ಮಣಿಪುರದ ತಾಯಂದಿರ ಹಸ್ತಗಳಿಗೆ ಹಿಂಸಾಚಾರದ ನೆತ್ತರು ಅಂಟಿದೆ. ಇತಿಹಾಸದ ಪುಟಗಳಲ್ಲಿ ಉತ್ಕೃಷ್ಟ ದಾಖಲೆಯುಳ್ಳ ಮೈರಾಪೈಬಿಗಳ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿವೆ
ಇಂಫಾಲ ಕಣಿವೆಯ ಗ್ರಾಮಗಳಲ್ಲಿ, ಇಂಫಾಲ ನಗರದಲ್ಲಿ ಅಲ್ಲಲ್ಲಿ ಧರಣಿ ಕುಳಿತ ಮಹಿಳೆಯರು ಕಾಣಸಿಗುತ್ತಾರೆ. ಮೈತೇಯಿಗಳಿರುವ ಗ್ರಾಮಗಳನ್ನು ರಕ್ಷಿಸುವ ಕಾವಲು ಪಡೆಯಾಗಿ ಈ ಮಹಿಳೆಯರು ಸಕ್ರಿಯರಾಗಿದ್ದಾರೆ. ‘ಇನಾಫಿ’ ಮತ್ತು ’ಫನೇಕ್’ ಸಾಂಪ್ರದಾಯಿಕ ಉಡುಪು ಧರಿಸಿ, ರಾತ್ರಿ ವೇಳೆ ಪಂಜು ಮತ್ತು ಮೋಂಬತ್ತಿಗಳ ಹಿಡಿದು ತಮ್ಮ ಸಾಂಕೇತಿಕ ಪ್ರತಿರೋಧವನ್ನು ಪ್ರತಿದಿನವೂ ದಾಖಲಿಸುತ್ತಿದ್ದಾರೆ. ಕುಕಿ ಪ್ರದೇಶಗಳತ್ತ ಹೊರಡುವ ಮಿಲಿಟರಿ ಪಡೆಯನ್ನು ತಡೆದು ‘ಅಸ್ಸಾಂ ರೈಫಲ್ಸ್ ಗೋ ಬ್ಯಾಕ್’ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ- ಇವರೇ ಮೈರಾ ಪೈಬಿಗಳು.
2023ರ ಮೇ 3ರಂದು ಹಿಂಸಾಚಾರ ಭುಗಿಲೆದ್ದ ಬಳಿಕ ಕುಕಿಗಳು ಮತ್ತು ಮೈತೇಯಿಗಳು ಮತ್ತೆ ಒಂದಾಗಲಾರದಷ್ಟು ಒಡೆದು ಹೋಗಿದ್ದಾರೆ. ಉಭಯ ಸಮುದಾಯಗಳಿರುವ ಗ್ರಾಮಗಳ ಗಡಿಗಳಲ್ಲಿ ಸಾಲು ಸಾಲು ಬಂಕರ್ಗಳು ತಲೆ ಎತ್ತಿವೆ. ಕುಕಿ ಪ್ರದೇಶವನ್ನು ಮೈತೇಯಿಯೇತರ ಸಮುದಾಯದವರಷ್ಟೇ ಪ್ರವೇಶಿಸಬಹುದು. ಕುಕಿಯೇತರರಷ್ಟೇ ಇಂಫಾಲ ಕಣಿವೆಯಲ್ಲಿ ಪ್ರವಾಸ ಮಾಡಬಹುದು. ಎರಡು ಜನಾಂಗಗಳ ನಡುವೆ ಕತ್ತುಕತ್ತಿನ ಕಾಳಗ ಏರ್ಪಡುವ ಗಡಿ ಭಾಗಗಳಲ್ಲಿ ಮಹಿಳೆಯರ ಗುಂಪುಗಳು ಅಲ್ಲಲ್ಲಿ ಕೆಲಸ ಮಾಡುತ್ತಿವೆ. ನಾಗರಿಕರನ್ನೂ ತಡೆದು ದಾಖಲೆಗಳನ್ನು ಪರಿಶೀಲಿಸುತ್ತಿವೆ. ಅದರಲ್ಲೂ ಮೈತೇಯಿ ಸಮುದಾಯದಲ್ಲಿ ’ಮೈರಾಪೈಬಿ’ ಮಹಿಳಾ ವರ್ಗ ಹೆಚ್ಚು ಕಾರ್ಯನಿರತ.
