(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ನಾ ಅಂದಾ, “ಬಾಬಾ… ಇಗೋತ್ ನಿಮ್ ಸಾಧನಾ ಪೂರಾ ಫೇಲ್ ಆಯ್ತದ ನೋಡ್ರಿ…” ಅವನಿಗಿ ಥೋಡೆ ಸಿಟ್ ಬಂತು. “ನೀ ಸುಮ್ಮುನ್ ನಿಂದುರ್ ತಂಗಿ… ಪಾಚ್ ಮಿನೆಟ್ದಾಗ್ ಅಕಿಗಿ ಎಲ್ಲಾ ಕಾಣ್ಸತೂದ್ ನೀನೇ ನೋಡಟಿ ತಂಗಿ,” ಅಂದುನು. ನಾ ಅಂದಾ, “ಎಲ್ಲಿಂದ್ ಕಾಣ್ಸತದ್ರಿ ಬಾಬಾ! ಅಕಿ ಒಂದ್ ಸಣ್ಣೂದ್ ತಗಡದ್ ಮನ್ಯಾಗ್ ಇರ್ತಾಳ. ನೀವು ಪಡಸಾಲಿ, ಬೆಡ್ರೂಮ್, ಪಲ್ಲಂಗ್ ಅಲ್ಲಾತೀರಿ. ಎಲ್ಲಿಂದ್ ಕಾಣ್ಸತೂದ್ ಹೇಳ್ರಿ?” ಅಂದ!
ಬಾಬಾ ಒಂದು ಗಿಡ್ದ ಬುಡಕ್ ಕುಂತಿನು. ಒಂದ್ ದೀಡ್ಸೆ ಮ್ಯಾಗ್ ಮಂದಿ ಲೈನ್ ಹಚ್ಚಿ ನಿಂತಿತು. ಅಲ್ಲೊಂದು ಮುಸ್ಲಿಂ ಸಮಾದಿ ಇತ್ತು. ಅದರ್ ಮುಂದ್ ಬಾಬಾ. ಬಾಬಾನ ಮುಂದ ಮಂದಿ ನಿಂತಿತ್ತು.
“ಪೀರ್ ದೇವರ್ ಮ್ಯಾಲ್ ನೋಡ್ತಾರಿ ಮೇಡಂ. ಹಮೇಶ್ಯಾ ಈಸೇ ಮಂದಿ ಇರ್ತಾರ್ ನೋಡ್ರಿ ಅಂತ ಹಳ್ಳುಗ್,” ಅಂದುಳು ಕವಿತಾ.
ಅಲ್ಲೊಬ್ಬವ ಟೆಂಗು, ಊದುಬತ್ತಿ, ಖಾರಿಕ, ಬಾದಾಮ ಕಿವೆಲ್ಲ ಇಟ್ಕೊಂಡು ಕುಂತೀನು. ಎಲ್ಲರೂ ಅಲ್ಲೇ ಖರ್ದಿ ಮಾಡ್ಲತೀರು. ನಮ್ಮ ಕವಿತಾ, ಹೇಮಾ ಒಂದೊಂದು ತೆಂಗು ತಕೊಂಡು ಬಂದುರು. ಅಲ್ಲೊಂದ್ ಪೋರಿ ಒಣಗಿ-ಒಣಗಿ ಕಡ್ಡಿ ಅಪ್ಲೆ ಆಗಿತ್ತು.
“ಅದ್ಕ ಆರ್ ತಿಂಗುಳ್ ಹಿಡ್ದು ತರ್ಲತಾರ್ ತೋಲ್ ಜಬರ್ದಸ್ತ ಮಾಡಶ್ಯಾರಂತರಿ,” ಅಂತಂದುಳು ಕವಿತಾ. ಆ ಪೋರಿಗಿ ನೋಡಿ ನನ್ ಜೀವಾ ಎಕಡರಾ ಆಯ್ತು. ಅವರವ್ವಗಂದ, “ಅಕ್ಕೋರೆ, ದವಾಖಾನಿಗಿ ಒಯ್ಯಿರಿ. ಡಾಕ್ಟರ್ ನೋಡಿ ಏನಾಗ್ಯಾದಂತ ಹೇಳ್ತಾರ…” ಅದಕಕಿ ನನಕಡಿ ಘುರ್ಕಾಸಿ ನೋಡಿ, “ನಮಗ್ ಇಲ್ಲೇ ಭರೋಸಾ ಅದಾ…” ಅಂದುಳು. ಕವಿತಾ, “ಸುಮ್ಮುನ್ ಕೂಡ್ರಿ,” ಅಂತ ಇಸಾರಾ ಮಾಡ್ದುಳು. ನಾ ಸುಮ್ಮುನ್ ನಿಂತ.
