ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾವಿಸಿರುವ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಎನ್‌ಸಿಪಿ (ಶರದ್‌ಚಂದ್ರ ಪವಾರ್ ಬಣ) ಬೆಂಬಲ ಸೂಚಿಸಿರುವುದು ಮಹಾ ವಿಕಾಸ್ ಅಘಾಡಿ (ಎಂವಿಎ) ಮತ್ತು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ಹೊಸ ಬಿರುಕು ಮೂಡಿಸಿದೆ. ಈ ವರ್ಷದ ಆರಂಭದಲ್ಲಿ ಶರದ್ ಪವಾರ್ ಅವರನ್ನು ರಾಜ್ಯಸಭೆಗೆ ಮರುಆಯ್ಕೆ ಮಾಡಲು ತಾನು ಮಾಡಿದ ಸ್ಥಾನ ತ್ಯಾಗವನ್ನು ನೆನಪಿಸಿರುವ ಮಹಾರಾಷ್ಟ್ರ ಕಾಂಗ್ರೆಸ್, ಮಿತ್ರಪಕ್ಷದ ಈ ನಡೆಯನ್ನು ತೀವ್ರವಾಗಿ ಪ್ರಶ್ನಿಸಿದೆ.
‘ಇಂಡಿಯಾ’ ಮೈತ್ರಿಕೂಟದ ಪಾಲುದಾರ ಪಕ್ಷಗಳು ವಿರೋಧಿಸುತ್ತಿರುವ ಮಸೂದೆಯನ್ನು ಎನ್‌ಸಿಪಿ (ಎಸ್‌ಪಿ) ಈಗ ಏಕೆ ಬೆಂಬಲಿಸುತ್ತಿದೆ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮಹಾರಾಷ್ಟ್ರ ಕಾಂಗ್ರೆಸ್, 2026ರ ಮಾರ್ಚ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ತಾನು ನೀಡಿದ ಬೆಂಬಲವನ್ನು ಶರದ್ ಪವಾರ್ ಹಾಗೂ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರಿಗೆ ನೆನಪಿಸಿದೆ.
ಮಾರ್ಚ್ 2026ರಲ್ಲಿ ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭಾ ಸ್ಥಾನ ಗೆಲ್ಲಲು ಅಭ್ಯರ್ಥಿಯೊಬ್ಬರಿಗೆ 36 ಮತಗಳ ಅಗತ್ಯವಿತ್ತು. ಆ ಸಂದರ್ಭದಲ್ಲಿ ಎನ್‌ಸಿಪಿ (ಎಸ್‌ಪಿ) ಬಳಿ ಕೇವಲ 10 ಶಾಸಕರಿದ್ದರು. ಕಾಂಗ್ರೆಸ್ 16 ಹಾಗೂ ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) 20 ಶಾಸಕರ ಬಲ ಹೊಂದಿದ್ದವು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಂಕಿ–ಅಂಶಗಳ ಸಮೇತ ವಿವರಿಸಿದೆ.
ತಮ್ಮ ತಂದೆಯ ಉಮೇದುವಾರಿಕೆಗೆ ಬೆಂಬಲ ಕೋರಿ ಸುಪ್ರಿಯಾ ಸುಳೆ ಅವರು ಖುದ್ದಾಗಿ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಭೇಟಿಯಾಗಿದ್ದರು ಎಂದು ಪಕ್ಷ ಹೇಳಿದೆ. ಆಗ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಹಿಂಜರಿಕೆಯಿಲ್ಲದೆ ಪವಾರ್ ಅವರಿಗೆ ಬೆಂಬಲ ನೀಡಲು ಒಪ್ಪಿಕೊಂಡರು; ಇದರ ಬೆನ್ನಲ್ಲೇ ಕಾಂಗ್ರೆಸ್ ತನ್ನ ಸ್ಥಾನದ ಮೇಲಿನ ಹಕ್ಕನ್ನು ಬಿಟ್ಟುಕೊಟ್ಟಿತು. ನಂತರ ಶಿವಸೇನಾ (ಯುಬಿಟಿ) ಕೂಡ ಕೈಜೋಡಿಸಿದ್ದರಿಂದ ಮಹಾ ವಿಕಾಸ್ ಅಘಾಡಿ ಒಮ್ಮತದಿಂದ ಪವಾರ್ ಅವರನ್ನು ಬೆಂಬಲಿಸಿತ್ತು. ‘‘ಕಾಂಗ್ರೆಸ್ ತನ್ನದೇ ಸ್ಥಾನದ ಮೇಲಿನ ಹಕ್ಕನ್ನು ಬದಿಗಿಟ್ಟು ಶರದ್ ಪವಾರ್ ಉಮೇದುವಾರಿಕೆಯನ್ನು ಬೆಂಬಲಿಸಿತು. ಆದರೆ ಈಗೇನಾಯಿತು? ಕ್ಷೇತ್ರ ಪುನರ್‌ವಿಂಗಡಣೆ ಕಾಯ್ದೆಯ ಹಿನ್ನೆಲೆಯಲ್ಲಿ ಅದೇ ಶರದ್ ಪವಾರ್, ಸುಪ್ರಿಯಾ ಸುಳೆ ಮತ್ತು ಅವರ ಪಕ್ಷವು ಬಿಜೆಪಿ ಸರ್ಕಾರವನ್ನು ಬೆಂಬಲಿಸಲು ಮುಂದಾಗಿದೆ’’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಕಿಡಿಕಾರಿದೆ.
