ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಮುಂದಿನ ಒಂದು ವರ್ಷದಲ್ಲಿ ವಿಚಾರಣೆಯಲ್ಲಿ ಯಾವುದೇ ಗಮನಾರ್ಹ ಬೆಳವಣಿಗೆ ನಡೆಯದಿದ್ದರೆ ಮಾತ್ರ ಜಾಮೀನು ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ದರ್ಶನ್‌ಗೆ ತಿಳಿಸಿದೆ. ಇದರಿಂದಾಗಿ ಇನ್ನೂ ಒಂದು ವರ್ಷದವರೆಗೆ ಜೈಲಲ್ಲೇ ನಟ ದರ್ಶನ್ ಇರಬೇಕಾಗಿದೆ.
ಎರಡು ವರ್ಷಗಳ ಹಿಂದೆ ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಟ ದರ್ಶನ್ ಸೇರಿ ಒಟ್ಟು 17 ಆರೋಪಿಗಳ ಬಂಧನವಾಗಿತ್ತು. ಜಾಮೀನು ಮೇಲೆ ಹೊರ ಬಂದ ಆರೋಪಿಗಳು ಜಾಮೀನು ರದ್ದಾಗಿ ಕಳೆದ 9 ತಿಂಗಳಿನಿಂದ ಜೈಲಿನಲ್ಲೇ ಇದ್ದಾರೆ.
ಇದನ್ನು ಓದಿದ್ದೀರಾ?ರೇಣುಕಸ್ವಾಮಿ ಕೊಲೆ ಪ್ರಕರಣ: ಜಾಮೀನಿಗಾಗಿ ಮತ್ತೆ ಸುಪ್ರೀಂ ಕದ ತಟ್ಟಿದ ನಟ ದರ್ಶನ್
ಜಾಮೀನು ಕೋರಿ ದರ್ಶನ್ ಏಪ್ರಿಲ್‌ನಲ್ಲಿ ಹೊಸದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಜೆ. ಬಿ. ಪರ್ದಿವಾಲಾ ಅವರ ನೇತೃತ್ವದ ಪೀಠವು ಜಾಮೀನು ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ. ಹಾಗೆಯೇ ಮುಂದಿನ ಒಂದು ವರ್ಷದೊಳಗೆ ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯಕ್ಕೆ ಗಡುವು ವಿಧಿಸಿದೆ.
This video cannot be played in your browser. Open the video directly
ಈ ಒಂದು ವರ್ಷದ ಅವಧಿಯಲ್ಲಿ ಬಾಕಿ ಇರುವ ಪ್ರಮುಖ 60 ಸಾಕ್ಷಿಗಳನ್ನು ಆದ್ಯತೆಯ ಮೇರೆಗೆ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಇನ್ನು ಜೈಲಿನಲ್ಲಿ ತಮಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂಬ ದರ್ಶನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಜೈಲು ಕೈಪಿಡಿ ಪ್ರಕಾರ ಅವರಿಗೆ ಸಿಗಬೇಕಾದ ಎಲ್ಲ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.





