‘ಸಟ್ಲುಜ್‌’ ಸಿನಿಮಾ: ಹೇಳಬೇಕಾಗಿದ್ದೇನು, ಹೇಳಿದ್ದೇನು?

Date:

ತಮ್ಮದೇ ಕಾರ್ಯಸೂಚಿಯನ್ನು ಬಿಂಬಿಸುವ 'ಗಿಲ್ ತತ್ವ'ಕ್ಕೆ ಖಳತನದ ಸ್ವರೂಪವಿರುವುದು, ಭಿನ್ನಮತವನ್ನು ಹತ್ತಿಕ್ಕುವ, ಮಾನವ ಹಕ್ಕುಗಳ ಉಲ್ಲಂಘನೆಯ ತಮ್ಮ ನೀತಿಯನ್ನೇ ಈ ಚಿತ್ರ ಟೀಕಿಸುತ್ತದೆ ಎನ್ನುವ ತಾತ್ವಿಕತೆ, ಬಿಜೆಪಿ ಈ ಸಿನಿಮಾವನ್ನು ನಿಷೇಧಿಸುವುದಕ್ಕೆ ಮುಖ್ಯ ಕಾರಣ. ಇದಕ್ಕಾಗಿ 'ಸೆಟ್ಲುಜ್‌' ಮಹತ್ವದ ಸಿನಿಮಾ. ಇಂದಿನ ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಿಕೊಳ್ಳುತ್ತಲೇ ಈ ಸಿನಿಮಾವನ್ನು ನಾವು ಚರ್ಚಿಸಬೇಕಿದೆ.

ಪಂಜಾಬಿನ ಮಾನವಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಕೇಂದ್ರಿತ ‘ಸಟ್ಲುಜ್’ ಸಿನಿಮಾ(ಪಂಜಾಬ್-ಹಿಂದಿ‌ ಭಾಷೆ) ಇತ್ತೀಚೆಗಷ್ಟೇ ಜೀ 5 OTTಯಲ್ಲಿ ಪ್ರಸಾರವಾಗಿ ಎರಡೇ ದಿನಗಳಲ್ಲಿ ಹಠಾತ್ತನೆ ಎತ್ತಂಗಡಿಯಾಯಿತು. 1990-95ರ ಎರಡನೇ ಅವಧಿಗೆ ಪಂಜಾಬ್‌ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ ಕೆ.ಪಿ.ಎಸ್.‌ ಗಿಲ್‌ ನೇತೃತ್ವದ ಭಯೋತ್ಪಾದನೆ ವಿರುದ್ಧ Counterinsurgencyಯಲ್ಲಿ(ಪ್ರತಿ ಕಾರ್ಯಾಚರಣೆ) 25,000ಕ್ಕೂ ಹೆಚ್ಚು ನಾಗರಿಕರು ಕಾಣೆಯಾಗಿದ್ದರು, ಹತ್ಯೆಯಾಗಿದ್ದರು ಎನ್ನುವ ಸುದ್ದಿ ಚಾಲ್ತಿಯಲ್ಲಿತ್ತು. ಆದರೆ ಇದು ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಇದರ ಸತ್ಯವನ್ನು ಶೋಧಿಸಲು ಖಾಲ್ರಾ ಮುಂದಾದರು. ಇದರ ಸುತ್ತಮುತ್ತ ನಡೆಯುವ ನಿಜ ಘಟನೆಗಳು ಇಲ್ಲಿನ ಕಥನ. ಇಡೀ ಸಿನಿಮಾದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಖಾಲ್ರಾ ಅವರ ಮಾನವ ಹಕ್ಕುಗಳ ಹೋರಾಟದ ಕಥನವಿದ್ದರೆ ಎರಡನೇ ಭಾಗದಲ್ಲಿ ಖಾಲ್ರಾ ಅವರ ಕಣ್ಮರೆ ಕುರಿತು ಸಿಬಿಐ ಅಧಿಕಾರಿಗಳು ನಡೆಸುವ ತನಿಖೆಯ ಕಥನವಿದೆ. ಆರಂಭದಲ್ಲಿ ಇದು ನಾಯಕ ಜಸ್ವಂತ್ ಸಿಂಗ್ ಅವರ ದೃಷ್ಟಿಕೋನದಿಂದ ಸಾಗುತ್ತದೆ. ನಾಯಕ ಅಪಹರಣಗೊಂಡ ನಂತರ ಪ್ರಕರಣದ ತನಿಖೆ ನಡೆಸುವ ಸಿಬಿಐ ಅಧಿಕಾರಿಯ ದೃಷ್ಟಿಕೋನವಾಗಿ ಬದಲಾಗುತ್ತದೆ. ಅಲ್ಲಿಂದ ಚಿತ್ರಕತೆಯು ಸಿಬಿಐ ಅಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳ ನಡುವಿನ ಕಣ್ಣಾಮುಚ್ಚಾಲೆ ಆಟವಾಗಿ ಮಾರ್ಪಡುತ್ತದೆ. ಖಾಲ್ರಾ ಅವರ ಮಾನವ ಹಕ್ಕುಗಳ ಹೋರಾಟ ನೇಪಥ್ಯಕ್ಕೆ ಸರಿಯುತ್ತದೆ. ಇಡೀ ಕತೆಯ ಕೇಂದ್ರವಾಗಿದ್ದ ಖಾಲ್ರಾ ಈ ಕಥನವನ್ನು ಮುಂದಕ್ಕೆ ಒಯ್ಯುವ ಪ್ರೊಟಗಾನಿಸ್ಟ್‌ ಆಗದೆ ಆತನ ರಚನಾತ್ಮಕ ಸಂಬಂಧವೂ ಕೊನೆಗೊಳ್ಳುತ್ತದೆ. ಮಾನವ ಹಕ್ಕುಗಳ ಹೋರಾಟಗಾರನ ಕತೆ ಎಂದು ಆರಂಭವಾಗಿ ಕಡೆಗೆ ಸಿಬಿಐ ವರ್ಸಸ್‌ ಪಂಜಾಬ್‌ ಪೊಲೀಸ್‌ ಸಂಘರ್ಷದ ಥ್ರಿಲ್ಲರ್‌ ಆಗಿ ಕೊನೆಗೊಳ್ಳುತ್ತದೆ. ನಿರ್ದೇಶಕರು ಇದನ್ನು ಉದ್ದೇಶಪೂರ್ವಕವಾಗಿ ರಚಿಸಿದರೇ?

