2ಬಿ ಮೀಸಲಾತಿ ರದ್ದು | ಮುಸ್ಲಿಂ ಮಹಿಳೆಯರ ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ ಮಾರಕ

Date:

ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿ ರದ್ದುಪಡಿಸಲಾಗಿದೆ. ಮುಸ್ಲಿಂ ಮಹಿಳೆಯರ ಔದ್ಯೋಗಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದ ಮೀಸಲಾತಿಯನ್ನು ಕಿತ್ತುಕೊಂಡ ಸರ್ಕಾರದ ಧೂರ್ತ ನಡೆಯನ್ನು ಲಿಂಗಾಯತ, ಒಕ್ಕಲಿಗರು ಸೇರಿದಂತೆ ಎಲ್ಲ ಸಮುದಾಯದವರು ಸೇರಿ ಪ್ರತಿಭಟಿಸಲೇಬೇಕು. ಇಲ್ಲದಿದ್ದರೆ ಈ ನಡೆ ಯಾವ ಸಮುದಾಯದವರಿಗೂ ಹಿತವಲ್ಲದ ನಡೆಯಾದೀತು. 

ಇಂದಿನವರೆಗೆ ಕರ್ನಾಟಕದಲ್ಲಿ ಹಿಜಾಬ್ ಕಾರಣಕ್ಕೆ ಮುಸ್ಲಿಂ ಬಡ ಹೆಣ್ಣುಮಕ್ಕಳ ಶಿಕ್ಷಣ ಕಸಿದುಕೊಂಡಿತು. ಬಹಳ ಕಷ್ಟಪಟ್ಟು ಓದುತ್ತಿದ್ದ ಆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾದ ಬಗ್ಗೆ ಹಲವಾರು ವರದಿಗಳು ಬಂದಿವೆ. ಹಲಾಲ್ ಕಟ್ ಜಟ್ಕಾ ಕಟ್, ಮಂದಿರಗಳ ಮುಂದೆ ಮುಸ್ಲೀಮರ ವ್ಯಾಪಾರ ನಿಷೇಧ, ಮುಸಲ್ಮಾನರ ಅಟೋ ಹತ್ತುವುದಕ್ಕೂ ನಿಷೇಧ, ಮುಸ್ಲೀಮರ ಅಂಗಡಿಗಳಲಿ ಹಣ್ಣು , ತರಕಾರಿ, ಕಿರಾಣಿ ಖರೀದಿಗೂ ನಿಷೇಧ ಮಾಡಿದ್ದಾಯಿತು. ಬಡವ ಬಡೇ ಸಾಬರ ಕಲ್ಲಂಗಡಿ ಒಡೆದು ಬಡವನ ಮೇಲೆ ಸೇಡು ತೀರಿಸಿಕೊಂಡದ್ದಾಯಿತು. ಮಂಗಳೂರಿನಲ್ಲಿ ಕೋಮುಬೆಂಕಿ ಹಚ್ಚಿ ಬಡ ತಾಯಿಯ ಅಮಾಯಕ ಮಕ್ಕಳನ್ನು ಬಲಿ ಪಡೆದಿದ್ದಾಯಿತು. ಸ್ಕಾಲರ್‌ಶಿಪ್‌ಗಳನ್ನು ನೀಡದೇ ಪ್ರತಿಭಾವಂತ ರೋಹಿತ್ ವೇಮುಲನಂತಹ ವಿದ್ಯಾರ್ಥಿಗಳನ್ನು ನುಂಗಿ ನೀರು ಕುಡಿದವರು ಈಗ ಮತ್ತೆ ಅಮಾಯಕರ ಬಲಿ ಕೊಡಲು ಹೊರಟಿರುವುದು ಶೋಚನೀಯ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಸ್ಲೀಮರ ಮೀಸಲಾತಿ 2ಬಿ ಯಲ್ಲಿ ಶೇ.4% ರಷ್ಪು ಮೀಸಲಾತಿಯನ್ನು ಪರಿಷ್ಕರಣೆ ಮಾಡಿ ಮುಸ್ಲೀಮರ ಮೀಸಲಾತಿಯನ್ನು ಕಿತ್ತುಕೊಂಡು ಒಕ್ಕಲಿಗರಿಗೆ 2% ಮತ್ತು ಲಿಂಗಾಯಿತರಿಗೆ 2% ನೀಡಿ. ಸಮಾಜದ ಸಾಮಾಜಿಕ ಸಮತೂಲನವನ್ನು ಹಾಳು ಮಾಡುತ್ತಿದ್ದಾರೆ. ಮುಸ್ಲಿಂ ಜನಾಂಗಕ್ಕೆ ನೀಡಿದ 4% ಮೀಸಲಾತಿಯು 30 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಶೇ 4% ಮೀಸಲಾತಿಯನ್ನು ಯಾವುದೇ ಕಾರಣಕ್ಕೆ ಹಿಂಪಡೆಯುವುದಿಲ್ಲವೆಂದು ಹೇಳಿದ್ದ ಬೊಮ್ಮಾಯಿಯವರು ಮುಸ್ಲಿಂ ಇಷ್ಟೊಂದು ವಿರೋಧಿಯಾಗಿ ನಡೆದುಕೊಂಡುದ್ದು ಯಾಕೆ? ಒಂದು ಸಮುದಾಯದವರಿಗೆ ಯಾಕೆ ಅವರು ನೋವುಂಟು ಮಾಡಿದರು ಎಂಬುದನ್ನು ಯೋಚಿಸಬೇಕಾಗಿದೆ. ಮುಂದೆ ಮುಸ್ಲಿಂ ನಾಯಕರು ಇದನ್ನು ಹೇಗೆ ಕೋರ್ಟಿನ ಮೂಲಕ ನ್ಯಾಯ ಪಡೆಯುತ್ತಾರೆಂಬುದು ಪ್ರಶ್ನೆಯಿದೆ. ಒಟ್ಟಿನಲ್ಲಿ ಈ ಪ್ರಕರಣ ಹಿಜಾಬ್‌ನಂತೆ ಕೋರ್ಟಿನಲ್ಲಿ ಬಿದ್ದರೆ ಸಾಕು. ಓಟು ಬಾಚಿಕೊಂಡು ಗೆದ್ದರೆ ಸಾಕು. ಈ ವಿಷಯವನ್ನು ಕೋರ್ಟಿಗೆ ಸಾಗು ಹಾಕಿ ಗೆದ್ದ ನಂತರ ನೋಡಿಕೊಂಡರಾಯಿತು ಎಂಬುದು ಬೊಮ್ಮಾಯಿಯವರ ನಡೆಯಾಗಿರಬಹುದು.

