ಮನೆಯೊಳಗೆ ಚಾರ್ಜ್ ಮಾಡಲಾಗುತ್ತಿದ್ದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದು ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಮರ್ಫಿ ಟೌನ್ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಮರ್ಫಿ ಟೌನ್ ನಿವಾಸಿ ಲೂರ್ಡ್ ನಾಥನ್ (65) ಎಂದು ಗುರುತಿಸಲಾಗಿದೆ. ಲೂರ್ಡ್ ಅವರು ಬೆಂಗಳೂರಿನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಕುಟುಂಬದವರು ಮಲಗುವ ಮುನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮನೆಯೊಳಗೆ ಚಾರ್ಜಿಂಗ್‌ಗೆ ಹಾಕಿದ್ದಾರೆ. ಮುಂಜಾನೆವರೆಗೂ ಚಾರ್ಜ್ ಆಗುತ್ತಿದ್ದ ವಾಹನವು ಬೆಳಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಸ್ಫೋಟಗೊಂಡಿದೆ ಎಂಧು ತಿಳಿದುಬಂದಿದೆ.
ಸ್ಪೋಟದಿಂದ ಉಂಟಾದ ಬೆಂಕಿ ಇಡೀ ಮನೆಯನ್ನು ಆವರಿಸಿದೆ. ಈ ವೇಳೆ ಮನೆಯೊಳಗೆ ಮಲಗಿದ್ದ ಲೂರ್ಡ್ ನಾಥನ್ ಅವರಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದವು. ಅವರನ್ನು ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೂರ್ಡ್ ನಾಥನ್ ಅವರ ಪುತ್ರ ಫ್ರಾಂಕ್ ಆಂಥೋನಿ ಎಲ್ ನೀಡಿದ ದೂರಿನ ಮೇರೆಗೆ BNSS-2023ರ ಸೆಕ್ಷನ್ 194ರ ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಸ್ಫೋಟ ಮತ್ತು ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



