ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ (DA) ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಬುಧವಾರ ರಾಜ್ಯಾದ್ಯಂತ ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 53ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲಿ ಸರಣಿ ದಾಳಿ ನಡೆಸಲಾಗಿದೆ. ಈ ವೇಳೆ, ಒಟ್ಟು 49.8 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿದುಬಂದಿದೆ.
ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಎರಡನೇ ಅತಿ ದೊಡ್ಡ ಲೋಕಾಯುಕ್ತ ದಾಳಿ ಇದಾಗಿದೆ.
ಲೋಕಾಯುಕ್ತ ಮೂಲಗಳ ಪ್ರಕಾರ, ದಾಳಿಗೆ ಒಳಗಾದ 10 ಅಧಿಕಾರಿಗಳು ಒಟ್ಟು 37.95 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಮತ್ತು 11.88 ಕೋಟಿ ರೂ. ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದಾರೆ. ಇದರ ಒಟ್ಟು ಮೌಲ್ಯ ಅಂದಾಜು 49.83 ಕೋಟಿ ರೂ. ಎಂದು ಲೆಕ್ಕಹಾಕಲಾಗಿದೆ.
ಇದಕ್ಕೂ ಮುನ್ನ ಮಂಗಳವಾರವಷ್ಟೇ, ಖಾಸಗಿ ವ್ಯಕ್ತಿಗಳಿಗೆ ಸುಮಾರು 13 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪದ ಮೇಲೆ ಬೆಂಗಳೂರು ಜಿಲ್ಲೆಯ ವಿಶೇಷ ಉಪ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್, ತಹಶೀಲ್ದಾರ್ ಬಿ.ಆರ್. ಮಂಜುನಾಥ್ ಹಾಗೂ ಕ್ಲರ್ಕ್ ರಜನಿಕಾಂತ್ ಅವರ ಕಚೇರಿ ಮತ್ತು ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬೆನ್ನಲ್ಲೇ ಬುಧವಾರ ಬೃಹತ್ ಸರಣಿ ದಾಳಿ ನಡೆದಿದೆ.
ಲೋಕಾಯುಕ್ತ ದಾಳಿ ನಡೆಸಿದ 10 ಅಧಿಕಾರಿಗಳು ಮತ್ತು ಸಿಕ್ಕ ಆಸ್ತಿಯ ವಿವರ:
- ನರೇಂದ್ರ ಕುಮಾರ್ ಎಂ (ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ – PWD, ಬೆಂಗಳೂರು):
ಸ್ಥಿರ ಆಸ್ತಿ: 3 ಮನೆಗಳು, 4 ಎಕರೆ ಕೃಷಿ ಭೂಮಿ (ಒಟ್ಟು ಮೌಲ್ಯ: 5.95 ಕೋಟಿ ರೂ.).
ಚರ ಆಸ್ತಿ: 3.10 ಲಕ್ಷ ರೂ. ನಗದು, 1.20 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, 16.60 ಲಕ್ಷ ರೂ. ಮೌಲ್ಯದ ವಾಹನಗಳು, 89.16 ಲಕ್ಷ ರೂ. ಬ್ಯಾಂಕ್ ಎಫ್‌ಡಿ.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 5.75 ಕೋಟಿ ರೂ. - ಪ್ರವೀಣ್ ಶ್ರೀಹರಿ ಬಿ (ಸೂಪರಿಂಟೆಂಡೆಂಟ್ ಇಂಜಿನಿಯರ್, ಕೆಆರ್‌ಐಡಿಎಲ್ – KRIDL, ಬೆಂಗಳೂರು):
ಸ್ಥಿರ ಆಸ್ತಿ: 2 ನಿವೇಶನಗಳು, 2 ಮನೆಗಳು, 11 ಎಕರೆ ಕೃಷಿ ಭೂಮಿ (ಒಟ್ಟು ಮೌಲ್ಯ: 4.60 ಕೋಟಿ ರೂ.).
