ಹೊತ್ರಾಳಿ ಏಳತನಕಾ ಸೂರ್ಯ ಹೊಂಟಾನ, ಬಿಸಲ ರಪರಪ ಬಡಿಲತುದ. ಮದ್ಯಾಣ ಬಾರ ಆಯ್ತು ಅಂದುರ ಮುಗಿತು, ಮನ್ಯಾಗ ಇದ್ದುರ ಬಿ ಭೆಂಕ್ಯಾಗ ಕುಂತಿನ್ಹಾಗ ಅನಸ್ಲಾತುದ. ಅದಕ್ಕೆ ಈ ಬ್ಯಾಸಕಿ ಮುಗ್ಯಾತನಕ ಎತ್ತಬಿ ಬಿಸಲಾಗ ಓಡಾಡಬ್ಯಾಡ. ಬಿಸಲ ಹೊಡ್ದು ಬೇಮಾರ ಬಿದ್ದೂರ್ ಭಾಳ ಹೈರಾಣ ಅದಾ ಮತ್ತ!
“ಅವ್ವೋರೇ…ಏನ್ ಮಾಡ್ಲಾತಿರಿ” ಅಂತ ಬಾಜು ಮನೀ ಸುಬ್ಬಕ್ಕ ತಟ್ಟಿ ಬಡ್ಕೊತಾ ಕರ್ದುಳ.
“ಯಾಕೇ ಸುಬ್ಬಕ್ಕ…ಈಟ ಜಲ್ದಿ ಬಂದಿದಿ, ಯಾನ್ ಧಂದ್ಯೆ ಅದಾ ಹೇಳ, ಅವ್ವು ಪೂಜಾ ಮಾಡ್ಕೊಲತಾರ” ಅಂದಾ ಮಗ ಸೋಮ.
“ಏನಿಲ್ಲ ರೀ…ಇವತ್ತು ಕಡ್ಡಿ ತೊಯ್ಸಿ ಮಾಳಗಿ ಮ್ಯಾಲ ಒಣ್ಯಾಕಿದ್ಯಾ, ಕಡ್ಡಿ ಒಡೇರ್ ಅಲಾತಿದಾ ಅದಕ ಬಿಸಗಲ್ ವಯ್ಯಾರ ಏನೋ ಅಂತ ಬಂದಿದಾ” ಅಂದುಳ ಸುಬ್ಬಕ್ಕ
ಹಾಂಗಾ! ಅಂಬಷ್ಟರಗೇ….ದ್ಯಾವುರ್ ಮನ್ಯಾಗಿಂದೇ…”ಏ ಇಗೊತು ಬಿಸಗಲ್ ಸಿಗಲ್ದೇ, ನಾ ಬೀ ತೊಗ್ರಿ ಒಣ್ಯಾಕಿದಾ ನಂಗ್ ಬಿ ಒಡಿಲಾಕ್ ಬೇಕ” ಅಂತ ಅವ್ವು ಪೂಜೆ ಮಾಡ್ಕೊತಾ ಜೋರ್ದಿಂದ ಹೇಳಿದ ಕೇಳಿ ಸುಬ್ಬಕ್ಕ ಪರಕಾನಿ ದಾಟಿ ಮನಿ ಹಾದಿ ಹಿಡ್ದುಳ.

ಯವಾss!…ನಾ ಇವತ್ತ ಈಸುಲು ಕಲಿಲಾಕ ಹೋಗಬೇಕ ಅಲಾತಿದಾ, ಶಾಳಿ ಬಿ ಛುಟ್ಟಿ ಆಗ್ಯಾವ್ ಮನ್ಯಾಗ್ ಕುಂತಿ ಏನ್ ಮಾಡ್ಲಿ, ಮದ್ಯಾಣ ಬಾರಾ ಆಯ್ತ ಅಂದುರ ಬಿಸುಲು ಬೆಂಕಿ ಆಗ್ಲಾತುದ್, ಮದ್ಯಾಣ್ಯಾಳಿ ಥೊಡೆ ತಣ್ಣುಗ ಮಕೊಂಬರ ಅಂದುರ್ ಬಿ ಈ ಕರೆಂಟ್ ಹೋಗು-ಬಾ ಮಾಡ್ತುದ್ʼ ಅಂದಾ.
ʼಎಲ್ಲಿಗಿ ಭ್ಯಾಡಾ ಸುಮ್ಮುನ ಮನ್ಯಾಗ ಇರು. ಕಾಲ ಖರಾಬ ಅದಾ, ಯಾರರಾ ಬೇಕಂತ ನೂಕೊಟ್ಟುರ ಅಂದುರ ನೀರ ಪಾಲಾಯ್ತಿ, ಅಂಗಳದಾಗ ಬೇಣಗಿಡ ಕೆಳಗ ಹೊರುಸ ಹಾಕೊಂಡಿ ಮಕೊʼ ಅಂತ ಅಂದುಳ. ʼಬಿಸಲ ಬಾಳ ಆಗಲತುದ ಯವಾ, ಅದಕ್ಕ ಜಲ್ದಿ ಹೋಗಿ ಬಿಸಲ ಏರಟಗೇ ಮನಿಗಿ ಬರ್ಬೇಕ ಅಲಾತಿದಾʼ ಅಂತ ಹೇಳ್ದುರಬಿ, ನಿಂಗವ್ವ ಭ್ಯಾಡಂದುರ ಭ್ಯಾಡ ಅಂತ ಕುಂತುಳ.
