ಕೊರೆಯುವ ಚಳಿಯಲ್ಲೂ ಮೊಳಗಿದ ಗುಲಾಬಿ ಧ್ವನಿ, ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಗೌರವ ಯಾವಾಗ?

Date:

ಒಂದೆಡೆ ಭೋರ್ಗರೆಯುವ ಮಳೆ, ಮತ್ತೊಂದೆಡೆ ಮೈಕೊರೆಯುವ ಚಳಿ. ಪ್ರಕೃತಿಯ ಈ ಪ್ರತಿಕೂಲ ಪರಿಸ್ಥಿತಿಯನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗುಲಾಬಿ ಸೀರೆಧಾರಿ ಮಹಿಳೆಯರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟವನ್ನು ನೋಡಿದಾಗ ಒಂದು ಕ್ಷಣ ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅಭಿನಯದ ‘ಗುಲಾಬಿ ಗ್ಯಾಂಗ್’ ಸಿನಿಮಾ ನೆನಪಾಗಬಹುದು. ಆದರೆ ಇದು ಯಾವುದೋ ಸಿನಿಮಾ ದೃಶ್ಯವಲ್ಲ; ವ್ಯವಸ್ಥೆಯ ವಿರುದ್ಧ ಹಕ್ಕಿಗಾಗಿ ಹೋರಾಡುತ್ತಿರುವ ನೈಜ ಬದುಕಿನ ಮಹಿಳೆಯರ ಕಥೆ. ಇವರು ನಮ್ಮ ಸಮಾಜದ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರು!

- Advertisement -

‘ಮಳೆ ಬರಲಿ, ಚಳಿ ಇರಲಿ, ನಮ್ಮ ಕಾಯಕಕ್ಕೆ ತಕ್ಕ ವೇತನ ಸಿಗಲೇಬೇಕು’ ಎಂಬುದು ಅವರ ಒಕ್ಕೊರಲಿನ ಆಗ್ರಹ. ಆದರೆ ಈ ತಾಯಂದಿರ ನೋವಿನ ಕೂಗು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಿವಿಗೆ ಬೀಳುತ್ತಿಲ್ಲವೇ? ಅಥವಾ ಕೇಳಿಸಿಕೊಂಡರೂ ಕೇಳದಂತೆ ಕುಳಿತಿವೆಯೇ? ಅಧಿಕಾರದ ಗದ್ದುಗೆ ಮೇಲೆ ಕುಳಿತವರಿಗೆ ಬಡ ಮಹಿಳೆಯರ ಬೆವರು, ಶ್ರಮ ಮತ್ತು ಸಂಕಟ ಅರ್ಥವಾಗುವುದಾದರೂ ಹೇಗೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿರುಕು ಬಿಟ್ಟಿದ್ದ ‘ಕೈ’ ಕೋಟೆಗೆ ಒಗ್ಗಟ್ಟಿನ ಶಕ್ತಿ: ರಾಜಸ್ಥಾನ...

ಗೋವಿಂದ್ ಡೋಟಸರ ಮತ್ತು ಟೀಕಾರಾಮ್ ಜುಲ್ಲಿ ಅವರ ನಡುವಣ ಬಾಂಧವ್ಯ ಕೇವಲ ರಾಜಕೀಯ ಅನಿವಾರ್ಯತೆಯಲ್ಲ; ಅದು ಪರಸ್ಪರ ನಂಬಿಕೆ ಮತ್ತು ಪೂರಕ ಸಾಮರ್ಥ್ಯಗಳ ಸಮ್ಮಿಲನವಾಗಿದೆ. ಡೋಟಸರ ಅವರಲ್ಲಿರುವ ಆಕ್ರಮಣಕಾರಿ ಸಂಘಟನಾ ಶೈಲಿ, ಪ್ರಖರ...

ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ...

ಬಂಡೀಪುರ-ನಾಗರಹೊಳೆ ಅರಣ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತಡ; ಖಾಸಗಿ ಬಂಡವಾಳ, ಪ್ರವಾಸೋದ್ಯಮ ವಿಸ್ತರಣೆ ಮತ್ತು ಆದಿವಾಸಿಗಳ ಹಕ್ಕುಗಳ ನಡುವೆ ಸಂರಕ್ಷಣೆಯ ಮೂಲ ಆಶಯಕ್ಕೆ ಸವಾಲು. ಮನುಷ್ಯ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರವಿಲ್ಲ; ಅರಣ್ಯಗಳ ಮೇಲಿನ ನಿಯಂತ್ರಣ...