ಎಲ್ಲರಿಗಿ ಬಾಬಾ ಮಂತೂರು ಹಾಕಿ, ಉಫ್ ಅಂತ ಮಾರಿ ಮ್ಯಾಗ ಊದಿ, “ಕಣ್ಮುಚ್ಕೋರಿ,” ಅಂತೀನು. ಮತ್ತೇನಂತೀನಂದ್ರಾ, “ಬಾಬಾ, ಇವರ್ ತಕ್ಲೀಫ್ ಏನದಾ ಅಂಬಾದು ನೀ ನನಗ ಹೇಳು. ಅರೇ ಬಾಪರೇ… ಚ್ತು ಚುಚ್ ಚು, ಹಾ ಬಾಬಾ… ಹಾ ಹಾ… ಥತ್ ತೇರಿಕಿ…”ಅಂತೆಲ್ಲಾ ಅಂದು, ಕಣ್ಮುಚ್ಕೊಂಡೋರಿಗಿ, ಕಣ್ಣಿನ ಮುಂದ್ ಏನ್ ಕಾಣ್ಲತದಾ? ಒಂಥೋಡೆ ಮಂಜ್ ಮಂಜ್ ಬೆಳಕಿನಪ್ಲೇ ಬಂತಾ?” ಅಂತೀನು. ಅವಾಗ ಅವ್ರು “ಹೂಂ ರಿ ಬಾಬಾ… ಹಾರಿ ಬಾಬಾ…” ಅಂತಿರು.
“ನಿಮ್ಮನಿ ಅಂಗುಳು, ಪಡ್ಸಾಲಿ, ಅಡಗಿ ಮನಿ, ಬೆಡ್ ರೂಮು, ಮಕೋಮಾ ಜಾಗಾ, ಪಲ್ಲಂಗಾ, ಹೊರ್ಸಾ… ಇವೆಲ್ಲ ಕಾಣ್ಲತಾವೇನ್?” ಅಂತ ಕೇಳಿ, “ನಿನ್ನ ತಲಿ ಬಲ್ಲಿ ಹೊರ್ಸಿನ್ ಕಾಲೀಗಿ ನಿಂಬಿಕಾಯಿ ಕಟ್ಟ್ಯಾರ್ ನೋಡು. ಅವೇ ಹೈರಾಣ್ ಮಾಡ್ಲತವ್ ನಿನಗ. ನಾ ಎಲ್ಲ ಬಂದೋಬಸ್ತ ಮಾಡ್ತಾ, ನೀ ಏನ್ ಚಿಂತಿ ಮಾಡಬ್ಯಾಡ. ಮೂರ್ ಅಮಾಸಿ ಮೂರ್ ಹುಣ್ಣಿ ತಪ್ಪಲ್ದಪ್ಲೇ ಬಾ. ಎಲ್ಲ ಓಡ್ ಹೊಯ್ಯತೂದ್,” ಅಂತ್ ಹೇಳ್ತೀನು.
ಹುಚ್ಚ್ ಮಂದಿ ಅವನ ಕಾಲ್ ಬಿದ್ದು, ಬೆನ್ನಾಗ ನಾಕ್ ಗುದ್ದಸ್ಕೊಂಡು ಟೆಂಗು, ಅಡಕಿ, ಖಾರಿಕ್, ಬಾದಾಮ್, ಊದು, ಊದಿನ ಕಡ್ಡಿ ಮ್ಯಾಲ್ ಶಂಬೋರ್ ದೀಡ್ಸೆ ಕೊಟ್ಟು ಏಳ್ತೀರು.
