"...ನಮ್ಮ ಅಜ್ಜಾರ ಕಮತಾ ಮಾಡುವಾಗ ಕಾರಿ ಹುಣವಿಗೆ ಕಡೆ ಕೂರಗಿ ಅಂತಿದ್ರಂತ. ಅಂದ್ರ, ಕಾರಿ ಹುಣವಿ ಅನ್ನೊದ್ರಾಗ ಬಿತ್ತುವ ಮುಗಸಿ ಹೊನ್ನುಗ್ಗಿ ಮಾಡಿ, ಕರಿ ಹರಿಯೋದು. ಆದ್ರ, ಈಗ ಮಳಿನ ತಡಾ ಆಗಿ ಆಗಾಕತ್ತಾವು. ನಾವು ಕಾರಿ ಹುಣವಿ ಮಾಡಿ ಬಿತ್ತಾಕ ಹೊಕ್ಕೇವಿ..."
ಇಷ್ಟದಿನ ಮನ್ಯಾಗ ಹುಡುಗೂರ್ ಇದ್ವು. ಅವರ ಜೊಡಿ ಹರಟಿ ಹೊಡಕೊಂಡು ತಮ್ಮನ ಮದವಿ, ಕಾರ್ಯ-ಕಟ್ಟಣ, ಹುಟ್ಟದಬ್ಬ, ಅಮಾಸಿ, ಹುಣವಿ, ಜಾತ್ರಿ-ಜಪಾತ್ರಿ ಅಂತ ಮಂದಿ ಗದ್ದಲದಾಗ ಇದ್ಯಾ. ಮುಂಗಾರಿ ಮಳಿ ಬಿದ್ದಿದ್ದ ಬಿದ್ದಿದ್ದು ಇದ್ದಕ್ಕಿಂದ್ದಂಗ ಎಲ್ಲಾ ಖಾಲಿ-ಖಾಲಿ ಅನಸಾಕತ್ತೇತಿ. ಯಾಕ ಅಂದ್ರೇನು? ಬ್ಯಾಸಗಿ ಸೂಟಿ ಮುಗದು ಮನ್ಯಾಗಿನ ಹುಡುಗುರೆಲ್ಲಾ ಶಾಲಿಗೆ ಹೊಳ್ಳಿ ಹೊಂಟಾರ. ಹುಡುಗುರು ಹೊಗ್ಲಿ, ಮನ್ಯಾಗಿನೊರ ಅದಾರಲ್ಲ ಅನಕೊಂಡ್ರ, ಮಳಿ ಆಗೇತಿ, ಯಾರೂ ಕೈಗೆ ಸಿಗವಲ್ರು.
ಯಾರು ಮಾತಾಡಾಕ ಸಿಗಲಾರದ ಬ್ಯಾಸರಾಗಿ, ಹೊಲಕ್ ಹೊಂಟಿದ್ದ ನಮ್ಮ ಮಾಮನ್ ಕರದು ಕೇಳೆಬಿಟ್ಯಾ, “ಮಾಮಾ, ಇಷ್ಟ ದಿನಾ ಎಲ್ರೂ ಮನ್ಯಾಗ ಇದ್ರಿ, ಎಕ್ಕದಂ ಹೊಲಕ್ ಓಡ್ಯಾಡಾಕತ್ತಿರಲ್ಲ?” ಅಂತ. ನಮ್ಮ ಮಾಮಾ ಅಂದಾ, “ರೋಣಿ ಮಳಿ ಆದ್ರ ಓಣಿ ತುಂಬ ಕಾಳಂತ್, ಬಿತ್ತು ಕೆಲಸ ನಡದಾವಾ. ಅದಕ ನಿನಗ ಯಾರು ಮಾತಾಡಾಕ ಸಿಗವಲ್ರಾಗ್ಯಾರ…”