ಚರ ಆಸ್ತಿ: 2.35 ಲಕ್ಷ ರೂ. ನಗದು, 11.08 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.15 ಕೋಟಿ ರೂ.ಮೌಲ್ಯದ ವಾಹನಗಳು.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 4.33 ಕೋಟಿ ರೂ. - ಪುಷ್ಪಾ ಡಿ ಆರ್ (ಹೆಚ್ಚುವರಿ ನಿರ್ದೇಶಕರು – ಆಡಳಿತ, ಕೃಷಿ ಮಾರಾಟ ಮಂಡಳಿ, ಬೆಂಗಳೂರು):
ಸ್ಥಿರ ಆಸ್ತಿ: 1 ನಿವೇಶನ, 3 ಮನೆಗಳು, 1 ವಾಣಿಜ್ಯ ಕಟ್ಟಡ, 20 ಗುಂಟೆ ಕೃಷಿ ಭೂಮಿ (ಒಟ್ಟು ಮೌಲ್ಯ: 7.37 ಕೋಟಿ ರೂ.).
ಚರ ಆಸ್ತಿ: 72,000 ರೂ. ನಗದು, 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 42.50 ಲಕ್ಷ ರೂ. ಮೌಲ್ಯದ ವಾಹನಗಳು.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 5.93 ಕೋಟಿ ರೂ. - ದುಗ್ಗಪ್ಪ ಬಿ ಎಚ್ (ವಲಯ ಅರಣ್ಯಾಧಿಕಾರಿ – RFO, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ):
ಸ್ಥಿರ ಆಸ್ತಿ: 3 ನಿವೇಶನಗಳು, 1 ಮನೆ, 3 ಎಕರೆ 30 ಗುಂಟೆ ಕೃಷಿ ಭೂಮಿ (ಒಟ್ಟು ಮೌಲ್ಯ: 1.51 ಕೋಟಿ ರೂ.).
ಚರ ಆಸ್ತಿ: 1.83 ಲಕ್ಷ ರೂ. ನಗದು, 8.92 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 22 ಲಕ್ಷ ರೂ. ಮೌಲ್ಯದ ವಾಹನಗಳು.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 1.95 ಕೋಟಿ ರೂ. - ಶಂಕರ ಎಂ (ಅಸೋಸಿಯೇಟ್ ಪ್ರೊಫೆಸರ್, ತೋಟಗಾರಿಕೆ ಇಲಾಖೆ, ಚಿತ್ರದುರ್ಗ):
ಸ್ಥಿರ ಆಸ್ತಿ: 1 ನಿವೇಶನ, 2 ಮನೆಗಳು, 8 ಎಕರೆ 26 ಗುಂಟೆ ಕೃಷಿ ಭೂಮಿ (ಒಟ್ಟು ಮೌಲ್ಯ: 1.71 ಕೋಟಿ ರೂ.).
ಚರ ಆಸ್ತಿ: 9,000 ನಗದು ರೂ., 26.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 27.80 ಲಕ್ಷ ರೂ. ಮೌಲ್ಯದ ವಾಹನಗಳು, 1.02 ಕೋಟಿ ರೂ. ಮೌಲ್ಯದ ಇತರೆ ವಸ್ತುಗಳು.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 1.87 ಕೋಟಿ ರೂ. - ಅಮೃತ್ ರಾವ್ (ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜೆಸ್ಕಾಮ್ – GESCOM, ಕಲಬುರಗಿ):
ಸ್ಥಿರ ಆಸ್ತಿ: 3 ನಿವೇಶನಗಳು, 2 ಮನೆಗಳು, 1 ಫ್ಲಾಟ್, 2 ವಾಣಿಜ್ಯ ಸಂಕೀರ್ಣಗಳು, 35.80 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ (ಒಟ್ಟು ಮೌಲ್ಯ: 2.83 ಕೋಟಿ ರೂ.).
