ಕ್ಯಾಚುಗಳು ಮ್ಯಾಚುಗಳನ್ನು ಗೆಲ್ಲಿಸುತ್ತವೆ ಎಂಬುದಕ್ಕೆ 2025ನೇ ಆವೃತ್ತಿಯ ಆರ್‌ಸಿಬಿ ಹಾಗೂ ಆರ್‌ಆರ್ ನಡುವೆ ನಡೆದ 42ನೇ ಪಂದ್ಯ ಮತ್ತೊಮ್ಮೆ ಸಾಕ್ಷಿಯಾಗಿದೆ. ಆರ್‌ಸಿಬಿ ವಿರುದ್ಧದ ಪಂದ್ಯವನ್ನು 11 ರನ್ಗಳಿಂದ ಪರಾಭವಗೊಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2025 ರ ಐಪಿಎಲ್ ಇನ್ನು ಮುಂದೆ ಕೇವಲ ಔಪಚಾರಿಕವಾಗಿದೆ. ಈಗಾಗಲೇ ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಸೋತಿರುವ ಆರ್‌ಆರ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ತಂಡದ ಪ್ರದರ್ಶನವನ್ನು ನೋಡಿದರೆ, ಇನ್ನುಳಿದ ಪಂದ್ಯಗಳನ್ನು ಗೆಲ್ಲುವುದು ಅಸಾಧ್ಯವೆನ್ನುವಂತಾಗಿದೆ.
ರಾಜಸ್ಥಾನ್ ಪ್ಲೇ ಆಫ್ ಕನಸು ಬಹುತೇಕ ನುಚ್ಚು ನೂರಾಗಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಮಧ್ಯಮ ಕ್ರಮಾಂಕದ ವೈಫಲ್ಯವೇ ಪ್ರಮುಖ ಕಾರಣ ಎನ್ನಬಹುದು. ಸತತ ಮೂರು ಪಂದ್ಯಗಳಲ್ಲಿ ಆರ್‌ಆರ್ ತಾನು ಮಾಡಿದ ತಪ್ಪುಗಳಿಂದಲೇ ಸೋತಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ರಾಜಸ್ಥಾನ ಅದೇ ತಪ್ಪನ್ನು ಮಾಡಿ ಸೋತಿತ್ತಾದರೂ ಇಲ್ಲಿ ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ತೋರಿದ ಚಾಣಾಕ್ಷತೆ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು.
ಆರ್‌ಸಿಬಿ ನೀಡಿದ 205 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್‌ಗೆ ನಿರೀಕ್ಷೆಗೂ ಮೀರಿದ ಆರಂಭ ನೀಡುವಲ್ಲಿ ಆರಂಭಿಕ ಬ್ಯಾಟರ್‌ಗಳು ಯಶಸ್ವಿಯಾದರು. ತಂಡ ಕೇವಲ 9 ಓವರ್ಗಲ್ಲಿ 3 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿತು. ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ ರಾಜಸ್ಥಾನ ತಂಡಕ್ಕೆ ಮತ್ತೊಂದು ಸೋಲಿನ ಆಘಾತ ನೀಡಿತು. ಅದರಲ್ಲೂ 18ನೇ ಓವರ್ನಲ್ಲಿ 22 ರನ್ ಕಲೆಹಾಕಿ ರಾಜಸ್ಥಾನ್‌ಗೆ ಗೆಲುವಿನ ಭರವಸೆ ಮೂಡಿಸಿದ್ದ ಧೃವ್ ಜುರೇಲ್ 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದು ತಂಡವನ್ನು ಸೋಲಿನ ಕಡೆ ಸಿಲುಕಿಸಿತು. ಆದಾಗ್ಯೂ ಈ ವಿಕೆಟ್ನ ಕ್ರೆಡಿಟ್ ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಸಲ್ಲಬೇಕು.
ಈ ಸುದ್ದಿ ಓದಬೇಕು? IPL 2025 | ದಾಖಲೆಯ 27 ಕೋಟಿಗೆ ಹರಾಜು ಆಗಿದ್ದರೂ ಶೂನ್ಯಕ್ಕೆ ಔಟಾಗುತ್ತಿರುವ ಲಖನೌ ಆಟಗಾರ
ಹೇಜಲ್ವುಡ್ನಿಂದ ಬೌಲಿಂಗ್, ಜಿತೇಶ್ ನಿರ್ಧಾರ!