- Advertisement -

ಪಂಜಾಬ್‌ ಪೊಲೀಸ್‌ ಪಡೆ ಭಯೋತ್ಪಾದಕರನ್ನು ಮಟ್ಟ ಹಾಕುವ ನೆಪದಲ್ಲಿ ಅಕ್ರಮವಾಗಿ ಅಮಾಯಕರನ್ನು ಅಪಹರಣ ಮಾಡುವುದು ಮತ್ತು ಎನ್‌ಕೌಂಟರ್‌ ಹೆಸರಿನಲ್ಲಿ ಹತ್ಯೆ ಮಾಡಿ ಸಾಮೂಹಿಕ ಶವಸಂಸ್ಕಾರಗಳನ್ನು ನಡೆಸಿದಂತಹ ಕ್ರೌರ್ಯದ ಕುರಿತು ಮೊದಲ ಅರ್ಧ ಗಂಟೆಯಲ್ಲಿ ಸಾಕ್ಷ್ಯಚಿತ್ರ ಮಾದರಿಯಲ್ಲಿ ನಿರೂಪಿತವಾಗಿದೆ. ಮಾನವ ಹಕ್ಕುಗಳ ಹೋರಾಟಗಾರ ಖಾಲ್ರಾ ಈ ಸುದ್ದಿಯ ಬೆನ್ನು ಹತ್ತಿ ಶವಗಳನ್ನು ಪೋಸ್ಟ್‌ ಮಾರ್ಟಂ ಮಾಡಿದ ವೈದ್ಯರು ಮತ್ತು ಸಾಮೂಹಿಕ ಶವ ಸಂಸ್ಕಾರ ನಡೆಸಿದವರನ್ನು ಭೇಟಿ ಮಾಡಿ ಅಧಿಕೃತ ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸಿದರು. ಈ ಅಮಾನವೀಯ ಕಾರ್ಯಾಚರಣೆಯ ಭಾಗವಾಗಲು ಒಪ್ಪದ ಪಂಜಾಬ್ ಪೊಲೀಸ್ ಪಡೆಯ ಸುಮಾರು 2,000 ಪೊಲೀಸ್ ಅಧಿಕಾರಿಗಳನ್ನೂ ಸಹ ಅಪಹರಿಸಿ, ಕೊಲೆ ಮಾಡಿ ಶವಸಂಸ್ಕಾರ ಮಾಡಲಾಗಿತ್ತು ಎಂದು ಪತ್ತೆ ಹಚ್ಚಿದರು. ಸತ್ಯ ಬಹಿರಂಗಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ನ್ಯಾಯಾಲಯದಲ್ಲಿ ಈ ಕೃತ್ಯದ ವಿರುದ್ಧ ಮಾತನಾಡತೊಡಗಿದರು. ಪ್ರಭುತ್ವಕ್ಕೆ ಇರಿಸುಮುರಿಸು ಉಂಟಾಗುವಂತಹ ವಾತಾವರಣ ನಿರ್ಮಾಣವಾಯಿತು. ಕಡೆಗೆ 1995ರಲ್ಲಿ ಪಂಜಾಬ್‌ ಪೊಲೀಸ್‌ ಪಡೆ ಸ್ವತಃ ಖಾಲ್ರಾ ಅವರನ್ನೇ ಅಪಹರಿಸುತ್ತಾರೆ. ಈ ಅಪಹರಣದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಕ್ಲೈಮಾಕ್ಸ್‌ನಲ್ಲಿ ಪಂಜಾಬ್‌ ಪೊಲೀಸ್‌ ವ್ಯವಸ್ಥೆಯೇ ಖಾಲ್ರಾರನ್ನು ಕಾನೂನುಬಾಹಿರವಾಗಿ (extrajudicially) ಕೊಲೆ ಮಾಡಿದೆ ಎಂದು ಬಹಿರಂಗವಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ;...

