ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 27 ಜನ ಸಜೀವ ದಹನವಾಗಿದ್ದಾರೆ. 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬ್ಯಾಂಕಾಕ್‌ನ ಉತ್ತರ ಭಾಗದಲ್ಲಿರುವ ‘ನಾ ಲಾಡ್‌ಪ್ರಾವೋ’ ಪಬ್‌ನಲ್ಲಿ ಈ ದುರಂತ ನಡೆದಿದೆ. ಪಬ್‌ನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. ಮುಂಭಾಗದಿಂದ ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಹೊರಬರುತ್ತಿದ್ದಂತೆ, ಒಳಗಿದ್ದ ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.
ಘಟನಾ ಸ್ಥಳಕ್ಕೆ ಥಾಯ್ಲೆಂಡ್ ಪ್ರಧಾನಿ ಅನುತಿನ್ ಚಾರ್ನ್ವಿರಾಕುಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ಬೆಂಕಿಯಿಂದ ತಪ್ಪಿಸಿಕೊಳ್ಳಲು ಪಬ್‌ನ ಹಿಂಭಾಗಕ್ಕೆ ಓಡಿದ್ದ ಹಲವರ ಮೃತದೇಹಗಳು ಶೌಚಾಲಯಗಳ ಬಳಿ ಪತ್ತೆಯಾಗಿವೆ. ದುರಂತಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಪಬ್‌ನಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರರೊಬ್ಬರು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. “ವೇದಿಕೆಯ ಸಮೀಪವಿದ್ದ ವಿದ್ಯುತ್ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಹೊಗೆ ಕಾಣಿಸಿಕೊಂಡಿತು. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡು ದೊಡ್ಡ ಸ್ಫೋಟದ ಸದ್ದು ಕೇಳಿಸಿತು. ಇಡೀ ಆವರಣ ಹೊಗೆಯಿಂದ ತುಂಬಿಕೊಂಡಿದ್ದರಿಂದ ಜನರಿಗೆ ಹೊರಗೆ ಬರಲು ದಾರಿ ಕಾಣಿಸಲಿಲ್ಲ” ಎಂದು ಹೇಳಿದ್ದಾರೆ.
ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿಟ್ಟಿಪುಂಟ್ ಮಾಹಿತಿ ನೀಡಿದ್ದು, “ಗಾಯಗೊಂಡ 63 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ 22 ಮಂದಿಯ ಸ್ಥಿತಿ ಅತ್ಯಂತ ಗಂಭೀರವಾಗಿದರ. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಹಲವರ ಬಳಿ ಗುರುತಿನ ಚೀಟಿ ಇಲ್ಲದ ಕಾರಣ ಮತ್ತು ಕೆಲವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದರಿಂದ ಮೃತರ ಗುರುತು ಪತ್ತೆ ಹಚ್ಚುವುದು ಸವಾಲಾಗಿದೆ” ಎಂದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸುಮಾರು ಅರ್ಧ ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಪಬ್‌ನ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ನಾಪತ್ತೆಯಾದವರು ಮತ್ತು ಮೃತರ ಮಾಹಿತಿ ಪಡೆಯಲು ಸ್ಥಳದಲ್ಲೇ ವಿಶೇಷ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ.
ಥಾಯ್ಲೆಂಡ್‌ನಲ್ಲಿ ಇಂತಹ ಕ್ಲಬ್ ಮತ್ತು ಪಬ್ ದುರಂತಗಳು ಇದೇ ಮೊದಲೇನಲ್ಲ. 2022ರಲ್ಲಿ ಪೂರ್ವ ಥಾಯ್ಲೆಂಡ್‌ನ ಸಂಗೀತ ಪಬ್ ಒಂದರಲ್ಲಿ ನಡೆದ ಅಗ್ನಿ ಅವಘಡಕ್ಕೆ 14 ಜನ ಬಲಿಯಾಗಿದ್ದರು. ಅದಕ್ಕೂ ಮುನ್ನ, 2009ರ ಜನವರಿ 1ರಂದು ಬ್ಯಾಂಕಾಕ್‌ನ ಸಾಂಟಿಕಾ ನೈಟ್‌ಕ್ಲಬ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ನಡೆದ ಪಟಾಕಿ ದುರಂತದಲ್ಲಿ 66 ಜನರು ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಕರಾಳ ಇತಿಹಾಸ ಈಗ ಮತ್ತೊಮ್ಮೆ ಬ್ಯಾಂಕಾಕ್‌ನಲ್ಲಿ ಮರುಕಳಿಸಿದೆ.