ಮೀಸಲಾತಿಯು ಯಾವುದೇ ಚುನಾವಣೆಯಲ್ಲಿ ಓಟು ಪಡೆಯುವುದಕ್ಕಾಗಿ ನೀಡಲಾಗುವುದಿಲ್ಲ. ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗುವುದರಲ್ಲಿದೆ. ಅಂತಹ ಸಂದರ್ಭದಲ್ಲಿ ಬೊಮ್ಮಾಯಿಯವರು ಇಂತಹ ತೀರ್ಮಾನ ಯಾಕೆ ಕೈಕೊಂಡರು. ಮುಸ್ಲೀಮರೂ ರಂಜಾನ ತಿಂಗಳ ಉಪವಾಸ ಮಾಡುತ್ತ ತಣ್ಣಗೆ ಕುಳಿತಿದ್ದಾರೆ. ದಲಿತ ಮತ್ತು ಮುಸ್ಲೀಮರ ಮೇಲಿನ ಕ್ರೌರ್ಯ ಮಿತಿ ಮೀರುತ್ತಿದೆ. ಬಿಜೆಪಿಯ ಮುಸ್ಲಿಂ ದ್ವೇಷ ಹದ್ದು ಮೀರುತ್ತಿರುವ ಈ ಹೊತ್ತಿನಲ್ಲಿ ವಿಚಾರವಂತರು, ಬುದ್ದಿಜೀವಿಗಳು, ಮಹಿಳೆಯರು, ದಲಿತರು, ಪ್ರಗತಿಪರ ವಿಚಾರದವರು ಈ ನಿಟ್ಟಿನಲ್ಲಿ ದಿಟ್ಟತನದಿಂದ ತಮ್ಮ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಬೇಕಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳಿಗೆ 30 ವರ್ಷಗಳ ಹಿಂದೆ ನೀಡಿರುವ ಮೀಸಲಾತಿಯನ್ನು ಕಿತ್ತುಕೊಂಡು, ಮಸ್ಲೀಮರು ಒಕ್ಕಲಿಗರನ್ನು, ಲಿಂಗಾಯಿತರನ್ನು ದ್ವೇಷಿಸುವಂತೆ ಮಾಡಿ ಓಟುಗಳನ್ನು ಬಾಚಿಕೊಳ್ಳಲು ಮಾಡಿರುವ ಹುನ್ನಾರ ಇದೆಂದು ಎಲ್ಲರಿಗೂ ತಿಳಿಯುತ್ತಿದೆ.ಇನ್ನೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ.ಈ ಮೀಸಲಾತಿ ಸೂತ್ರ ಜಾರಿಯಾಗಲು ಇನ್ನೂ ಇದು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳ ಮೂಲಕ ಹಾದು ಬರಬೇಕಿದೆ. ಆದರೆ ಇತ್ತೀಚಿನ ಬಾಬ್ರಿ ಮಸೀದಿ ತೀರ್ಮಾನ, ಬಿಲ್ಕಿಸ್ ಬಾನೊ ತೀರ್ಮಾನ ಮತ್ತು ರಾಹುಲ್ ಅವರ ಕುರಿತು ನೀಡಿದ ತೀರ್ಮಾನಗಳನ್ನು ನೋಡಿದರೆ, ಈ ಬಾರಿ ಬಿಜೆಪಿಯನ್ನು ಸೋಲಿಸಲೇ ಬೇಕಿದೆ.