“ಇಷ್ಟ ದಿನಾ ಬ್ಯಾಸಗಿ ಇತ್ತು. ಹೊಲದ ಕೆಲಸ ಭಾಳ ಇರಲಿಲ್ಲ. ತಕ್ಕೊಂಡ ಬೆಳಿ ಮಾರಿ ಊರ ಜಾತ್ರಿ, ಎಲೆಕ್ಷನ್ ಅಂತ ಓಡ್ಯಾಡಿದ್ವಿ. ಒನ್ನೆ ಮಳಿ ಬಿದ್ದಾಗ ಬಿತ್ತಾಕ ಅಣಿಯಾಗಿವಿ. ಮಳಿಗಾಲ ಇನ್ನೇನ್ ಚಾಲೂ ಅಕ್ಕೇತಿ ಅನ್ನೊಕಿಂತ ಮದ್ಲ ಹೊಲಾ ಎಲ್ಲಾ ಹಸನ ಮಾಡಿವಿ. ಇದಿನ್ನೂ ತಡಾ ಆಗೇತಿ. ನಮ್ಮ ಅಜ್ಜಾರ ಕಮತಾ ಮಾಡುವಾಗ ಕಾರಿ ಹುಣವಿಗೆ ಕಡೆ ಕೂರಗಿ ಅಂತಿದ್ರಂತ. ಅಂದ್ರ, ಕಾರಿ ಹುಣವಿ ಅನ್ನೊದ್ರಾಗ ಬಿತ್ತುವ ಮುಗಸಿ ಹೊನ್ನುಗ್ಗಿ ಮಾಡಿ, ಕರಿ ಹರಿಯೋದು. ಆದ್ರ, ಈಗ ಮಳಿನ ತಡಾ ಆಗಿ ಆಗಾಕತ್ತಾವು. ನಾವು ಕಾರಿ ಹುಣವಿ ಮಾಡಿ ಬಿತ್ತಾಕ ಹೊಕ್ಕೇವಿ…” ಅಂದಾ.
ಈ ನುಡಿಗಟ್ಟು ಕೇಳಿದ್ದೀರಾ?: ಕೆ ಆರ್ ಪೇಟೆ ಸೀಮೆಯ ಕನ್ನಡ | ಕೊನ್ಗೂ ಬುದ್ದಿ ಕಲ್ತು ನಾರಾಯಣ್ ಗೌಡುನ್ನ ಸೋಲ್ಸುದ್ರು ನಮ್ ಕ್ಯಾರ್‌ಪೇಟೆ ಜನ
ನಾ ಮತ್ ಕೇಳಿದೆ, “ಹೊಲ ತೊದಾವ, ಬಿತ್ತಾಕ ಬಿತ್ತು ಮಳಿ ಆಗ್ಯದನು? ನಮ್ಮ ಹೊಲಕ್ ಏನ್ ಹಾಕತೀರಿ? ಮತ್ ಗ್ವಾನಜ್ವಾಳ ಹಾಕತೀರೇನು?”
“ಆದ್ರಿ ಮಳಿಗೆ ಆರಕಾಳ ಜಾಸ್ತಿ ಅಂತ… ಆದ್ರಿ ಮಳಿ ಆಗಿಂದ ದೊಡ್ಡ ಜ್ವಾಳ, ಶೇಂಗಾ, ಎಳ್ಳು, ಹೆಸರು, ನವಣಿ ಬಿತ್ತಾರ ಬಿತ್ತೊರು. ನಾವು ಇದೊಂದ ಸಲ ಗ್ವಾನಜ್ವಾಳನ ಹಾಕೂನು. ಮನಿ ಪೂರ್ತಿ ಸ್ವಲ್ವ ತಿನ್ನೊಜ್ವಾಳಾ ಬಿತ್ತಕೊಳ್ಳುಣು. ಈ ಸಲ ಜ್ವಾಳಾ ಬಿತ್ತುವಾಗ ಗುಗ್ರಿ ಭಾಳಷ್ಟ ಮಾಡುಣು. ನೀವ್ ಸಣ್ಣೊರಿದ್ದಾಗ ತಿಂದಿದ್ರಿ ಹೌದಿಲ್ಲೊ? ಈ ಸಲಾ ಜ್ವಾಳಾ ಬಿತ್ತುವಾಗ ಗುಗ್ರಿ ಮಾಡೆ ಮಾಡುಣು. ಅವಾಗೆಲ್ಲಾ ಪಡಿಪಡಿ ಕಾಳ ಹಾಕೋರು ಗುಗ್ರಿಗೆ. ಜ್ವಾಳಾ, ತೊಗರಿಕಾಳು, ಹೆಸರಕಾಳು, ಶೇಂಗಾಕಾಳು, ಕಡ್ಲಿಕಾಳು