(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ನಮ್ಮಂದಿ ಪ್ರತೀ ಹುಣಿವಿ, ಅಮಾಸಿಗೆ ಒಂದ್-ಒಂದ್ ವಿಶೇಷ ಆಚರಣೆ ಮಾಡ್ತಾರ. ದಸರಾ ಮುಗದಿಂದ ಬರೊ ಹುಣ್ಣವಿ ಶೀಗಿ ಹುಣಿವಿ. ಕೆಲವು ಜಿಲ್ಲಾದಾಗ ಎಳ್ಳ ಅಮಾಸಿ ಮಾಡ್ತಾರ. ಎರಡು ಆಚರಣಿ ಒಂದಾ; ಆದ್ರ, ಇದು ಹುಣವಿ ಅದು ಅಮಾಸಿ ಅನ್ನುದೊಂದ ವ್ಯತ್ಯಾಸ. ಶೀಗಿ ಹುಣವಿ ಅಂದ್ರ ನೆನಪ ಆಗೋದು ಅವತ್ತ ಮಾಡು ಅಡಗಿ ಮತ್ತ ಗಾಳಿ ಪಟಾ ಹಾರಸೋದು.
ಮುಂಗಾರಿನ ಬೆಳಿ ಬೆಳದು ಕೊಯ್ಲಿಗೆ ಬಂದಿರತಾವ. ಫಲದಿಂದ ತುಂಬಿದ ಹೊಲಕ್ಕ ರೈತರು ಪೂಜೆ ಮಾಡಿ, ಚರಗಾ ಚಲ್ಲತಾರ. ಶೀಗಿ ಹುಣ್ಣವಿ ಹಳ್ಯಾಗ ಕಳಿಕಟ್ಟುಹಂಗ ಬ್ಯಾರೆಕಡೆ ಕಳೆ ಇರಂಗಿಲ್ಲ. ಎಣ್ಣಿ ಬುಟ್ಟಿ ತಯಾರ ಮಾಡುದು, ಹೊಲಕ್ ಹೋಗಾಕ ಚಕ್ಕಡಿ ತಯಾರ ಮಾಡುದು. ಹೋಗಿಂದ ಗಾಳಿಪಟಾ ಹಾರಸಾಕ ಗಾಳಿಪಟಾ ಸಜ್ಜ ಮಾಡುದು ಒಂದ್ ಕೆಲಸಾದ್ರ, ಇತ್ತಾಗ ಅಡಗಿ ಮನಿಯಿಂದ ಬರು ಘಮಾ ಎಲ್ಲಾ ಹಬ್ಬದ ಅಡಗಿಗಿಂತ ಬ್ಯಾರೆನೇ ಇರತೈತಿ.
ಒಂದ ದಿನ ಮದ್ಲ ಎಳ್ಳ ಹಚ್ಚಿದ ರೊಟ್ಟಿ, ಎಳ್ಳ ಹೋಳಗಿ, ಶೇಂಗಾ ಹೋಳಗಿ ತಯಾರ ಮಾಡಿರ್ತಾರ. ಬೆಳಗಾ ಮುಂಜಾನೆ ಕುದ್ಯಾಕ ಹಾಕಿರೊ ಪುಂಡಿಸೊಪ್ಪು ಉಳದ ಅಡಗಿ ಮಾಡುದ್ರಾಗ ಕುದ್ದಿರತದ. ಅದಕ್ಕ, ಶೇಂಗಾ ಕಾಳ, ನುಚ್ಚಬ್ಯಾಳಿ, ಸ್ವಲ್ಪ ಕಡ್ಲಿ ಬ್ಯಾಳಿ, ಜ್ವಾಳದ ಸುಚ್ಚು, ಸ್ವಲ್ವ ಬೆಲ್ಲಾ, ಹಸೆಕಾಯಿ ಹಾಕಿ, ಇವೆಲ್ಲಾ ಕುದ್ದಮ್ಯಾಲ ಬೆಳ್ಳುಳ್ಳಿ ಒಗ್ಗರಣಿ ಹಾಕಿದ್ರ ಪುಂಡಿಪಲ್ಲೆ ರೆಡಿ. ಇವೆಲ್ಲಾ ಕುದಿಯೊದ್ರಾಗ, ಹುಣಗದ ಕಡಬು, ಜ್ವಾಳದ ಹಿಟ್ಟನ ಉಂಡಗಡಬು, ಕುಚ್ಚಿದ ಮೆಣಶಿನಕಾಯಿ, ಶೇಂಗಾ ಹಿಂಡಿ, ಅಗಸಿ ಹಿಂಡಿ, ಗುಳ್ ಹಿಂಡಿ, ಹೆಸಕಾಳ ಪಲ್ಯೆ, ಮಡಕಿಕಾಳ ಪಲ್ಯೆ, ಮುಳಗಾಯಿ ಪಲ್ಯೆ, ಕೊಸಂಬ್ರಿ, ಅನ್ನಾ, ಕಟ್ಟಿನ ಸಾರು ತಯಾರ ಆಗ್ತಾವ.
