ಇತ್ತೀಚಿನ ಏಷ್ಯಾ ಪ್ರವಾಸದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಭೇಟಿಯ ಪ್ರಸ್ತಾಪವನ್ನು ನಿರ್ಲಕ್ಷಿಸಿದ ಕೆಲವೇ ದಿನಗಳಲ್ಲಿ, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅಣ್ವಸ್ತ್ರ ಸಾಮಗ್ರಿ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ, ಹೆಚ್ಚಿನ ಅಣ್ವಸ್ತ್ರ ನಿರ್ಮಾಣಕ್ಕೆ ಕರೆ ನೀಡಿದ್ದಾರೆ. ತಮ್ಮ ಸರ್ವಾಧಿಕಾರಿ ಆಡಳಿತದ ಬೆನ್ನೆಲುಬಾಗಿರುವ ಅಣ್ವಸ್ತ್ರ ಸಂಗ್ರಹದ ಬಲ ಪ್ರದರ್ಶಿಸುವುದು ಹಾಗೂ ನಿಶ್ಯಸ್ತ್ರೀಕರಣ ಮಾತುಕತೆ ತಿರಸ್ಕರಿಸುವ ನಿಲುವನ್ನು ಪುನರುಚ್ಚರಿಸುವುದು ಕಿಮ್ ಉದ್ದೇಶವಾಗಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಹೊಸದಾಗಿ ಉದ್ಘಾಟಿಸಲಾದ ಮತ್ತು ವಿಸ್ತರಿಸಲಾಗುತ್ತಿರುವ ಎರಡು ಅಣ್ವಸ್ತ್ರ ಸಾಮಗ್ರಿ ಉತ್ಪಾದನಾ ಕಾರ್ಖಾನೆಗಳನ್ನು ಕಿಮ್ ಪರಿಶೀಲಿಸಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ‘ಕೆಸಿಎನ್‌ಎ’ ಗುರುವಾರ ತಿಳಿಸಿದೆ. ಶಸ್ತ್ರಾಸ್ತ್ರ ದರ್ಜೆಯ ಯುರೇನಿಯಂ ಉತ್ಪಾದಿಸುವ ಸೆಂಟ್ರಿಫ್ಯೂಜ್‌ಗಳಂತೆ ಕಾಣುವ ಸಾಲುಗಳು ಹಾಗೂ ಸಿಡಿತಲೆಗಳೆಂದು ಅಂದಾಜಿಸಲಾದ ಶಸ್ತ್ರಾಸ್ತ್ರಗಳನ್ನು ಕಿಮ್ ಮತ್ತು ಸೇನಾ ಅಧಿಕಾರಿಗಳು ವೀಕ್ಷಿಸುತ್ತಿರುವ ಚಿತ್ರಗಳನ್ನು ಪ್ರಕಟಿಸಿದ್ದು, ಕೆಲವನ್ನು ಮಸುಕುಗೊಳಿಸಲಾಗಿದೆ. ಬುಧವಾರ ಅಣುಶಕ್ತಿ ಚಾಲಿತ ಉಪಕರಣಗಳ ನೆಲೆ ಹಾಗೂ ಅಣು ಸಂಶೋಧನಾ ಸಂಸ್ಥೆಗೂ ಕಿಮ್ ಭೇಟಿ ನೀಡಿದ್ದು, ಘಟಕಗಳ ಸ್ಥಳವನ್ನು ಬಹಿರಂಗಪಡಿಸಿಲ್ಲ.