ಶರದ್ ಪವಾರ್ ಅವರೊಂದಿಗೆ ನಡೆದ ಚರ್ಚೆಯ ಬಳಿಕ ಶುಕ್ರವಾರ ಪ್ರತಿಕ್ರಿಯಿಸಿದ್ದ ಎನ್‌ಸಿಪಿ (ಎಸ್‌ಪಿ) ನಾಯಕ ಜಿತೇಂದ್ರ ಅವ್ಹಾದ್, ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ಘೋಷಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್‌ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಚರ್ಚೆಯು ಪಕ್ಷದ ಔಪಚಾರಿಕ ರಾಜಕೀಯ ನಿಲುವಿಗಿಂತ ಹೆಚ್ಚಾಗಿ ಪ್ರಕ್ರಿಯೆಯ ಸಂವಿಧಾನಾತ್ಮಕ ಸ್ವರೂಪಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದ ಅವ್ಹಾದ್, ‘‘ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯು ಸಂವಿಧಾನಾತ್ಮಕ ಅಗತ್ಯವಾಗಿದೆ ಎಂಬುದು ಒಟ್ಟಾರೆ ಅಭಿಪ್ರಾಯ. ಈ ಪ್ರಕ್ರಿಯೆಯನ್ನು ಬೆಂಬಲಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ನಾವು ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತೇವೆ’’ ಎಂದಿದ್ದರು.
ಇತ್ತೀಚಿನ ದಿನಗಳಲ್ಲಿ ಸುಪ್ರಿಯಾ ಸುಳೆ ಅವರ ನಿಲುವಿನಲ್ಲೂ ಮೃದು ಧೋರಣೆ ಕಂಡುಬಂದಿದ್ದು, ಮಸೂದೆಯನ್ನು ಸಾರಾಸಗಟಾಗಿ ವಿರೋಧಿಸುವ ಬದಲು ಅದನ್ನು ಪರಿಶೀಲಿಸಲು ಪಕ್ಷ ಮುಕ್ತವಾಗಿದೆ ಎಂಬ ಸೂಚನೆ ನೀಡಿದ್ದಾರೆ. ನವೆಂಬರ್ 26ರಂದು ಮಾತನಾಡಿದ್ದ ಅವರು, ಮಸೂದೆಯ ಅಂಶಗಳನ್ನು ಪರಿಶೀಲಿಸದೆ ಅದನ್ನು ತಿರಸ್ಕರಿಸುವುದು ಅವಸರದ ನಿರ್ಧಾರವಾಗುತ್ತದೆ; ಅದರಲ್ಲಿ ದೇಶಕ್ಕೆ ಉಪಯುಕ್ತವಾದ ಅಂಶಗಳೂ ಇರಬಹುದು ಎಂದಿದ್ದರು. ಆಡಳಿತಾರೂಢ ಸರ್ಕಾರ ಮಂಡಿಸಿದೆ ಎಂಬ ಒಂದೇ ಕಾರಣಕ್ಕೆ ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಬಾರದು; ಬದಲಾಗಿ ರಚನಾತ್ಮಕ ಸಲಹೆಗಳನ್ನು ನೀಡಬೇಕು ಮತ್ತು ಮಸೂದೆಯ ಅಂಶಗಳನ್ನು ಕೂಲಂಕಷವಾಗಿ ಪರಾಮರ್ಶಿಸಬೇಕು ಎಂದು ಅವರು ಸಲಹೆ ನೀಡಿದ್ದರು. ಅಲ್ಲದೆ, ಯಾವುದೇ ನಿಲುವು ತಳೆಯುವ ಮುನ್ನ ಎಲ್ಲಾ ರಾಜಕೀಯ ಪಕ್ಷಗಳಿಗೆ ಮಸೂದೆಯ ಸಂಪೂರ್ಣ ವಿವರಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದರು.
ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಪ್ರಸ್ತುತ ಇರುವ 543ರಿಂದ 850ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ. ಈ ಪೈಕಿ 815 ಸ್ಥಾನಗಳನ್ನು ರಾಜ್ಯಗಳಿಗೆ ಹಾಗೂ ಉಳಿದ 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಸ್ತಾವಿಸಲಾಗಿದೆ. ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಮುನ್ನವೇ ಈ ಮಸೂದೆಯು ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದ್ದು, ಇದರ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಅಗತ್ಯ ಸರ್ಕಾರಿ ಕಲಾಪಗಳನ್ನು ನಡೆಸಲು ಲೋಕಸಭೆಯನ್ನು ನವೆಂಬರ್ 30ರಂದು ಹಾಗೂ ರಾಜ್ಯಸಭೆಯನ್ನು ಡಿಸೆಂಬರ್ 2ರಂದು ಪುನಃ ಸಮಾವೇಶಗೊಳಿಸುವಂತೆ ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿಗಳಿಗೆ ಸರ್ಕಾರ ಮನವಿ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಈ ನಡುವೆ ಕ್ಷೇತ್ರ ಪುನರ್‌ವಿಂಗಡಣೆಗೆ ಎನ್‌ಸಿಪಿ (ಎಸ್‌ಪಿ) ಬೆಂಬಲ ಘೋಷಿಸಿರುವುದು ‘ಇಂಡಿಯಾ’ ಮೈತ್ರಿಕೂಟದ ಒಳಗಿನ ಭಿನ್ನಮತವನ್ನು ಮತ್ತಷ್ಟು ಹೆಚ್ಚಿಸಿದ್ದು, ಮಹಾರಾಷ್ಟ್ರ ಕಾಂಗ್ರೆಸ್‌ನ ಬಹಿರಂಗ ಟೀಕೆಯು ಮಿತ್ರಪಕ್ಷಗಳ ನಡುವಿನ ಬಿರುಕನ್ನು ಸ್ಪಷ್ಟವಾಗಿ ಹೊರಹಾಕಿದೆ.



