ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ ಕುರಿತ ಭಾರತದ ನಿಲುವು ಅತ್ಯಂತ ನಿರಾಶಾಜನಕ. ಮೋದಿ ಸರ್ಕಾರದ ಗಾಢ ಮೌನವು ಮಾನವೀಯತೆ ಮತ್ತು ನೈತಿಕತೆಗೆ ಎಸಗಿದ ವಿಶ್ವಾಸದ್ರೋಹ. ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಭಾರತದ ವಿದೇಶಾಂಗ ನೀತಿಗೆ ಅನುಗುಣವಾದ ನಡೆಯಲ್ಲ. ನೈತಿಕತೆ ಮತ್ತು ನಾಗರಿಕತೆಯೊಂದಿಗೆ ಲಗತ್ತಾಗಿರುವ ಹೊಣೆಗಾರಿಕೆಯನ್ನು ಮೋದಿ ಸರ್ಕಾರ ಗಾಳಿಗೆ ತೂರಿದೆ.
ರೋಹಿಂಗ್ಯಾ ಜನರ ವಿರುದ್ಧ ನಡೆದಿದೆಯೆನ್ನಲಾದ ನರಮೇಧಕ್ಕೆ ಸಂಬಂಧಿಸಿ ಮ್ಯಾನ್ಮಾರ್ ವಿರುದ್ಧ ಗ್ಯಾಂಬಿಯಾ ಹೂಡಿರುವ ಪ್ರಕರಣದಲ್ಲಿ ನವೆಂಬರ್ 19ರಂದು ನ್ಯಾಯಾಲಯ ತೀರ್ಪು ನೀಡುವ ನಿರೀಕ್ಷೆಯಿದೆ. ಆ ಪ್ರಕರಣದಲ್ಲಿ ನರಮೇಧ ನಡೆದಿದೆ ಎಂಬ ತೀರ್ಮಾನ ಹೊರಬಂದರೆ, ಇಸ್ರೇಲ್ಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು ಎಂಬುದು ಅಂತರರಾಷ್ಟ್ರೀಯ ಕಾನೂನು ತಜ್ಞರ ಅಭಿಮತ.
ಒಂಭತ್ತು ತಿಂಗಳ ಆ ಹಸುಳೆಯ ಹೆಸರು ಕಿನಾನ್. ಆಶ್ರಯ ಎಂಬುದು ಈ ಅರಬ್ಬೀ ಪದದ ಅರ್ಥ. ಆದರೆ ಗಾಝಾದ ಎಲುಬು ಕೊರೆವ ಚಳಿ ರಾತ್ರಿಯಲ್ಲಿ ಕಿನಾನ್ ಆಶ್ರಯ ಇರಲಿಲ್ಲ. ಆಶ್ರಯದ ಮಾತಿರಲಿ, ಬೆಚ್ಚನೆಯ ಹೊದಿಕೆಯೂ ಗತಿಯಿರಲಿಲ್ಲ. ಪ್ಯಾಲೆಸ್ತೀನಿನ ಖಾನ್ ಯೂನಿಸ್ ಗುಡಾರವೊಂದರಲ್ಲಿ ಚಳಿ ತಾಳಲಾರದೆ ಪ್ರಾಣ ಬಿಟ್ಟಿತ್ತು ಈ ಎಳೆಗೂಸು. ಚಳಿಗೆ ಮರಗಟ್ಟಿ ಮರಣಿಸಿದೆ.