ಶಿವಮೊಗ್ಗ | ನೀರಿಲ್ಲದೆ ಒಣಗುತ್ತಿವೆ ಅಡಿಕೆ ತೋಟಗಳು: ರೈತರ...

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ನಾಲೆಗಳ ನೀರು ಕೇವಲ ಕೃಷಿಗೆ ಪೂರಕವಾದ ವ್ಯವಸ್ಥೆಯಲ್ಲ. ಅದು ಅವರ ವಾರ್ಷಿಕ ಆದಾಯ, ಕುಟುಂಬದ ನಿರ್ವಹಣೆ, ಕೃಷಿ ಸಾಲದ ಮರುಪಾವತಿ ಹಾಗೂ ಮುಂದಿನ ಬದುಕಿನ ಭರವಸೆಯಾಗಿದೆ....

ನಮ್ಮ ಹೈದರಾಬಾದ್ ಕರ್ನಾಟಕದಂತಹ ಬಿಸಿಲ ನಾಡಿನಲ್ಲಿಯೇ ಈಗ ಚಳಿಯ ತೀವ್ರತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ವಾತಾವರಣ ಹೇಗಿರಬಹುದು ಎಂಬುದನ್ನು ಊಹಿಸಬಹುದು. ಮೈಕೊರೆಯುವ ಚಳಿಯಲ್ಲಿಯೂ ತಮ್ಮ ಮಡಿಲಲ್ಲಿ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು, ಕುಟುಂಬದ ಜವಾಬ್ದಾರಿಗಳನ್ನು ಬದಿಗಿಟ್ಟು, ಫ್ರೀಡಂ ಪಾರ್ಕ್‌ನಲ್ಲಿ ನೆಲದ ಮೇಲೆ ಕುಳಿತು ಹೋರಾಟ ನಡೆಸುತ್ತಿರುವ ಈ ಮಹಿಳೆಯರ ಸಂಕಟವನ್ನು ಒಮ್ಮೆ ಯೋಚಿಸಿ.

ಅವರಿಗೂ ಕುಟುಂಬವಿದೆ, ಮಕ್ಕಳಿದ್ದಾರೆ, ಆರೋಗ್ಯದ ಸಮಸ್ಯೆಗಳಿವೆ. ಆದರೂ ತಮ್ಮ ಹಕ್ಕಿಗಾಗಿ ಬೀದಿಗಿಳಿದಿದ್ದಾರೆ. ಆದರೆ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸರ್ಕಾರಗಳು ಮಾತ್ರ ಅವರ ಬದುಕಿನ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿಲ್ಲ. ಲಕ್ಷಾಂತರ ರೂಪಾಯಿ ವೇತನ ಪಡೆಯುವ ರಾಜಕಾರಣಿಗಳು ಬೆಚ್ಚನೆಯ ಮನೆಗಳಲ್ಲಿ ಆರಾಮವಾಗಿ ನಿದ್ರಿಸುವಾಗ, ದುಡಿಮೆಗೆ ನ್ಯಾಯಯುತ ವೇತನ ಕೇಳುತ್ತಿರುವ ಈ ಮಹಿಳೆಯರ ನೋವು ಯಾರಿಗೆ ಅರ್ಥವಾಗಬೇಕು?

ʼಆಶಾʼ ಎಂದರೆ Accredited Social Health Activist. ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಆರೋಗ್ಯ ಕಾರ್ಯಕರ್ತೆಯರೇ ಆಶಾ ಕಾರ್ಯಕರ್ತೆಯರು. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪ್ರತಿ 1,000 ಜನಸಂಖ್ಯೆಗೆ ಒಬ್ಬರಂತೆ ಹಾಗೂ ನಗರ ಪ್ರದೇಶಗಳು, ಕೊಳಚೆ ಪ್ರದೇಶಗಳು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಾರೆ.

