ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ, ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಹೊನವಾಡ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಹೈಸ್ಕೂಲ್ ಮಂಜೂರು ಮಾಡಿಸಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಸಹಯೋಗದಲ್ಲಿ ಸಿಎಸ್‌ಆರ್ ಅನುದಾನದಡಿ ಕೆಬಿಎಂಪಿಎಸ್ ಸರ್ಕಾರಿ ಶಾಲೆಯ ಆವರಣದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
“ಹೊನವಾಡ ಗ್ರಾಮದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿರುವುದರಿಂದ ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಿವೆ. ಇಂದು ನಿಜವಾದ ಅರ್ಥದಲ್ಲಿ ಹೊನವಾಡ ಹೊನ್ನಿನವಾಡವಾಗಿದೆ. ಗ್ರಾಮದಲ್ಲಿ ವಾರ್ಷಿಕ 70 ಸಾವಿರ ಟನ್ ಕಬ್ಬು ಬೆಳೆಯಲಾಗುತ್ತಿದೆ. ಕೃಷಿಯ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ನೀಡುವ ಮೂಲಕ ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು” ಎಂದರು.
“ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಹೊನವಾಡದ ಉರ್ದು ಶಾಲೆಗೂ ಕಟ್ಟಡ ನಿರ್ಮಿಸಲಾಗುತ್ತಿದ್ದು, ಎರಡೂ ಶಾಲೆಗಳನ್ನು ಒಂದೇ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು. ಹಳ್ಳಿಯ ಮಕ್ಕಳು ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು, ಸುಶಿಕ್ಷಿತರಾಗಬೇಕು. ಶಿಕ್ಷಕರು ಸುಸಜ್ಜಿತ ಶಾಲೆಗಳ ಹೃದಯವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು” ಎಂದು ಆಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, “ಹೊನವಾಡ ಶಾಲೆಯನ್ನು ಪ್ರೌಢಶಾಲೆಯಾಗಿ ಉನ್ನತೀಕರಿಸಲಾಗಿದೆ. ಇದೇ ರೀತಿ ಮತಕ್ಷೇತ್ರದಲ್ಲಿ ಆರು ಶಾಲೆಗಳನ್ನು ಮೇಲ್ದರ್ಜೆಗೇರಿಸಿರುವುದು ಸಚಿವರ ಶಿಕ್ಷಣದ ಮೇಲಿನ ಕಾಳಜಿಗೆ ಸಾಕ್ಷಿಯಾಗಿದೆ” ಎಂದರು.
“ನೂತನ ಕಟ್ಟಡದಲ್ಲಿ ಗ್ರಂಥಾಲಯ ಸೇರಿದಂತೆ ಏಳು ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕೋಟ್ಯಾಳದ ನಂತರ ಇದು ಎರಡನೇ ಯೋಜನೆಯಾಗಿದ್ದು, ಒಟ್ಟು 240 ಕೊಠಡಿಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.
ಬಬಲೇಶ್ವರ ಕ್ಷೇತ್ರದಲ್ಲಿ ಈಗಾಗಲೇ 198 ಸ್ಮಾರ್ಟ್ ಕ್ಲಾಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದು ರಾಜ್ಯದಲ್ಲೇ ವಿಶೇಷ ಸಾಧನೆಯಾಗಿದೆ. ಇದೇ ರೀತಿ ಶಾಲೆಗಳಲ್ಲಿ ಭೋಜನಾಲಯಗಳ ವ್ಯವಸ್ಥೆ ಮಾಡಲಾಗಿದೆ. 213 ಶಾಲೆಗಳಲ್ಲಿ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಸಚಿವರ ಸೂಚನೆಯಂತೆ 360 ಕೋಟಿ ರೂ. ಸಿಎಸ್‌ಆರ್ ಅನುದಾನ ಬಳಕೆಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣದ ಹಣಕಾಸು ವಿಭಾಗದ ಮುಖ್ಯಸ್ಥ ಭಾಸ್ಕರ ಆನಂದ ರಾವ್, ಹಿರಿಯ ಉಪಾಧ್ಯಕ್ಷ ಅನಿಲಕುಮಾರ ಪಾಟೀಲ, ಕಾರ್ಪೊರೇಟ್ ವಿಭಾಗದ ದಿನೇಶಕುಮಾರ, ಸಿಎಸ್‌ಆರ್ ಮುಖ್ಯಸ್ಥೆ ಸೌಮ್ಯಾ, ಹಿರಿಯ ವ್ಯವಸ್ಥಾಪಕ ಚಂದ್ರಶೇಖರ ಬಿರಾದಾರ, ಅಧಿಕಾರಿಗಳಾದ ಶ್ವೇತಾ, ಸುಮಲತಾ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮುಖಂಡರಾದ ವಿಜಯಕುಮಾರ ಹಿರೇಮಠ, ಭಾಗೀರಥಿ ತೇಲಿ, ಭೀಮನಗೌಡ ಪಾಟೀಲ ಕೋಟ್ಯಾಳ, ಸಿದ್ದು ಗೌಡನವರ, ತುಕಾರಾಮ ಧಡಕೆ ಉಪಸ್ಥಿತರಿದ್ದರು.





