸ್ತಿ ಗೆದ್ದ ದಾಖಲೆಯನ್ನು ಸರಿಗಟ್ಟಲಿದೆ.

ಗುಜರಾತ್​ – ಚೆನ್ನೈ ಸಂಭಾವ್ಯ ತಂಡಗಳು:

ಗುಜರಾತ್ ಟೈಟಾನ್ಸ್‌: ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ.

ಚೆನ್ನೈ ಸೂಪರ್ ಕಿಂಗ್ಸ್‌: ಡೆವೊನ್ ಕಾನ್ವೇ, ರಿತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ ಮತ್ತು ವಿಕೇಟ್‌ ಕೀಪರ್), ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮತಿಶ ಪತಿರಾಣ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...