ಕರ್ನಾಟಕದಲ್ಲಿ ಒಟ್ಟು 42,542 ಆಶಾ ಕಾರ್ಯಕರ್ತೆಯರಿದ್ದು, 41,785 ಹುದ್ದೆಗಳಿಗೆ ಮಂಜೂರಾತಿ ದೊರೆತಿದೆ. ಇನ್ನೂ 757 ಹುದ್ದೆಗಳ ಮಂಜೂರಾತಿ ಬಾಕಿ ಇದೆ ಎಂಬುದು ಲಭ್ಯ ಮಾಹಿತಿಯಾಗಿದೆ. ಇವರ ಕೆಲಸ ಕೇವಲ ಆರೋಗ್ಯ ಇಲಾಖೆಯ ಸೂಚನೆಗಳನ್ನು ಜನರಿಗೆ ತಲುಪಿಸುವುದಲ್ಲ. ಗರ್ಭಿಣಿಯರ ಆರೈಕೆಯಿಂದ ಹಿಡಿದು ನವಜಾತ ಶಿಶುಗಳ ಆರೋಗ್ಯ, ಲಸಿಕೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಆರೋಗ್ಯ ಜಾಗೃತಿ ಹಾಗೂ ಜನನ-ಮರಣ ದಾಖಲೆಗಳ ನಿರ್ವಹಣೆಯವರೆಗೆ ಇವರ ಜವಾಬ್ದಾರಿಗಳ ವ್ಯಾಪ್ತಿ ವಿಸ್ತಾರವಾಗಿದೆ.

ಇಷ್ಟೆಲ್ಲ ಕೆಲಸ ಮಾಡುವ ಇವರಿಗೆ ಪ್ರತಿಯಾಗಿ ಸಿಗುತ್ತಿರುವ ಗೌರವಧನ ಎಷ್ಟು? ಅವರ ಹೋರಾಟದ ಪ್ರಮುಖ ಬೇಡಿಕೆಗಳಲ್ಲಿ ತಿಂಗಳಿಗೆ ₹15,000 ಗೌರವಧನ ನೀಡಬೇಕೆಂಬ ಆಗ್ರಹವೂ ಒಂದಾಗಿದೆ. ಒಂದು ಗ್ರಾಮದ ಅಥವಾ ಪ್ರದೇಶದ ವ್ಯಾಪ್ತಿಯಲ್ಲಿ ಎಷ್ಟು ಗರ್ಭಿಣಿಯರಿದ್ದಾರೆ, ಎಷ್ಟು ಬಾಣಂತಿಯರಿದ್ದಾರೆ, ಎಷ್ಟು ಮಕ್ಕಳು ಜನಿಸಿದ್ದಾರೆ, ಎಷ್ಟು ಶಿಶುಗಳು ಮರಣ ಹೊಂದಿವೆ ಎಂಬ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರು ನಿರಂತರವಾಗಿ ಸಂಗ್ರಹಿಸುತ್ತಾರೆ.

ಗರ್ಭಾವಸ್ಥೆಯಲ್ಲಿ ತಾಯಿ ಯಾವ ರೀತಿಯ ಆರೈಕೆ ಮಾಡಿಕೊಳ್ಳಬೇಕು, ಸುರಕ್ಷಿತ ಹೆರಿಗೆಗೆ ಯಾವ ಸಿದ್ಧತೆ ಮಾಡಿಕೊಳ್ಳಬೇಕು, ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ಮಗುವಿಗೆ ಎದೆಹಾಲು ಉಣಿಸುವ ಮಹತ್ವವೇನು ಎಂಬುದನ್ನು ತಿಳಿಸುತ್ತಾರೆ. ತಾಯಿ ಮತ್ತು ಶಿಶುವಿನ ಆರೋಗ್ಯದ ಬಗ್ಗೆ ಕುಟುಂಬಗಳಲ್ಲಿ ಜಾಗೃತಿ ಮೂಡಿಸುತ್ತಾರೆ.

