ಎಥೆನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯಿಂದ ವಾಹನಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ, ಎಂಜಿನ್‌ಗಳು ಹಾಳಾಗುತ್ತಿವೆ ಎಂಬ ಆರೋಪಗಳ ನಡುವೆಯೂ, ಕೇಂದ್ರ ಸಚಿವ ನಿತಿನ್ ಗಡ್ಕರಿ ಭಂಡ ಸಮರ್ಥನೆ ಮಾಡಿಕೊಂಡಿದ್ದಾರೆ. ʼE20 ಇಂಧನದಿಂದ ಒಂದೇ ಒಂದು ವಾಹನ ಕೆಟ್ಟಿದ್ದರೆ ತೋರಿಸಿ ನೋಡೋಣʼ ಎಂದು ಅವರು ಸವಾಲು ಹಾಕಿದ್ದಾರೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಹಬ್ಬಿಸಲಾಗುತ್ತಿರುವ ನಕಾರಾತ್ಮಕ ಸುದ್ದಿಗಳು ಕೇವಲ ಸುಳ್ಳು ಪ್ರಚಾರ ಮತ್ತು ಹಣ ನೀಡಿ ನಡೆಸಲಾಗುತ್ತಿರುವ ಅಭಿಯಾನಗಳಾಗಿವೆ. ದೇಶದಲ್ಲಿ E20 ಪೆಟ್ರೋಲ್ ಬಳಕೆಯಿಂದ ಸಮಸ್ಯೆ ಎದುರಿಸುತ್ತಿರುವ ಒಂದೇ ಒಂದು ಕಾರು ಇದೆಯೇ? ಯಾರಾದರೂ ಒಬ್ಬರು ಅಂತಹ ಒಂದು ಕಾರಿನ ಹೆಸರನ್ನು ಹೇಳಿ” ಎಂದು ಸವಾಲು ಹಾಕಿದ್ದಾರೆ.
ಭಾರತವು ಈಗಾಗಲೇ ಪೆಟ್ರೋಲ್‌ನಲ್ಲಿ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡುವ (E20) ಗುರಿಯನ್ನು ತಲುಪಿದೆ. ಇದರಿಂದ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವುದು, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವುದು ಮತ್ತು ರೈತರ ಆದಾಯವನ್ನು ಹೆಚ್ಚಿಸುವುದು ಸರ್ಕಾರದ ಮುಖ್ಯ ಉದ್ದೇಶ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕೆಲವರು ಇದರಿಂದ ವಾಹನದ ಮೈಲೇಜ್ ಕಡಿಮೆಯಾಗುತ್ತಿದೆ ಮತ್ತು ಹಳೆಯ ವಾಹನಗಳ ಎಂಜಿನ್ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಎಥೆನಾಲ್ ಒಂದು ‘ಹೈಗ್ರೊಸ್ಕೋಪಿಕ್’ (Hygroscopic) ದ್ರವ. ಅಂದರೆ ಇದು ವಾತಾವರಣದಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹಳೆಯ ವಾಹನಗಳ ಇಂಧನ ಟ್ಯಾಂಕ್‌ಗಳಲ್ಲಿ ನೀರು ಸೇರಿದರೆ, ಅದು ಎಂಜಿನ್‌ನ ಭಾಗಗಳಿಗೆ ತುಕ್ಕು (Corrosion) ಹಿಡಿಸುತ್ತದೆ. ಹಳೆಯ ವಾಹನಗಳಲ್ಲಿ ಬಳಸಲಾದ ಪೈಪ್‌ಗಳು, ಸೀಲ್‌ಗಳು ಮತ್ತು ರಬ್ಬರ್ ಭಾಗಗಳು ಎಥೆನಾಲ್‌ನ ಆಮ್ಲೀಯ ಗುಣಕ್ಕೆ ಒಗ್ಗಿಕೊಳ್ಳುವಂತೆ ತಯಾರಾಗಿರುವುದಿಲ್ಲ. ಇವು ಕಾಲಕ್ರಮೇಣ ಸವೆಯುತ್ತವೆ ಅಥವಾ ಬಿರುಕು ಬಿಡುತ್ತವೆ. ಎಥೆನಾಲ್ ಇಂಧನ ಟ್ಯಾಂಕ್ ಮತ್ತು ಫ್ಯೂಯಲ್ ಲೈನ್‌ಗಳಲ್ಲಿರುವ ಹಳೆಯ ಜಿಡ್ಡು ಅಥವಾ ಕೊಳಕನ್ನು ಕರಗಿಸುತ್ತದೆ. ಇದು ಎಂಜಿನ್‌ನ ಇಂಧನ ಫಿಲ್ಟರ್‌ಗಳನ್ನು ಬೇಗನೆ ಬ್ಲಾಕ್ (Block) ಮಾಡುತ್ತದೆ, ಇದರಿಂದ ವಾಹನ ಮಧ್ಯ ದಾರಿಯಲ್ಲಿ ನಿಂತುಹೋಗುವ ಸಾಧ್ಯತೆ ಇರುತ್ತದೆ.
ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್ ಕಡಿಮೆ ಶಕ್ತಿಯ ಸಾಂದ್ರತೆಯನ್ನು (Energy Density) ಹೊಂದಿದೆ. ಅಂದರೆ, ನೀವು ನಿರ್ದಿಷ್ಟ ದೂರ ಕ್ರಮಿಸಲು ಸಾಮಾನ್ಯ ಪೆಟ್ರೋಲ್‌ಗಿಂತ ಹೆಚ್ಚು ಎಥೆನಾಲ್ ಇಂಧನ ಬೇಕಾಗುತ್ತದೆ. ಹೀಗಾಗಿ, ವಾಹನ ಸವಾರರಿಗೆ ಮೈಲೇಜ್ ಕಡಿಮೆಯಾದಂತೆ ಭಾಸವಾಗುತ್ತದೆ (ಸುಮಾರು 3% ರಿಂದ 5% ರಷ್ಟು ಇಳಿಕೆ ಕಾಣಬಹುದು).
ತಾಪಮಾನ ಕಡಿಮೆಯಿದ್ದಾಗ (ಚಳಿಗಾಲದಂತಹ ಸಮಯದಲ್ಲಿ) ಎಥೆನಾಲ್ ಮಿಶ್ರಿತ ಇಂಧನ ಬಳಸುವ ವಾಹನಗಳನ್ನು ಸ್ಟಾರ್ಟ್ ಮಾಡುವುದು ಕಷ್ಟ.
ಸಚಿವರು “ಯಾವುದೇ ಕಾರು ಕೆಟ್ಟಿಲ್ಲ” ಎನ್ನುತ್ತಾರೆ, ಆದರೆ ಆ ಕಾರುಗಳು E20ಗೆ ಹೊಂದಿಕೆಯಾಗುವಂತೆ (E20 compliant) ಎಂಜಿನಿಯರಿಂಗ್ ಮಾಡಲಾಗಿದೆಯೇ ಎಂಬುದು ಮುಖ್ಯ. 2000-2010ರ ಆಸುಪಾಸಿನ ವಾಹನಗಳು ಈಗಿನ ಎಥೆನಾಲ್ ಮಿಶ್ರಣಕ್ಕೆ ಹೊಂದಿಕೊಳ್ಳುವಂತೆ ತಯಾರಾಗಿರಲಿಲ್ಲ. ಅಂತಹ ವಾಹನಗಳನ್ನು ಬಳಸುವವರಿಗೆ ಸಮಸ್ಯೆಗಳಾಗುತ್ತಿರುವುದು ನಿಜ. ತಯಾರಕರು ತಮ್ಮ ಹಳೆಯ ಮಾಡೆಲ್‌ಗಳಿಗೆ ಎಥೆನಾಲ್‌ನಿಂದಾಗುವ ಹಾನಿಯ ಕುರಿತು ಸ್ಪಷ್ಟ ಮಾರ್ಗಸೂಚಿ ಅಥವಾ ಅಪ್‌ಗ್ರೇಡ್‌ಗಳನ್ನು ನೀಡಿಲ್ಲ.
ಇದನ್ನೂ ಓದಿ: ಪೆಟ್ರೋಲ್‌ಗೆ ಎಥೆನಾಲ್ ಅಲ್ಲ, ಎಥೆನಾಲ್‌ಗೇ ಪೆಟ್ರೋಲ್ ಮಿಕ್ಸ್: ಜೇಬಿಗೆ ಕತ್ತರಿ, ಎಂಜಿನ್‌ಗೆ ಕಂಟಕ!
ಸರ್ಕಾರವು ರೈತರ ಆದಾಯ ಹೆಚ್ಚಿಸಲು ಎಥೆನಾಲ್ ಉತ್ಪಾದನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎನ್ನುತ್ತದೆ. ಆದರೆ, ಆ ಪ್ರಕ್ರಿಯೆಯಲ್ಲಿ ಗ್ರಾಹಕನ ವಾಹನದ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವುದು ಮತ್ತು ಮೈಲೇಜ್ ಕಡಿಮೆಯಾಗುತ್ತಿರುವುದು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಿದೆ.
ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ E20 ಮಿಶ್ರಣವನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರಿಗೆ ಶುದ್ಧ ಪೆಟ್ರೋಲ್ ಬೇಕೋ ಅಥವಾ ಎಥೆನಾಲ್ ಮಿಶ್ರಿತ ಇಂಧನ ಬೇಕೋ ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯ ಇಲ್ಲದಿರುವುದು ಸಹ ಆಕ್ರೋಶಕ್ಕೆ ಒಂದು ಕಾರಣವಾಗಿದೆ.
ಇಷ್ಟೆಲ್ಲಾ ಸಾಕ್ಷಿಗಳು ಕಣ್ಣಮುಂದಿದ್ದರೂ ಸಚಿವರು ಮಾತ್ರ ಎಥೆನಾಲ್‌ನಿಂದ ಕೆಟ್ಟಿರುವ ಒಂದೇ ಒಂದು ವಾಹನ ತೋರಿಸಿ ಎನ್ನುತ್ತಿದ್ದಾರೆ. ಇದನ್ನ ಭಂಡ ಸಮರ್ಥನೆಯೆಂದೇ ಜನ ಜರೆಯುತ್ತಿದ್ದಾರೆ.




