ಚುನಾವಣೆಯ ದಿನ ಮತದಾನ ಮಾಡಿದವರಿಗೆ ಉಚಿತ ಆಹಾರ ವಿತರಣೆ ಮಾಡಲು ಬೃಹತ್ ಬೆಂಗಳೂರು ಹೋಟೆಲ್ ಸಂಘಕ್ಕೆ ಕರ್ನಾಟಕ ಹೈಕೋರ್ಟ್ ಅವಕಾಶ ನೀಡಿ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ.
ಶುಕ್ರವಾರ ಜನರು ಮತದಾನ ಮಾಡಿದ ಗುರುತು ತೋರಿಸಿ ಉಚಿತವಾಗಿ ಆಹಾರ ಸೇವಿಸಬಹುದು ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘ ಜನತೆಗೆ ಕರೆ ನೀಡಿತ್ತು. ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆಯೂ ಹೋಟೆಲ್ ಸಂಘದ ವತಿಯಿಂದ ಇದೇ ರೀತಿಯ ಪ್ರಯತ್ನ ನಡೆದಿತ್ತು.
ಬೃಹತ್ ಬೆಂಗಳೂರು ಹೋಟೆಲ್ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಧ್ಯಂತರ ಆದೇಶ ಹೊರಡಿಸಿದ್ದಾರೆ.
“ಅರ್ಜಿದಾರರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಬಾರದು ಎಂಬ ಷರತ್ತು ವಿಧಿಸಿದೆ. ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ಮತದಾನ ಮಾಡಿದವರಿಗೆ ಉಚಿತ ಆಹಾರ ವಿತರಿಸಲು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ” ಎಂದು ನ್ಯಾಯಾಲಯವು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು
“ಅರ್ಜಿದಾರರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಆದರೆ, ಮತ ಚಲಾಯಿಸುವವರಿಗೆ ಮಾತ್ರ ಆಹಾರ ನೀಡುತ್ತಿದ್ದಾರೆ. ಆದ್ದರಿಂದ, ಇದು ಪ್ರಚೋದನೆಗೆ ಸಮಾನವಲ್ಲ” ಎಂದು ತಿಳಿಸಿದೆ.
ಅರ್ಜಿದಾರರ ಪ್ರಕಾರ, “ಮತದಾನದ ಪ್ರಮಾಣ ಕಡಿಮೆಯಿದ್ದು, ಮತದಾನವನ್ನು ಹೆಚ್ಚಿಸುವ ಉದ್ದೇಶದಿಂದ ಈ ವಿಧಾನ ಅನುಸರಿಸಲಾಗುತ್ತಿದೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯ ವೇಳೆ ಆಹಾರ ವಿತರಣೆಯಲ್ಲಿ ಯಾವುದೇ ಉಲ್ಲಂಘನೆಯ ದೂರುಗಳು ಬಂದಿಲ್ಲ” ಎಂದು ಅವರು ಹೇಳಿದ್ದಾರೆ.