ಈ ಹೇಮಾ ಮತ್ತ್ ಕವಿತಾ ಇಬ್ಬರು ಇಗೋತಾ ಜಬರ್ದಸ್ತಿಲಿಮದ್ ಕರ್ಕೊಂಡು ಬಂದಾರಿಲ್ಲಿ. ಹೇಮಾನ್ ತುಟಿ ಒಡ್ದು ಒಣಾ ರಕ್ತಾ ಚಿಮ್ಮಲತೀತು. ಅಕಿಗಿ ಯಾರೋ ಇದು ಮಾಡ್ಸಿಂದ್ ಅದಾ ಅಂತ ತಲಿ ತುಂಬಿರಾ, ಅದ್ಕ ಅಕಿ ನಡಿ ಸಣವ್ವಾ ನಡಿ ಅಂತ ಕರ್ಕೊಂಡು ಬಂದೀಳು. ದುನ್ಯಾದು ದೇವರು ದಿಂಡುರು ಮಾಡಿ ಥಕಾಸೀಳು.
ದವಾಖಾನಿಗಿ ಹೋಗಂತ ಒಮ್ಮ ಜಬಕ್ದಸ್ತೀಲಿ ಖಳಿಸಿದಾ ಇಕೀಗಿ. ಹೋಗಿ ಬಂದ ಮ್ಯಾಲ, “ಐ… ಡಾಕ್ಟರ್ಗೋಳು ರಕ್ತ ಪರೀಕ್ಷಾ ಏಕಿ ಪರೀಕ್ಷಾ ಅಂತ ಹಜಾರ್ ದೋನ್ಹಜಾರ್ ಬಿಲ್ ಮಾಡ್ದುರೆವ್ವಾ! ಸುಳ್ಳೆ ಹೋದ್ ನಾ ಒಂದ್ ತಿಂಗುಳು ರ್ಯಾಶನ್ ಬರ್ತಿತ್…” ಅಂತ ಗೋಳ್ ಹೊಡ್ದಿಳು. ಅಲ್ಲಿ ಇಲ್ಲಿ ರೊಕ್ಕಾ ಹಾಕ್ತಾಳ್ ಖರೆ ದವಾಖಾನಿ ಅಂದುರೇ ಲೆಕ್ಕ ಇಡ್ತಾಳಿಕಿ ಅಂತ ಸಿಟ್ ಬಂದುರುಬಿ ಸುಮ್ಮುನ್ ಕುಂತಿದ. ಇವತ್, “ನಡಿ ನಡಿ…” ಅಂತ ಇಲ್ಲೀಗಿ ಕರ್ಕೊಂಡು ಬಂದುರು ಬಂದಾ.
ನಮ್ಮ ಪಾಳಿ ಬಂತು. ಹೇಮಾಗ್, ನಾ ಪೈಲೆ ಕುಂದುರ್ಸದಾ ನಾ ನಿಂತ. ಹೇಮಾ ಕಣ್ಮುಚ್ಕೊಂಡು ಕುಂತುಳು. “ಹಾ ತಂಗಿ ಏನ್ ತಕ್ಲೀಫ ಅದಾ?” ಇಕಿ ತನ್ನ್ ತಕ್ಲೀಫ್ ಎಲ್ಲಾ ಹೇಳಿದ್ ಮ್ಯಾಲ, “ಹೂಂ ಕಣ್ಮುಚ್ಚ ಬಟಾ. ಬಾಬಾನ ದರ್ಬಾರ್ದಾಗ ಪೆಹಲಿ ಬಾರ್ ಬಂದೀದಿ. ಬಾಬಾನ ಮುಂದ್ ನಿನ್ ತಕ್ಲೀಫ್ ಹೇಳ್ಕೋ. ಇಕಾ ಬಾಬಾ ಬಂದು ನಿನ್ ಮುಂದೆ ನಿಂತಾರ ಅಂಜಲ್ದಪ್ಲೇ ಮಾತಾಡು,” ಅಂತಂದುನು.