ಮಕ್ಕಳಿಗೆ ನಿಗದಿತ ಸಮಯದಲ್ಲಿ ಲಸಿಕೆ ಹಾಕಿಸುವಂತೆ ಪೋಷಕರಿಗೆ ಮಾಹಿತಿ ನೀಡುವುದು, ಲಸಿಕೆ ತಪ್ಪಿಸಿಕೊಂಡ ಮಕ್ಕಳನ್ನು ಗುರುತಿಸಿ ಆರೋಗ್ಯ ಕೇಂದ್ರಗಳಿಗೆ ಕರೆತರುವುದು ಆಶಾ ಕಾರ್ಯಕರ್ತೆಯರ ಪ್ರಮುಖ ಜವಾಬ್ದಾರಿ. ನವಜಾತ ಶಿಶುವಿನಿಂದ ಹಿಡಿದು 16 ವರ್ಷದ ಮಕ್ಕಳವರೆಗೆ ವಿವಿಧ ಹಂತಗಳಲ್ಲಿ ನೀಡಲಾಗುವ BCG, OPV, ಹೆಪಟೈಟಿಸ್-B, ಪೆಂಟಾವೇಲೆಂಟ್, ರೋಟಾವೈರಸ್, PCV, MR, JE, DPT ಮತ್ತು Td ಸೇರಿದಂತೆ ವಿವಿಧ ಲಸಿಕೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡುತ್ತಾರೆ.

ಮಕ್ಕಳನ್ನು ಕ್ಷಯ, ಪೋಲಿಯೋ, ದಡಾರ, ರುಬೆಲ್ಲಾ, ನ್ಯುಮೋನಿಯಾ, ಧನುರ್ವಾಯು, ನಾಯಿಕೆಮ್ಮು ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವ ಲಸಿಕಾ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಸಾಂಕ್ರಾಮಿಕ ರೋಗಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಪೌಷ್ಟಿಕ ಆಹಾರ ಮತ್ತು ವೈಯಕ್ತಿಕ ನೈರ್ಮಲ್ಯದ ಮಹತ್ವ ತಿಳಿಸುವುದು, ಕಿಶೋರಿಯರ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಅತಿಸಾರದಿಂದ ಬಳಲುವ ಮಕ್ಕಳಿಗೆ ಜೀವಜಲ ಮತ್ತು ಸತು ವಿತರಣೆ, ರೋಗಲಕ್ಷಣಗಳನ್ನು ಗುರುತಿಸಿ ಅಗತ್ಯವಿದ್ದಾಗ ಆಸ್ಪತ್ರೆಗೆ ದಾಖಲಿಸಲು ನೆರವಾಗುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾರೆ.

ಇದರ ಜತೆಗೆ ಜನಸಂಖ್ಯಾ ಸಮೀಕ್ಷೆ, ಜನನ ಮತ್ತು ಮರಣ ನೋಂದಣಿ, ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯದ ಮೇಲ್ವಿಚಾರಣೆ, ರೋಗಿಗಳ ಮಾಹಿತಿ ಸಂಗ್ರಹಣೆ ಮತ್ತು ವರದಿ ಸಲ್ಲಿಕೆಗಳನ್ನೂ ನಿರ್ವಹಿಸುತ್ತಾರೆ. ಗ್ರಾಮಗಳಲ್ಲಿ ಶೌಚಾಲಯ ಬಳಕೆಗೆ ಪ್ರೇರಣೆ, ಶುದ್ಧ ಕುಡಿಯುವ ನೀರಿನ ಕುರಿತು ಜಾಗೃತಿ, ಸೊಳ್ಳೆ ನಿಯಂತ್ರಣ, ಪರಿಸರ ಸ್ವಚ್ಛತೆ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಾರೆ.

ಗ್ರಾಮ ಆರೋಗ್ಯ ಮತ್ತು ಪೌಷ್ಟಿಕಾಂಶ ದಿನಾಚರಣೆ, ವಿಶೇಷ ಆರೋಗ್ಯ ಶಿಬಿರಗಳು, ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳಿಗೆ ಜನರನ್ನು ಒಗ್ಗೂಡಿಸುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಸ್ವಸಹಾಯ ಸಂಘಗಳ ನಡುವೆ ಸಮನ್ವಯ ಸಾಧಿಸುತ್ತಾರೆ.

ಹೀಗೆ ಸಮಾಜದ ಆರೋಗ್ಯ ವ್ಯವಸ್ಥೆಯ ತಳಮಟ್ಟದಲ್ಲಿ ನಿಂತು ನಿರಂತರವಾಗಿ ದುಡಿಯುವ ಆಶಾ ಕಾರ್ಯಕರ್ತೆಯರ ಸೇವೆಯನ್ನು ಹಣದ ಲೆಕ್ಕಾಚಾರದಲ್ಲಿ ಅಳೆಯಲು ಸಾಧ್ಯವೇ?

