2017ರ ಉನ್ನಾಂವ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
2017ರ ಉನ್ನಾಂವ್ ಪ್ರಕರಣವು ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಅಪರಾಧ ಪ್ರಕರಣಗಳಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಉನ್ನಾಂವ್‌ದ 17 ವರ್ಷದ ಅಪ್ರಾಪ್ತ ಬಾಲಕಿಯನ್ನು 2017ರ ಜೂನ್ 4ರಂದು ಅಂದಿನ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅಪಹರಿಸಿ ಅತ್ಯಾಚಾರ ಮಾಡಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ಸೆಂಗರ್ ಮನೆಗೆ ಕರೆದೊಯ್ಯಲಾಗಿತ್ತು.
ಇದನ್ನು ಓದಿದ್ದೀರಾ? ಬೆಚ್ಚಿ ಬೀಳಿಸಿದ್ದ ಉನ್ನಾಂವ್ ಅತ್ಯಾಚಾರ: ಯುಪಿಯ ಬಿಜೆಪಿ ನಾಯಕ ಕುಲದೀಪ್ ಜೀವಾವಧಿ ಶಿಕ್ಷೆ ಅಮಾನತು!
ಅಷ್ಟು ಮಾತ್ರವಲ್ಲದೆ ತನ್ನ ಮಗಳಿಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಸಂತ್ರಸ್ತೆಯ ತಂದೆಯನ್ನು ಕುಲದೀಪ್ ಸೆಂಗಾರ್‌ನ ಸಹೋದರ ಅತುಲ್ ಸಿಂಗ್ ಮತ್ತು ಇತರರು 2018ರ ಏಪ್ರಿಲ್‌ನಲ್ಲಿ ತೀವ್ರವಾಗಿ ಥಳಿಸಿದ್ದರು. ಪೊಲೀಸರು ಸಂತ್ರಸ್ತೆಯ ತಂದೆಯನ್ನೇ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಬಂಧಿಸಿದ್ದರು. 2018ರ ಏಪ್ರಿಲ್ 8ರಂದು ಸಂತ್ರಸ್ತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಪ್ರಕರಣ ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಇದಾದ ಮರುದಿನವೇ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಗಂಭೀರ ಗಾಯಗಳಿಂದ ಮೃತಪಟ್ಟಿದ್ದರು.
ಅದಾದ ಬಳಿಕ 2019ರ ಜುಲೈ 28ರಂದು ಸಂತ್ರಸ್ತೆಯ ಸಂಬಂಧಿಕರು ಮತ್ತು ವಕೀಲರು ಪ್ರಯಾಣಿಸುತ್ತಿದ್ದ ಕಾರಿಗೆ ರಾಯಬರೇಲಿಯಲ್ಲಿ ಟ್ರಕ್ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸಂತ್ರಸ್ತೆಯ ಇಬ್ಬರು ಮಹಿಳಾ ಸಂಬಂಧಿಕರು ಸಾವನ್ನಪ್ಪಿದರು ಮತ್ತು ಸಂತ್ರಸ್ತೆ ಹಾಗೂ ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು. ಈ ಎಲ್ಲ ಘಟನೆಗಳು ಕುಲದೀಪ್ ಸಿಂಗ್ ಸಂತ್ರಸ್ತೆಯ ಹತ್ಯೆಗೂ ಸಂಚು ಮಾಡುತ್ತಿರುವ ಸಂಶಯ ಹುಟ್ಟಿಸಿತ್ತು.
ಈ ಪ್ರಕರಣದಲ್ಲಿ 2019ರ ಡಿಸೆಂಬರ್ 20ರಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯವು ಕುಲದೀಪ್ ಸಿಂಗ್ ಸೆಂಗರ್ ಅಪರಾಧಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ಮತ್ತು 25 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಹಾಗೆಯೇ ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ 2020ರ ಮಾರ್ಚ್‌ನಲ್ಲಿ ಸೆಂಗರ್ ಸೇರಿದಂತೆ ಏಳು ಜನರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಆದರೆ ಕುಲದೀಪ್ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ನಡೆಸಿದ ದೆಹಲಿ ಹೈಕೋರ್ಟ್ ಮೇಲ್ಮನವಿ ವಿಚಾರಣೆಯ ಸಮಯದಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ಸೆಂಗರ್ 15 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಒದಗಿಸಬೇಕು. ಸಂತ್ರಸ್ತೆಯ ನಿವಾಸದ 5 ಕಿ.ಮೀ ವ್ಯಾಪ್ತಿಯೊಳಗೆ ಪ್ರವೇಶಿಸಬಾರದು ಮತ್ತು ಸಂತ್ರಸ್ತೆ ಅಥವಾ ಆಕೆಯ ತಾಯಿಯನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬಾರದು ಎಂದು ಹೇಳಿ ಜಾಮೀನು ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್‌ನ ಈ ಆದೇಶವನ್ನು ರದ್ದುಗೊಳಿಸಿದೆ.




