ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಹೆಚ್ಚಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಪಂಜಾಬ್ನ ಎಎಪಿ ಶಾಸಕ ಸುಖವೀರ್ ಸಿಂಗ್ ಮೈಸರ್ಖಾನಾ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಂಜಾಬ್ನ ಬಟಿಂಡಾ ಜಿಲ್ಲೆಯ ಮೌರ್ ಕ್ಷೇತ್ರದ ಶಾಸಕರಾಗಿರುವ ಸುಖವೀರ್ ಸಿಂಗ್, ತಮ್ಮ ಕ್ಷೇತ್ರದಲ್ಲಿನ ಕೆಲವು ಸರ್ಕಾರಿ ಶಾಲೆಗಳಲ್ಲಿ ಎದುರಾಗಿರುವ ಶಿಕ್ಷಕರ ಕೊರತೆಯ ಸಮಸ್ಯೆಯನ್ನು ಬಗೆಹರಿಸದ ಹಿನ್ನೆಲೆಯಲ್ಲಿ ಶನಿವಾರ ಫೇಸ್ಬುಕ್ ಲೈವ್ ಬಂದಿದ್ದರು. ಲೈವ್ ವಿಡಿಯೋದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಅವರು, “ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ನಿರಂತರವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ನಮ್ಮ ಸರ್ಕಾರದ ಪ್ರತಿಪಾದಿಸುತ್ತಿದೆ. ಆದರೆ, ವಾಸ್ತವ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ” ಎಂದು ಆರೋಪಿಸಿದ್ದರು.
“ಸರ್ಕಾರ ನಿರ್ಮಿಸಿರುವ ‘ಸ್ಕೂಲ್ ಆಫ್ ಎಮಿನೆನ್ಸ್’ನಲ್ಲೂ ಶಿಕ್ಷಕರ ಅಭಾವವಿದೆ. ನನ್ನ ಮಗ ಕೂಡ ಅದೇ ಶಾಲೆಯಲ್ಲಿ ಓದುತ್ತಿದ್ದು, ಶಾಲೆಯ ಪ್ರಾಂಶುಪಾಲರೇ ಶಿಕ್ಷಕರ ನೇಮಕಕ್ಕೆ ನನ್ನ ಬಳಿ ಒತ್ತಾಯಿಸುವಂತೆ ಮಗನಿಗೆ ತಿಳಿಸಿದ್ದರು” ಎಂದು ಅವರು ಹೇಳಿಕೊಂಡಿದ್ದರು.
This video cannot be played in your browser. Open the video directly
“ನಮ್ಮ ಪಕ್ಷದ ಎಲ್ಲ ಶಾಸಕರ ಪೈಕಿ ನಮ್ಮ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ” ಎಂದು ಸುಖವೀರ್ ಸಿಂಗ್ ಹೇಳಿದ್ದರು.
“ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರ ಕೊರತೆ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಯತ್ನಿಸಿದರೂ ಅವಕಾಶ ಸಿಗಲಿಲ್ಲ, ನಮ್ಮ ಬೇಸರವನ್ನು ತೋಡಿಕೊಳ್ಳಲು ಬೇರೆ ದಾರಿಯಿಲ್ಲದೆ ಸಾಮಾಜಿಕ ಜಾಲತಾಣದ ಮೊರೆ ಹೋಗಬೇಕಾಯಿತು” ಎಂದು ಅವರು ತಿಳಿಸಿದ್ದರು.
ಶಾಸಕರ ಈ ಬಹಿರಂಗ ಹೇಳಿಕೆ ಬೆನ್ನಲ್ಲೇ, ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. “ಶಾಸಕರು ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ತೀವ್ರ ಶಿಸ್ತು ಉಲ್ಲಂಘನೆಯಲ್ಲಿ ತೊಡಗಿರುವುದು ಕಂಡುಬಂದಿದೆ” ಎಂದಿರುವ ಪಂಜಾಬ್ ಎಎಪಿ ಪ್ರಧಾನ ಕಾರ್ಯದರ್ಶಿ ಹರ್ಚಂದ್ ಸಿಂಗ್ ಬರ್ಸಾತ್ ಅವರು, ಸುಖವೀರ್ ಸಿಂಗ್ ಮೈಸರ್ಖಾನಾ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.