ಅಕಿ ಘರ್ಭಾಸಿ ಕಣ್ಣ ತೆರ್ದು, “ಎಲ್ಲಿ ಹರಾರಿ?” ಅಂದುಳ್.
“ಅರೇ… ಕಣ್ ತೆರಿಬ್ಯಾಡ್ದು! ಕಣ್ಮುಚ್ಚೇ ನೋಡಬೇಕು. ಅವರು ನಿನಗೊಬ್ಬಕಿಗೆ ದರ್ಶನ್ ಕುಡ್ತಾರ್. ಹೂಂ ಜಲ್ದಿ ಮುಚ್ ಕಣ್ಣು. ತಡ ಆದುರ್ ಹೊಯ್ತಾರ್. ಹಾ ಕಾಣ್ಲತಾರಾ…”
“ಇಲ್ರಿ…”
“ಅರೆ…! ನನಗ ಕಾಣ್ಲತರಾ, ನಿನಗ್ಹೆಂಗ್ ಕಾಣ್ಸಲ? ಚಂದ್ ನೋಡು…”
“ಇಲ್ರಿ… ಖರೇನೆ ಕಾಣ್ಸಲ್ಹೊಂಟಾರ್…”
“ಕತ್ಲಾಗೆ ಥೊಡೆ ದಿಟ್ಟುಸಿ ನೋಡು ಬಟಾ. ಅಲ್ಲೊಂದು ಮನ್ಶಾನಪ್ಲೆ ಛಾಚಾ ಕಾಣಸ್ತಾದ್ ನೋಡು, ಅವರೇ ಬಾಬಾ ಹರಾ, ಅವರು ಪೂರಾ ದರಶನ್ ಕೊಡಲ್ಲೂರಮ್ಮ. ಹೋಗ್ಲಿ… ನಿನಗ ತಿಳ್ಯಾಲ್ಹೊಂಟುದ್ ಇರ್ಲಿ. ಆ… ಮಳ್ಗಾಲ್ದಾಗ ಟೀವಿ ಖೊರ್-ಖೊರ್ ಮಾಡಾ ಮುಂದ್ ಮಂಜ್-ಮಂಜ್ ಆಯ್ತದಲ್ಲ ಹಂಗ್ ಕಾಣ್ಸಲತದ?”
“ಹಾ ಹಾರಿ ಕಾಣ್ಲತುದ್ರಿ…”
“ಹಾ… ಹಂಗೇ ಥೊಡೆ ದಿಟ್ಟುಸಿ ನೋಡು, ನಿನಗ ನಿನ್ನ ಮನಿ ಕಾಣ್ಸತದ…”
“ಹಾರಿ… ಕಾಣ್ಸಲತುದ್ರಿ…”
“ಹಾ… ಶಬ್ಭಾಸ್… ಈಗ ಬಂತ್ ಗಡಿ ಹಾದೀಗಿ ಅದು ತೋಲ್ ಖತ್ತರ್ನಾಕ್ ಇರ್ತದ್. ಹಾದಿ ಬಂದ್ ಮಾಡಿ, ಕಣ್ಣಿನ ಮ್ಯಾಲ ಪರ್ದಾ ಹಾಕ್ತದ. ಖರೆ ನಮ್ ಬಾಬಾನ್ ಮುಂದ್ ಸೈತಾನ್ದು ಆಟ ನಡೆಲ್ದು. ಹಾ ಬಿಟಾ, ಅಂಗಳಾಗಿಂದು ಒಳಗ್ ಹೋಗು, ಪಡಸಾಲಿ ಕಾಣಸ್ತದ ನೋಡು…”
“ಕಾಣ್ಸಲ್ಹೊಂಟುದ್ರಿ…”
“ಹಂಗೆಂಗಾ? ಮನಿ ಕಾಣ್ಸಿದ್ ಮ್ಯಾಲ ಪಡಸಾಲಿ ಕಾಣ್ಸಲಕ್ಕೇ ಬೇಕು. ಚಂದ್ ನೋಡು…”
“ಇಲ್ರಿ ಕಾಣ್ಸಲ್ಹೊಂಟುದ್…”
“ಹೋಗ್ಲಿ ಬಿಡು… ಹಂಗೇ ನಡ್ಕೋತಾ ಪಡ್ಸಾಲ್ಯಾಂದು ಒಳ್ಹೋಗು. ನಿಮ್ ಬೆಡ್ ರೂಮಿನಾಗ್ ಪಲ್ಲಂಗ್ ಬಲ್ಲಿ ನಿಂತು, ಈಗ್ ಹೇಳು ಪಲ್ಲಂಗ್ ಕಾಣ್ಸಲತುದಾ?”