ಎಕಾನಮಿಕಲಿ ವೀಕರ್ ಸೆಕ್ಷನ್(ಇ.ಡಬ್ಲು.ಎಸ್) ಗುಂಪಿಗೆ ಮುಸ್ಲೀಮರನ್ನು ಹಾಕುತ್ತಿದ್ದಾರೆ. 2ಬಿ ಮೀಸಲಾತಿಯ ಮೂಲಕ ಮುಸ್ಲಿಂ ಜನಾಂಗ ಸರ್ಕಾರಿ ಕೆಲಸ, ಶಿಕ್ಷಣ, ಉನ್ನತ ಶಿಕ್ಷಣಗಳಲ್ಲಿ ಮುಂದುವರಿಯಲು ಸಾಧ್ಯವಾಗಿತ್ತು. ಈಗ ಮೀಸಲಾತಿಯನ್ನು ತೆಗೆದುಬಿಟ್ಟರೆ ಹೇಗೆ? ಸಾಚಾರ್ ವರದಿಯ ಪ್ರಕಾರ ಈಗಾಗಲೇ ಮುಸ್ಲೀಮರು, ಎಸ್‍ಸಿ,/ಎಸ್‍ಟಿಗಿಂತ ಹಿಂದುಳಿದಿದ್ದಾರೆಂದು ವರದಿಯಿದೆ.ಈಗ ತಾನೇ ಮೀಸಲಾತಿಯ ಮೂಲಕ ಶಿಕ್ಷಣ ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸ್ಥಾನ ಪಡೆಯುತ್ತಿರುವ ಮುಸಲ್ಮಾನರು ಮತ್ತು ಅವರ ಹೆಣ್ಣು ಮಕ್ಕಳು ಈಗ ಜನರಲ್ ಕೆಟಗರಿಯಲ್ಲಿ ಸ್ಪರ್ಥಿಸಲು ಸಾಧ್ಯವೇ?