’ಮೈರಾ ಪೈಬಿ’ ಪರಿಕಲ್ಪನೆಗೆ ಬಹುದೊಡ್ಡ ಇತಿಹಾಸವೇ ಇದೆ. ಇದೊಂದು ಚಳವಳಿಯೂ ಹೌದು, ಮೈತೇಯಿ ಮಹಿಳೆಯರ ಅಸ್ಮಿತೆಯೂ ಹೌದು. ’ಮೈರಾ ಪೈಬಿ’ ಎಂದರೆ ’ಪಂಜು ಅಥವಾ ಬೆಳಕು ಹಿಡಿದವರು’ ಎಂದರ್ಥ. ಮೈತೇಯಿ ಸಮುದಾಯದ ಪ್ರತಿ ಗೃಹಿಣಿಯೂ ಇಂದು ’ಮೈರಾ ಪೈಬಿ’ಯಾಗಿ ಗುರುತಿಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಇತಿಹಾಸ ಮಣಿಪುರ ಮಹಿಳೆಯರಿಗಿದೆ. ಎಪ್ಪತ್ತರ ದಶಕದಲ್ಲಿ ‘ನಶಾಬಂದಿಗಳು’ ಎಂಬ ಹೆಸರನ್ನೂ ಮೈರಾ ಪೈಬಿಗಳು ಪಡೆದಿದ್ದರು. ಅಂದರೆ ಮದ್ಯ, ಮಾದಕ ವಸ್ತುಗಳ ವಿರುದ್ಧ ಇವರು ಸಮರ ಸಾರಿದ್ದರಿಂದ ’ನಶಾಬಂದ್ ಚಳವಳಿ’ ರೂಪುಗೊಂಡಿತ್ತು. ಮದ್ಯಪಾನ ವ್ಯಸನಿ ಗಂಡಸರಿಗೆ ತಕ್ಕ ಪಾಠ ಕಲಿಸುತ್ತಿದ್ದರು. ಪಂಜುಗಳನ್ನಿಡಿದು ರಾತ್ರಿ ವೇಳೆ ಜಾಗೃತಿಯನ್ನು ಮೂಡಿಸುವ ಜೊತೆಗೆ ಮದ್ಯದಂಗಡಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಮದ್ಯ, ಮಾದಕ ವಸ್ತುಗಳ ನಿಷೇಧವನ್ನೂ ಆ ದಿನಗಳಲ್ಲಿ ಮಾಡಲಾಗಿತ್ತು. ನಂತರದ ಕಾಲಘಟ್ಟದಲ್ಲಿ ನಾಗರಿಕರಲ್ಲಿ ಅಶಾಂತಿ ಉಂಟಾಗಿತ್ತು. ಗಲಭೆಗಳಿಗೆ ಕಾರಣವಾದವರ ವಿರುದ್ಧ ಕ್ರಮ ಜರುಗಿಸುವಂತೆ ’AFSPA’ (Armed Forces (Special Powers) Act- 1958) ಬಳಸಲಾಗಿತ್ತು. ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಸೇನೆಯು ನಾಗರಿಕರ ಮೇಲೆ ದಬ್ಬಾಳಿಕೆ ಮಾಡಿ, ಮಾನವ ಹಕ್ಕುಗಳನ್ನು ಉಲ್ಲಂಘಿಸಿತು. ಬಂಧನ, ಕೊಲೆ, ಹಿಂಸೆಗಳನ್ನು ಸೇನೆಯು ನಡೆಸಿದ್ದರಿಂದ ನಶಾಬಂದಿಗಳು ಕಾನೂನನ್ನು ಕೈಗೆತ್ತಿಕೊಂಡಿದ್ದರು. ರಾತ್ರಿ ವೇಳೆ ಪಂಜು ಹಿಡಿದು ಹೋರಾಟ ನಡೆಸಿದ’ಮೈರಾ ಪೈಬಿ’ಗಳು ಹೆಚ್ಚು ಪ್ರಚಾರದ ಮುಂಬೆಳಕಿಗೆ ಬಂದರು.