ಅಡಗಿ ಮಾಡೊದ ಮುಗದಿಂದ ಎಲ್ಲಾನೂ ಎಣ್ಣಿ ಬುಟ್ಟ್ಯಾಗ ತುಂಬಿ ಪೂಜೆ ಮಾಡಿ ಚಕ್ಕಡ್ಯಾಗ ಇಡುದು. ಈಗ ಮನ್ಯಾಗ ಟ್ಯಾಕ್ಟರ್ ಬಂದಾವು, ಈಗ ಟ್ಯಾಕ್ಟರ್‌ದಾಗ ಹೊಲಕ್ ಹೋಗೋದು. ಹಸರ ತುಂಬಿದ ಹೊಲಾ ನೋಡೋದ ಒಂದ ಆನಂದ. ಈ ಹಬ್ಬ ಭೂಮಿತಾಯಿಗೆ ಉಡಿತುಂಬು ಹಬ್ಬಾ ಅಂತಾಳ ನಮ್ಮ ಅಮ್ಮ. ಅಲ್ಲದ, ಶೀಗಿ ಹುಣ್ಣವಿಗೆ ಮಹಾಭಾರತದ ಕಥಿ ಹೇಳತಾಳ.
ಕೌರವರು ವಿರಾಟ ರಾಜನ ದನಕರುನೆಲ್ಲ ಕದ್ದಾಗ, ಪಾಂಡವರು ಅವನ್ನ ಬಿಡಸ್ಕೊಂಡಬಂದು ಒಟ್ಟಿಗೆ ಕೂತು ಊಟಾ ಮಾಡಿದ್ರಂತ. ಅದರ ಸಲವಾಗಿ ಶೀಗಿ ಹುಣವಿ ದಿನ.
ಹೊಲದಾಗ ದಂಟಿನ ಹಂದ್ರಾ ಹಾಕಿ ಪಾಂಡವರ ಪ್ರತೀಕ ಅಂತ ಐದ ಕಲ್ಲಿಟ್ಟು, ಆ ಕಲ್ಲಿನ ಹಿಂದ ಅಂದ್ರ, ವಿರುದ್ಧ ದಿಕ್ಕಿಗೆ ಇನ್ನೊಂದು ಕಲ್ಲಿಡತಾರ – ಅದು ಗೋವು ಕದ್ದ ಕಳ್ಳನ ಪ್ರತೀಕ. ಇವ್ರಿಗೆ ಪೂಜೆ ಮಾಡಿ, ಎಡಿ ಇಟ್ಟು ಚರಗಾ ಚಲ್ಲೋದು. ಚರಗಾ ಅಂದ್ರ, ಹಬ್ಬಕ್ಕ ಅಂತ ಏನ್ ಅಡಗಿ ಮಾಡಿರ್ತಾರಲ್ಲ ಅದನ್ನ ಹೊಲದಾಗ ಎಲ್ಲಾ ದಿಕ್ಕಿಗೂ ‘ಹುಲ್ಲಿಗ್ಯೋ ಸಲಾಮ್ರಿಗ್ಯೋ…’ ಅನಕೋತ್ ಐದ ಸುತ್ತ ಹೊಲದ ತುಂಬ ಚಲ್ಲೋದು. ಹಿಂಗ ಮಾಡಿದ ಅಡಗಿ ಚರಗಾ ಚಲ್ಲೋದು ಹೊಲದಾಗ ಇರೋ ಪ್ರಾಣಿ, ಪಕ್ಷಿ, ಕೀಟಗಳಿಗೂ ಆಹಾರ ತಲಪಲಿ ಅಂತ.
