ಅಫ್ಘಾನಿಸ್ತಾನದ ಮಹಿಳೆಯರ ಹಕ್ಕುಗಳು, ಶಿಕ್ಷಣ ಮತ್ತು ಸಾರ್ವಜನಿಕ ಬದುಕನ್ನು ಕಸಿದುಕೊಂಡಿದ್ದ ತಾಲಿಬಾನ್ ಆಡಳಿತ, ಈಗ ಅವರ ಮೂಲಭೂತ ಗುರುತಾದ ‘ಹೆಸರನ್ನೇ’ ಅಳಿಸಿಹಾಕುವ ಅಮಾನವೀಯ ಹೆಜ್ಜೆಯಿಟ್ಟಿದೆ. ಉತ್ತರ ಅಫ್ಘಾನಿಸ್ತಾನದ ಬಲ್ಖ್ ಪ್ರಾಂತ್ಯದ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಸರ್ಕಾರಿ ಕಚೇರಿಗಳ ದಾಖಲೆಗಳಲ್ಲಿ ಮಹಿಳೆಯರ ನಿಜವಾದ ಹೆಸರನ್ನು ಬರೆಯುವುದನ್ನು ತಾಲಿಬಾನ್‌ನ ನೈತಿಕ ಪೊಲೀಸ್ ಪಡೆ ನಿಷೇಧಿಸಿದೆ.
‘ಜಾನ್ ಟೈಮ್ಸ್’ ಮತ್ತು ಬ್ರಿಟನ್‌ನ ‘ದಿ ಗಾರ್ಡಿಯನ್’ ಪತ್ರಿಕೆಗಳು ನಡೆಸಿದ ಜಂಟಿ ತನಿಖಾ ವರದಿಯಲ್ಲಿ ಈ ಆಘಾತಕಾರಿ ಸಂಗತಿ ಬಯಲಾಗಿದೆ. 2026ರ ಮೇ ತಿಂಗಳಲ್ಲೇ ಈ ಆದೇಶ ಜಾರಿಯಾಗಿದ್ದು, ಎಲ್ಲಾ ವೈದ್ಯಕೀಯ ಚೀಟಿಗಳು, ರೋಗಿಗಳ ವಿವರಗಳು ಮತ್ತು ಸರ್ಕಾರಿ ದಾಖಲೆಗಳಲ್ಲಿ ಮಹಿಳೆಯರ ಹೆಸರಿನ ಬದಲಿಗೆ ಕೇವಲ ‘ಬೀಬಿ’ ಎಂಬ ಸಾಮಾನ್ಯ ಪದವನ್ನು ಬಳಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ದರಿ ಮತ್ತು ಪಶ್ತೋ ಭಾಷೆಗಳಲ್ಲಿ ‘ಬೀಬಿ’ ಎಂದರೆ ಅಜ್ಜಿ ಅಥವಾ ಹಿರಿಯ ಮಹಿಳೆ ಎಂಬ ಗೌರವಾರ್ಥಕ ಪದ. ಸಂಪ್ರದಾಯವಾದಿ ಅಫ್ಘಾನ್ ಸಮಾಜದಲ್ಲಿ ಮಹಿಳೆಯ ಹೆಸರನ್ನು ಸಾರ್ವಜನಿಕವಾಗಿ ಹೇಳುವುದು ಕುಟುಂಬದ ಗೌರವಕ್ಕೆ ಧಕ್ಕೆ ಎಂಬ ನಂಬಿಕೆಯಿದೆ. ಇದೇ ಸಾಂಪ್ರದಾಯಿಕ ಗೌರವದ ಹೆಸರಿನಲ್ಲಿ ತಾಲಿಬಾನ್ ತನ್ನ ಈ ಆದೇಶವನ್ನು ಸಮರ್ಥಿಸಿಕೊಳ್ಳುತ್ತಿದೆ.
ಆದರೆ, ಜರ್ಮನಿಯಲ್ಲಿ ನೆಲೆಸಿರುವ ಅಫ್ಘಾನ್ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲಾಲಾ ಒಸ್ಮಾನಿ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಅಫ್ಘಾನಿಸ್ತಾನದ ಒಳಗಿನ ಮಹಿಳೆಯರ ಹೇಳಿಕೆಗಳನ್ನು ಉಲ್ಲೇಖಿಸಿರುವ ಅವರು, “ಕೆಲವು ಕಡೆಗಳಲ್ಲಿ ಮಹಿಳೆಯರನ್ನು ‘ಬೀಬಿ’ ಎನ್ನುವುದಷ್ಟೇ ಅಲ್ಲದೆ, ‘ಮೇಕೆ’ ಮತ್ತು ‘ಹಸು’ವಿನಂತಹ ಪ್ರಾಣಿಗಳ ಹೆಸರಿನಿಂದಲೂ ಕರೆಯಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಾಣಿಗಳ ಹೆಸರು ಬಳಸುವ ಬಗ್ಗೆ ತಾಲಿಬಾನ್‌ನ ಯಾವುದೇ ಲಿಖಿತ ಆದೇಶ ದೃಢಪಟ್ಟಿಲ್ಲ.
