ಭೋಜಶಾಲಾ ಸಂಕೀರ್ಣವನ್ನು ದೇವಾಲಯವೆಂದು ಮಧ್ಯಪ್ರದೇಶ ಹೈಕೋರ್ಟ್ ಘೋಷಿಸಿದೆ. ವಿವಾದಿತ ಭೋಜಶಾಲಾ ಸಂಕೀರ್ಣದ ಸ್ವರೂಪವು ದೇವಾಲಯದ ರೂಪದಲ್ಲಿದೆ ಎಂದು ಹೈಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ಪೀಠವು ಈ ಆದೇಶವನ್ನು ಪ್ರಕಟಿಸಿದೆ. ಭಾರತೀಯ ಪುರಾತತ್ವ ಇಲಾಖೆ (ASI) ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಆಧರಿಸಿ, ಈ ಇಡೀ ಸಂಕೀರ್ಣವು ಮೂಲತಃ ಸರಸ್ವತಿ ದೇವಸ್ಥಾನ ಮತ್ತು ಸಂಸ್ಕೃತ ಕಲಿಕಾ ಕೇಂದ್ರವಾಗಿತ್ತು ಎಂದು ಕೋರ್ಟ್ ತಿಳಿಸಿದೆ.
ಇದನ್ನು ಓದಿದ್ದೀರಾ? ಪತಿ ವಿರುದ್ಧದ ಅಸ್ವಾಭಾವಿಕ ಲೈಂಗಿಕ ಆರೋಪ ಮುಕ್ತಗೊಳಿಸಿದ ಮಧ್ಯ ಪ್ರದೇಶ ಹೈಕೋರ್ಟ್
ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜ್‌ಶಾಲಾ ಸಂಕೀರ್ಣ ದೇವಸ್ಥಾನವೋ ಅಥವಾ ಮಸೀದಿಯೋ ಎಂಬುದು ದಶಕಗಳ ಹಳೆಯ ವಿವಾದವಾಗಿದೆ. ಈ ಸ್ಥಳವನ್ನು ಹಿಂದೂಗಳು ವಾಗ್ದೇವಿ (ಸರಸ್ವತಿ) ದೇವಿಯ ದೇವಸ್ಥಾನ ಎಂದು ನಂಬಿದರೆ, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
2003ರ ASI ಆದೇಶದ ಪ್ರಕಾರ, ಹಿಂದೂಗಳು ಪ್ರತಿ ಮಂಗಳವಾರ ಮತ್ತು ವಸಂತ ಪಂಚಮಿಯಂದು ಪೂಜೆ ಸಲ್ಲಿಸಲು ಅವಕಾಶವಿತ್ತು. ಮುಸ್ಲಿಮರು ಪ್ರತಿ ಶುಕ್ರವಾರ ನಮಾಜ್ ಮಾಡಲು ಅವಕಾಶ ನೀಡಲಾಗಿತ್ತು.
ಹಿಂದೂ ಫ್ರಂಟ್ ಫಾರ್ ಜಸ್ಟಿಸ್, ಈ ಸ್ಥಳವು ಸಂಪೂರ್ಣವಾಗಿ ಹಿಂದೂ ದೇವಾಲಯವಾಗಿದ್ದು, ಅಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಬೇಕು ಮತ್ತು ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅದಾದ ಬಳಿಕ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಈ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ (ASI Survey) ನಡೆಸಲು ಆದೇಶಿಸಿತ್ತು.
ಇದೀಗ ಸಮೀಕ್ಷೆಯ ವೇಳೆ ಪತ್ತೆಯಾದ ಪರಮಾರ ರಾಜರ ಕಾಲದ ನಾಣ್ಯಗಳು, ವಿಗ್ರಹಗಳು, ಯಜ್ಞಕುಂಡ ಮತ್ತು ಶಾಸನಗಳು ಇದು ದೇವಸ್ಥಾನ ಎಂಬುದನ್ನು ಸಾಬೀತುಪಡಿಸಿವೆ ಎಂದು ನ್ಯಾಯಾಲಯ ಪರಿಗಣಿಸಿದೆ.




