ಕರ್ನಾಟಕದಾದ್ಯಂತ ಇಂದು ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬರಬಹುದು. ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಇರಲಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಮ್‌ಸಿ) ತಿಳಿಸಿದೆ.
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಧ್ಯಾಹ್ನ ಅಥವಾ ಸಂಜೆಯ ವೇಳೆ ತುಂತುರು ಅಥವಾ ಸಾಧಾರಣ ಮಳೆ ಬೀಳಬಹುದು.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಹಗುರ ಮಳೆಯ ಸಾಧ್ಯತೆ ಇದ್ದರೂ ಬಹುತೇಕ ಒಣ ಹವೆಯೇ ಮುಂದುವರಿಯುವ ನಿರೀಕ್ಷೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಕಡಿಮೆ ಇದ್ದು, ಬಿಸಿಲಿನ ವಾತಾವರಣವೇ ಮುಂದುವರಿಯಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಾತ್ರಿ 8:30ರಿಂದ 11:30 ರವರೆಗಿನ ಮೂರು ಗಂಟೆಗಳ ಅವಧಿಯಲ್ಲಿ ಒಟ್ಟು 52.8 ಮಿ.ಮೀ. ದಾಖಲೆ ಪ್ರಮಾಣದ ಮಳೆಯಾಗಿದೆ.
ಧಾರಾಕಾರ ಮಳೆಯಿಂದ ಹಲವು ಪ್ರದೇಶಗಳಲ್ಲಿ ನೀರು ನಿಂತು, ರಸ್ತೆಗಳು ಜಲಾವೃತವಾಗಿವೆ. ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆಗೊಳಗಾಗಿದ್ದಾರೆ. ವಾಹನ ಸಂಚಾರವೂ ಸಂಪೂರ್ಣವಾಗಿ ಸ್ಥಗಿತಗೊಂಡು, ಸಂಜೆ ವೇಳೆ ರಾಜಧಾನಿಯ ಜನ ಮನೆ ಸೇರಲು ಪರದಾಡುವಂತಾಗಿತ್ತು. ಇಂದೂ ಸಂಜೆ ನಂತರ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.




