ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ನಡೆಯುವ ಯಾವುದೇ ಪ್ರತಿಭಟನೆ ಅಥವಾ ಧರಣಿಗಳಿಗೆ ರಾಜ್ಯ ಸರ್ಕಾರವಾಗಲಿ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವತಿಯಿಂದಲಾಗಲಿ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ಆದರೆ, ವಾಸ್ತವವನ್ನು ಅರಿಯದೆ ಕೆಲವು ಮಾಧ್ಯಮಗಳು ಪ್ರಕಟಿಸಿದ ಆಧಾರರಹಿತ ವರದಿಗಳು ಹೋರಾಟಗಾರರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಗೊಂದಲಕ್ಕೆ ಕಾರಣವಾಗಿವೆ. ಇದೇ ಸುದ್ದಿಯನ್ನು ನಂಬಿದ ಪ್ರಮುಖ ಪ್ರತಿಪಕ್ಷ ಬಿಜೆಪಿ, ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿ ಇದೀಗ ತಾನೇ ಪೇಚಿಗೆ ಸಿಲುಕಿದೆ.
ವಾಸ್ತವವಾಗಿ, ಸ್ವಾತಂತ್ರ್ಯ ಉದ್ಯಾನವನದ ಒಂದು ನಿರ್ದಿಷ್ಟ ಭಾಗವನ್ನು ಸಾರ್ವಜನಿಕರ ಪ್ರತಿಭಟನೆ ಹಾಗೂ ಸಭೆ-ಸಮಾರಂಭಗಳನ್ನು ನಡೆಸಲು ಸರ್ಕಾರ ಮೊದಲಿನಿಂದಲೂ ಮೀಸಲಿಟ್ಟಿದೆ. ಈ ಜಾಗದಲ್ಲಿ ಹೋರಾಟ ನಡೆಸಲು ಯಾವುದೇ ಶುಲ್ಕ ವಿಧಿಸಿಲ್ಲ. ಆದರೆ, ಫ್ರೀಡಂ ಪಾರ್ಕ್ ಆವರಣದಲ್ಲಿ ವಾಹನಗಳ ನಿಲುಗಡೆಗಾಗಿ (ಪಾರ್ಕಿಂಗ್) ನಿರ್ಮಿಸಿರುವ ಕಟ್ಟಡದ ಮೇಲ್ಭಾಗದಲ್ಲಿರುವ ಮತ್ತೊಂದು ಕಟ್ಟಡದಲ್ಲಿ ಖಾಸಗಿ ಕಾರ್ಯಕ್ರಮಗಳು ಅಥವಾ ಸಭೆಗಳನ್ನು ಆಯೋಜಿಸಲು ಮಾತ್ರ ದಿನಕ್ಕೆ ಒಂದು ಲಕ್ಷ ರೂಪಾಯಿ ಬಾಡಿಗೆಯನ್ನು ಪ್ರಾಧಿಕಾರ ನಿಗದಿಪಡಿಸಿದೆ.
ಖಾಸಗಿ ಕಾರ್ಯಕ್ರಮಗಳಿಗೆ ಕಟ್ಟಡ ಬಳಕೆಗೆ ವಿಧಿಸಬಹುದಾದ ಈ ಬಾಡಿಗೆಯನ್ನೇ ‘ಪ್ರತಿಭಟನೆಗೆ ನಿಗದಿಪಡಿಸಿದ ಶುಲ್ಕ’ ಎಂದು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ. ಕೆಲವು ಪ್ರಮುಖ ಮಾಧ್ಯಮಗಳು, ‘ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಹಾಗೂ ಧರಣಿಗಳನ್ನು ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ದಿನಕ್ಕೆ 1 ಲಕ್ಷ ರೂ. ಬಾಡಿಗೆ ನಿಗದಿಪಡಿಸಿ ಆದೇಶ ಹೊರಡಿಸಿದೆ’ ಎಂದು ವರದಿ ಮಾಡಿದ್ದವು. ಈ ತಪ್ಪು ವರದಿಗಳೇ ಇಷ್ಟೆಲ್ಲಾ ಗೊಂದಲಕ್ಕೆ ಮೂಲ ಕಾರಣವಾಗಿವೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗದ ಬಿಜೆಪಿ, ಇದನ್ನೇ ಅಸ್ತ್ರವಾಗಿಸಿಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆ ಮುಂದಾಯಿತು. ಪಕ್ಷದ ಅಧಿಕೃತ ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದ ಬಿಜೆಪಿ ಕರ್ನಾಟಕ, “ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲೂ ₹1 ಲಕ್ಷ ಬಾಡಿಗೆ! ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದಲ್ಲಿ ಜನರ ಪ್ರಜಾಸತ್ತಾತ್ಮಕ ಹೋರಾಟದ ಹಕ್ಕಿಗೂ ಬೆಲೆ ಕಟ್ಟುವಂತಾಗಿದೆ. ಜನರ ಧ್ವನಿಯನ್ನು ಹತ್ತಿಕ್ಕುವ ಈ ರಿಯಲ್ ಎಸ್ಟೇಟ್ ಸರ್ಕಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ಖಾಸಗಿ ಕಟ್ಟಡದ ಬಾಡಿಗೆಯ ಆದೇಶವನ್ನು ಪ್ರತಿಭಟನಾ ಶುಲ್ಕವೆಂದು ಬಿಂಬಿಸಿದ ಮಾಧ್ಯಮಗಳ ಆತುರದ ವರದಿಗಳು ಹಾಗೂ ಅದನ್ನು ಪರಿಶೀಲಿಸದೆ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ಬಿಜೆಪಿಯ ನಡೆಯು ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ಅನಗತ್ಯ ಗೊಂದಲ ಸೃಷ್ಟಿಸುವಂತೆ ಮಾಡಿದೆ. ಸತ್ಯಾಂಶ ಹೊರಬಿದ್ದ ಬಳಿಕ, ಆಧಾರರಹಿತ ಸುದ್ದಿಯನ್ನು ಹಂಚಿಕೊಂಡಿದ್ದಕ್ಕಾಗಿ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.




