2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ‘ಕ್ಷೇತ್ರ ಮರುವಿಗಂಡಣೆಯೊಂದಿಗೆ ಬೆಸೆದಿರುವ ಮೋದಿ ಸರ್ಕಾರ, ‘ಡಿಲಿಮಿಟೇಷನ್ ಮಸೂದೆ, 2026’ ಅನ್ನು ಅಂಗೀಕರಿಸಲು ಸಂಸತ್ತಿನ ‘ವಿಶೇಷ’ ಅಧಿವೇಶನವನ್ನು ಕರೆಯಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಧಿವೇಶನದ ದಿನಾಂಕ ಮತ್ತು ಅವಧಿಯನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಈ ಬಾರಿ ಮಸೂದೆ ಅಂಗೀಕಾರಕ್ಕೆ ಬೇಕಾದ ಸಂಖ್ಯಾಬಲಕ್ಕಿಂತ “ಕನಿಷ್ಠ 15 ರಿಂದ 16 ಮತಗಳು ಹೆಚ್ಚಾಗಿಯೇ ಇವೆ” ಎಂಬ ವಿಶ್ವಾಸ ಕೇಂದ್ರ ಸರ್ಕಾರದಲ್ಲಿದೆ ಎನ್ನಲಾಗಿದೆ.
ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು 2011ರ ಜನಗಣತಿಯ ಆಧಾರದ ಮೇಲೆ ಲೋಕಸಭೆಯ ಸ್ಥಾನಗಳ ಬಲವನ್ನು 543 ರಿಂದ ಗರಿಷ್ಠ 850ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ. ಈ ಮೂಲಕ 2029ರ ಲೋಕಸಭಾ ಚುನಾವಣೆಗೂ ಮುನ್ನವೇ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಕಾಯ್ದೆಯನ್ನು ಕಾರ್ಯಗತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ, 1971ರ ಜನಗಣತಿಯ ಆಧಾರದ ಮೇಲೆ ಇರುವ ಅಂತರ-ರಾಜ್ಯ ಸ್ಥಾನಗಳ ಅನುಪಾತವನ್ನು ಕಾಯ್ದುಕೊಳ್ಳಲು ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸುವ ತಿದ್ದುಪಡಿಯನ್ನು ಈ ಬಾರಿ ಮಸೂದೆಯಲ್ಲಿ ಸೇರಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಇದೇ ವರ್ಷದ ಆಗಸ್ಟ್ 13 ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಸಂಸತ್ತಿನ ಮುಂಗಾರು ಅಧಿವೇಶನವನ್ನು ಇದುವರೆಗೂ ರಾಷ್ಟ್ರಪತಿಗಳು ಔಪಚಾರಿಕವಾಗಿ ಮುಕ್ತಾಯಗೊಳಿಸಿಲ್ಲ. ಈ ಅಧಿವೇಶನವು ಮುಕ್ತಾಯಗೊಳ್ಳದೆ 91 ದಿನಗಳನ್ನು ಪೂರೈಸಿದ್ದು, 2008ರಲ್ಲಿ ನಿರ್ಮಾಣವಾಗಿದ್ದ 87 ದಿನಗಳ ಹಿಂದಿನ ದಾಖಲೆಯನ್ನು ಮುರಿದಿದೆ. ನಿಯಮಗಳ ಪ್ರಕಾರ, ಹೊಸ ಅಧಿವೇಶನ ಕರೆಯಲು ಕನಿಷ್ಠ 14 ದಿನಗಳ ನೋಟಿಸ್ ಅಗತ್ಯವಿದ್ದರೆ, ಈಗಾಗಲೇ ಚಾಲ್ತಿಯಲ್ಲಿರುವ ಅಧಿವೇಶನದ ವಿಸ್ತೃತ ಕಲಾಪವನ್ನು ಕರೆಯಲು ಕೇವಲ ಎರಡು ದಿನಗಳ ನೋಟಿಸ್ ಸಾಕಾಗುತ್ತದೆ. ಹೀಗಾಗಿ, ಅಲ್ಪಾವಧಿಯ ನೋಟಿಸ್ನಲ್ಲಿಯೇ ಅಧಿವೇಶನ ಕರೆಯುವ ಅವಕಾಶ ಸರ್ಕಾರದ ಮುಂದಿದೆ.
ಈ ಹಿಂದೆ ಏಪ್ರಿಲ್ 16ರಂದು ಕಾನೂನು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಂವಿಧಾನ (131ನೇ ತಿದ್ದುಪಡಿ) ಮಸೂದೆ, 2026 ಹಾಗೂ ಅದಕ್ಕೆ ಪೂರಕವಾದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಆದರೆ, ಏಪ್ರಿಲ್ 17ರಂದು ಬಜೆಟ್ ಅಧಿವೇಶನದ ವಿಶೇಷ ಕಲಾಪದಲ್ಲಿ ನಡೆದ ಮತದಾನದ ವೇಳೆ ಅಗತ್ಯ ಸಂಖ್ಯಾಬಲ ಸಿಗದೆ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿತ್ತು.