ವಾಸ್ತವವಾಗಿ ರಾಜಸ್ಥಾನ್ ಗೆಲುವಿಗೆ ಕೊನೆಯ 3 ಓವರ್ಗಳಲ್ಲಿ 40 ರನ್ ಬೇಕಾಗಿದ್ದವು. ಈ ವೇಳೆ ಆರ್‌ಸಿಬಿ ಮೇಲುಗೈ ಸಾಧಿಸಿತ್ತು. ಆದರೆ 18ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಬರೋಬ್ಬರಿ 22 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ ಜುರೇಲ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಆರ್ಸಿಬಿಗೆ ಕಂಟಕವಾಗಿದ್ದರು. ಕೊನೆಯ 2 ಓವರ್ಗಳಲ್ಲಿ 18 ರನ್ ಬೇಕಿದ್ದಾಗ ಗೆಲುವು ರಾಜಸ್ಥಾನ ಪರ ವಾಲಿದ್ದಂತೆ ಕಾಣುತ್ತಿತ್ತು. ಆದರೆ 19ನೇ ಓವರ್ನಲ್ಲಿ ದಾಳಿಗಿಳಿದ ಜೋಶ್ ಹೇಜಲ್ವುಡ್ ಪಂದ್ಯವನ್ನು ಮತ್ತೆ ಆರ್ಸಿಬಿಯತ್ತ ತಿರುಗಿಸಿದರು.
ಈ ಓವರ್ನಲ್ಲಿ ಹೇಜಲ್ವುಡ್ ಕೇವಲ 1 ರನ್ ನೀಡಿ 2 ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದರು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಜುರೇಲ್ ವಿಕೆಟ್ ಉರುಳಿಸುವ ಮೂಲಕ ಹೇಜಲ್ವುಡ್ ತಂಡದ ಗೆಲುವನ್ನು ಖಚಿತಪಡಿಸಿದರು. ಈ ವಿಕೆಟ್ ಉರುಳಿಸಿದ್ದು ಹೇಜಲ್ವುಡ್ ಆದರೂ ವಿಕೆಟ್ ಕೀಪರ್ ಜಿತೇಶ್ ಅವರ ಚುರುಕುತನ ವಿಕೆಟ್ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿತು.
ವಾಸ್ತವವಾಗಿ ಹೇಜಲ್ವುಡ್ 19ನೇ ಓವರ್ನ 3ನೇ ಎಸೆತವನ್ನು ಯಾರ್ಕರ್ ಬೌಲ್ ಮಾಡಿದರು. ಈ ಎಸೆತವನ್ನು ಸಿಕ್ಸರ್ಗಟ್ಟಲು ಧೃವ್ ಜುರೇಲ್ ಯತ್ನಿಸಿದರು. ಆದರೆ ಆ ಯತ್ನದಲ್ಲಿ ಅವರು ಸಫಲರಾಗಲಿಲ್ಲ. ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಗೆ ಹೋಯಿತು. ಈ ಹಂತದಲ್ಲಿ ಎಲ್ಲರೂ ಇದು ಡಾಟ್ ಬಾಲ್ ಎಂದು ಭಾವಿಸಿದ್ದರು. ಆದರೆ ಚೆಂಡು ಧೃವ್ ಅವರ ಬ್ಯಾಟ್ಗೆ ತಾಗಿದೆ ಎಂಬುದು ಜಿತೇಶ್ಗೆ ಮಾತ್ರ ಗೊತ್ತಿತ್ತು. ಹೀಗಾಗಿ ಮೊದಲು ಅಂಪೈರ್ ಬಳಿ ಔಟ್ಗೆ ಮನವಿ ಮಾಡಿದ ಜಿತೇಶ್, ಅಂಪೈರ್ ಔಟ್ ನೀಡದಿದ್ದಾಗ ರಜತ್ಗೆ ರಿವ್ಯೂ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಆರಂಭದಲ್ಲಿ ರಜತ್ ಹಿಂದೇಟು ಹಾಕಿದರೂ, ಪಟ್ಟು ಬಿಡದ ಜಿತೇಶ್ ರಿವ್ಯೂ ತೆಗೆದುಕೊಳ್ಳುವಂತೆ ಕೇಳಿಕೊಂಡರು. ಕೊನೆಗೂ ಒತ್ತಡಕ್ಕೆ ಮಣಿದ ರಜತ್ ರಿವ್ಯೂ ತೆಗೆದುಕೊಂಡರು. ರಿವ್ಯೂನಲ್ಲಿ ಚೆಂಡು ಧೃವ್ ಅವರ ಬ್ಯಾಟ್ಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಮೊದಲು ನಾಟೌಟ್ ನೀಡಿದ್ದ ಅಂಪೈರ್ ಆ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಬೇಕಾಯಿತು. ಇತ್ತ ಧೃವ್ ಔಟಾದ ಬಳಿಕ ರಾಜಸ್ಥಾನದ ಸೋಲು ಬಹುತೇಕ ಖಚಿತವಾಯಿತು.
Jitesh Sharma review 🙇🏻💀🙌🏻 #RCBvRR pic.twitter.com/WcRtglbk9O
— 2012 Yugantham (@2012Yugantham) April 24, 2025