ಮತ್ ಮನ್ಯಾಗ್ವಾವರ ಬೇರೆ ಕಾಳಿದ್ರ ಅವನ್ನು ಒಂದ-ಒಂದ ಪಡಿ ಹಾಕಿ ಗುಗ್ರಿ ಕುದಸೋರು. ಜ್ವಾಳಾ ಬಿತ್ತಿ ಬಂದೊರ್ಗೆ ಸಪ್ಪನ ಗುಗ್ರಿ ಕೊಡೋದು. ನಾವು ಉಪ್ಪು ಹಕ್ಕೊಂಡ ತಿನ್ನೊದು. ಬಿತ್ತುವು ಮುಗ್ಯಾಕ ಬರತಾವು. ಅಷ್ಟರಾಗ ಮತ್ ಮಣ್ಣೆತ್ತಿನ ಅಮಾಸಿ ಬರತೇತಿ. ನೆನಪ ಅದ ಏನು ನೀವು ಸಣ್ಣೊರಿದ್ದಾಗ ಮಣ್ಣಿನ ಬಸವಣ್ಣನ ಮಾಡಾಕ ಓಡ್ಯಾಡತಿದ್ರಿ. ನಿಮ್ಮ ಅಣ್ಣಾರ ಮುಂಜೆಲೆ ಮುಂಜೆಲೇ ಜಳಕಾ ಮಾಡಿ, ಕೆರಿಯಿಂದರ ಇಲ್ಲ ಹೊಲದಾಗಿಂದನರ ಚೊಲೋ ಮಣ್ಣ ತಂದು ಹದಾ ಮಾಡಿ ಅರ್ಲ ಮಾಡೊರು. ಆ ಅರ್ಲನ್ಯಾಗ ಹಗಲೆಲ್ಲಾ ಎತ್ತ ಮಾಡೊದ್ರಾಗ ಕಳಿತಿದ್ರು…!”
“…ನೀವು, ನನ್ನ ಎತ್ತ ನೋಡ್ಲೆ ನಿನ್ ಎತ್ತ ನೋಡ್ಲೆ… ಹೇ ನನ್ನ ಎತ್ತ ನಿನ್ನಕಿಂತ ಮಸ್ತ ಆಗೇತಿ… ನನ್ನ ಎತ್ತ ನೀನ್ ಎತ್ತಿಗಿಂತ ದೊಡ್ಡವಾಗ್ಯಾವು… ಹೇ ನನ್ನ ಗ್ವಾಲ್ದಿ ನೋಡು… ನಮ್ಮ ಎತ್ತಿಗೆ ಭಾಳಷ್ಟ ಹತ್ತಿ ಕಾಳ ಹಾಕತೇನಿ, ನಾ ಅದಕ ದೊಡ್ಡ ಗ್ವಾಲ್ದಿ… ಮಾಡೇನಿ ಅನಕಂತ, ಪೂಜೆ ಮಾಡಾಕ ಬಸವಣ್ಣನ ತರ್ರಿಲಾ ಎಷ್ಟ ಹೊತ್ತು… ಅಂತ ನಿಮ್ಮ ಅವ್ವಾರ ಕೇಳುಮಟ ಒಳಗ ತರರ್ತಿರಲಿಲ್ಲ…”
ಈ ನುಡಿಗಟ್ಟು ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ಪೋತುರಾಜುಲು ಮತ್ತು ಧರಮ ದೊರೆಗಳ ಬೆಂಕಿ ಆಟ