“ಇಲ್ರಿ…”
“ಹಾ… ಹಂಗೆಂಗೈಯ್ತುದ! ಚಂದ್ ನೋಡು… ಪಲ್ಲಂಗಿನ ಕಾಲಿಗಿ ನಿಂಬಿಕಾಯಿ ಕಟ್ಟ್ಯಾರ್ ನೋಡು. ಕಾಣ್ಸದೂವಾ ನಿಂಬಿಕಾಯಿ?”
“ಇಲ್ರಿ ಎಪ್ಪಾ…”
“ಅರೇ… ಛೋಲೋ ನೋಡ್ ತಂಗಿ. ನಿಮ್ಮನಿ, ನಿಮ್ ಪಡಸಾಲಿ, ನೀ ಮಕೋಮಾ ರೂಮು ನಿನಗ ಕಾಣ್ಸಲಕ್ಕೇ ಬೇಕು. ಇಲ್ಲಿ ನನಗ ಕ್ಲೀಯರ್ ಕಾಣಸ್ಲತೂದ…”
“ಇಲ್ರಿ ನನಗ ನನ್ ಮನಿ ಬಿಟ್ಟುರ್ ಪಡಸಾಲಿ, ಬೆಡ್ರೂಮು, ಪಲ್ಲಂಗೂ ಏನ್ ಬಿ ಕಾಣ್ಸಲ್ಹೊಂಟಾವ್ರಿ…”
“ಹೋಗ್ಲಿ… ನಿಮ್ಮನ್ಯಾಗ ಯಾವ ಯಾವ್ ರೂಮ್ ಕಾಣಸ್ಲತಾವ್ ಹೇಳು ಬಟಾ…”
“ಯಾವ್ ಬಿ ಇಲ್ರಿ. ಮನಿ ಒಂದೇ ಕಾಣ್ಸಲತಾದ್ರಿ…”
“ಹಂಗೇಂಗಾ! ಓಸು ತಾಣ್ಸಬೇಕಲ್ಲ? ಈ ಸೈತಾನ್ ಅಡ್ಡ ಬಂದು ನಿಂತಪ್ಲೇ ಕಾಣ್ಸತುದ. ನಿಂದುರ್ ಥೋಡೆ ಜಬರ್ದಸ್ತ ಮಂತುರ್ ಹಾಕಾರಿ,” ಅಂತ್ ನೀರ್ ತಕ್ಕೊಂಡು ಅಕಾಡಿ ಇಕಾಡಿ ಚಿಂಪುಡ್ಸಿ, ಅಕಿನ್ ಮ್ಯಾಲ್ ಥೋಡೆ ಹಾಕಿ, ನವಿಲ್ ಗರಿಲಿಂದು ಫಟ್-ಫಟ್ ಹೊಡ್ದು, “ಹಾದಿ ಬಿಡು… ಹಾದಿ ಬಿಡು,” ಅಂತಾ ಚೀರ್ಲತೂನ್ ಚೀರಿ ಚೀರಿ, “ಈಗ್ ನೋಡ್ ತಂಗಿ ಕಾಣ್ಸತದ…” ಅಂದೂನ್.
ಅಕಿ, “ಒಣಾ ಕತ್ತೂಲೇ ಕಾಣ್ಲತದ್ರಿ…” ಅಂದುಳ್.