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ...
sutluj1
ಸಟ್ಲುಜ್ ಚಿತ್ರದ ದೃಶ್ಯ

ಇಂದಿನ ಚುನಾಯಿತ ಸರ್ವಾಧಿಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಮಾನವ ಹಕ್ಕುಗಳಂತಹ ವಿಷಯವನ್ನು ಕೈಗೆತ್ತಿಕೊಂಡು ಅದರ ಮೂಲಕ ಪ್ರಭುತ್ವದ ದೌರ್ಜನ್ಯದ ಕುರಿತು ನಿರೂಪಿಸುವುದು ಒಂದು ಧೈರ್ಯದ ನಿರ್ಧಾರ ಎನ್ನಬೇಕು. ಇದಕ್ಕಾಗಿ ನಿರ್ದೇಶಕರು ಮತ್ತು ಕಲಾವಿದರನ್ನು ಅಭಿನಂದಿಸಬೇಕು.

ಇದನ್ನು ಓದಿದ್ದೀರಾ?: ಜಾನಕಿ ಅಮ್ಮ | ಭಾಷೆ, ಸೀಮೆಗಳ ಗಡಿದಾಟಿದ ಸ್ವರಯಾನ; ಕಂಠಸಿರಿಯ ಸಂಗೀತಯಾನ

ಇಲ್ಲಿ ಕೇವಲ ಖಾಲ್ರಾ ಅವರ ಬದುಕಿನ ಭಾಗವನ್ನು ಮಾತ್ರ ಕೇಂದ್ರವಾಗಿಸಿಕೊಂಡು ಚಿತ್ರಕತೆ ರಚಿಸಲಾಗಿದೆ ಎನ್ನುವುದು ನಿಜವಾದರೂ ಸಹ ಇಡೀ ಕಥನಕ್ಕೆ ಅಥೆಂಟಿಸಿಟಿ ದೊರಕಬೇಕಾದರೆ ಅದರ ಹಂದರವು ಸಮಗ್ರವಾಗಿರಬೇಕಾಗುತ್ತದೆ. ಇಲ್ಲಿ ಅದು ಕಾಣುವುದಿಲ್ಲ. 1991-95ರ ಅವಧಿಯ ಘಟನೆಗಳನ್ನು ಮರು ನಿರೂಪಿಸುತ್ತಾ ಹೋಗುವ ಕಥೆಯ ಆಯ್ಕೆ ಮತ್ತು ಚಿತ್ರಕತೆ ರಚನೆಯಲ್ಲಿ ಕೇವಲ ಪೊಲೀಸ್‌ ವ್ಯವಸ್ಥೆಯನ್ನು ಮಾತ್ರ ಕೇಂದ್ರೀಕರಿಸಲಾಗಿದೆ ಮತ್ತು ಅಧಿಕಾರದಲ್ಲಿರುವ ಸರ್ಕಾರದ ಪಾತ್ರವನ್ನು ಇಡೀ ಚರ್ಚೆಯಿಂದ ಹೊರಗಿಡಲಾಗಿದೆ. ಹಾಗೂ ಭಯೋತ್ಪಾದನೆಯ ಹಿಂದು ಮುಂದು ವರ್ಷಗಳ ಕುರಿತು ಯಾವ ಆಸಕ್ತಿಯನ್ನೂ ತೋರಿಸಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯ ದೌರ್ಜನ್ಯದ ನೇತೃತ್ವ ವಹಿಸಿದ್ದ ಗಿಲ್ ಅವರ ‘ಗುರಿ ಸಾಧಿಸುವುದು ಮುಖ್ಯ, ವಿಧಾನ ಯಾವುದು ಎನ್ನುವುದು ಮುಖ್ಯವಲ್ಲ’ ಎನ್ನುವ ತತ್ವದ(Doctrine) ಕುರಿತು ಚಿತ್ರದಲ್ಲಿ ಆಳವಾಗಿ ಚರ್ಚೆ ಮಾಡುವುದಿಲ್ಲ.  