“…ಜಗಲಿ ಮ್ಯಾಲೆ ಬಸವಣ್ಣನ ಇಟ್ಟು, ಅವಕುರ್ ಮುಂದ ಗ್ವಾಲ್ದಿ ಇಟ್ಟು, ಅದರಾಗ ಹತ್ತಿಕಾಳ ಹಾಕತಿದ್ರು. ಅವಾಗ-ಅವಾಗ ಹೋಗಿ, ನಮ್ಮ ಬಸವಣ್ಣ ಹತ್ತಿಕಾಳ ತಿಂದಾವನು ಅಂತ ನೋಡಿ ಬರತಿದ್ರಿ ನೀವು! ಮತ್ ಮಾರನೇ ದಿನ ಅವನ್ನ ತಗೊಂಡ ಆಟಾ ಆಡುದು. ನೀವ್ ಜಗ್ಗ ಮಣ್ಣಾಟ ಆಡಿರಿ ನೋಡಬೆ. ಈಗ ನಿಮ್ಮ ಮಕ್ಕಳು ಮಣ್ಣ ಮುಟ್ಟಂಗಿಲ್ಲ. ನೀವೆಲ್ಲಾ ಮಣ್ಣಾಗ ಬೆಳದಿರಿ ನೋಡು. ಪ್ಯಾಟ್ಯಾಗ ಎಲ್ಲಿತರ್ತಿ ಚೊಲೋ ಮಣ್ಣ, ಅಲ್ಲಿ ಬರೇ ಧೂಳ ನೋಡ್ವಾ…” ಅಂದವನ, “ಅಯ್ಯೊ…” ಅನಕೊಂಡ ಮ್ಯಾಲೆದ್ದಾ.
“ಯವ್ವಾ… ನಿನ್ನ ಜೋಡಿ ಮಾತ ಹಚ್ಚಕೊಂಡ ಕುಂತೇನ್ ನೋಡ್ ನಾನು. ಗಳೆ ಬಿಟ್ ಬಂದೇನಿ, ನಾ ಹೋಗಿರತೇನಿ. ಇನ್ನ ಒಮ್ಮೆಲೆ ಸಂಜಿ ಮುಂದ ಸಿಗತಾರ ನೋಡ್ವಾ ಎಲ್ಲರೂ…” ಅಂದು ಬಾರಕೋಲ್ ಹೆಗಲಿಗೆ ಹಕ್ಕೊಂಡ ಹೋದಾ.
“ಹುಂ… ಸಂಜಿಮಟ ಕಾದ್ರಾತು, ಮಾತರ ಎಲ್ಲಿ ಹೊಕ್ಕಾವ! ಅವರು ಇವತ್ ಬಿತ್ತಲಿಲ್ಲ ಅಂದ್ರ ಬೆಳಿ ಎಲ್ಲಿಂದ ಬರತದ, ನಾವರೆ ಏನ್ ತಿನ್ನುದು? ಅಂಗಡಿಯಿಂದ ತರತಿವಿ ಅನ್ನಾಕ ರೈತ್ರು ಬೆಳದ್ರ ಅಲ್ಲಾ ಅಂಗಡ್ಯಾಗೂ, ಕಿರಾಣಿ ಸಿಗೋದು,” ಅಂತ ನಾನ್ ಸಮಾಧಾನ ಮಾಡಕೊಂಡೆ.
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ
ಉತ್ತರ ಕರ್ನಾಟಕದ ಶೈಲಿ ಒಳಗ ಬಾಳ ಚಂದ ಬರಿದೀರಿ.
ಹಿಂತಾ ಲೇಖನ ಈಗೀನ ಮಕ್ಕಳಿಗೆ ಓದಾಕ ಬರೋದಿಲ್ರಿ.
ಹಿಂತಾ ಬರವಣಿಗೆ ಒದೀದ್ರ ಭಾಷಾ ಜ್ಞಾನ ಹೆಚ್ಚಾಕ್ಕೆತಿ.
ನೋಡ್ರಿ ಮೆಡಮ್ ರ ನೀವ ಬರದಿದ್ದ ಲೇಖನ ಓದಿ ನಮ್ಮ ಸ್ಟೂಡೆಂಟ್ ಗಳಿಗೆ ಹೇಳಿದೆ ಬಾಳ ಕುಸಿ ಆದ್ರ.
ನಿಮಗೆ ತುಂಬಾ ಧನ್ಯವಾದಗಳು. 🙏❤️💐