ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಕಷ್ಟದ ಕಾರಣವಾಗಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ಜಿಲ್ಲಾ ಘಟಕವು ಸಂಸದ ರಮೇಶ ಜಿಗಜಿಣಗಿಗೆ ಸೋಮವಾರ ಮನವಿ ಸಲ್ಲಿಸಿತು.
ಸಂಘದ ಜಿಲ್ಲಾ ಅಧ್ಯಕ್ಷ ಅರ್ಜುನ ಲಮಾಣಿ ಹಾಗೂ ಪ್ರಧಾನ ಕಾರ್ಯದರ್ಶಿ ಹಣಮಂತ ಕೋಣದಿ ಮಾತನಾಡಿ, “ಈಗಾಗಲೇ ಸಿಇಟಿ ಹಾಗೂ ಟಿಇಟಿ ಉತ್ತೀರ್ಣರಾಗಿ ಸೇವೆಗೆ ಸೇರಿರುವ ಶಿಕ್ಷಕರಿಗೆ ಮತ್ತೆ ಟಿಇಟಿ ಪರೀಕ್ಷೆ ವಿಧಿಸುವುದು ಅನ್ಯಾಯ” ಎಂದು ಆಕ್ಷೇಪಿಸಿದರು.
“ಟಿಇಟಿ ಪರೀಕ್ಷೆಯಿಂದ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ವಿಶೇಷವಾಗಿ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರಲ್ಲಿ ಆತಂಕ ಹೆಚ್ಚಾಗಿದೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ಮಾತ್ರ ಈ ಪರೀಕ್ಷೆ ಕಡ್ಡಾಯಗೊಳಿಸಿರುವುದು ಸರಿಯಲ್ಲ” ಎಂದು ಅವರು ಆರೋಪಿಸಿದರು.
ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ನುಗ್ಗಿ ಅವರ ನಿರ್ದೇಶನದಂತೆ ರಾಜ್ಯಾದ್ಯಂತ ಸಂಸದರಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಟಿಎಟಿ ಪರೀಕ್ಷೆ ರದ್ದುಪಡಿಸುವ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಂಸದ ರಮೇಶ ಜಿಗಜಿಣಗಿ, “ಶಿಕ್ಷಕರ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ಇದೆ. ನೀವು ಸಲ್ಲಿಸಿದ ಮನವಿಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ. ಇದು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಎಲ್ಲರ ಗಮನ ಸೆಳೆಯುವಂತೆ ಚರ್ಚೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಈ ವೇಳೆ ಶಿಕ್ಷಕರ ಸಂಘದ ವತಿಯಿಂದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ನಗರ ವಲಯ ಅಧ್ಯಕ್ಷ ಜುಬೇರ ಎಸ್ ಕೆರೂರ, ಜಿಲ್ಲಾ ಉಪಾಧ್ಯಕ್ಷೆ ರುದ್ರಮ್ಮ ಗಿಡ್ಡಪ್ಪಗೋಳ, ಸಂಘಟನಾ ಕಾರ್ಯದರ್ಶಿ ಕಾಬುಲ್ ಕೊಕಟನೂರ, ತಾಲೂಕು ಅಧ್ಯಕ್ಷ ಅಶೋಕ ಚನ್ನಬಸಪ್ಪಗೋಳ, ಮಲ್ಲಿಕಾರ್ಜುನ ಟಕ್ಕಳಕಿ, ಅಶೋಕ ಬೂದಿಹಾಳ, ಎಚ್.ಎಸ್. ಬಾರಿಕಾಯಿ, ಪಿ ಸಿ ತಳಕೇರಿ, ಬಿ ಎಚ್ ಮುದನೂರ, ಬಿ ಟಿ ವಜ್ಜಲ, ಎಂ ಎಸ್ ಚೌದರಿ, ಪುಷ್ಪ ಗಚ್ಚಿನಮಠ, ಗೀತಾ ಹತ್ತಿ, ಸಾಬು ಗಗನಮಾಲಿ, ಸಿದ್ದರಾಯ ಅಥಣಿ, ಪ್ರವೀಣ ಪತ್ತಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