ಇಷ್ಟೆಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಸಿಗುತ್ತಿರುವ ಗೌರವಧನ ಅವರ ಶ್ರಮಕ್ಕೆ ಹೋಲಿಸಿದರೆ ತೀರಾ ಕಡಿಮೆ ಎಂಬುದು ಅವರ ಪ್ರಮುಖ ಅಳಲು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಪ್ರೋತ್ಸಾಹಧನ ಹಾಗೂ ಗೌರವಧನದ ಮೊತ್ತ, ಪಾವತಿ ವಿಧಾನ ಮತ್ತು ಕೆಲಸದ ಆಧಾರದ ಮೇಲಿನ ವ್ಯತ್ಯಾಸಗಳ ಬಗ್ಗೆ ಸ್ಪಷ್ಟತೆ ಇರಬೇಕಾದರೂ, ಅವರ ಮೂಲ ಬೇಡಿಕೆ ಮಾತ್ರ ಒಂದೇ: ದುಡಿಮೆಗೆ ತಕ್ಕ ಗೌರವಯುತ ವೇತನ ನೀಡಿ!

ಒಂದು ದಿನದ ದುಡಿಮೆಗೆ ಅಲ್ಪ ಮೊತ್ತ ಸಿಗುವ ಪರಿಸ್ಥಿತಿಯಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದಾದರೂ ಹೇಗೆ? ಸರ್ಕಾರಗಳು ಆರೋಗ್ಯ ಸೇವೆಗಳಲ್ಲಿ ಆಶಾ ಕಾರ್ಯಕರ್ತೆಯರ ಕೊಡುಗೆಯನ್ನು ಹೊಗಳುತ್ತವೆ. ಆದರೆ ಅವರ ಜೀವನಮಟ್ಟ ಸುಧಾರಿಸಲು ಬಂದಾಗ ಮಾತ್ರ ಮೌನವಾಗುತ್ತವೆ.

ಆಶಾ ಕಾರ್ಯಕರ್ತೆಯರ ಹೋರಾಟದ ಸಂದರ್ಭದಲ್ಲಿ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ ಅವರು ನೀಡಿದ್ದರೆನ್ನಲಾದ ಹೇಳಿಕೆ ಇನ್ನೂ ಚರ್ಚೆಗೆ ಗ್ರಾಸವಾಗಿದೆ.

“ಅವರು ಹತ್ತು-ಹದಿನೈದು ದಿನ ಕೆಲಸ ಮಾಡಿಲ್ಲ ಅಂದರೂ ಅಲ್ಲಿ ಏನೂ ಆಗಿಲ್ಲ. ಹೆರಿಗೆ ಆಗುತ್ತಿದೆ, ಎಲ್ಲವೂ ಆಗುತ್ತಿದೆ. ಇವರು ಇಲ್ಲದಿದ್ದರೂ ನಡೆಯುತ್ತದೆ ಎಂದು ಇವತ್ತೇ ತೋರಿಸಿಕೊಟ್ಟಿದ್ದಾರೆ” ಎಂಬರ್ಥದ ಹೇಳಿಕೆ ನೀಡುವ ಮೂಲಕ ಆಶಾ ಕಾರ್ಯಕರ್ತೆಯರ ಸೇವೆಯ ಮಹತ್ವವನ್ನೇ ಕಡಿಮೆ ಮಾಡಿದಂತಾಗಿದೆ.

ಆದರೆ ಒಂದು ಪ್ರಶ್ನೆ: ಕೆಲ ದಿನಗಳ ಕಾಲ ಸೇವೆ ಸ್ಥಗಿತಗೊಂಡಾಗ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಲಿಲ್ಲ ಎಂದ ಮಾತ್ರಕ್ಕೆ ಅವರ ಸೇವೆ ಅನಗತ್ಯವಾಗುತ್ತದೆಯೇ? ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಕಾರಣಕ್ಕೆ ಮನೆಮನೆಗೆ ತೆರಳಿ ಗರ್ಭಿಣಿಯರ ಆರೋಗ್ಯ ವಿಚಾರಿಸುವ, ಮಕ್ಕಳ ಲಸಿಕೆ ಖಚಿತಪಡಿಸುವ, ರೋಗಿಗಳನ್ನ ಆಸ್ಪತ್ರೆಗೆ ತಲುಪಿಸುವ ಕಾರ್ಯಕರ್ತೆಯರ ಪಾತ್ರವನ್ನು ನಿರ್ಲಕ್ಷಿಸುವುದು ಎಷ್ಟು ಸರಿ?