ಪ್ರಭುತ್ವದ ವಿರುದ್ಧದ ಹೋರಾಟಗಳಲ್ಲಿ, ನಾಗರಿಕರ ರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಮೈತೇಯಿ ಮಹಿಳೆಯರು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿರುವ ’ಮೈರಾ ಪೈಬಿ’ ಅಸ್ಮಿತೆಯು ಇಂದಿನ ಮಣಿಪುರ ಬಿಕ್ಕಟ್ಟಿನಲ್ಲಿ ವಿವಾದಕ್ಕೆ ಗುರಿಯಾಗಿದೆ. ಅಹಿಂಸೆಯ ಜಪ ಮಾಡುತ್ತಿದ್ದ ಮಹಿಳೆಯರು ಹಿಂಸಾಚಾರಕ್ಕೆ ಇಳಿದಿದ್ದಾರೆಂಬ ಆಪಾದನೆಗಳು ಕೇಳಿ ಬಂದಿವೆ.
ಕುಕಿ ಮತ್ತು ಮೈತೇಯಿ ನಡುವೆ ನಡೆಯುತ್ತಿರುವ ಜನಾಂಗೀಯ ಕದನಕ್ಕೆ ಸಂಬಂಧಿಸಿದಂತೆ ಮೈರಾಪೈಬಿಗಳ ಮೇಲೆ ಕುಕಿ ಸಮುದಾಯ ಹಲವು ಆರೋಪಗಳನ್ನು ಮಾಡುತ್ತಿದೆ. ಹಿಂಸಾಚಾರ ಭುಗಿಲೆದ್ದ ಸಂದರ್ಭದಲ್ಲಿ ಕುಕಿ ಮಹಿಳೆಯರನ್ನು ಮೈತೇಯಿ ಉಗ್ರಗಾಮಿಗಳಿಗೆ ಹಿಡಿದುಕೊಟ್ಟ ಗಂಭೀರ ಆರೋಪಕ್ಕೆ ಇವರು ಗುರಿಯಾಗಿದ್ದಾರೆ. ಕುಕಿಗಳು ವಾಸಿಸುವ ಗುಡ್ಡಗಾಡುಗಳಿಗೆ ಅಗತ್ಯ ವಸ್ತುಗಳ ಸಾಗಿಸದಂತೆ ತಡೆಯೊಡ್ಡುತ್ತಿದ್ದಾರೆಂಬ ಟೀಕೆಗಳು ಬಂದಿವೆ. ಮಣಿಪುರದಿಂದ ವರದಿ ಮಾಡುತ್ತಿರುವ ’ಈದಿನ.ಕಾಂ’ ತಂಡವು ಕುಕಿ ಮತ್ತು ಮೈತೇಯಿ (ಮೈರಾಪೈಬಿ) ಮಹಿಳೆಯರನ್ನು ಭೇಟಿ ಮಾಡಿತು. ಉಭಯ ಸಮುದಾಯಗಳ ಪ್ರತಿನಿಧಿಗಳು ತಮ್ಮದೇ ಆದ ಕಥಾನಕಗಳನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.