ʼಪೈಲೆನೇ ಕುಡಿಲಾಕ್ ಊರಾಗ ನೀರ ಸಿಗಲ್ ಹೋಗ್ಯಾವ್, ಏಟ್ ಹೈರಾಣ ಗತಿ ಬಂದುದ್, ಮಸ್ಕಿನಾಗ ಚಾರ್ ಬಜೆ ಎದ್ದಿ ಬಾವಿಗಿ ಸೇಂದಿ ತರ್ಲಾತಿದೇವ. ಒಂದಿನಾ ಒಂದ್ ತಂಬಗಿ ನೀರ್ ತಂದ ಖುನಾ ಇಲ್ಲ ನಿಂಗ್. ಹೊಲ್ದಾಗ ದೊಡ್ಡ ಜ್ವಾಳಾ ಕೊಯ್ಲಾಕ್ ಬಂದುದ, ಈ ಬಿಸಿಲಿಗಿ ಅಂಜಿ ಯಾರ್ಬಿ ಕೂಲಿಗಿ ಬರಲ ಹೋಗ್ಯಾರ್, ನಿಮ್ ಬಾಬಾ, ನಾವು ಮುಂಜಾನತ ಭೇಗಿ ಎದ್ದಿ ಹೊಲುಕ್ಹೋಗಿ ಜ್ವಾಳಾ ರಾಶಿ ಮಾಡ್ಕೊಂಬರಿ ಅಂದುರ ನೀ ಬಿಸಲಾಗ ಸುಮ್ನೆ ಪಿರಿಪಿರಿ ತಿರ್ಕೊತಾ ಇರಲತಿʼ ಅಂತ ಸಿಟ್ಟಿಗಿ ಬಂದುಳ.
ಹೊತ್ರಾಳಿ ಏಳತನಕಾ ಸೂರ್ಯ ಹೊಂಟಾನ, ಬಿಸಲ ರಪರಪ ಬಡಿಲತುದ. ಮದ್ಯಾಣ ಬಾರಾ ಆಯ್ತು ಅಂದುರ ಮುಗಿತು, ಮನ್ಯಾಗ ಇದ್ದುರ ಬಿ ಬೆಂಕ್ಯಾಗ ಕುಂತಿನ್ಹಾಗ ಅನಸ್ಲಾತುದ. ಅದಕ್ಕೆ ಈ ಬ್ಯಾಸಗಿ ಮುಗ್ಯಾತನಕ ಎತ್ತಬಿ ಬಿಸಲಾಗ ಭಾಳ ಓಡಾಡಬ್ಯಾಡ. ಬಿಸಲ ಬಡದು ಬೇಮಾರ ಬಿದ್ದೂರ್ ತೋಲ್ ಹೈರಾಣ ಅದ ಮತ್ತ, ಇದ್ದಿಂದ ರೊಕ್ಕ ದವಖಾನಿಗಿ ಹಾಕ್ಬೇಕ ಆಯ್ತುದ್ʼ ಅಂತ ಗಂಗಾಳದಾಗ ಧಪಾಟಿ, ಮೊಸುರ, ಹಸಿ ಮೆಣಸಿನಕಾಯಿ ಖಾರಾ ನೀಡಕೊಂಡ ಬಂದಿ ಉಳ್ಳಾಕ ಕರ್ದುಳ.

ಅವತ್ತು ಬಸವ ಜಯಂತಿ ಹಬ್ಬ, ಬಳಗದಾಗ ಭಾಳ ಮದಿ ಇದ್ದುವ್, ಎಲ್ಲಾ ಕಡಿ ಹೋಗದ ಆಗಲಾ ಅಂತ, ಖಾಸ್ ಇದ್ದೋರ್ ಮದಿಗಿ ಹೋಗರಿ ಅಂತ ನಿಂಗವ್ವ ಕ್ವಾಟಿ ಹೋಗೊ ಬಸ್ಸಿಗಿ ಕಾಯ್ಕೊತಾ ನಿಂತಿದುಳ. ಮದ್ಯಾಣ ಸಾಡೇ ಬಾರಕ ಅಕ್ಷತಾ ಬಿಳ್ತಾವ ಅಂತ ಜಲ್ದಿ ಬಂದಿ ನಿಂತುರ, ಒಂದೂ ಬಸ್ ಬರಲುವ. ಬರೋ ಬಸ್ಸಿನಾಗ ನಿಂದ್ರಾಲಾಕ ಬಿ ಜಾಗ ಇಲದ್ಹಾಂಗ ಮಂದಿ ನೋಡಿ ʼಈ ಬಸ್ ಫಿರಿ ಯಾಕ ಮಡ್ಯಾದ್ ಏನೊ ಈ ಗೌರ್ಮೆಂಟ್ʼ ಅಂತ ಬೈಯ್ಕೊತು ನಿಂತುಳ.