ಅಷ್ಟಕ್ಕೂ ಪಂಜಾಬ್‌ಗೆ ಗಿಲ್ ಅವರಂತಹ ಅಧಿಕಾರಿಯನ್ನು ಎರಡನೇ ಅವಧಿಗೆ ನೇಮಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ಇದರ ಹಿನ್ನಲೆ ಸಹ ಈ ಸಿನಿಮಾದಲ್ಲಿ ಪ್ರಸ್ತಾಪವಾಗುವುದಿಲ್ಲ. ಗಿಲ್‌ ಅವರ ರಕ್ತ ಸಂಬಂಧಿ(ಸೋದರಳಿಯ) ‘ಕಾರವಾನ್‌’ ಇಂಗ್ಲಿಷ್ ಮಾಸಪತ್ರಿಕೆಯ ಸಂಪಾದಕ ಹರ್ತೋಷ್ ಬಹಲ್ ಮಾನವ ಹಕ್ಕುಗಳ ಹೋರಾಟಗಾರ ಖಾಲ್ರಾ ಅವರನ್ನು ಖಾಲಿಸ್ತಾನ ಬೆಂಬಲಿಗ ಎಂದು ಆರೋಪಿಸುತ್ತಾರೆ. ಮುಂದುವರೆದು ‘ಸಟ್ಲುಜ್’ನಲ್ಲಿ ‘ಕಾಣೆಯಾದವರ’ ಸಂಖ್ಯೆಯನ್ನು 25,000 ಎಂದು ಉತ್ಪ್ರೇಕ್ಷೆ ಮಾಡಿದ್ದಾರೆ. ಜಸ್ವಂತ್ ಖಾಲ್ರಾ ಅವರ ಆರೋಪಕ್ಕೆ ಯಾವ ಆಧಾರವೂ ಇಲ್ಲ. ಖಾಲಿಸ್ತಾನ್‌ ಭಯೋತ್ಪಾದನೆಯ ಕೇಂದ್ರಸ್ಥಾನವಾಗಿದ್ದ ಪಂಜಾಬ್‌ನ ತರನ್‌ ತರನ್‌ ಜಿಲ್ಲೆಯಲ್ಲಿ 1,600 ಮತ್ತು ಇತರ ಎರಡು ಜಿಲ್ಲೆಗಳಲ್ಲಿನ ಸಂಖ್ಯೆ ಸೇರಿಸಿ ಮೂರು ಜಿಲ್ಲೆಗಳಿಂದ 6,000 ಜನರ ಲೆಕ್ಕ ನಿಜವಿರಬಹುದು, ಇದನ್ನು ಪಂಜಾಬಿನ ಇತರ ಜಿಲ್ಲೆಗಳಿಗೆ ಸಮೀಕರಿಸಿ 25,000 ನಾಗರಿಕರು ಕಾಣೆಯಾಗಿದ್ದಾರೆ, ಹತ್ಯೆ ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದ್ದಾನೆ. ಪೊಲೀಸ್‌ ಮಹಾ ನಿರ್ದೇಶಕ ಗಿಲ್‌ನ ಕಾರ್ಯಾಚರಣೆಯಿಂದಾಗಿ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ, ಶಾಂತಿಯ ವಾತಾವರಣ ನಿರ್ಮಾಣವಾಗಿದೆ, ಇದರ ಮಹತ್ವ ಯಾರಿಗೂ ಗೊತ್ತಾಗುತ್ತಿಲ್ಲ… ಎಂದು ದೂರುತ್ತಾರೆ. ಇಲ್ಲಿ ಗಿಲ್‌ ತಮ್ಮ ಸೋದರಮಾವ ಎನ್ನುವ ಸಂಬಂಧದ ಕಾರಣಕ್ಕೆ ಬಹಲ್ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರ ಆರೋಪವನ್ನು ತಳ್ಳಿ ಹಾಕಬಹುದು. ಅಥವಾ ಅವರ ವಿಚಾರಗಳನ್ನು ಮತ್ತಷ್ಟು ನಿಕಷಕ್ಕೆ ಒಡ್ಡಬೇಕಾಗಬಹುದು. ಆದರೆ ಪಂಜಾಬ್‌ ಪೊಲೀಸರ ಕ್ರೌರ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂತಹ ನಿಜ ಘಟನೆಗಳನ್ನು ಆಧರಿಸಿದ ಈ ಸಿನಿಮಾದಲ್ಲಿ ಖಚಿತವಾದ, ಅಥೆಂಟಿಕ್‌ ಆದಂತಹ ಚಿತ್ರಕತೆಯ ಕೊರತೆಯಿದೆ. ಭಾವುಕತೆ ಮೇಲುಗೈ ಸಾಧಿಸಿದೆ. ನಿಜಘಟನೆಯನ್ನು ಆಧರಿಸಿದ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಮೂಲಭೂತ ಮಾನದಂಡಗಳನ್ನು ಪಾಲಿಸಿದಂತೆ ಕಾಣುವುದಿಲ್ಲ. ಕಡೆಗೂ ಪಂಜಾಬ್‌ನ ಸಾವಿರಾರು ನಾಗರಿಕರ ಕಣ್ಮರೆ ಮತ್ತು ಹತ್ಯೆಯನ್ನು ಭಾರತಕ್ಕೆ ಮರು ನೆನಪಿಸಬೇಕು ಎನ್ನುವ ಪ್ರಾಮಾಣಿಕ ಉದ್ದೇಶವನ್ನು ಪ್ರೇಕ್ಷಕರಿಗೆ ಯಶಸ್ವಿಯಾಗಿ ತಲುಪಿಸಿದ್ದಾರೆ. ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಹಾಗೆಯೇ ಬಹಲ್‌ರಂತಹ ಹಿರಿಯ, ಪ್ರಗತಿಪರ ಪ್ರತ್ರಕರ್ತರು ‘ಸಟ್ಲುಜ್‌’ ಸಿನಿಮಾವನ್ನು ಧುರಂಧರ್‌, ಕಾಶ್ಮೀರಿ ಫೈಲ್ಸ್‌ನಂತಹ ಪ್ರೊಪಗ್ಯಂಡಾ ಸಿನಿಮಾಗಳಿಗೆ ಹೋಲಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ ಈ ಹೋಲಿಕೆಯನ್ನು ತಿರಸ್ಕರಿಸಬೇಕಾಗುತ್ತದೆ. 