ಕುಕಿ ಪ್ರಾಬಲ್ಯದ ಚುರಾಚಾಂದ್ಪುರ (ಲಮ್ಕಾ)ದಲ್ಲಿ ’ಮಾನವ ಹಕ್ಕುಗಳಿಗಾಗಿ ಕುಕಿ ಮಹಿಳಾ ಸಂಘಟನೆ’ (KWOHR) ಅಧ್ಯಕ್ಷೆ ನೈನಿ ಕಿಮ್ (Ngainei Kim) ‘ಈದಿನ.ಕಾಂ’ನೊಂದಿಗೆ ಮಾತನಾಡುತ್ತಾ, “ಮಣಿಪುರದ ಎಲ್ಲ ಮಹಿಳೆಯರ ಬಗ್ಗೆ ನಾನು ಹೇಳುತ್ತಿಲ್ಲ. ಆದರೆ ನಮ್ಮ ಕೆಲವು ಸಂತ್ರಸ್ತ ಮಹಿಳೆಯರು ಅನುಭವಿಸಿದ್ದನ್ನು ತಿಳಿಸುತ್ತಿದ್ದೇನೆ. ಹೊಡೆಯಿರಿ, ಕೊಲ್ಲಿರಿ, ರೇಪ್ ಮಾಡಿ, ಸುಟ್ಟು ಹಾಕಿ ಎಂಬ ಮಾತುಗಳನ್ನು ಮೈರಾಪೈಬಿಗಳು ಆಡಿದ್ದಾರೆ. ನಮ್ಮ ಕುಕಿ ಮಹಿಳೆಯರು ಎಂದಿಗೂ ಮೈತೇಯಿ ಮಹಿಳೆಯರ ಮೇಲೆ ಈ ರೀತಿಯಲ್ಲಿ ವರ್ತಿಸಿಲ್ಲ” ಎಂದರು.

“ಕೆಲವು ಮೈರಾಪೈಬಿಗಳು ಕುಕಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಆದರೆ ಕೆಲವರು ದೌರ್ಜನ್ಯ ಎಸಗಿದ್ದಾರೆ. ಆದರೆ ನಮ್ಮ ಎಲ್ಲ ಕುಕಿ ಮಹಿಳೆಯರು ಮೈತೇಯಿ ಸೋದರ, ಸೋದರಿಯರ ರಕ್ಷಣೆಗೆ ಗಮನ ಕೊಟ್ಟಿದ್ದಾರೆ” ಎಂದು ತಿಳಿಸಿದರು.
ಮುಂದುವರಿದು, “ಮೈರಾ ಪೈಬಿಗಳ ಜೊತೆಯಲ್ಲಿ ಮಾತುಕತೆಗೆ ಕೂರುತ್ತೀರಾ ಎಂದು ಕೆಲವರು ಕೇಳಿದ್ದಾರೆ. ಆದರೆ ಆಗಲ್ಲ ಎಂದಿದ್ದೇನೆ. ನಮಗೆ ಶಾಂತಿ ಬೇಕು, ಆದರೆ ಅವರ ಜೊತೆಯಲ್ಲಿ ಮಾತುಕತೆ ಸಿದ್ಧವಿಲ್ಲ. ಏಕೆಂದರೆ ನಮ್ಮ ಹೆಣ್ಣುಮಕ್ಕಳು ರೇಪ್ ಆಗಿ, ಕೊಲೆಯಾಗಿರುವುದಕ್ಕೆ ಕೆಲವು ಮೈರಾಪೈಬಿಗಳು ಕಾರಣವಾಗಿದ್ದಾರೆ” ಎಂದು ನೇರವಾಗಿ ದೂರಿದರು.
“ಇಂದಿಗೂ ನಾವು ಶೋಕಾಚರಣೆಯಲ್ಲಿದ್ದೇವೆ. ಶವಸಂಸ್ಕಾರ ಮಾಡಿಲ್ಲ. ನಮ್ಮ ಹೆಣ್ಣುಮಕ್ಕಳಿಗೆ ಚಿತ್ರಹಿಂಸೆ ನೀಡಿದವರ ಜೊತೆಯಲ್ಲಿ ಕುಳಿತು ಹೇಗೆ ಮಾತನಾಡಲಿ? ಅವರು (ಮೈರಾಪೈಬಿಗಳು) ಶಾಂತಿ ಬಗ್ಗೆ ಮಾತನಾಡುತ್ತಾರೆ. ಆದರೆ ವಾಸ್ತವವಾಗಿ ಮಾಡಿರುವುದೇನು?” ಎಂದ ಕಿಮ್, ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೇ ಈ ಜನಾಂಗೀಯ ಕಲಹಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