ಇಂತಹ ಲಕ್ಷಾಂತರ ಕಗ್ಗೊಲೆಗಳ ರಕ್ತವನ್ನು ಹಸ್ತಕ್ಕೆ ಮೆತ್ತಿಸಿಕೊಂಡಿರುವ ಪಾತಕಿ ಇಸ್ರೇಲ್. ನರಾಧಮ ನೆತನ್ಯಾಹು ಸರ್ಕಾರದ ಎಣೆಯಿಲ್ಲದ ಕ್ರೌರ್ಯಕ್ಕೆ ತುತ್ತಾಗಿ ಧ್ವಸ್ತವಾಗಿದೆ ಪ್ಯಾಲೆಸ್ತೀನ್. ಪರಮ ನೀಚ ದಾಳಿಗಳಿಗೆ ಬಲಿಯಾಗಿ ಅಳಿದುಳಿದಿರುವ ಪ್ಯಾಲೆಸ್ತೀನೀಯರಿಗೆ ನೀರು, ಸೂರು, ಅನ್ನಾಹಾರ, ಔಷಧಿಗಳಂತಹ ಕನಿಷ್ಠ ಅವಶ್ಯಕತೆಗಳನ್ನೂ ನಿರಾಕರಿಸಿದೆ ಇಸ್ರೇಲ್. ಚಳಿಗಾಲದ ಪೂರೈಕೆಗಳು ಒಳಹೋಗದಂತೆ ಗಡಿಯಲ್ಲೇ ತಡೆ ಹಿಡಿದಿದೆ. ಈ ಪೂರೈಕೆಗಳನ್ನು ಒಳಕ್ಕೆ ಕಳಿಸುವಂತೆ ಐವತ್ತಕ್ಕೂ ಹೆಚ್ಚು ದೇಶಗಳು ಇಸ್ರೇಲ್ ಗೆ ಕರೆ ನೀಡಿದ್ದ ಹೊಸ್ತಿಲಲ್ಲೇ ಕಿನಾನ್ ಕೂಸು ಕಣ್ಣು ಮುಚ್ಚಿದೆ.
ಪ್ಯಾಲೆಸ್ತೀನ್ ‘ಡೇರೆ’ಯನ್ನು ಅಂಗುಲಂಗುಲವಾಗಿ ಆಕ್ರಮಿಸಿದ ಇಸ್ರೇಲಿ ‘ಒಂಟೆ’, ಕಾಲಕ್ರಮೇಣ ಇಡೀ ಡೇರೆಯನ್ನು ತನ್ನದೆಂದು ಸಾರಿ, ಪ್ಯಾಲೆಸ್ತೀನಿ ನೆಲದ ಮಕ್ಕಳನ್ನು ನಿಂತಲ್ಲಿ ನಿಲ್ಲಲು ಬಿಡದೆ ಅಟ್ಟಾಡಿಸಿ, ಉಪವಾಸ ಕೆಡವಿ, ಬಾಂಬು ಸುರಿಸಿ ಅಳಿಸಿ ಹಾಕುತ್ತಿರುವ ಶಿಖರ ಕ್ರೌರ್ಯದ ಕತೆ ಪ್ಯಾಲೆಸ್ತೀನ್- ಇಸ್ರೇಲ್ ಸಂಘರ್ಷ.
ಗಾಝಾ ಪಟ್ಟಿಯ ಆಳವನ್ನು ಅಗೆದರೆ ಅಲ್ಲಿ ಸಿಗುವುದು ಪ್ಯಾಲೆಸ್ತೀನೀ ಮಕ್ಕಳು, ಹೆಣ್ಣುಮಕ್ಕಳು, ಗಂಡಾಳುಗಳ ಶವಗಳ ರಾಶಿ ರಾಶಿ ಅಸ್ಥಿಪಂಜರಗಳೇ. ಇಂತಹ ಸಮಾಧಿಯ ಮೇಲೆ ‘ಸ್ವರ್ಗಸದೃಶ ವಿಲಾಸೀ ನಗರ’ ನಿರ್ಮಿಸಿ, ಅಲ್ಲಿನ ವಸತಿವೈಭವವನ್ನು ವಿಶ್ವದ ಸಿರಿವಂತರಿಗೆ ಮಾರಾಟ ಮಾಡುವುದು ಟ್ರಂಪ್ ಎಂಬ ನೀಚ ಮನಸ್ಥಿತಿಯ ದುಷ್ಟ ಯೋಜನೆ.