ಚರ ಆಸ್ತಿ: 68,027 ರೂ. ನಗದು, 38.53 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 10.52 ಲಕ್ಷ ರೂ. ಮೌಲ್ಯದ ವಾಹನಗಳು, 54.59 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 2.65 ಕೋಟಿ ರೂ. - ತಿಮ್ಮಯ್ಯ (ಪಂಚಾಯತ್ ಅಭಿವೃದ್ಧಿ ಅಧಿಕಾರಿ – PDO, ಕುಂಬಳಗೋಡು ಗ್ರಾಮ ಪಂಚಾಯಿತಿ, ಬೆಂಗಳೂರು ದಕ್ಷಿಣ):
ಸ್ಥಿರ ಆಸ್ತಿ: 2 ನಿವೇಶನಗಳು, 4 ಮನೆಗಳು, 4 ಎಕರೆ 15 ಗುಂಟೆ ಕೃಷಿ ಭೂಮಿ (ಒಟ್ಟು ಮೌಲ್ಯ: 2.53 ಕೋಟಿ ರೂ.).
ಚರ ಆಸ್ತಿ: 84 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, 35.70 ಲಕ್ಷ ರೂ. ಮೌಲ್ಯದ ವಾಹನಗಳು.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 3.51 ಕೋಟಿ ರೂ. - ಕಿರಣ್ ಅಂಗಡಿ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ – ACF, ಸಂಶೋಧನಾ ಕೇಂದ್ರ, ಅಂಕೋಲಾ/ಶಿವಮೊಗ್ಗ):
ಸ್ಥಿರ ಆಸ್ತಿ: 1 ಮನೆ, 1 ಎಕರೆ ಕೃಷಿ ಭೂಮಿ (ಒಟ್ಟು ಮೌಲ್ಯ: 1.52 ಕೋಟಿ ರೂ.).
ಚರ ಆಸ್ತಿ: 13,044 ರೂ. ನಗದು, 5.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.84 ಲಕ್ಷ ರೂ. ಮೌಲ್ಯದ ವಾಹನಗಳು.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 1.95 ಕೋಟಿ ರೂ. - ಬಸನಗೌಡ ಪಾಟೀಲ್ (ಕಾರ್ಯಪಾಲಕ ಇಂಜಿನಿಯರ್, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ – KBJNL, ದೇವದುರ್ಗ, ರಾಯಚೂರು):
ಸ್ಥಿರ ಆಸ್ತಿ: 5 ನಿವೇಶನಗಳು, 4 ಮನೆಗಳು, ಭಾರಿ ಪ್ರಮಾಣದ 92 ಎಕರೆ ಕೃಷಿ ಭೂಮಿ (ಒಟ್ಟು ಮೌಲ್ಯ: 8.28 ಕೋಟಿ ರೂ.).
ಚರ ಆಸ್ತಿ: 1.15 ಲಕ್ಷ ರೂ. ನಗದು, 28.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 10.50 ಲಕ್ಷ ರೂ. ಮೌಲ್ಯದ ವಾಹನಗಳು, 75.50 ಲಕ್ಷ ರೂ. ಬ್ಯಾಂಕ್ ಉಳಿತಾಯ ಮತ್ತು ಎಫ್‌ಡಿ.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 6.12 ಕೋಟಿ ರೂ.. - ಮಧುಸೂದನ್ ಎನ್ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ತಿಪಟೂರು ಉಪವಿಭಾಗ, ತುಮಕೂರು):
ಸ್ಥಿರ ಆಸ್ತಿ: 3 ನಿವೇಶನಗಳು, 1 ಮನೆ (ಒಟ್ಟು ಮೌಲ್ಯ: 1.62 ಕೋಟಿ ರೂ.).
ಚರ ಆಸ್ತಿ: 11.94 ಲಕ್ಷ ರೂ. ನಗದು, 94.05 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 27 ಲಕ್ಷ ರೂ. ಮೌಲ್ಯದ ವಾಹನಗಳು.
ಪತ್ತೆಯಾದ ಒಟ್ಟು ಅಕ್ರಮ ಆಸ್ತಿ: 2.10 ಕೋಟಿ ರೂ.
ಲೋಕಾಯುಕ್ತ ಅಧಿಕಾರಿಗಳು ದಾಳಿಗೊಳಗಾದ ಎಲ್ಲ ಸ್ಥಳಗಳಿಂದ ಮಹತ್ವದ ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಜಪ್ತಿ ಮಾಡಿದ್ದು, ಮುಂದಿನ ಕಾನೂನು ಕ್ರಮ ಮತ್ತು ತನಿಖೆ ಮುಂದುವರೆಸಿದ್ದಾರೆ.



