ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಣಿಜ್ಯ ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ. ಈ ಹಿನ್ನೆಲೆ, ಕನ್ನಡ ಬಳಕೆ ಮಾಡದ ಅಂಗಡಿಗಳಿಗೆ ಪಾಲಿಕೆ 20,977 ನೋಟಿಸ್ ಜಾರಿ ಮಾಡಿದೆ.
“ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಫೆ.28 ರೊಳಗೆ ಕಾನೂನಿನ ನಿಯಮದಂತೆ ಶೇ.60ರಷ್ಟು ಕನ್ನಡ ಬಳಕೆ ಮಾಡಿರಬೇಕು. ಜ.15ರೊಳಗೆ ಸರ್ವೆ ಕಾರ್ಯ ಮುಗಿಸಿ, ಕನ್ನಡ ಬಳಕೆ ಮಾಡದ ವಾಣಿಜ್ಯ ಅಂಗಡಿಗಳಿಗೆ ನೋಟಿಸ್ ನೀಡಬೇಕು” ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದರು.
ಮುಖ್ಯ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ವಲಯಗಳ ಆರೋಗ್ಯಾಧಿಕಾರಿಗಳು ವಾಣಿಜ್ಯ ಮಳಿಗೆಗಳಿಗೆ ನೋಟಿಸ್ ನೀಡುತ್ತಿದ್ದಾರೆ.
“ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಮಳಿಗೆಗಳಿಗೆ ನೋಟಿಸ್ ನೀಡಲಾಗುತ್ತಿದೆ. ಈಗಾಗಲೇ, ಶೇ 80ರಷ್ಟು ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಈ ವಾರದಲ್ಲಿ ಎಲ್ಲರಿಗೂ ನೋಟಿಸ್ ತಲುಪುತ್ತದೆ’’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜನವರಿ 18ರಂದು ‘ಬಿಲ್ಕಿಸ್ ಬಾನು ಜೊತೆ ನಾವಿದ್ದೇವೆ’ ಕಾರ್ಯಕ್ರಮ
“ನಗರದಲ್ಲಿರುವ ಮುಖ್ಯರಸ್ತೆಗಳಲ್ಲಿ ಶೇ.60ರಷ್ಟು ಕನ್ನಡ ಪದ ಬಳಕೆಯ ನಾಮಫಲಕಗಳನ್ನು ಬಳಸಿಲ್ಲ. ಹೀಗಾಗಿ, ಪಾಲಿಕೆ ವಲಯದ ಎಲ್ಲ ರಸ್ತೆ, ವಸತಿ ಪ್ರದೇಶಗಳಲ್ಲಿರುವ ಮಳಿಗೆ, ವಾಣಿಜ್ಯ ಚಟುವಟಿಕೆಯ ಅಂಗಡಿಗಳಿಗೆ ನೋಟಿಸ್ ನೀಡಲಾಗುತ್ತಿದೆ. 15 ದಿನದಲ್ಲಿ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವಂತೆ ಸೂಚಿಸಲಾಗಿದೆ” ಎಂದರು.