ಇದನ್ನು ಓದಿದ್ದೀರಾ?: A Foggy Tale: ಇತಿಹಾಸದ ಮಂಜಿನೊಳಗೆ ಮಾನವೀಯತೆಯ ಹುಡುಕಾಟ

1987-1992ರ ಅವಧಿಯಲ್ಲಿ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ದೆಹಲಿ ಸರ್ಕಾರದ ನಿಯಂತ್ರಣದಲ್ಲಿತ್ತು. 1991ರಲ್ಲಿ‌ ಎರಡನೇ ಬಾರಿ ಗಿಲ್ ಅಧಿಕಾರ ವಹಿಸಿಕೊಂಡಾಗ ಪಂಜಾಬ್ ಆಡಳಿತ ದುರ್ಬಲ ಸ್ಥಿತಿಯಲ್ಲಿತ್ತು. ಯಾವುದೇ ಹಿಡಿತ ಇರಲಿಲ್ಲ. ಭಯೋತ್ಪಾದನೆ ಸಂಬಂಧಿತ ಹತ್ಯೆಗಳು ದಿನದಿನಕ್ಕೂ ಹೆಚ್ಚಾಗುತ್ತಿದ್ದವು. ಪೊಲೀಸ್ ವ್ಯವಸ್ಥೆ ಬಹುತೇಕ ಕುಸಿದಿತ್ತು. ನ್ಯಾಯಾಂಗವೂ ಸೂಕ್ತ ಸಾಕ್ಷಿಗಳ ಕೊರತೆ ಎಂದು ನೆಪ ಹೇಳಿ ಉಗ್ರರನ್ನು ಖುಲಾಸೆ ಮಾಡುತ್ತಿದ್ದವು. ಈ ಎಲ್ಲಾ ಕಾರಣಗಳಿಂದ ಉಗ್ರವಾದವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ದೆಹಲಿಯೇ ಗಿಲ್ ಅವರಿಗೆ ನೀಡಿತ್ತು. ತಮಗೆ ದೊರೆತ ಅಧಿಕಾರವನ್ನು ಗಿಲ್‌ ದುರುಪಯೋಗಪಡಿಸಿಕೊಂಡು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದರು ಎಂದು ಖಾಲ್ರಾ ಹೋರಾಟದ ಮೂಲಕ ನಿರೂಪಿಸಿದ ನಿರ್ದೇಶಕರು ಮೇಲೆ ತಿಳಿಸಿದ ಹಿನ್ನಲೆಯನ್ನು, ಅಂಶಗಳನ್ನು ಚಿತ್ರಕತೆಯಲ್ಲಿ ಯಾಕೆ ಒಳಗೊಳ್ಳಲಿಲ್ಲ ಎನ್ನುವ ಪ್ರಶ್ನೆ ಕಾಡುತ್ತದೆ. ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರೆ? ಅಥವಾ ಅಗತ್ಯ ಅನಿಸಲಿಲ್ಲವೇ? ಯಾಕೆಂದರೆ ಇಂದಿರಾ ಗಾಂಧಿಯವರ ಹತ್ಯೆ ಮತ್ತು ಸಿಖ್‌ ಹತ್ಯಾಕಾಂಡ ನಂತರದ 1987-1991ರವರೆಗಿನ ಪ್ರಕ್ಷುಬ್ಧ ಪಂಜಾಬ್‌ನ್ನು ಪರಿಗಣಿಸದೆ ಖಾಲ್ರಾ ಅವರ ಹೋರಾಟವನ್ನು ಮಾತ್ರ ನಿರೂಪಿಸುವುದು ಅಪೂರ್ಣವಾಗುತ್ತದೆ. ಏಕಮುಖ ಅನಿಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಈ ಚಿತ್ರವು ಈ ಹತ್ಯೆಗಳಿಗೆ ಮೂಲ ಕಾರಣಕರ್ತರಲ್ಲದ, ಕೇವಲ ಅದನ್ನು ಜಾರಿಗೊಳಿಸುವ ಸಾಧನವಾಗಿ ಬಳಕೆಯಾದ ಕೆಳ, ಮಧ್ಯ ಹಂತದ ಪೊಲೀಸ್‌ ಅಧಿಕಾರಿಗಳ ಮೇಲೆ ಹೆಚ್ಚು ಗಮನ ಹರಿಸುತ್ತದೆ. ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇವರನ್ನು ದುಷ್ಟತನದ ಪ್ರತಿರೂಪವಾಗಿ ಚಿತ್ರಿಸಿರುವುದು ಹಾಗೂ ಪ್ರಭುತ್ವದ ನೀತಿ ನಿರೂಪಣೆಯನ್ನು ನಿರ್ಲಕ್ಷಿಸುವುದು ಈ ಸಿನಿಮಾದ ಮಿತಿಯಾಗಿದೆ. 2002ರ ಗುಜರಾತ್‌ ಹತ್ಯಾಕಾಂಡದ ತನಿಖೆಯೂ ಸಹ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವೈಫಲ್ಯ ಮತ್ತು ಆರೆಸ್ಸೆಸ್ ಸಿದ್ದಾಂತದ ಪ್ರಚೋದನೆಯನ್ನು ನಿರ್ಲಕ್ಷಿಸಿ ಕೇವಲ ಘಟನೆಗಳು, ಸಾಕ್ಷಿಗಳನ್ನು ಮಾತ್ರ ಆಧರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