“ಹಾ ಹಂಗೆಂಗ್? ನಿಮ್ಮನಿ ಬಿ ಹೋಯ್ತಾ? ದಿಟ್ಟಸಿ ನೋಡು. ಮನಿ ಎಕಡಿ ಹೊಯ್ತದ?” ಅಂದುನು.
ಅಕಿ ಜರಾ ಸುಮ್ಮುನ್ ಕುಂತು, “ಮನಿ ಕಾಣ್ಸತದ,” ಅಂದುಳು.
“ಪಡ್ಸಾಲಿ, ಬೆಡ್ರೂಮ್, ಪಲ್ಲಂಗ್?” ಅಂದುನು.
ಅಕಿ ಇಲ್ಲಂದುಳು.
ಅವ ಪರೇಶಾನ್ ಆಗಿ, “ಹಂಗೆಂಗಾ?” ಅಂತ್ ಬೂದಿ ತಗೊಂಡು ಮಂತುರ್ಸಿ ಉಫ್ ಅಂತ್ ಊದುನು. “ಈಗ?” ಅಂದುನು.
ಅವನ್ ಮಾತ್ ಕೇಳಿ ನನ್ ತೆಲಿ ಕೆಟ್ಟು ಸುಟ್ಟ ಬದ್ನಿಕಾಯಿ ಆಯ್ತು. ನಾ ಅಂದಾ, “ಬಾಬಾ… ಹೊತ್ಮುಣ್ಗಾ ತನ ಮಂತುರ್ ಹಾಕ್ದೂರ್ ಬಿ ಅಕಿಗಿ ಪಡಸಾಲಿ ಬೆಡ್ರೂಮ್ ಪಲ್ಲಂಗ್ ಕಾಣ್ಸಲ್ರಿ,” ಅಂದ ನಾ. ಅವ ತಲಿ ಎತ್ತಿ ನನಗ್ ನೋಡಿ, “ತಂಗಿ, ತೀಸ್ ವರ್ಷಿನ್ ಸಾಧ್ನಾ ಅದಾ ನಂದು… ಎಂಥೆಂಥಾವ್ ಬಂದು ನನ್ ಮುಂದ್ ಮೂಗ್ ವರ್ಸಿ ಹೋಗ್ಯಾವ್! ಇದು ಏನ್ ಛೋಟಾ ಮೋಟಾ… ನನ್ ಮುಂದ್ ಇದರ್ ಆಟಾ ನಡೆಲ್ದು,” ಅಂದುನು.
ನಾ ಅಂದಾ, “ಬಾಬಾ… ಇಗೋತ್ ನಿಮ್ ಸಾಧನಾ ಪೂರಾ ಫೇಲ್ ಆಯ್ತದ ನೋಡ್ರಿ…”
ಅವನಿಗಿ ಥೋಡೆ ಸಿಟ್ ಬಂತು. “ನೀ ಸುಮ್ಮುನ್ ನಿಂದುರ್ ತಂಗಿ… ಪಾಚ್ ಮಿನೆಟ್ದಾಗ್ ಅಕಿಗಿ ಎಲ್ಲಾ ಕಾಣ್ಸತೂದ್ ನೀನೇ ನೋಡಟಿ ತಂಗಿ,” ಅಂದುನು.
ನಾ ಅಂದಾ, “ಎಲ್ಲಿಂದ್ ಕಾಣ್ಸತದ್ರಿ ಬಾಬಾ! ಅಕಿ ಒಂದ್ ಸಣ್ಣೂದ್ ತಗಡದ್ ಮನ್ಯಾಗ್ ಇರ್ತಾಳ. ನೀವು ಪಡಸಾಲಿ, ಬೆಡ್ರೂಮ್, ಪಲ್ಲಂಗ್ ಅಲ್ಲಾತೀರಿ. ಎಲ್ಲಿಂದ್ ಕಾಣ್ಸತೂದ್ ಹೇಳ್ರಿ?” ಅಂದ.
