ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ‘ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ (PIMS) ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಅತ್ಯಂತ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಆಸ್ಪತ್ರೆಯ ತಾಯಿ ಮತ್ತು ಮಗು ವಿಭಾಗದ ನವಜಾತ ಶಿಶುಗಳ ನಿಗಾ ಘಟಕದಲ್ಲಿ (ನರ್ಸರಿ) ಇದ್ದಕ್ಕಿದ್ದಂತೆ ಭೀಕರ ಬೆಂಕಿ ಕಾಣಿಸಿಕೊಂಡು, ಕನಿಷ್ಠ 14 ನವಜಾತ ಶಿಶುಗಳು ಪ್ರಾಣ ಕಳೆದುಕೊಂಡಿವೆ.
ಬುಧವಾರ ಬೆಳಿಗ್ಗೆ ಸುಮಾರು 7 ಗಂಟೆಯ ವೇಳೆಗೆ ನರ್ಸರಿಯಲ್ಲಿದ್ದ ಏರ್ ಕಂಡೀಷನರ್ (AC) ಕಂಪ್ರೆಸರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿಂದ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಪಡೆಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿವೆ.
ಇಸ್ಲಾಮಾಬಾದ್ ಮುಖ್ಯ ಕಮಿಷನರ್ ಸೊಹೈಲ್ ಅಶ್ರಫ್ ಮಾಹಿತಿ ನೀಡಿದ್ದು, “ತುರ್ತು ಕರೆ ಬಂದ ತಕ್ಷಣವೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. ಆರು ಅಗ್ನಿಶಾಮಕ ವಾಹನಗಳು ಮತ್ತು ನಾಲ್ಕು ಆ್ಯಂಬುಲೆನ್ಸ್‌ಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದವು. ಬೆಂಕಿ ಆವರಿಸುತ್ತಿದ್ದಂತೆ ಶಿಶುಗಳನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಲು ಪ್ರಯತ್ನಿಸಲಾಯಿತಾದರೂ, ಅದಾಗಲೇ 14 ನವಜಾತ ಶಿಶುಗಳು ದುರಂತವಾಗಿ ಕೊನೆಯುಸಿರೆಳೆದಿದ್ದವು” ಎಂದು ತಿಳಿಸಿದ್ದಾರೆ.
ಈ ಭೀಕರ ಅವಘಡದ ಬೆನ್ನಲ್ಲೇ ಇಸ್ಲಾಮಾಬಾದ್ ಆಡಳಿತವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಹೆಚ್ಚುವರಿ ಡೆಪ್ಯೂಟಿ ಕಮಿಷನರ್ ಜನರಲ್ ಅವರ ನೇತೃತ್ವದಲ್ಲಿ ವಿಚಾರಣಾ ಸಮಿತಿಯೊಂದನ್ನು ರಚಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು, ಆಸ್ಪತ್ರೆಯಲ್ಲಿ ಅಗತ್ಯ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು ಜಾರಿಯಲ್ಲಿದ್ದವೇ ಹಾಗೂ ರಕ್ಷಣಾ ಕಾರ್ಯಾಚರಣೆ ಸಮಯಕ್ಕೆ ಸರಿಯಾಗಿ ನಡೆದಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಮುಂದಿನ 24 ಗಂಟೆಗಳ ಒಳಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.



