ರಾಜ್ಯದಲ್ಲಿ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೊದಲಾದ ಆನ್‌ಲೈನ್ ಇ-ಕಾಮರ್ಸ್ ವೇದಿಕೆಗಳ ಮೂಲಕ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು, ಆಹಾರ ಪದಾರ್ಥದಂತೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಕಠಿಣ ಕ್ರಮ ಕೈಗೊಂಡಿದೆ.
ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್ ಇ-ಕಾಮರ್ಸ್ ಸಂಸ್ಥೆಗಳ ಆಹಾರ ಪರವಾನಗಿಯನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ನ್ಯಾಯ ನಿರ್ಣಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ದತ್ತೂರಿ ಸಸ್ಯವು ವಿಷಕಾರಿ ಗುಣ ಹೊಂದಿದ್ದು, ಅದರ ಹಣ್ಣು ಮತ್ತು ಬೀಜಗಳನ್ನು ಸೇವಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು, ಕೋಮಾ, ಅಂಗಾಗ ವೈಫಲ್ಯದಂತಹೆ ಪರಿಣಾಮಗಳು ಉಂಟಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಸುರಕ್ಷತೆ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ, ಈ ಉತ್ಪನ್ನಗಳನ್ನು FSSAI ಪರವಾನಗಿ ಅಥವಾ ನೋಂದಣಿ ಸಂಖ್ಯೆಗಳೊಂದಿಗೆ ಪ್ಯಾಕ್ ಮಾಡಿ ಗೋದಾಮುಗಳಲ್ಲಿ ಸಂಗ್ರಹಿಸಿ ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದೆ.
ಇಲಾಖೆಯು ಈ ಮೂರು ವೇದಿಕೆಗಳಿಗೆ ವಿಷಕಾರಿ ದತ್ತೂರಿ ಸಸ್ಯಕ್ಕೆ ಸಂಬಂಧಿಸಿದ ಎಲ್ಲಾ ಪಟ್ಟಿಗಳು, ಜಾಹೀರಾತುಗಳು ಮತ್ತು ಪ್ರಚಾರವನ್ನು ತಕ್ಷಣ ತೆಗೆಯುವಂತೆ, ಮಾರಾಟ ಅಥವಾ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸೂಚಿಸಿದೆ. ಪೂರೈಕೆದಾರರು ಮತ್ತು ಮಾರಾಟಗಾರರ ಪರವಾನಗಿಗಳನ್ನೂ ಅಮಾನತುಗೊಳಿಸಲಾಗಿದೆ. ಆದೇಶ ಮೀರಿದರೆ ಗಂಭೀರ ಕ್ರಮ ಕೈಗೊಳ್ಳಲಾಗುವ ಎಂದು ಎಚ್ಚರಿಕೆ ನೀಡಲಾಗಿದೆ.