“ಗುಡ್ಡುಗಾಡು ಪ್ರದೇಶಕ್ಕೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಇಲ್ಲಿಯವರೆಗೂ ಬಂದಿಲ್ಲ. ನಾಗಾ, ಕುಕಿ ಸೇರಿದಂತೆ ಎಲ್ಲ ವನವಾಸಿಗಳು ರ್ಯಾಲಿಯನ್ನು ಹಮ್ಮಿಕೊಂಡಿದ್ದಾಗ, ಬಿರೇನ್ ಸಿಂಗ್ ಕುಕಿಗಳನ್ನೇ ಟಾರ್ಗೆಟ್ ಮಾಡಿ ಒಡೆದು ಆಳುವ ರಾಜಕೀಯ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅವರು ಯಾವುದೇ ಕಾರಣಕ್ಕೂ ನಮ್ಮ ಮುಖ್ಯಮಂತ್ರಿಯಾಗಿ ಉಳಿದಿಲ್ಲ. ಮೈತೇಯಿ ಲೀಪೂನ್, ಆರಂಬಾಯ್ ತೆಂಗೋಲ್ ಸಂಘಟನೆಗಳನ್ನು ಕುಕಿಗಳ ವಿರುದ್ಧ ಪ್ರಚೋದಿಸುತ್ತಿದ್ದಾರೆ. ಕಾಡು ಮತ್ತು ಕಣಿವೆಯ ನಡುವೆ ಬಿರುಕು ಮೂಡಲು ಮುಖ್ಯಮಂತ್ರಿಯೇ ಕಾರಣ” ಎಂದು ವಿಷಾದ ವ್ಯಕ್ತಪಡಿಸಿದರು.
“ಮೈರಾ ಪೈಬೀಸ್ ರೀತಿಯಲ್ಲಿ ನಾವು ಕೂಡ ನಮ್ಮ ಮಹಿಳೆಯರನ್ನು ಚೆಕ್ ಪೋಸ್ಟ್ ಗಳಲ್ಲಿ ನೇಮಿಸಿದ್ದೇವೆ” ಎಂದ ಅವರು, “ಅಸ್ಸಾಂ ರೈಫಲ್ಸ್ ನಮ್ಮನ್ನು ರಕ್ಷಿಸುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಮೈರಾಪೈಬಿಗಳಲ್ಲಿ ಎಂದಿಗೂ ಅಚ್ಚಳಿಯದ ಹೆಸರು ಇಮಾ ನಾಂಬಿ (Ima Nganbi). ’ಇಮಾ’ ಎಂದರೆ ತಾಯಿ ಎಂದರ್ಥ. 2004ರ ಅವಧಿಯಲ್ಲಿ ತಂಜೋಮ್ ಮನೋರಮಾ (Thangjam Manorama) ಎಂಬ 32 ವರ್ಷದ ಮಹಿಳೆಯ ಮೇಲೆ ಭಾರತೀಯ ಸೇನೆ ಅತ್ಯಾಚಾರ ಮಾಡಿ, ಕೊಲೆಗೈದ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪ್ರತಿಭಟಿಸಿ ’ಭಾರತೀಯ ಸೇನೆಯೇ ಬನ್ನಿ, ನಮ್ಮನ್ನು ರೇಪ್ ಮಾಡಿ’ ಎಂದು ಬೆತ್ತಲೆ ಮೆರವಣಿಗೆ ಮಾಡಿದ ದಿಟ್ಟ ಮಹಿಳೆಯರಲ್ಲಿ ಇಮಾ ನಾಂಬಿಯೂ ಒಬ್ಬರು. ಇಂದು ಮಣಿಪುರದಲ್ಲಿ ನಡೆಯುತ್ತಿರುವ ವಿಚ್ಛಿದ್ರಕಾರಿ ಘಟನೆಗಳಿಗೆ ಸಂಬಂಧಿಸಿದಂತೆ ಇಮಾ ’ಈ ದಿನ’ದೊಂದಿಗೆ ಮಾತನಾಡಿದ್ದಾರೆ.