ಗಾಝಾದಲ್ಲಿ ಇಸ್ರೇಲ್ ನರಮೇಧ ಎಸಗಿದೆಯೆಂದು ವಿಶ್ವಸಂಸ್ಥೆಯ ತನಿಖಾ ಆಯೋಗವೇ ತೀರ್ಪು ನೀಡಿದೆ. ಈ ಕುರಿತು ತಮಗೆ ಯಾವುದೇ ಅನುಮಾನವಿಲ್ಲ ಎಂದು ಈ ಆಯೋಗದ ಅಧ್ಯಕ್ಷೆಯಾಗಿದ್ದ ನವೀ ಪಿಳ್ಳೈ ಸಾರಿದ್ದಾರೆ. ಪಿಳ್ಳೈ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಾಜಿ ಹೈಕಮಿಷನರ್ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ.
ಪ್ಯಾಲೆಸ್ತೀನಿಯರ ವ್ಯವಸ್ಥಿತ ಹತ್ಯೆ, ವ್ಯಾಪಕ ವಿನಾಶವಲ್ಲದೆ, ಅವರು ಬದುಕುಳಿಯಲು ಅಗತ್ಯವಿದ್ದ ಸ್ಥಿತಿಗತಿಯನ್ನು ಕೂಡ ನಾಶ ಮಾಡಲಾಗಿದೆ.
ಸುಮಾರು 75,000 ಪ್ಯಾಲೆಸ್ತೀನಿಯರ ಹತ್ಯೆ, ಅವರ ಬಹುತೇಕ ಎಲ್ಲ ಮನೆಗಳು ಹಾಗೂ ಪ್ರಮುಖ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲಾಗಿದೆ. ಆಸ್ಪತ್ರೆಗಳು, ಶಾಲೆಗಳು, ಕೃಷಿಭೂಮಿ ಮತ್ತು ಮೀನುಗಾರಿಕಾ ಸೌಲಭ್ಯಗಳು ಸೇರಿದಂತೆ ಬದುಕಿಗೆ ಅತ್ಯಗತ್ಯ ವ್ಯವಸ್ಥೆಗಳ ಧ್ವಂಸವನ್ನು ಒಳಗೊಂಡ ಇಸ್ರೇಲ್ನ ವ್ಯವಸ್ಥಿತ ಕೃತ್ಯಗಳ ಮಾದರಿಯನ್ನು ಆಧರಿಸಿ ಆಯೋಗ ತನ್ನ ತೀರ್ಮಾನ ನೀಡಿದೆ.
ಇಸ್ರೇಲ್ ಘೋಷಿಸಿಕೊಂಡ ಸೇನಾ ಉದ್ದೇಶಗಳಿಗೂ ಅದು ಉಂಟುಮಾಡಿದ ವಿನಾಶದ ಪ್ರಮಾಣಕ್ಕೂ ನಡುವಿನ ಅಂತರವನ್ನೂ ವರದಿ ಪರಿಶೀಲಿಸಿದೆ. ಹಿರಿಯ ಇಸ್ರೇಲಿ ಅಧಿಕಾರಿಗಳ ಹೇಳಿಕೆಗಳ ಜೊತೆಗೆ ಒಟ್ಟಾರೆ ಕೃತ್ಯಗಳ ಮಾದರಿಯನ್ನು ಪರಿಗಣಿಸಿದಾಗ, ನರಮೇಧದ ಉದ್ದೇಶಕ್ಕೆ ಸಾಕ್ಷ್ಯಗಳು ದೊರೆಯುತ್ತವೆ ಎಂದು ಆಯೋಗ ತೀರ್ಮಾನಿಸಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಂದಿನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರ ಹೇಳಿಕೆಗಳನ್ನು ಆಯೋಗ ಉಲ್ಲೇಖಿಸಿದೆ. ನರಮೇಧಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಈ ಮೂವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅದು ಶಿಫಾರಸು ಮಾಡಿದೆ.