ಕೊರಿಯನ್ ಪರ್ಯಾಯ ದ್ವೀಪವನ್ನು ಸಮೀಪಿಸುತ್ತಿರುವ ಅಣ್ವಸ್ತ್ರ ಬೆದರಿಕೆಗಳಿಗೆ ಪ್ರತಿಯಾಗಿ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಈ ಭೇಟಿ ನಡೆಸಿದ್ದಾಗಿ ಕಿಮ್ ಹೇಳಿದ್ದಾರೆ. ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಹೊಂದಲು ಮಿತ್ರರಾಷ್ಟ್ರಗಳನ್ನು ಅಮೆರಿಕ ಪ್ರಚೋದಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗುಣಮಟ್ಟ ಮತ್ತು ಪ್ರಮಾಣದಲ್ಲಿ ಅಣ್ವಸ್ತ್ರ ಸಾಮರ್ಥ್ಯ ವೃದ್ಧಿಸುವುದು ‘ಹಿಮ್ಮೆಟ್ಟಿಸಲಾಗದ ವಾಸ್ತವ’ ಎಂದಿರುವ ಕಿಮ್, ದಕ್ಷಿಣ ಕೊರಿಯಾವನ್ನು ಪರೋಕ್ಷವಾಗಿ ‘ಅತ್ಯಂತ ಅಪಾಯಕಾರಿ ಶತ್ರು ರಾಷ್ಟ್ರ’ ಎಂದು ಉಲ್ಲೇಖಿಸಿ, ಗಡಿಯಲ್ಲಿ ಕಡಿಮೆ ತೀವ್ರತೆಯ ಯುದ್ಧಭೂಮಿ ಅಣ್ವಸ್ತ್ರಗಳ ತುರ್ತು ನಿಯೋಜನೆಗೆ ಒತ್ತು ನೀಡಿದ್ದಾರೆ.
ಉತ್ತರ ಕೊರಿಯಾ ಅಣ್ವಸ್ತ್ರ ನಿಶ್ಯಸ್ತ್ರೀಕರಣಗೊಳ್ಳಬೇಕು ಎಂಬ ಅಮೆರಿಕದ ಮೂಲ ನಿಲುವು ಬದಲಾಗದ ಕಾರಣ, ನಿಶ್ಯಸ್ತ್ರೀಕರಣದ ಮಾತಿಲ್ಲದೆ ಭೇಟಿಯಾಗುವಂತೆ ಶಕ್ತಿ ಪ್ರದರ್ಶಿಸುವುದು ಮತ್ತು ವರ್ಷಾಂತ್ಯದ ವರ್ಕರ್ಸ್ ಪಾರ್ಟಿ ಸಮ್ಮೇಳನಕ್ಕೂ ಮುನ್ನ ಅಣ್ವಸ್ತ್ರ ಕಾರ್ಯಕ್ರಮದ ಪ್ರಗತಿ ಪರಿಶೀಲಿಸುವುದು ಕಿಮ್ ಭೇಟಿಯ ಉದ್ದೇಶವಾಗಿದೆ ಎಂದು ಸೋಲ್‌ನ ವಿಶ್ಲೇಷಕ ಮೂನ್ ಸಿಯೊಂಗ್ ಮೂಕ್ ಅಭಿಪ್ರಾಯಪಟ್ಟಿದ್ದಾರೆ. ಕಿಮ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅಮೆರಿಕದ ಮೈತ್ರಿಯಡಿ ದೃಢ ಸೇನಾ ಸನ್ನದ್ಧತೆ ಕಾಯ್ದುಕೊಳ್ಳಲಾಗಿದೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಘಟಕಗಳ ವಿಶ್ಲೇಷಣೆ ಹಂಚಿಕೊಳ್ಳಲು ಜಂಟಿ ಸೇನಾ ಮುಖ್ಯಸ್ಥರ ಸಮಿತಿ ನಿರಾಕರಿಸಿದೆ.