ಕುಕಿ ಮಹಿಳಾ ಪ್ರತಿನಿಧಿಗಳ ಆರೋಪಗಳನ್ನು ತಿರಸ್ಕರಿಸಿದ ಇಮಾ, “ಮೈರಾ ಪೈಬಿಗಳ ಹೋರಾಟದ ಬದುಕಿನಲ್ಲಿ ಈ ಸಂದರ್ಭ ಸಂಪೂರ್ಣ ಭಿನ್ನವಾಗಿದೆ” ಎಂದು ಅಭಿಪ್ರಾಯ ತಾಳುತ್ತಾರೆ. “ಮೈರಾ ಪೈಬಿಗಳು ಯಾವುದೇ ಸಂದರ್ಭದಲ್ಲಿ ಕುಕಿ ಮಹಿಳೆಯರನ್ನು ಮೈತೇಯಿ ಪುರುಷರ ವಶಕ್ಕೆ ನೀಡಿಲ್ಲ. ಕುಕಿಗಳು ಮೈತೇಯಿ ಮನೆಗಳನ್ನು ಸುಟ್ಟು ಹಾಕಿದ್ದಾರೆ. ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಕುಕಿ ಸಮುದಾಯದವರು ದಾಳಿ ಮಾಡಿದ್ದಕ್ಕೆ ಮೈತೇಯಿ ಸಮುದಾಯದವರು ಪ್ರತೀಕಾರದ ಪ್ರತಿಕ್ರಿಯೆ ತೆಗೆದುಕೊಂಡಿದ್ದಾರೆ” ಎನ್ನುತ್ತಾರೆ ಈ ಹಿರಿಯ ಹೋರಾಟಗಾರ್ತಿ.
“ಮಹಿಳೆಯರ ಘನತೆಗೆ ಧಕ್ಕೆಯಾದರೆ- ಅದು ಕುಕಿಯಾಗಲೀ, ಮೈತೇಯಿಯಾಗಿರಲೀ, ನಾಗಾ ಆಗಿರಲೀ- ನಾವು ಅದನ್ನು ಖಂಡಿಸುತ್ತೇವೆ. ಯುದ್ಧಗಳು ನಡೆದಾಗಲೆಲ್ಲ ಮಹಿಳೆಯರನ್ನು ಆಯುಧವಾಗಿ ಬಳಸುತ್ತಾರೆ. ಇದಾಗಬಾರದು. ಘಟನೆಯನ್ನು ನಾನು ಸೇರಿದಂತೆ ಮೈತೇಯಿ ಮಹಿಳೆಯರೆಲ್ಲರೂ ಖಂಡಿಸುತ್ತೇವೆ” ಎಂದು ಒತ್ತಿ ಹೇಳಿದರು.

“ಕುಕಿ ಸಮುದಾಯದವರು ನಮ್ಮನ್ನು ಅಪಾಯಕಾರಿ ಅಂದುಕೊಂಡಿದ್ದಾರೆ. ಆದರೆ ಭದ್ರತಾ ಪಡೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮೈತೇಯಿ ಮಹಿಳೆಯರು ತಮ್ಮ ಮನೆ, ಆಸ್ತಿಪಾಸ್ತಿ ರಕ್ಷಣೆಗಾಗಿ, ತಮ್ಮ ಜೀವ ಉಳಿಸಿಕೊಳ್ಳುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕುಕಿಗಳ ವಿಚಾರದಲ್ಲಿ ನಾವು ಯಾವುದೇ ತಪ್ಪನ್ನು ಮಾಡಿಲ್ಲ” ಎಂದರು.
“ಮಣಿಪುರಕ್ಕಾಗಿ ಕೇಂದ್ರ ಸರ್ಕಾರವಾಗಲೀ, ಬಿರೇನ್ ಸಿಂಗ್ ನೇತೃತ್ವದ ರಾಜ್ಯ ಸರ್ಕಾರವಾಗಲಿ ಏನನ್ನೂ ಮಾಡುತ್ತಿಲ್ಲ. ನಮಗೆ ಸಾಯಲು ಇಷ್ಟವಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳಲು ಯುವ ಮೈರಾಪೈಬಿಗಳು ಮುಂದೆ ಬಂದಿದ್ದಾರೆ. ಚಿನ್ ಕುಕಿಗಳು ಅತಿಕ್ರಮ ಪ್ರವೇಶ ಮಾಡಿದರೂ ಸರ್ಕಾರಗಳು ಏಕೆ ಸುಮ್ಮನಿದ್ದವು. ಇಂದಿನ ಸಮಸ್ಯೆಗಳಿಗೆ ಸರ್ಕಾರಗಳೇ ಕಾರಣ”
ಜನಾಂಗೀಯ ಕದನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಎರಡು ಸಮುದಾಯಗಳ ಮಹಿಳೆಯರು ತಮ್ಮದೇ ದೃಷ್ಟಿಕೋನಗಳನ್ನು ಹೊಂದಿದ್ದಾರೆ. ಜೊತೆ ಪ್ರಭುತ್ವದ ಮೇಲೆ ಎಲ್ಲ ನಂಬಿಕೆಗಳನ್ನು ಕಳೆದುಕೊಂಡಿದ್ದಾರೆ.