“ಇದು ಮಹಿಳೆಯರನ್ನು ವ್ಯವಸ್ಥಿತವಾಗಿ ಅಮಾನವೀಯಗೊಳಿಸುವ ಪ್ರಕ್ರಿಯೆ. ಒಬ್ಬ ವ್ಯಕ್ತಿಯ ಹೆಸರನ್ನು ಕಸಿದುಕೊಂಡು ಸಾಮೂಹಿಕ ಪದವನ್ನೋ ಅಥವಾ ಪ್ರಾಣಿಯ ಹೆಸರನ್ನೋ ನೀಡಿದಾಗ, ಆಕೆಯ ವ್ಯಕ್ತಿತ್ವವನ್ನು ನಾಶಮಾಡಿ ಕೇವಲ ಒಂದು ಜೈವಿಕ ವಸ್ತುವಾಗಿ ಅಥವಾ ಆಸ್ತಿಯಾಗಿ ಪರಿವರ್ತಿಸಲಾಗುತ್ತದೆ. ಹೆಸರಿಲ್ಲದ ವ್ಯಕ್ತಿ ಕನಸು ಕಾಣಲು, ಆಸ್ತಿ ಹೊಂದಲು, ನ್ಯಾಯ ಕೇಳಲು ಅಥವಾ ಇತಿಹಾಸದಲ್ಲಿ ಉಳಿಯಲು ಸಾಧ್ಯವಿಲ್ಲ,” ಎಂದು ಒಸ್ಮಾನಿ ಕಿಡಿಕಾರಿದ್ದಾರೆ.
ಮಹಿಳೆಯರ ಹೆಸರನ್ನು ಮರೆಮಾಚುವ ಪದ್ಧತಿ ಅಫ್ಘಾನಿಸ್ತಾನದಲ್ಲಿ ಹೊಸದಲ್ಲ. ಹಿಂದಿನಿಂದಲೂ ಅಲ್ಲಿ ಮಹಿಳೆಯರನ್ನು ಪುರುಷ ಸಂಬಂಧಿಯ ‘ಪತ್ನಿ’ ಅಥವಾ ‘ಮಗಳು’ ಎಂದು ಗುರುತಿಸಲಾಗುತ್ತಿತ್ತು. ಸತ್ತ ನಂತರವೂ ಅವರ ಸಮಾಧಿಗಳ ಮೇಲೆ ಹೆಸರನ್ನು ಕೆತ್ತುತ್ತಿರಲಿಲ್ಲ. ಆದರೆ 2021ರಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವ ಮೊದಲು ಪರಿಸ್ಥಿತಿ ಬದಲಾಗುತ್ತಿತ್ತು. 2017ರಲ್ಲಿ ಲಾಲಾ ಒಸ್ಮಾನಿ ಆರಂಭಿಸಿದ #WhereIsMyName ಅಭಿಯಾನದ ಫಲವಾಗಿ, 2020ರಲ್ಲಿ ಅಂದಿನ ಸರ್ಕಾರವು ರಾಷ್ಟ್ರೀಯ ಗುರುತಿನ ಚೀಟಿಗಳಲ್ಲಿ ತಂದೆಯ ಹೆಸರಿನ ಜೊತೆಗೆ ತಾಯಿಯ ಹೆಸರನ್ನೂ ಸೇರಿಸಲು ಆದೇಶಿಸಿತ್ತು. ಈಗ ತಾಲಿಬಾನ್ ಆ ಎಲ್ಲಾ ಪ್ರಗತಿಯನ್ನು ಅಳಿಸಿಹಾಕಿ, ಹೆಸರು ನಿಷೇಧವನ್ನು ಕಾನೂನುಬದ್ಧ ಆಡಳಿತ ಪ್ರಕ್ರಿಯೆಯನ್ನಾಗಿ ಮಾಡಿದೆ. ಸದ್ಯಕ್ಕೆ ಈ ಆದೇಶ ಬಲ್ಖ್ ಪ್ರಾಂತ್ಯಕ್ಕೆ ಸೀಮಿತವಾಗಿದ್ದರೂ, ಶೀಘ್ರದಲ್ಲೇ ಇಡೀ ದೇಶಕ್ಕೆ ವಿಸ್ತರಿಸುವ ಭೀತಿ ಎದುರಾಗಿದೆ.