ಆದರೆ, ಏಪ್ರಿಲ್ನಲ್ಲಿದ್ದ ರಾಜಕೀಯ ಪರಿಸ್ಥಿತಿ ಈಗ ಬದಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟವು ಮೊದಲಿನಷ್ಟು ಬಲಿಷ್ಠವಾಗಿಲ್ಲ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 22 ಸಂಸದರ ಪೈಕಿ 20 ಸಂಸದರು ಬಂಡಾಯವೆದ್ದು ಬಿಜೆಪಿ ನೇತೃತ್ವದ ಎನ್ಡಿಎ (NDA) ಜೊತೆ ಕೈಜೋಡಿಸಿದ್ದಾರೆ. ಮತ್ತೊಂದೆಡೆ, ಇಂಡಿಯಾ ಒಕ್ಕೂಟದ ಪ್ರಮುಖ ಅಂಗಪಕ್ಷವಾಗಿದ್ದ ಡಿಎಂಕೆ (DMK) ಈಗ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಿಂದ ಹೊರಗುಳಿದಿದ್ದು, ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬಹುದು ಎಂಬ ಊಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ದಕ್ಷಿಣದ ರಾಜ್ಯಗಳಿಗಿಂತ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ರಾಜಕೀಯ ಅಧಿಕಾರವನ್ನು ನೀಡುತ್ತದೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಇದನ್ನು ಮೊದಲಿನಿಂದಲೂ ವಿರೋಧಿಸುತ್ತಿವೆ.
ವಿಶೇಷ ಅಧಿವೇಶನದ ವರದಿಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪತ್ರಕರ್ತರೊಂದಿಗಿನ ಅನೌಪಚಾರಿಕ ಮಾತುಕತೆಯಲ್ಲಿ ಅಮಿತ್ ಶಾ ಈ ಬಾರಿ 15-18 ಮತಗಳ ಅಂತರದಿಂದ ಮಸೂದೆ ಅಂಗೀಕಾರವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಏಳು ತಿಂಗಳ ಹಿಂದೆಯೂ ಅವರು ಇದೇ ಮಾತನ್ನು ಹೇಳಿದ್ದರು. ಆದರೆ ಏಪ್ರಿಲ್ 17ರಂದು 50ಕ್ಕೂ ಹೆಚ್ಚು ಮತಗಳ ಅಂತರದಿಂದ ಲೋಕಸಭೆಯಲ್ಲಿ ಮುಖಭಂಗ ಅನುಭವಿಸಿದ್ದರು. ಅವರ ‘ಬುಲ್ಡೋಜರ್’ ತಂತ್ರ ಆಗಲೂ ಕೆಲಸ ಮಾಡಲಿಲ್ಲ, ಮುಂದೆಯೂ ಕೆಲಸ ಮಾಡುವುದಿಲ್ಲ” ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕ್ಷೇತ್ರ ಪುನರ್ವಿಂಗಡಣೆ ಕುರಿತ ಯಾವುದೇ ಹೊಸ ಪ್ರಸ್ತಾವನೆಗಳನ್ನು ಚರ್ಚಿಸಲು ತಕ್ಷಣವೇ ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ. ಸಮರ್ಪಕ ಸಮಾಲೋಚನೆಯಿಲ್ಲದೆ ಇಂತಹ ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಲು ಪ್ರಯತ್ನಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ಆಗಸ್ಟ್ 13ರಂದು ಮುಂಗಾರು ಅಧಿವೇಶನ ಮುಂದೂಡಲ್ಪಟ್ಟ ನಂತರವೂ ಅದನ್ನು ಮುಕ್ತಾಯಗೊಳಿಸದೆ ವಿಳಂಬ ಮಾಡುತ್ತಿರುವ ಸರ್ಕಾರದ ನಡೆ ‘ಅಭೂತಪೂರ್ವ’ ಎಂದು ಖರ್ಗೆ ತಮ್ಮ ಪತ್ರದಲ್ಲಿ ಟೀಕಿಸಿದ್ದಾರೆ. ಈ ಹಿಂದೆ ಏಪ್ರಿಲ್ 11ರಂದು ಸಹ ಸರ್ವಪಕ್ಷ ಸಭೆ ಕರೆಯುವಂತೆ ತಾವು ಪತ್ರ ಬರೆದಿದ್ದನ್ನು ಅವರು ನೆನಪಿಸಿದ್ದಾರೆ.




