ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT- Roorkee) ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಿಸಲಾಗಿದೆ. ವಿದ್ಯಾರ್ಥಿ ಸಾವಿನಿಂದಾಗಿ, ಕ್ಯಾಂಪಸ್‌ನಲ್ಲಿ ಬಿಗುವಿನ ವಾತಾವರಣವಿದ್ದು, ಶುಕ್ರವಾರ ನಡೆಯಬೇಕಿದ್ದ 70 ಪರೀಕ್ಷೆಗಳನ್ನು ಆಡಳಿತ ಮಂಡಳಿ ಮುಂದೂಡಿದೆ.
ಮೃತ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಆಯುಷ್ ರಾಜೋರಿಯಾ ಎಂದು ಗುರುತಿಸಲಾಗಿದೆ. ಅವರು ಗಣಿತಶಾಸ್ತ್ರ ವಿಭಾಗದ ‘ಗಣಿತ ಮತ್ತು ಕಂಪ್ಯೂಟಿಂಗ್’ ವಿಷಯದಲ್ಲಿ ದ್ವಿತೀಯ ವರ್ಷದ ಬಿಎಸ್-ಎಂಎಸ್ ಪದವಿ ವ್ಯಾಸಂಗ ಮಾಡುತ್ತಿದ್ದರು.
ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ನವನೀತ್ ಸಿಂಗ್ ಭುಲ್ಲರ್ ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದು, “ದುರ್ಘಠನೆಯ ಬಗ್ಗೆ ಗುರುವಾರ ತಡರಾತ್ರಿ 112 ತುರ್ತು ಸೇವೆಯ ಮೂಲಕ ರೂರ್ಕಿ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಲಭ್ಯವಾಯಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗೋವಿಂದ ಭವನ ಹಾಸ್ಟೆಲ್‌ನಲ್ಲಿದ್ದ ಆಯುಷ್ ಕೋಣೆಯ ಬಾಗಿಲು ಒಡೆದು, ಒಳಪ್ರವೇಶಿಸಿದಾಗ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿಯು ಕಂಪ್ಯೂಟರ್‌ನಲ್ಲಿ ಬರೆದಿರುವ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ.ತನ್ನ ಸಾವಿಗೆ ಯಾರೂ ಕಾರಣರಲ್ಲವೆಂದು ಅದರಲ್ಲಿ ಉಲ್ಲೇಖಿಸಲಾಗಿದೆ” ಎಂದು ತಿಳಿಸಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕಂಪ್ಯೂಟರ್‌ನಲ್ಲಿ ದೊರೆತ ಪತ್ರವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಮೃತ ವಿದ್ಯಾರ್ಥಿ ಆಯುಷ್ ಶೈಕ್ಷಣಿಕವಾಗಿ ಅತ್ಯಂತ ಪ್ರತಿಭಾವಂತನಾಗಿದ್ದರು ಎಂದು ಐಐಟಿ ರೂರ್ಕಿ ಆಡಳಿತ ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.
ಮೊದಲ ಸೆಮಿಸ್ಟರ್‌ನಲ್ಲಿ 10ಕ್ಕೆ 9 ಸಿಜಿಪಿಎ ಅಂಕಗಳನ್ನು ಗಳಿಸಿದ್ದ ಆಯುಷ್, ಎರಡನೇ ಸೆಮಿಸ್ಟರ್‌ನಲ್ಲಿ ಸುಮಾರು 7 ಸಿಜಿಪಿಎಗೆ ಇಳಿಕೆಯಾಗಿದ್ದರಿಂದ ಅಸಮಾಧಾನಗೊಂಡಿದ್ದರು. ಮಾತ್ರವಲ್ಲದೆ, ಅವರು ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ದರಿಂದಲೇ, ಅವರು ಸಂಸ್ಥೆಯ ವೆಲ್‌ನೆಸ್ ಸೆಂಟರ್‌ನಲ್ಲಿ (ಆರೋಗ್ಯ ಮತ್ತು ಆಪ್ತ ಸಮಾಲೋಚನಾ ಕೇಂದ್ರ) ನೆರವು ಪಡೆಯುತ್ತಿದ್ದರು ಎನ್ನಲಾಗಿದೆ.
ವಿದ್ಯಾರ್ಥಿಯ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಅಧಿಕೃತ ಪ್ರಕಟಣೆ ಹೊರಡಿಸಿರುವ ಐಐಟಿ ರೂರ್ಕಿ ಆಡಳಿತ ಮಂಡಳಿಯು, “ಘಟನೆಯ ಸುತ್ತಲಿನ ಸಂದರ್ಭಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖಾಧಿಕಾರಿಗಳಿಗೆ ಸಂಸ್ಥೆಯು ಸಂಪೂರ್ಣ ಸಹಕಾರ ನೀಡುತ್ತಿದೆ” ಎಂದು ತಿಳಿಸಿದೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಹೇಳಿರುವ ಆಡಳಿತ ಮಂಡಳಿ, ಮುಂದೂಡಲ್ಪಟ್ಟಿರುವ 70 ಪರೀಕ್ಷೆಗಳ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ.



