ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ‘ನೀಟ್-ಯುಜಿ’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಹತ್ವದ ಕಾರ್ಯಾಚರಣೆ ನಡೆಸಿದೆ. ಸೋರಿಕೆಯಾದ ಒಂದೊಂದು ಪ್ರಶ್ನೆಪತ್ರಿಕೆಯನ್ನು ಅಭ್ಯರ್ಥಿಗಳಿಗೆ ತಲಾ 10 ರಿಂದ 12 ಲಕ್ಷ ರೂ. ಮಾರಾಟ ಮಾಡಲಾಗಿದೆ ಎಂಬ ಆಘಾತಕಾರಿ ಅಂಶವನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿದ್ದು, ಈ ಬೃಹತ್ ಜಾಲದ ಪ್ರಮುಖ ಆರೋಪಿಗಳನ್ನು ದೆಹಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.
ತನಿಖೆಯ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆ ಜಾಲವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದೆ. ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳು ಹಾಗೂ ಅವರ ಪೋಷಕರನ್ನು ರಹಸ್ಯವಾಗಿ ಸಂಪರ್ಕಿಸುತ್ತಿದ್ದ ದಲ್ಲಾಳಿಗಳು, ವೈದ್ಯಕೀಯ ಸೀಟಿನ ಆಮಿಷವೊಡ್ಡಿ ತಲಾ 10 ರಿಂದ 12 ಲಕ್ಷ ರೂಪಾಯಿಗಳ ಬೃಹತ್ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದರು.
ಈ ಅಕ್ರಮ ಹಣವನ್ನು ನೀಡಲು ಒಪ್ಪಿದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆಪತ್ರಿಕೆ ಹಾಗೂ ಅದರ ಉತ್ತರಗಳನ್ನು ಒದಗಿಸಲಾಗಿತ್ತು. ಕೇವಲ ಪ್ರಶ್ನೆಪತ್ರಿಕೆ ನೀಡುವುದು ಮಾತ್ರವಲ್ಲದೆ, ಆ ಉತ್ತರಗಳನ್ನು ಕಂಠಪಾಠ ಮಾಡಲು ಅಭ್ಯರ್ಥಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು ಎಂಬ ಸಂಗತಿಯನ್ನು ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳಂ ‘ಕೈ’ ಹಿಡಿದ ‘ಪುಸ್ತಕ ಪ್ರೇಮಿ’ ಸಜ್ಜನ ಸತೀಶನ್ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಕರಣದ ಬೆನ್ನುಹತ್ತಿದ್ದ ಸಿಬಿಐ ಅಧಿಕಾರಿಗಳು, ಪ್ರಶ್ನೆಪತ್ರಿಕೆ ಸೋರಿಕೆ, ಹಣದ ವಹಿವಾಟು ಹಾಗೂ ಮಾರಾಟ ಜಾಲದಲ್ಲಿ ಸಕ್ರಿಯರಾಗಿದ್ದ ಆರೋಪಿಗಳನ್ನು ಬಂಧಿಸಿ ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಸಿಬಿಐ ಪರ ವಕೀಲರು, “ಈ ಅಕ್ರಮ ಜಾಲದಲ್ಲಿ ಕೇವಲ ಮಧ್ಯವರ್ತಿಗಳು ಮಾತ್ರವಲ್ಲದೆ, ಇನ್ನೂ ಹಲವು ಪ್ರಭಾವಿಗಳ ಕೈವಾಡವಿರುವ ಬಲವಾದ ಶಂಕೆ ಇದೆ. ಅಕ್ರಮದ ಸಂಪೂರ್ಣ ಆಳ-ಅಗಲಗಳನ್ನು ಭೇದಿಸಲು, ಪ್ರಶ್ನೆಪತ್ರಿಕೆ ಮೂಲತಃ ಎಲ್ಲಿಂದ ಸೋರಿಕೆಯಾಯಿತು ಎಂಬುದನ್ನು ಪತ್ತೆಹಚ್ಚಲು ಹಾಗೂ ಕೋಟ್ಯಂತರ ರೂಪಾಯಿಗಳ ಕಪ್ಪುಹಣದ ವಹಿವಾಟಿನ ಜಾಡು ಹಿಡಿಯಲು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುವುದು ಅತ್ಯಗತ್ಯವಾಗಿದೆ” ಎಂದು ಮನವಿ ಮಾಡಿದರು.
ಸಿಬಿಐ ಈ ಹಗರಣದ ಬೇರುಗಳು ದೇಶದ ಯಾವೆಲ್ಲಾ ರಾಜ್ಯಗಳಿಗೆ ಹಬ್ಬಿವೆ ಮತ್ತು ಪರೀಕ್ಷಾ ವ್ಯವಸ್ಥೆಯೊಳಗಿನ ಯಾವ ಅಧಿಕಾರಿಗಳು ಇದಕ್ಕೆ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ತನ್ನ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.