ಮೈತೇಯಿ ಸಮುದಾಯದ ಮಹಿಳಾ ಹೋರಾಟಗಾರ್ತಿ ಹಾಗೂ ರಾಜಕೀಯಶಾಸ್ತ್ರ ಪ್ರಾಧ್ಯಾಪಕಿ ಶ್ರೀಮಾ ನಿಂಗ್, “ಮಣಿಪುರದ ಇಂದಿನ ಸ್ಥಿತಿಗೆ ಸರ್ಕಾರವೇ ಕಾರಣ. ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ಮಕ್ಕಳ ಶಿಕ್ಷಣ ಡೋಲಾಯಮಾನವಾಗಿದೆ. ನನ್ನ ಅನೇಕ ವಿದ್ಯಾರ್ಥಿಗಳು ಬಂದೂಕು ಹಿಡಿದು ಬೀದಿಗಿಳಿದಿದ್ದಾರೆ. ಅವರು ಯಾವುದೇ ತರಬೇತಿ ಪಡೆದವರಲ್ಲ. ಅವರ ಜೀವಗಳು ಅಪಾಯದಲ್ಲಿವೆ” ಎಂದು ಆತಂಕ ವ್ಯಕ್ತಪಡಿಸಿದರು.

ಸದ್ಯದ ಸ್ಥಿತಿಯಲ್ಲಿ ಮೈರಾಪೈಬಿಗಳ ನಡೆಯ ಕುರಿತು ಮಾತನಾಡಿದ ಅವರು, “ಮೈರಾಪೈಬಿಗಳು ದಶಕಗಳಿಂದಲೂ ಎಲ್ಲ ಸಮುದಾಯಗಳಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಮಾನವ ಹಕ್ಕುಗಳಿಗಾಗಿ ದನಿ ಎತ್ತಿದ್ದಾರೆ. ಮೈರಾಪೈಬಿಗಳು ಕೇವಲ ಮಣಿಪುರಕ್ಕೆ ಸೀಮಿತವಾಗಿಲ್ಲ. ಇವರ ಹೋರಾಟ ಹಲವು ರಾಜ್ಯಗಳಿಗೆ ಸ್ಫೂರ್ತಿಯಾಗಿದೆ” ಎಂದರು.
“ಗಲಭೆ ಆರಂಭವಾದಾಗ ಮೈರಾಪೈಬಿಗಳು ಇಷ್ಟು ಆತಂಕದಲ್ಲಿ ಇರಲಿಲ್ಲ. ಆದರೆ ಕುಕಿ ದಾಳಿಗಳಿಗೆ ಸಂಬಂಧಿಸಿದಂತೆ ಸೇನೆ ಮೌನ ತಳೆಯಿತು. ಆನಂತರವೇ ಮೈರಾಪೈಬಿಗಳು ಬೀದಿಗಿಳಿದರು” ಎಂದು ಸಮರ್ಥಿಸಿಕೊಂಡರು.
ಶಾಂತಿ ಬಯಸುವ ಮಣಿಪುರದ ತಾಯಂದಿರು ಈಗ ಯುದ್ಧಭೂಮಿಯ ಮುಖ್ಯಭೂಮಿಕೆಯಲ್ಲಿದ್ದಾರೆ. ಆಗುತ್ತಿರುವ ಬೆಳವಣಿಗೆಗಳ ಕುರಿತು ಮಹಿಳಾ ವರ್ಗದಲ್ಲಿ ವಿಷಾದವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಶಾಂತಿಯುತ ಮಾತುಕತೆ ದೂರ ದೂರದ ಸಾಧ್ಯತೆಯಾಗಿ ಕಾಣುತ್ತಿದೆ.