ಅವಾ ಪರೇಶಾನ್ ಆಗಿ, ಮೈಯಾಗ್ ದೇವರ್ ಬಂದಪ್ಲೇ ಮಾಡಿ ಚಟಾ-ಚಟಾ ಚೀರ್ಲತೂನ್. ಚೀರಿ-ಚೀರಿ ತಣ್ಣುಗ್ ಆಗಿ, “ತಂಗಿ ನಿನ್ ಬ್ಯಾನಿ ದವಾಖಾನಿ ಬ್ಯಾನಿ ಅದಾ… ಇದು ಅಲ್ಲೇ ದುರಸ್ತ ಆಯ್ತದ. ಕೈಯಾಟ ಸೈತಾನೀಂದ ಆಟ ಅಲ್ಲಿದು. ಹಂಗೇನರ ಇದ್ದುರ ನಮಗ ಅವಾಗೇ ತಿಳಿತೀತು. ನಡಿ ತಂಗಿ, ದವಾಖಾನೀಗಿ ಹೋಗು,” ಅಂತ ಹೇಳಿ. ನನ್ಕಡಿ ನೋಡಿ ಮಂತ್ರ ಹಾಕಿದಪ್ಲೆ ಮಾಡಿ, “ನಿಮ್ದರಾ ಪೂರಾ ದವಾಖಾನಿ ಬ್ಯಾನಿ ಅದಾ, ನಾವು ಮಾರಿ ನೋಡ್ದೂರೆ ಖೂನಾ ಹಿಡಿತೇವು. ಚಲೋ ಮುಂದಿನೋರು ಬರ್ರಿ,” ಅಂದುನು.
ನಾ ಹೊರಗ ಬಂದು, “ನೋಡ್ರೇ… ಈಗರಾ ತಿಳಿತಿಲ್ಲ – ಇವರ್ ನಾಟಕ್ ಹ್ಯಾಂಗ್ ಇರ್ತದಂತ?” ಅಂತಂದ. ಅವರಿಬ್ಬುರು, “ಐ… ಹೊಯಿಂದೆವ್ವಾ ಏಟರಾ ನಾಟಕ್ ಮಾಡ್ದುನ್ ನಡಿ ಅಕಾಡಿ ಪೂರಾ ದಿನಾನೇ ಹೊಯ್ತು! ಲೈನಿಗಿ ನಿಂತು-ನಿಂತು ಕಾಲೇ ನೊಯ್ಯಲತಾವ್,” ಅಂತಂದುರು.
ಹಿಂದ್ ಏಕಿಗಂತ ಹೇಮಾ ಹೋದುಳು. ಅಕೀನ್ ಹಿಂದ್ ನಾ ಹೋದ. ಕವಿತಾ, “ಇಕಾರಿ ಮೇಡಂ, ಅಕಾಡಿ ಹೋಗ್ ಬ್ಯಾಡ್ರಿ ಬೈತಾರ,” ಅಂತ ಅನ್ಕೋತಾ ಬಂದುಳು. ಅಲ್ಲಿ ಹಿಂದ್ ಇವರೆಲ್ಲ ಕೊಟ್ಟಿದ್ ಟೆಂಗಗೋಳು ಜಮಾಸಿ ಒಂದ್ ಚೀಲದಾಗ್ ತುಂಬಿ ವಾಪಸ್ ಎಲ್ಲಿ ಮಾರ್ಲತೀರು ಅಲ್ಲೇ ಒಯ್ದು ಇಡ್ಲತೀರು. ಕವಿತಾ ನೋಡಿ ಬಾಯಿ ತೆರ್ಕೊಂಡು ನಿಂತುಳು.
ನಾ ಅಂದ, “ನೋಡ್ ನಿಮ್ ಬಾಬಾನ್ ಬಿಜಿನೆಸ್ ಹ್ಯಾಂಗ್ ಅದಾ! ಹುಚ್ಚುರಪ್ಲೆ ಬರ್ತೀರಿ.” ಅದ್ಕಕಿ, “ಬರೊಬರಿ ಅದಾರಿ ಮೇಡಂ… ಛೇ! ಛ!…” ಅಂದುಳು. ಎಲ್ಲರೂ ನಕ್ಕೋತಾ ಮನಿಗಿ ಬಂದೇವು.