ಮನಿಮಂದಿ ಅಲ್ದ ಊರಿಂದ ಬೀಗರುನ್ನು ಕರಸ್ತಾರ ಹಬ್ಬಕ್ಕ. ಎಲ್ಲರೂ ಕೂತ ಊಟಾ ಮಾಡಿ ಪೂರಾ ದಿನಾ ಹೊಲ್ದಾಗ ಕಳಿಯೋದ. ಈ ಹುಣವಿಯಿಂದ ಬಿಸೋ ಗಾಳಿ ಗಾಳಿಪಟಾ ಹಾರಸಾಕ ಭಾಳ ಅನುಕೂಲ ಇರತೈತಿ. ಅದಕ್ಕ ಶೀಗಿ ಹುಣವಿಗೆ ಪಟಾ ಹಾರಸಾಕ ಚಾಲು ಮಾಡ್ತಾವ ಹುಡುಗುರು. ನಾವ್ ಸಣ್ಣೊರ್ ಇದ್ದಾಗ ಪಟಾ ಮಾಡಾಕ ಭಾಳ ಓಡಾತ್ತಿದ್ವಿ. ಯಾಕಂದ್ರ, ಅವಾಗ ಅಂಗಡ್ಯಾಗ ಗಾಳಿಪಟಾ ಸಿಗತಿರಲಿಲ್ಲ. ಬಿದರ್ ತಂದು ಅದನ್ನ ಕತ್ತರಸಿ ಪೇಪರ್ ಹಾಳಿಯಿಂದ ಪಟಾ ಮಾಡುದು. ಅದಕ್ ಮನ್ಯಾಗ ಇದ್ದಿದ್ದ ದಾರಾ ಜೋಡಸಿ ಪಟಾ ಹಾರಸೂದು.
ಆದರ, ಈ ವರ್ಷ ಈ ಯಾವ ಹಬ್ಬದ ಕಳೇನೂ ಇಲ್ಲ. ಮಳಿ ಆಗದ ಹೊಲಾ ಎಲ್ಲಾ ಒಣಗಿ ಬೆಳಿ ಕೈಗೆ ಹತ್ತಿಲ್ಲ. ಹಿಂತಾದ್ರಾಗ್ ಹೆಂಗ್ ಹಬ್ಬಾ ಮಾಡುದು ಅಂದು ಯಾರೂ ಹೊಲಕ್ ಅಡಗಿ ಕಟಗೊಂಡ ಹೋಗಲಿಲ್ಲ. ಮನ್ಯಾಗಿನ ಗಣಮಕ್ಕಳ ಕಡೆ ಚರಗಾ ಚಲ್ಲಾಕ ಕೊಟ್ಟ ಕಳಸಿ, ಮನ್ಯಾಗ ಊಟಾ ಮಾಡಿದ್ರು. ಮಳಿ ಆಗಿ ಭೂಮಿ ಬೆಳದ್ರ ನಮ್ಮ ಹೊಟ್ಟಿಗ ಊಟ ಅಲ್ಲವಾ ಹೊಲದಾಗ ಪೀಕ್ ಇಲ್ಲದ ಯಾವ ಹಬ್ಬಾ ಚಲೋ ಅಕ್ಕಾವು ಅಂತ ಉಸರ ಹಕ್ಕೊತ ಮನಿ ಮಂದಿ ಹಬ್ಬ ಮಾಡಿದ್ದ ಆತು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