ಸಂವಿಧಾನಕ್ಕೆ ಬಗೆದ ದ್ರೋಹ: ಕರ್ನಾಟದಲ್ಲಿ ನೀಡಿದ ಮೀಸಲಾತಿಯನ್ನು ಯಾವುದೇ ವರದಿ ಇಲ್ಲದೇ ಏಕಾಏಕಿ ಕಿತ್ತು ಹಾಕಿರುವುದು ಸಂವಿಧಾನಕ್ಕೆ ಮಾಡಿದ ದ್ರೋಹವಾಗಿದೆ. ಇದು ಸಾಮಾಜಿಕ ನ್ಯಾಯಕ್ಕೆ ಮಾಡಿದ ಅಪಮಾನವಾಗಿದೆ. ಬೊಮ್ಮಾಯಿಯವರು “ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಅನ್ವಯ ಮುಸ್ಲಿಂ ಮೀಸಲಾತಿಯನ್ನು ರದ್ದು ಗೊಳಿಸಲಾಗಿದೆ” ಎಂದಿದ್ದಾರೆ. ಯಾರಿಗೂ ತಿಳಿಯದಂತೆ ಅವರು ರಹಸ್ಯವಾಗಿ ವರದಿ ತಯಾರಿಸಿದರೆ? ಆ ವರದಿ ಏನೆಂದು ಬಹಿರಂಗವಾಗಿ ಪ್ರಕಟಿಸಬೇಕು. ಆ ಆದೇಶವನ್ನು ರದ್ದುಪಡಿಸಿ ಅತ್ಯಂತ ದಾರುಣ ಸ್ಥಿತಿಯಲ್ಲಿರುವ ಈ ಸಮುದಾಯದ ಮಹಿಳೆಯರ ಅಭ್ಯುದಯಕ್ಕೆ ಶ್ರಮಿಸುವುದು ಎಲ್ಲ ಪಕ್ಷಗಳ ಕೆಲಸವಾಗಿದೆ.

ಮೊದಲೇ ಮುಸ್ಲೀಮರ ಸ್ಥಿತಿ ದಾರುಣವಾಗಿದೆ. ಮೈಸೂರು ಮಹಾರಾಜರು ಕರ್ನಾಟಕದಲ್ಲಿ ಮುಸ್ಲೀಮರ ಪರಿಸ್ಥಿತಿ ದಾರುಣವಾಗಿರುವುದನ್ನು ಮನಗಂಡು ಮಿಲ್ಲರ್ ಆಯೋಗ ರಚನೆ ಮಾಡಿ ಅವರ ಶಿಫಾರಸ್ಸಿನನ್ವಯ ಮುಸಲ್ಮಾನರಿಗೆ ಮೀಸಲಾತಿ ನೀಡಿತ್ತು. ನಂತರದ ನಾಗನಗೌಡ, ಹಾವನೂರು, ವೆಂಕಟಸ್ವಾಮಿ ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳೂ ಸಹ ಮುಸಲ್ಮಾನರ ಹಿಂದುಳಿಯುವಿಕೆಯನ್ನು ವರದಿ ಮಾಡಿವೆ. ವೀರಪ್ಪ ಮೊಯ್ಲಿಯವರ ಸರ್ಕಾರ ಅತ್ಯಂತ ದಾರುಣ ಸ್ಥಿತಿಯಲ್ಲಿರುವ ಕೆಲವು ಮುಸ್ಲಿಂ ಸಮುದಾಯದಲ್ಲಿರುವ ನಾಲಬಂದ, ಸೈಕಲ್‍ಗಾರ್, ಕಸಾಯಿ, ಕಲಾಯಿಗಾರ್, ಮನ್ಸೂರಿ ಹೀಗೆ 14 ಸಮುದಾಯಗಳನ್ನು ಕೆಟಗರಿ 1ಬಿ ನಲ್ಲಿ ಸೇರಿಸಿ ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರೆಂದು ಪರಿಗಣಿಸಿ ಶೇ 4% ರಷ್ಟು ಮೀಸಲಾತಿ ನೀಡಲಾಗಿತ್ತು. ಕೇರಳ ಮತ್ತು ತಮಿಳುನಾಡಿನಲ್ಲಿಯೂ ಮುಸ್ಲೀಮರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲಾಗಿದೆ.

ಮೀಸಲಾತಿಯ ಕಾರಣದಿಂದ ಹಲವು ಮುಸ್ಲಿಂ ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಹಲವಾರು ಔದ್ಯೋಗಿಕ ಸವಲತ್ತುಗಳನ್ನು ಪಡೆಯುತ್ತಿದ್ದರು. ಸರ್ಕಾರದ ಈ ನಡೆಯಿಂದ ಮಹಿಳಾ ಪ್ರಗತಿಗೆ ಹಿನ್ನಡೆಯಾಗಲಿದೆ. ಅದರಲ್ಲೂ ಧಾರ್ಮಿಕ ಚೌಕಟ್ಟಿನಲ್ಲಿ ನರಳುವ ಹೆಣ್ಣಿಗೆ ತನ್ನ ಸ್ವಾತಂತ್ರ್ಯ ಪಡೆಯುವ ಮತ್ತು ಮುನ್ನಡೆ ಸಾಧಿಸುವ ವೈಚಾರಿಕ, ಔದ್ಯೋಗಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದ ಮೀಸಲಾತಿಯನ್ನು ಕಿತ್ತುಕೊಂಡ ಸರ್ಕಾರದ ಧೂರ್ತ ನಡೆಯನ್ನು ಲಿಂಗಾಯತ, ಒಕ್ಕಲಿಗರು ಸೇರಿದಂತೆ ಎಲ್ಲ ಸಮುದಾಯದವರು ಸೇರಿ ಪ್ರತಿಭಟಿಸಲೇಬೇಕು. ಇಲ್ಲದಿದ್ದರೆ ಈ ನಡೆ ಯಾವ ಸಮುದಾಯದವರಿಗೂ ಹಿತವಲ್ಲದ ನಡೆಯಾದೀತು.

ಡಾ ಕೆ ಷರೀಫಾ
+ posts

ಬಂಡಾಯ ಸಾಹಿತಿ, ಕವಿ

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಷರೀಫಾ
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌಜನ್ಯ ಹೋರಾಟಗಾರರಿಂದ NOTA ಅಭಿಯಾನ ; ಯಾರಾಗಲಿದ್ದಾರೆ ನೋಟಾದ ಫಲಾನುಭವಿ ?

ನೋಟಾ ಅಭಿಯಾನ ನಡೆಸುತ್ತಿರುವವರು ಸೌಜನ್ಯಪರ ಹೋರಾಟಗಾರರು. ಇವರೆಲ್ಲರೂ ಬಿಜೆಪಿ,ಆರೆಸ್ಸೆಸ್‌, ಭಜರಂಗದಳ, ವಿಎಚ್‌ಪಿ...

ಬೈಡನ್ ಅವರನ್ನು ಬೇಕಾದರೆ ಭೇಟಿ ಮಾಡಬಹುದು, ಆದರೆ ತೇಜಸ್ವಿಸೂರ್ಯ ಭೇಟಿಗೆ ಸಿಗ್ತಾ ಇಲ್ಲ!

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ವಂಚನೆಗೊಳಗಾದ ಸಾವಿರಾರು ಜನರು ಸಂಸದ...

ಬ್ರಾಹ್ಮಣರಿಂದ ಬ್ರಾಹ್ಮಣರಿಗೆ ಮೋಸ: 24 ಲಕ್ಷ ಕಳೆದುಕೊಂಡು ಭಿಕ್ಷೆ ಬೇಡುತ್ತಿರುವ ಹೆಬ್ಬಾರ್

ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ...

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...