“ಮಣಿಪುರದ ತಾಯಂದಿರು ಈ ಸಂದರ್ಭದಲ್ಲಿ ಏನು ಹೇಳಬಲ್ಲರು? ಈಗ ಯುದ್ಧ ನಡೆಯುತ್ತಿದೆ. ತಮ್ಮ ಸಮುದಾಯಗಳನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ಎರಡು ಸಮುದಾಯಗಳ ತಾಯಂದಿರಿಗೂ ಶಾಂತಿ ಬೇಕಿದೆ. ಒಂದಲ್ಲ ಒಂದು ದಿನ ನಾವು ಒಟ್ಟಿಗೆ ಕೂರಬಹುದು. ಅದಕ್ಕಾಗಿ ದೇವರಲ್ಲಿ ನಾವು ಪ್ರಾರ್ಥಿಸುತ್ತೇನೆ” ಎನ್ನುತ್ತಿದ್ದಾರೆ ಕಿಮ್.
“ಕುಕಿ ಮತ್ತು ಮೈತೇಯಿ ಸಮುದಾಯಗಳ ಅಮಾಯಕ ಜನರು ಹಿಂಸೆಯ ದಳ್ಳುರಿಗೆ ಸಿಲುಕಿದ್ದಾರೆ. ಶಾಂತಿ ಸ್ಥಾಪನೆಗಾಗಿ ಸಮಿತಿ ರಚಿಸುವ ಆಲೋಚನೆ ಇದೆ. ನನ್ನ ಹೆಸರೂ ಆ ಸಮಿತಿಯಲ್ಲಿದೆ. ಆದರೆ ನಾನು ಗುಡ್ಡಗಾಡಿಗೆ ಹೋಗಲು ಆಗುತ್ತಿಲ್ಲ, ಅಲ್ಲಿನವರು ಕಣಿವೆಗೆ ಬರಲು ಅವಕಾಶವಾಗುತ್ತಿಲ್ಲ. ಹೀಗಿರುವಾಗ ಮಾತುಕತೆ ಹೇಗೆ ಸಾಧ್ಯ?” ಎನ್ನುತ್ತಾರೆ ಇಮಾ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಿಟ್ಟಿದೆ. ಅತ್ಯಾಚಾರ, ಬೆತ್ತಲೆ ಮೆರವಣಿಗೆ ಘಟನೆಯನ್ನು ಮೈತೇಯಿಗಳೂ ಖಂಡಿಸಿದ್ದಾರೆ. ಆದರೆ, ಕುಕಿಗಳೂ ಇದೇ ರೀತಿಯ ಕ್ರೌರ್ಯವನ್ನು ಎಸಗಿದ್ದಾರೆ ಎನ್ನುವುದು ಮೈರಾಪೈಬಿಗಳ ವಾದ. ಕಾಡು ಮತ್ತು ಕಣಿವೆಯ ಕದನ ತಕ್ಷಣಕ್ಕೆ ತಣಿಯುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ.
ಚಿತ್ರಗಳು: ಈ ದಿನ.ಕಾಮ್
ಈ ಗ್ರೌಂಡ್ ರಿಪೋರ್ಟ್ ಗಾಗಿ ನಿಮಗೆ ಧನ್ಯವಾದಗಳು. ನಿಮ್ಮ ದಿಟ್ಟತನ ಹೀಗೆಯೇ ಇರಲಿ. ಮಣಿಪುರದಲ್ಲಿ ಆದಶ್ಟು ಬೇಗ ಶಾಂತಿ ಸ್ತಾಪನೆ ಆಗಲಿ. ಮೈತಿ ಮತ್ತು ಕುಕಿ, ಈ ಎರಡೂ ಜನಾಂಗಗಳು ಒಬ್ಬರನ್ನೊಬ್ಬರು ನಂಬುವಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣ ಆಗಲಿ.