ಇಸ್ರೇಲಿ ಅಧಿಕಾರಿಗಳ ಹೇಳಿಕೆಗಳನ್ನು ವ್ಯಾಪಕ ಕೃತ್ಯಗಳ ಮಾದರಿಯೊಂದಿಗೆ ಹೋಲಿಸಿ ಪರಿಶೀಲಿಸುವ ಮೂಲಕ ಆಯೋಗ ನರಮೇಧದ ಉದ್ದೇಶವನ್ನು ರುಜುವಾತು ಮಾಡಿದೆ. ಎಲ್ಲ ಸಾಕ್ಷ್ಯಗಳನ್ನೂ ಒಟ್ಟಾಗಿ ಪರಿಗಣಿಸಿದಾಗ ತಾರ್ಕಿಕವಾಗಿ ಮಾಡಬಹುದಾಗಿದ್ದ ಏಕೈಕ ನಿರ್ಣಯವಿದು ಎಂದಿದೆ.
“…. ನಾವು ಅವರೆಲ್ಲರನ್ನೂ ಕೊಂದಿಲ್ಲವಲ್ಲ” ಎನ್ನುವ ಇಸ್ರೇಲಿ ಸೇನೆಯ ಹೇಳಿಕೆ ಅತ್ಯಂತ ವಿಕೃತ ಆಲೋಚನೆ. ಯಾವುದೇ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನರಮೇಧವನ್ನು ತಡೆಯಲು ವಿಫಲವಾಗುವುದೂ ಗಂಭೀರ ಅಪರಾಧವೇ ಸರಿ. ನರಮೇಧದ ರುಜುವಾತಿಗೆ ಬಲಿಯಾದವರ ಸಂಖ್ಯೆ ಆಧಾರವಾಗಬೇಕಿಲ್ಲ. ಉದ್ದೇಶ ಸಾಬೀತಾದರೆ, ಒಂದೇ ಒಂದು ಹತ್ಯೆಯೂ ನರಮೇಧದ ಕೃತ್ಯವಾಗಬಹುದು. ಸಾಧ್ಯವಾದಷ್ಟು ಹೆಚ್ಚು ಪ್ಯಾಲೆಸ್ತೀನಿಯರನ್ನು ಕೊಲ್ಲುವ ಉದ್ದೇಶ ಇಸ್ರೇಲ್ಗೆ ಇತ್ತು. ವಿನಾಶಕ್ಕೆ ಬಳಸಲಾದ ಶಸ್ತ್ರಾಸ್ತ್ರಗಳ ಸ್ಪರೂಪವನ್ನು ತನಿಖಾ ಆಯೋಗ ವಿವರಿಸಿದೆ. ಅವು ಹೆಚ್ಚಿನ ಸಂಖ್ಯೆಯ ಜನರನ್ನು ಕೊಲ್ಲಲೆಂದೇ ರೂಪಿತವಾದಂತಹವು.
ಗಾಜಾದ ಪ್ಯಾಲೆಸ್ತೀನಿಯರಿಗೆ ಯುದ್ಧ ಪ್ರದೇಶದಿಂದ ತಪ್ಪಿಸಿಕೊಳ್ಳಲು ಪರಿಣಾಮಕಾರಿಯಾದ ಯಾವುದೇ ಮಾರ್ಗವೂ ಇರಲಿಲ್ಲ ಎಂಬುದನ್ನೂ ಆಯೋಗ ಗಮನಿಸಿದೆ.
ಅತ್ಯಗತ್ಯ ಔಷಧಿಗಳ ಮೇಲೆ ಇಸ್ರೇಲ್ ವಿಧಿಸಿದ ನಿರ್ಬಂಧಗಳು ಹಾಗೂ ಆಂಬುಲೆನ್ಸ್ ಸಿಬ್ಬಂದಿ ಮತ್ತು ಪತ್ರಕರ್ತರು ಸೇರಿದಂತೆ ನಾಗರಿಕರ ಮೇಲಿನ ದಾಳಿಗಳು ಪ್ರಶ್ನಾರ್ಹ.