ಆಸ್ಪತ್ರೆ ದಾಖಲೆಗಳಲ್ಲಿ ಮಹಿಳೆಯರ ಹೆಸರನ್ನು ತೆಗೆದುಹಾಕುವುದು ಕೇವಲ ಭಾವನಾತ್ಮಕ ವಿಷಯವಲ್ಲ, ಅದು ರೋಗಿಗಳ ಜೀವಕ್ಕೇ ಸಂಚಕಾರ ತರುವ ನಡೆಯಾಗಿದೆ. ಒಂದೇ ಆಸ್ಪತ್ರೆಯಲ್ಲಿ ನೂರಾರು ಮಹಿಳಾ ರೋಗಿಗಳ ಕಡತಗಳ ಮೇಲೆ ಕೇವಲ ‘ಬೀಬಿ’ ಎಂದು ಬರೆದರೆ, ಒಬ್ಬರ ವೈದ್ಯಕೀಯ ವರದಿ ಅಥವಾ ಔಷಧಿ ಇನ್ನೊಬ್ಬರಿಗೆ ಬದಲಾಗುವ ಅಪಾಯ ಅತ್ಯಧಿಕವಾಗಿದೆ.
ಈಗಾಗಲೇ ಪುರುಷರಿಲ್ಲದೆ ಚಿಕಿತ್ಸೆಗೆ ಬರುವ ಮಹಿಳೆಯರನ್ನು ಆಸ್ಪತ್ರೆಗಳಿಂದ ಹೊರಹಾಕಲಾಗುತ್ತಿದೆ. ಜೊತೆಗೆ 2022ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣವನ್ನು ನಿಷೇಧಿಸಿದ್ದ ತಾಲಿಬಾನ್, 2024ರ ಡಿಸೆಂಬರ್‌ನಲ್ಲಿ ನರ್ಸಿಂಗ್ ಮತ್ತು ವೈದ್ಯಕೀಯ ತರಬೇತಿ ಸಂಸ್ಥೆಗಳಿಗೂ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿದೆ. ಇದರಿಂದ ಸುಮಾರು 35,000 ಮಹಿಳಾ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದ್ದು, ದೇಶದಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತರ ಕೊರತೆ ಎದುರಾಗಿದೆ.
2021ರ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಮರಳಿದಾಗಿನಿಂದ ತಾಲಿಬಾನ್ ಒಂದೊಂದೇ ಆದೇಶದ ಮೂಲಕ ಮಹಿಳೆಯರನ್ನು ಸಾರ್ವಜನಿಕ ಬದುಕಿನಿಂದ ದೂರವಿಡುತ್ತಿದೆ. ಮಹಿಳೆಯರ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಅಮಾನ್ಯಗೊಳಿಸುವುದು, ಉದ್ಯಾನವನಗಳಿಗೆ ಪ್ರವೇಶ ನಿಷೇಧ, ರೇಡಿಯೋ ಮತ್ತು ಟಿವಿಗಳಲ್ಲಿ ಮಹಿಳೆಯರ ಧ್ವನಿಗೆ ನಿರ್ಬಂಧ, ಹಾಗೂ 2025ರ ಸೆಪ್ಟೆಂಬರ್‌ನಲ್ಲಿ ವಿಶ್ವವಿದ್ಯಾಲಯಗಳ ಪಠ್ಯಕ್ರಮದಿಂದ ಮಹಿಳೆಯರು ಬರೆದ 679 ಪುಸ್ತಕಗಳನ್ನು ತೆಗೆದುಹಾಕಿದ್ದು ಇದೇ ಸರಣಿಯ ಭಾಗಗಳಾಗಿವೆ.
ಪ್ರತಿಯೊಂದು ನಿರ್ಬಂಧವನ್ನೂ ಧಾರ್ಮಿಕ ಅಥವಾ ಸಾಂಸ್ಕೃತಿಕ ಗೌರವದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವ ತಾಲಿಬಾನ್, ಅಂತಿಮವಾಗಿ ಅಫ್ಘಾನ್ ಮಹಿಳೆಯರಿಗೆ ತಮ್ಮದೇ ಆದ ಒಂದು ಹೆಸರಿನೊಂದಿಗೆ ಬದುಕುವ ಮೂಲಭೂತ ಹಕ್ಕನ್ನೂ ಕಸಿದುಕೊಂಡಿದೆ.



