ನವನಗರದ ಯೂನಿಟ್-3ರ ಸೆಕ್ಟರ್ ಅ ಮತ್ತು ಆ ಪ್ರದೇಶದಲ್ಲಿರುವ 229 ಎಕರೆ ಜಾಗದಲ್ಲಿ ಕೇಂದ್ರೀಕೃತ ಮಾರುಕಟ್ಟೆ ಹಾಗೂ ವಾಣಿಜ್ಯ ಕೇಂದ್ರ ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಸ್ತಾವನೆಗೆ ತ್ವರಿತ ಅನುಮೋದನೆ ನೀಡುವಂತೆ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಯೋಜನೆಗೆ ಅಗತ್ಯ ನಗರ ಯೋಜನಾ ಮತ್ತು ಕಾನೂನು ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ, ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಒಟ್ಟು 229 ಎಕರೆ ಪ್ರದೇಶದಲ್ಲಿ ಸುಮಾರು 90.38 ಎಕರೆ ಜಾಗವನ್ನು ವಾಣಿಜ್ಯ ಮಳಿಗೆಗಳು ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಉದ್ದೇಶವಿದೆ. ಆಧುನಿಕ ವಾಣಿಜ್ಯ ಕೇಂದ್ರದ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರಿಂದ ವ್ಯಾಪಾರ ವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ನಗರದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.
ವ್ಯಾಪಾರಿಗಳಿಂದಲೂ ಬೇಡಿಕೆ: ನವನಗರದಲ್ಲಿ ಕೇಂದ್ರೀಕೃತ ಮಾರುಕಟ್ಟೆ ನಿರ್ಮಿಸುವಂತೆ ಫೆಡರೇಶನ್ ಆಫ್ ಮರ್ಚೆಂಟ್ಸ್ ಅಸೋಸಿಯೇಷನ್ ಕೂಡ ಮನವಿ ಸಲ್ಲಿಸಿದೆ.
ರೈತರು, ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ವಾಣಿಜ್ಯ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ವಸತಿ ಉದ್ದೇಶಕ್ಕೆ ಮೀಸಲಿಟ್ಟಿರುವ ಪ್ರದೇಶವನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸುವ ಪ್ರಸ್ತಾವನೆಯನ್ನೂ ಬಿಟಿಡಿಎ ಸಲ್ಲಿಸಿದೆ.ಮಾರುಕಟ್ಟೆ ಅಭಿವೃದ್ಧಿಗೆ ಅಗತ್ಯವಾದ ರಸ್ತೆ, ಒಳಚರಂಡಿ, ನೀರು ಸರಬರಾಜು, ವಿದ್ಯುತ್ ಹಾಗೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ವಿಶೇಷ ಅನುದಾನ ನೀಡುವಂತೆಯೂ ಪ್ರಕಾಶ ತಪಶೆಟ್ಟಿ ಮನವಿ ಮಾಡಿದ್ದಾರೆ.
ಈ ಯೋಜನೆ ಬಾಗಲಕೋಟೆಯ ಭವಿಷ್ಯದ ವ್ಯಾಪಾರ, ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದ್ದು, ಸರ್ಕಾರ ಆದ್ಯತೆಯ ಮೇರೆಗೆ ಅನುಮೋದನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.