ಬಿಸಿಲಿನ ಝಳಕ ಜಿವಾ ತಳಮಳ ಮಾಡ್ಲಾತಿತ್, ನೀರಡಿಕಿ ಭಾಳ್ ಆಗ್ಯಾವ ಅಂತ ಒಂದು ಗಿಲಾಸ ಕಬ್ಬಿನ ಹಾಲು ಕೊಂಡಿ ಸಮಧಾನ ಆದುಳ. ನಿಂತಿ-ನಿಂತಿ ಸಾಕಾಗಿ ಆಕ್ರಿಗಿ ಸರ್ಕಾರಿ ಬಸ್ಸಿನಾಗ ಫುಕ್ಸಟ್ಟೆ ಹೋಗದೇ ಭ್ಯಾಡಂತ ರೊಕ್ಕ ಕೊಟ್ಟಿ ಮ್ಯಾಕ್ಸಿದಾಗ ಕುಂತಿ ಹೋದುಳ.
ನಮ್ಕಡೆ ಬಿಸಿಲು ಭಾಳ ಏನೋ ಅದಾ, ಖರೇ ಕಬ್ಬಿನ ಹಾಲು, ಟೆಂಗಿನ ನೀರು, ಮಣ್ಣಿನ ಗಡಿದಾಗಿಂದ ನೀರು ಕೊಂಡಿ ಸಮಧಾನ ಆಗ್ತೇವ್, ಅದರ ಸರಿ ಮಟಮಟ ಮದ್ಯಾಣ್ಯಾಳಿ ಚಾಳಿಸ್ ಡಿಗ್ರಿ ಮ್ಯಾಲ ಬಿಸಿಲು ಇದ್ದೂರ ಬೀ ಯಾರಾರ ನೆಂಟುರ, ದೋಸ್ತುರ ಸಿಕ್ಕುರ ಅಂದುರ ʼಬರೀ ಥೊಡೆ ಚಾ ಕುಡ್ಯಾರಿʼ ಅನ್ಕೊತಾ ಹೋಟೆಲ್ದಾಗ ಕುಂತಿ ಮಾತ್ ಹೇಳದ ಇಲ್ಲಿ ಮಾಮೂಲಿ.
ʼನಾಕೈದ ದಿನ ಬಿಸಿಲು ಭಾಳ್ ಅದಾ, ಯಾರೂ ಬಿಸಿಲಾಗ ತಿರಗಭ್ಯಾಡ್ರಿ, ಹೊರಗ ಬಿಸಿಲಾಗ ಹೋದುರ ತಲಿಮ್ಯಾಲ್ ಟೋಪಿ, ಟವೆಲ್ ಹಾಕೋರಿ, ಗಾಡಿ ಮ್ಯಾಲ ಹೋಗೋರು ಹೆಲಿಮೇಟ್ ಹಾಕೋರಿʼ ಅಂತ ಯಾರ ಹೇಳ್ದುರನೂ ನಮ್ ಮಂದಿ ಕೇಳೋ ಮಾತೇ ಇಲ್ಲ.

ನಡು ಮದ್ಯಾಣ್ಯಾಳಿ ಅಂಗಡ್ಯಾಗ ಮಂದಿ ಓಡ್ಯಾಡತಾರ, ಸಾಟಿ ವರ್ಷಿನ ಅಜ್ಜಿ ಕಡಕ್ ಬಿಸಲು ಇದ್ದೂರ ಬಿ ಘಿನಾಸಲ್ದೆ ತಲಿಮ್ಯಾಲ ಸೆರಗ ಹಾಕೊಂಡಿ ರೋಡಿನ ಬಾಜು ಕುಂತಿ ಬುಟ್ಟ್ಯಾಗ ಮಳ್ಳೆಕಾಯಿ ಮಾರ್ಕೋತಾ ಕೂಡ್ತಾಳ. ಬಿಸಿಲಿಗಿ ಅಂಜಿ ಮಸ್ಕಿನಾಗೇ ಉಳಾಗಡ್ಡಿ ತೆಗಿಲಾಕ, ಜ್ವಾಳಾ ಕೊಯ್ಲಾಕ್ ಹೋಗಿನ ಹೆಣ್ಮಕ್ಳು ಬಿಸುಲ ನೆತ್ತಿ ಮ್ಯಾಲ ಬಂದ್ರು ಹಂಗೇ ಧಂದ್ಯಾ ಮಾಡ್ತಾರ. ಮಿರ್ಗ್ ಬಲ್ಲಿ ಹೊಂಟುದ ಅಂತ ನೇಗಿಲ-ಕುಂಟಿ ಹೊಡೆದ ಧಂದ್ಯಾ ಜೋರ್ದಿಂದ್ ನಡಿತುದ. ನೀರಿನ ಟ್ಯಾಂಕರ್ ಹೋದುರ ಮತ್ತ್ ನೀರ ಸಿಗಲ್ಲಾ ಅಂತ ಹೆಣ್ಮಕ್ಕುಳ ಬಿಸಿಲಿಗಿ ನೋಡಲ್ದೆ ಖಾಲಿ ