ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದ ವಿರುದ್ಧ ಜನಾಕ್ರೋಶ ಸ್ಫೋಟಗೊಂಡಿದೆ. ಶನಿವಾರ ಅಮೆರಿಕದ ಪ್ರಮುಖ ನಗರಗಳು ಸೇರಿದಂತೆ ವಿಶ್ವದ ವಿವಿಧೆಡೆ ಬೃಹತ್ ಪ್ರತಿಭಟನಾ ರ್‍ಯಾಲಿಗಳು ನಡೆದಿವೆ. ಟ್ರಂಪ್ ಅವರ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆ, ಆಡಳಿತ ಶೈಲಿ, ವಿವಾದಿತ ವಲಸೆ ನೀತಿಗಳು ಹಾಗೂ ಇರಾನ್ ವಿರುದ್ಧದ ಯುದ್ಧೋನ್ಮಾದದ ನಿಲುವುಗಳನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ.
ಅಮೆರಿಕದ 50 ರಾಜ್ಯಗಳ ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಸುಮಾರು 3,300ಕ್ಕೂ ಹೆಚ್ಚು ಕಡೆ ಪ್ರತಿಭಟನಾ ಸಮಾವೇಶಗಳು ನಡೆದಿವೆ. ಈ ಐತಿಹಾಸಿಕ ಪ್ರತಿಭಟನೆಗಳಲ್ಲಿ ಕನಿಷ್ಠ 80 ಲಕ್ಷ ಜನರು ಪಾಲ್ಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
2025ರ ಜನವರಿಯಲ್ಲಿ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೇರಿದ ನಂತರ, ಜನಸಾಮಾನ್ಯರಲ್ಲಿ ಅವರ ನೀತಿಗಳ ಬಗ್ಗೆ ಮೂಡಿದ್ದ ಆತಂಕ ಈಗ ಪ್ರತಿಭಟನೆಗಳ ಮೂಲಕ ವ್ಯಕ್ತವಾಗಿದೆ. ನ್ಯೂಯಾರ್ಕ್‌ನಂತಹ ಜನನಿಬಿಡ ನಗರಗಳಲ್ಲಿ ಸಾವಿರಾರು ಮಂದಿ ಮೆರವಣಿಗೆ ನಡೆಸಿದ್ದು, ಈ ಹೋರಾಟಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ, ಖ್ಯಾತ ನಟ ರಾಬರ್ಟ್ ಡಿ ನಿರೋ ಅವರಂತಹ ಗಣ್ಯರು ಬೆಂಬಲ ಸೂಚಿಸಿದ್ದಾರೆ.
ಈ ಪ್ರತಿಭಟನೆಗಳು ‘ನೊ ಕಿಂಗ್ಸ್’ (No Kings) ಎಂಬ ಚಳವಳಿಯ ಅಡಿಯಲ್ಲಿ ನಡೆಯುತ್ತಿವೆ. ಕಳೆದ ಒಂದು ವರ್ಷದಲ್ಲಿ ಈ ಚಳವಳಿಯ ಭಾಗವಾಗಿ ಅಮೆರಿಕದ ಜನರು ಟ್ರಂಪ್ ವಿರುದ್ಧ ಮೂರನೇ ಬಾರಿಗೆ ದೊಡ್ಡ ಮಟ್ಟದಲ್ಲಿ ರಸ್ತೆಗಿಳಿದಿದ್ದಾರೆ. ಈ ಹಿಂದೆ, ಜೂನ್‌ನಲ್ಲಿ ಟ್ರಂಪ್ ಅವರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮೊದಲ ಬಾರಿಗೆ ಪ್ರತಿಭಟನೆಗಳು ನಡೆದಿದ್ದವು. ನಂತರ ಅಕ್ಟೋಬರ್‌ನಲ್ಲಿ ನಡೆದ ಎರಡನೇ ಹಂತದ ಹೋರಾಟದಲ್ಲಿ ಸುಮಾರು 70 ಲಕ್ಷ ಜನರು ಭಾಗವಹಿಸಿದ್ದರು. ಈಗ ಆ ಸಂಖ್ಯೆ 80 ಲಕ್ಷಕ್ಕೆ ಏರಿಕೆಯಾಗಿರುವುದು ಟ್ರಂಪ್ ವಿರೋಧಿ ಅಲೆ ದೇಶದಲ್ಲಿ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.
This is the true America.
— Brian Krassenstein (@krassenstein) March 28, 2026
Trump will tell you that these people are paid. That’s because he doesn’t want his own supporters to normalize the fact that this many people hate him.
pic.twitter.com/H398gDod76
ಟ್ರಂಪ್ ವಿರುದ್ಧದ ಆಕ್ರೋಶ ಕೇವಲ ಅಮೆರಿಕಗೆ ಮಾತ್ರವೇ ಸೀಮಿತವಾಗಿಲ್ಲ. ಅಟ್ಲಾಂಟಿಕ್ ಸಾಗರದಾಚೆಗಿನ ಯುರೋಪಿನ ದೇಶಗಳಿಗೂ ಹಬ್ಬಿದೆ. ಶನಿವಾರ ಆರ್ಮ್‌ಸ್ಟರ್‌ಡಮ್, ಮ್ಯಾಡ್ರಿಡ್ ಮತ್ತು ರೋಮ್ ಸೇರಿದಂತೆ ಯುರೋಪಿನ ಹಲವು ಪ್ರಮುಖ ನಗರಗಳಲ್ಲಿ ಟ್ರಂಪ್ ನೀತಿಗಳ ವಿರುದ್ಧ ಬೃಹತ್ ರ್‍ಯಾಲಿಗಳು ನಡೆದಿವೆ.
ಒಂದೆಡೆ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಎಂಬ ಘೋಷಣೆಗೆ ಅವರ ಬೆಂಬಲಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ, ಇನ್ನೊಂದೆಡೆ ಅವರ ವಿವಾದಾತ್ಮಕ ನಿರ್ಧಾರಗಳು ದೇಶವನ್ನು ವಿಭಜಿಸುತ್ತಿವೆ ಎಂಬ ದೂರು ಕೇಳಿಬರುತ್ತಿದೆ. ಸದ್ಯದ ಈ ಬೃಹತ್ ಪ್ರತಿಭಟನೆಗಳ ಬಗ್ಗೆ ಅಮೆರಿಕದ ಸರ್ಕಾರಿ ಮೂಲಗಳಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.