ಕಳೆದ ವಾರ ಚೀನಾದಲ್ಲಿ ನಡೆದ ‘ಎಪೆಕ್’ ಶೃಂಗಸಭೆ ವೇಳೆ ಕಿಮ್ ಜತೆ ಮಾತುಕತೆ ಪುನರಾರಂಭಿಸುವ ಇಚ್ಛೆಯನ್ನು ಟ್ರಂಪ್ ವ್ಯಕ್ತಪಡಿಸಿದ್ದರೂ, ಪ್ಯೋಂಗ್ಯಾಂಗ್ ಪ್ರತಿಕ್ರಿಯಿಸಿರಲಿಲ್ಲ. ಆದರೆ, ‘ನ್ಯೂಯಾರ್ಕ್ ಪೋಸ್ಟ್’ ಸಂದರ್ಶನದಲ್ಲಿ ಕಿಮ್ ತಮ್ಮ ಪ್ರಸ್ತಾಪ ನಿರ್ಲಕ್ಷಿಸಿಲ್ಲ ಎಂದಿರುವ ಟ್ರಂಪ್, ಕಾರ್ಯನಿರತವಾಗಿದ್ದರಿಂದ ಭೇಟಿ ಸಾಧ್ಯವಾಗಲಿಲ್ಲ; ಪತ್ರ ವಿನಿಮಯದ ಮೂಲಕ ಯಾವಾಗ ಬೇಕಾದರೂ ರಾಜತಾಂತ್ರಿಕ ಮಾತುಕತೆಗೆ ಮರುಜೀವ ನೀಡಬಲ್ಲೆ ಎಂದಿದ್ದಾರೆ. ಅಮೆರಿಕ ತನ್ನ ವೈರತ್ವದ ನೀತಿ ಕೈಬಿಟ್ಟು ಅಣ್ವಸ್ತ್ರ ರಾಷ್ಟ್ರದ ಸ್ಥಾನಮಾನ ಗೌರವಿಸಿದರೆ ಮಾತುಕತೆಗೆ ಮರಳಬಹುದು ಎಂದು ಕಿಮ್ ಈ ಹಿಂದೆ ಹೇಳಿದ್ದು, ನಿರ್ಬಂಧ ತೆರವಿಗೆ ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವುದು ಅವರ ಗುರಿಯಾಗಿದೆ ಎಂಬುದು ತಜ್ಞರ ವಿಶ್ಲೇಷಣೆ.
ಯಾಂಗ್‌ಬ್ಯೋನ್‌ನಲ್ಲಿರುವ ತನ್ನ ಮೂಲ ಯುರೇನಿಯಂ ಸಂಸ್ಕರಣಾ ಘಟಕವನ್ನು ಉತ್ತರ ಕೊರಿಯಾ ವಿಸ್ತರಿಸುತ್ತಿದ್ದು, ಇದು “ಗಂಭೀರ ಕಳವಳಕ್ಕೆ ಕಾರಣವಾಗಿದೆ” ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಮಹಾನಿರ್ದೇಶಕ ರಫೇಲ್ ಗ್ರಾಸ್ಸಿ ಕಳೆದ ವಾರ ತಿಳಿಸಿದ್ದರು. ಅಣ್ವಸ್ತ್ರ ತಯಾರಿಕೆಗೆ ಬೇಕಾದ ಅತಿ ಹೆಚ್ಚು ಸಂಸ್ಕರಿಸಿದ ಯುರೇನಿಯಂ ಮತ್ತು ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಉತ್ಪಾದಿಸುವ ಘಟಕಗಳು ಯಾಂಗ್‌ಬ್ಯೋನ್‌ನಲ್ಲಿವೆ. ಉತ್ತರ ಕೊರಿಯಾ ನಾಲ್ಕು ಯುರೇನಿಯಂ ಸಂಸ್ಕರಣಾ ಘಟಕಗಳನ್ನು ನಿರ್ವಹಿಸುತ್ತಿದ್ದು, ಅವು ಪ್ರತಿದಿನ ಕಾರ್ಯನಿರ್ವಹಿಸುತ್ತಿವೆ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವ ಚುಂಗ್ ಡಾಂಗ್–ಯಂಗ್ ಕಳೆದ ವರ್ಷ ಹೇಳಿದ್ದರು.