image 81 9
ಸಟ್ಲುಜ್ ಚಿತ್ರದ ದೃಶ್ಯ

‘ಸಟ್ಲುಜ್‘ ಚಿತ್ರದ ನಿರ್ದೇಶಕರು ಆರಂಭದಲ್ಲಿ ತಾತ್ವಿಕತೆಯ ಪ್ರಶ್ನೆಯನ್ನು ಮುಖ್ಯವಾಗಿ ಕೈಗೆತ್ತಿಕೊಳ್ಳುತ್ತಾರೆ. ಆದರೆ ಅಂತಿಮವಾಗಿ ನಾಟಕೀಯತೆಗೆ ವಶವಾಗುತ್ತಾರೆ. ನಿಜಘಟನೆಯನ್ನು ಆಧರಿಸಿದ ಸಿನಿಮಾ ನಾಟಕೀಯತೆಯಿಂದ ಎಷ್ಟು ದೂರವಿರುತ್ತದೆಯೋ ಅಷ್ಟು ಒಳ್ಳೆಯದು ಎನ್ನುವ ಮೂಲ ಪಾಠವನ್ನು ಮರೆತಂತಿದೆ. ಪ್ರೇಕ್ಷಕರಲ್ಲಿ ಭಾವುಕತೆ ಮತ್ತು ಉದ್ವೇಗ ಮೂಡಿಸುವುದು ಇವರ ಮುಖ್ಯ ಉದ್ದೇಶ ಎನ್ನುವುದು ಸ್ಪಷ್ಟವಾಗುತ್ತದೆ. ಕಡೆಗೆ ಫ್ಯಾಸಿಸಂ ಸಿದ್ಧಾಂತದ ಮೋದಿ ನೇತೃತ್ವದ ಸರ್ಕಾರಕ್ಕೆ ಖಾಲ್ರಾ ಪ್ರಕರಣ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದಿತ್ತೆಂಬುದು ಚುನಾವಣಾ ವಿಷಯವಾಗುವುದಿಲ್ಲ. ಇದು ಅಚ್ಚರಿಯೇನಲ್ಲ. ತಮ್ಮದೇ ಕಾರ್ಯಸೂಚಿಯನ್ನು ಬಿಂಬಿಸುವ ‘ಗಿಲ್ ತತ್ವ’ಕ್ಕೆ ಖಳತನದ ಸ್ವರೂಪವಿರುವುದು, ಭಿನ್ನಮತವನ್ನು ಹತ್ತಿಕ್ಕುವ, ಮಾನವ ಹಕ್ಕುಗಳ ಉಲ್ಲಂಘನೆಯ ತಮ್ಮ ನೀತಿಯನ್ನೇ ಈ ಚಿತ್ರ ಟೀಕಿಸುತ್ತದೆ ಎನ್ನುವ ತಾತ್ವಿಕತೆ, ಬಿಜೆಪಿ ಈ ಸಿನಿಮಾವನ್ನು ನಿಷೇಧಿಸುವುದಕ್ಕೆ ಮುಖ್ಯ ಕಾರಣ. ಇದಕ್ಕಾಗಿ ‘ಸೆಟ್ಲುಜ್‌’ ಮಹತ್ವದ ಸಿನಿಮಾ. ಇಂದಿನ ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಿಕೊಳ್ಳುತ್ತಲೇ ಈ ಸಿನಿಮಾವನ್ನು ನಾವು ಚರ್ಚಿಸಬೇಕಿದೆ.

bhut sir
ಬಿ. ಶ್ರೀಪಾದ ಭಟ್
+ posts

ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ  ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಸಿ, ಎಸ್‌ಟಿ ಮೀಸಲಾತಿ ಶೇ.56ಕ್ಕೆ ಏರಿಕೆ ಮಾಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್!

ರಾಜ್ಯದ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ)...

ದೆಹಲಿಯಲ್ಲಿ ಹೆಚ್ಚಿದ ಕಟ್ಟೆಚ್ಚರ: ಒಂದು ತಿಂಗಳು 20,000 ಅರೆಸೇನಾ ಸಿಬ್ಬಂದಿ ನಿಯೋಜನೆ

ಪ್ರತಿಪಕ್ಷ 'ಇಂಡಿಯಾ' ಒಕ್ಕೂಟದ ಪ್ರತಿಭಟನೆ ಹಾಗೂ ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್...