ಒಂದು ವ್ಯವಸ್ಥೆ ಕೆಲಕಾಲ ಪರ್ಯಾಯ ವ್ಯವಸ್ಥೆಯ ನೆರವಿನಿಂದ ನಡೆಯಬಹುದು. ಆದರೆ ಅದರಿಂದ ಆ ವ್ಯವಸ್ಥೆಯ ತಳಹದಿಯಾಗಿರುವವರ ಶ್ರಮದ ಮಹತ್ವ ಕಡಿಮೆಯಾಗುವುದಿಲ್ಲ. ಆಶಾ ಕಾರ್ಯಕರ್ತೆಯರ ಸೇವೆಯನ್ನು ಹಗುರವಾಗಿ ಪರಿಗಣಿಸುವವರು ಅವರಿಲ್ಲದ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಒಮ್ಮೆ ಕಲ್ಪಿಸಿಕೊಳ್ಳಬೇಕು.

ರಾಜ್ಯ ಸರ್ಕಾರದ ಮಟ್ಟದಲ್ಲಿಯೂ ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಹಲವು ಭರವಸೆಗಳು ಕೇಳಿಬಂದಿವೆ. 2025ರ ಫೆಬ್ರವರಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಧನ ಹೆಚ್ಚಳದ ಕುರಿತು ಭರವಸೆ ನೀಡಿದ್ದರು. ತಿಂಗಳಿಗೆ ₹5,000 ಹೆಚ್ಚಿಸಿ ಒಟ್ಟು ₹10,000 ನೀಡುವ ಆಶ್ವಾಸನೆ ನೀಡಲಾಗಿತ್ತು ಎಂಬುದು ಕಾರ್ಯಕರ್ತೆಯರ ಪ್ರಮುಖ ನೆನಪು.

ಭರವಸೆ ನೀಡಿದಂತೆ ಬೇಡಿಕೆ ಈಡೇರಿದೆಯೇ? ಇಲ್ಲವೇ ಮತ್ತೆ ಹೋರಾಟದ ಹಾದಿಯೇ ಅವರಿಗೆ ಅನಿವಾರ್ಯವಾಗಿದೆಯೇ? ಈ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಿದೆ. ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ, ಯಾವ ಸರ್ಕಾರವೂ ಆರ್ಥಿಕವಾಗಿ ಅಷ್ಟು ಶಕ್ತವಾಗಿಲ್ಲ ಎಂಬರ್ಥದ ಹೇಳಿಕೆಗಳು ಕೇಳಿಬರುತ್ತಿವೆ. ಅಧಿವೇಶನದ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂಬ ಭರವಸೆಗಳೂ ವ್ಯಕ್ತವಾಗಿವೆ.

ಆಶಾ ಕಾರ್ಯಕರ್ತೆಯರ ಬದುಕು ಅಧಿವೇಶನದ ನಿರ್ಧಾರಕ್ಕಾಗಿ ಕಾಯುತ್ತಲೇ ಇರಬೇಕೇ? ಸರ್ಕಾರದ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಅವಕಾಶ ಕಲ್ಪಿಸುವಾಗ, ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಈ ಮಹಿಳೆಯರ ಗೌರವಧನ ಹೆಚ್ಚಿಸಲು ಮಾತ್ರ ಆರ್ಥಿಕ ಸಂಕಷ್ಟ ಎದುರಾಗುವುದೇಕೆ?

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಗೆ ಅರ್ಥವೆಲ್ಲಿ?

ಕೇಂದ್ರ ಸರ್ಕಾರದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆ ದೇಶದ ಪ್ರತಿಯೊಬ್ಬರ ಅಭಿವೃದ್ಧಿಯ ಆಶಯವನ್ನು ಪ್ರತಿಪಾದಿಸುತ್ತದೆ. ಹಾಗಾದರೆ ದೇಶದ ಆರೋಗ್ಯ ವ್ಯವಸ್ಥೆಯ ತಳಮಟ್ಟದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಅಭಿವೃದ್ಧಿ ಈ ಘೋಷಣೆಯ ವ್ಯಾಪ್ತಿಗೆ ಬರುವುದಿಲ್ಲವೇ?

ವಿವಿಧ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುವ ಗೌರವಧನ ಮತ್ತು ಪ್ರೋತ್ಸಾಹಧನದಲ್ಲಿ ವ್ಯತ್ಯಾಸಗಳಿವೆ. ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ರಾಜ್ಯ ಪ್ರೋತ್ಸಾಹಧನ ನೀಡಲಾಗುತ್ತಿದ್ದರೆ, ಇನ್ನೂ ಕೆಲವು ಕಡೆ ಅದು ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ದೇಶದಾದ್ಯಂತ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಗೌರವಯುತ ವೇತನ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಗುಜರಾತ್ ಮಾದರಿಯ ಅಭಿವೃದ್ಧಿಯ ಬಗ್ಗೆ ಮಾತನಾಡುವವರು ಅಲ್ಲಿನ ಆಶಾ ಕಾರ್ಯಕರ್ತೆಯರ ಬದುಕಿನ ಗುಣಮಟ್ಟವನ್ನೂ ದೇಶದ ಮುಂದೆ ಮಾದರಿಯಾಗಿ ಇರಿಸಬೇಕು. ಅಭಿವೃದ್ಧಿ ಎಂದರೆ ರಸ್ತೆಗಳು, ಕಟ್ಟಡಗಳು, ಕೈಗಾರಿಕೆಗಳು ಮಾತ್ರವಲ್ಲ; ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನ ಸುಧಾರಣೆಯೂ ಅಭಿವೃದ್ಧಿಯೇ ಎಂಬುದನ್ನು ಮರೆಯಬಾರದು.

ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಐಷಾರಾಮಿ ಜೀವನವಲ್ಲ. ತಮ್ಮ ದುಡಿಮೆಗೆ ತಕ್ಕ ಪ್ರತಿಫಲ, ಕುಟುಂಬವನ್ನು ಗೌರವದಿಂದ ನಿರ್ವಹಿಸಲು ಸಾಧ್ಯವಾಗುವಷ್ಟು ಆದಾಯ, ಆರೋಗ್ಯ ಭದ್ರತೆ ಮತ್ತು ಸಾಮಾಜಿಕ ಗೌರವ. ಅಷ್ಟೇ. ಒಂದು ಕಡೆ ಸರ್ಕಾರಗಳು ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಮಾಡುತ್ತವೆ. ಮತ್ತೊಂದೆಡೆ ಮಹಿಳೆಯರೇ ಮುನ್ನಡೆಸುತ್ತಿರುವ ಆರೋಗ್ಯ ಸೇವೆಯ ಕಾರ್ಯಕರ್ತೆಯರು ತಮ್ಮ ಬದುಕಿಗಾಗಿ ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಮ್ಮ ಆಡಳಿತ ವ್ಯವಸ್ಥೆಯ ವೈರುಧ್ಯವಲ್ಲವೇ?

ಮಳೆ, ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ಮನೆಮನೆಗೆ ತೆರಳಿ ಜನರ ಆರೋಗ್ಯ ಕಾಪಾಡುವ ಈ ತಾಯಂದಿರಿಗೆ ನ್ಯಾಯಯುತ ಗೌರವಧನ ನೀಡುವುದು ಸರ್ಕಾರಗಳ ಕರ್ತವ್ಯ. ಅವರ ಹೋರಾಟವನ್ನು ರಾಜಕೀಯ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ಮಾನವೀಯ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ಫ್ರೀಡಂ ಪಾರ್ಕ್‌ನಲ್ಲಿ ಮೊಳಗುತ್ತಿರುವ ಈ ಗುಲಾಬಿ ಧ್ವನಿ ಕೇವಲ ಆಶಾ ಕಾರ್ಯಕರ್ತೆಯರ ಧ್ವನಿಯಲ್ಲ; ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಭವಿಷ್ಯದ ಧ್ವನಿಯೂ ಹೌದು. ಈ ಧ್ವನಿಯನ್ನು ನಿರ್ಲಕ್ಷಿಸಿದರೆ ನಾಳೆ ಆರೋಗ್ಯ ವ್ಯವಸ್ಥೆಯೇ ದುರ್ಬಲವಾಗುವ ಅಪಾಯವಿದೆ.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ

ʼಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ವ್ಯವಸ್ಥೆ ನಡೆಯುತ್ತದೆʼ ಎಂದು ಹೇಳುವುದು ಸುಲಭ. ಆದರೆ ಅವರ ಶ್ರಮವಿಲ್ಲದೆ ಆರೋಗ್ಯ ಜಾಗೃತಿಯ ಬೆಳಕು ಪ್ರತಿಯೊಂದು ಮನೆಗೂ ತಲುಪುತ್ತದೆಯೇ? ಸರ್ಕಾರಗಳು ಉತ್ತರಿಸಬೇಕು. ಭರವಸೆಗಳ ಬದಲಿಗೆ ನ್ಯಾಯ ನೀಡಬೇಕು. ಆಶಾ ಕಾರ್ಯಕರ್ತೆಯರ ದುಡಿಮೆಗೆ ತಕ್ಕ ಗೌರವಧನ, ಸಾಮಾಜಿಕ ಭದ್ರತೆ ಮತ್ತು ಗೌರವಯುತ ಬದುಕನ್ನು ಖಚಿತಪಡಿಸಬೇಕು.

–ಬರೆಹ: ಪ್ರಿಯಾಂಕ ಮಾವಿನಕರ್‌, ಯುವ ಬರಹಗಾರರು, ಕಲಬುರಗಿ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ‘ಕನಕದಾಸರು ಸಮನತೆಯ ಹರಿಕಾರರು’ : ತಾರಾನಾಥ ಗಟ್ಟಿ

"ದಾರ್ಶನಿಕರ ಕಥೆಗಳು, ವಾಣಿಗಳು ಜನರಿಗೆ ಒಳ್ಳೆಯ ಜೀವನಕ್ಕೆ ಸ್ಫೂರ್ತಿ ಹಾಗೂ ಇನ್ನು...

ಮೈಶುಗರ್ ಬೆಳೆವಣಿಗೆ ಸಹಿಸಲಾಗುತ್ತಿಲ್ಲ : ನಿರಾಣಿ ವಿರುದ್ಧ ಸಿ.ಡಿ.ಗಂಗಾಧರ್ ವಾಗ್ದಾಳಿ

ಮೈಸೂರು ಸಕ್ಕರೆ ಕಾರ್ಖಾನೆಯ ಯಶಸ್ಸು ಕೆಲವರಿಗೆ ಆತಂಕ ಉಂಟುಮಾಡಿದ್ದು, ಕಾರ್ಖಾನೆಯ ಬಗ್ಗೆ...

ಅಸ್ಸಾಂನಲ್ಲಿ ಮುಸ್ಲಿಂ ಕುಟುಂಬಗಳ ಒಕ್ಕಲೆಬ್ಬಿಸುವಿಕೆ: ರಾಷ್ಟ್ರೀಯ ನಾಯಕರ ಮೌನ ಪ್ರಶ್ನಿಸಿದ ರೋಷನ್ ಬೇಗ್

ಅಸ್ಸಾಂನಲ್ಲಿ ಮುಸ್ಲಿಂ ಕುಟುಂಬಗಳ ಮನೆಗಳನ್ನು ಧ್ವಂಸಗೊಳಿಸಿ, ಅವರನ್ನು ವಾಸಸ್ಥಳಗಳಿಂದ ಒಕ್ಕಲೆಬ್ಬಿಸುತ್ತಿರುವ ಘಟನೆಗಳ...

ಕಾಶ್ಮೀರ ಧರ್ಮಗುರು ಮಿರ್ವೈಜ್ ಫಾರೂಕ್‌ಗೆ ಮತ್ತೆ ಗೃಹಬಂಧನ; ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ನಿರ್ಬಂಧ

ಕಾಶ್ಮೀರದ ಪ್ರಮುಖ ಧರ್ಮಗುರು ಮಿರ್ವೈಜ್-ಎ-ಕಾಶ್ಮೀರ್ ಡಾ. ಮೌಲ್ವಿ ಮೊಹಮ್ಮದ್ ಉಮರ್ ಫಾರೂಕ್...