ಬಂಧಿತ ಪ್ಯಾಲೆಸ್ತೀನಿಯರ ಮೇಲಿನ ಚಿತ್ರಹಿಂಸೆ ಮತ್ತು ದೌರ್ಜನ್ಯದ ಆರೋಪಗಳನ್ನೂ ತನಿಖಾ ಆಯೋಗ ಉಲ್ಲೇಖಿಸಿದೆ. ಸೈನಿಕರು ಅಥವಾ ಅವರ ಬೆಂಬಲಿಗರು ಬಂಧಿತರ ಮೇಲೆ ಮೂತ್ರ ವಿಸರ್ಜಿಸುತ್ತಿರುವ ದೃಶ್ಯಗಳು ಸೇರಿದಂತೆ, ಇಸ್ರೇಲಿ ಸೈನಿಕರು ಬಿಡುಗಡೆ ಮಾಡಿದ ವಿಡಿಯೊಗಳನ್ನು ಆಯೋಗ ನೋಡಿದೆ.
ಸುಮಾರು 5,000 ಭ್ರೂಣಗಳು ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಇತರೆ ಜೈವಿಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗಾಜಾದ ಏಕೈಕ ಸಂತಾನೋತ್ಪತ್ತಿ ಚಿಕಿತ್ಸಾಲಯದ ನಾಶವನ್ನೂ ಆಯೋಗ ಪರಿಶೀಲಿಸಿದೆ. ಪ್ಯಾಲೆಸ್ತೀನಿಯರಲ್ಲಿ ಜನನಗಳನ್ನು ತಡೆಯುವ ಉದ್ದೇಶದ ಕೃತ್ಯವಾಗಿ ಈ ವಿನಾಶವನ್ನು ಅದು ಪರಿಗಣಿಸಿದೆ.
ಈ ಜೈವಿಕ ವಸ್ತುಗಳನ್ನು ಗುರಿಯಾಗಿಸಿ ನಾಶಪಡಿಸಿರುವುದನ್ನು ಸೇನಾ ಕಾರ್ಯಾಚರಣೆ ಎಂದಾಗಲಿ, ಹಮಾಸ್ ಹೋರಾಟಗಾರರನ್ನು ಪತ್ತೆಹಚ್ಚುವ ಪ್ರಯತ್ನ ಎಂದಾಗಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಇಂತಹ ಸಮರ್ಥನೆಯನ್ನು ಇಸ್ರೇಲ್ ಮುಂದೆ ಮಾಡಿರುವುದು ನಾಚಿಕೆಗೇಡು.
ತನಿಖೆ ನಡೆಸಲು ವಿಶ್ವಸಂಸ್ಥೆಯ ಆಯೋಗಕ್ಕೆ ಗಾಜಾ ಪ್ರವೇಶಿಸಲು ಇಸ್ರೇಲ್ ಅವಕಾಶ ನೀಡಿರಲಿಲ್ಲ. ಸ್ವತಂತ್ರ ಅಂತರರಾಷ್ಟ್ರೀಯ ಪರಿಶೀಲನೆಗೆ ಅವಕಾಶ ನೀಡಲೂ ನಿರಾಕರಿಸಿತ್ತು. ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಗಾಜಾ ಪ್ರವೇಶಿಸಲು ಅವಕಾಶವಿಲ್ಲದಾಗಿದೆ. ತನ್ನ ತೀರ್ಮಾನಕ್ಕೆ ಬರುವ ಮೊದಲು ಆಯೋಗವು ಎರಡು ವರ್ಷಗಳ ಕಾಲ ಲಭ್ಯವಿದ್ದ ಸಾಕ್ಷ್ಯಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿತ್ತು.
ಗಾಜಾದ ಹೊರತಾಗಿಯೂ, ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ನ ನಡವಳಿಕೆಯನ್ನು ಆಯೋಗ ತನಿಖೆ ಮಾಡಿದೆ. ಇಸ್ರೇಲ್ನ ಆಕ್ರಮಣದ ಕುರಿತು ಅಂತರರಾಷ್ಟ್ರೀಯ ನ್ಯಾಯಾಲಯದ ಸಲಹಾ ಅಭಿಪ್ರಾಯವನ್ನು ಕೋರಬೇಕೆಂದು 2022ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಆಯೋಗ ಶಿಫಾರಸು ಮಾಡಿತ್ತು.
2024ರಲ್ಲಿ ನೀಡಿದ ಅಭಿಪ್ರಾಯದಲ್ಲಿ, ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ತನ್ನ ಉಪಸ್ಥಿತಿಯನ್ನು ಮುಂದುವರಿಸಿರುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೆಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತ್ತು.
ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ ಹೂಡಿರುವ ನರಮೇಧ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಬೇಕಿದೆ. ಈ ತೀರ್ಪು ಹೊರಬೀಳಲು ಇನ್ನೂ ಹಲವು ವರ್ಷಗಳು ಹಿಡಿಯುವ ಅಂದಾಜಿದೆ.
ರೋಹಿಂಗ್ಯಾ ಜನರ ವಿರುದ್ಧ ನಡೆದಿದೆಯೆನ್ನಲಾದ ನರಮೇಧಕ್ಕೆ ಸಂಬಂಧಿಸಿ ಮ್ಯಾನ್ಮಾರ್ ವಿರುದ್ಧ ಗ್ಯಾಂಬಿಯಾ ಹೂಡಿರುವ ಪ್ರಕರಣದಲ್ಲಿ ನವೆಂಬರ್ 19ರಂದು ನ್ಯಾಯಾಲಯ ತೀರ್ಪು ನೀಡುವ ನಿರೀಕ್ಷೆಯಿದೆ. ಆ ಪ್ರಕರಣದಲ್ಲಿ ನರಮೇಧ ನಡೆದಿದೆ ಎಂಬ ತೀರ್ಮಾನ ಹೊರಬಂದರೆ, ಇಸ್ರೇಲ್ಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳ ಮೇಲೂ ಪರಿಣಾಮ ಬೀರಬಹುದು ಎಂಬುದು ಅಂತರರಾಷ್ಟ್ರೀಯ ಕಾನೂನು ತಜ್ಞರ ಅಭಿಮತ.
ಈ ನಡುವೆ, ಕದನ ವಿರಾಮದ ಹೊರತಾಗಿಯೂ ಇಸ್ರೇಲಿ ಪಡೆಗಳು ಗಾಜಾದಲ್ಲಿ ನರಮೇಧದ ದಾಳಿಗಳನ್ನು ಮುಂದುವರಿಸಿವೆ. ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯದ ಪ್ರಕಾರ, 2023ರ ಅಕ್ಟೋಬರ್ 7ರಿಂದ ಇಸ್ರೇಲ್ ನಡೆಸುತ್ತಿರುವ ನರಮೇಧದಲ್ಲಿ ಕನಿಷ್ಠ 74,645 ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದು, 1,75,978 ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ
ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷ ಕುರಿತ ಭಾರತದ ನಿಲುವು ಅತ್ಯಂತ ನಿರಾಶಾಜನಕ. ಮೋದಿ ಸರ್ಕಾರದ ಗಾಢ ಮೌನವು ಮಾನವೀಯತೆ ಮತ್ತು ನೈತಿಕತೆಗೆ ಎಸಗಿದ ವಿಶ್ವಾಸದ್ರೋಹ. ಲಾಗಾಯಿತಿನಿಂದ ನಡೆದುಕೊಂಡು ಬಂದಿರುವ ಭಾರತದ ವಿದೇಶಾಂಗ ನೀತಿಗೆ ಅನುಗುಣವಾದ ನಡೆಯಲ್ಲ. ನೈತಿಕತೆ ಮತ್ತು ನಾಗರಿಕತೆಯೊಂದಿಗೆ ಲಗತ್ತಾಗಿರುವ ಹೊಣೆಗಾರಿಕೆಯನ್ನು ಮೋದಿ ಸರ್ಕಾರ ಗಾಳಿಗೆ ತೂರಿದೆ.
ಸ್ವಾತಂತ್ರ್ಯಪೂರ್ವದಲ್ಲೇ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ದನಿ ಎತ್ತಿತ್ತು ಭಾರತ. 1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ನರಮೇಧ ನಿಲ್ಲಿಸಲು ಭಾರತ ನಿರ್ಣಾಯಕ ಮಧ್ಯಪ್ರವೇಶ ಮಾಡಿತ್ತು ಎಂಬ ಇತಿಹಾಸವನ್ನು ಮೋದಿ ಓದಿಕೊಳ್ಳಬೇಕಿದೆ.




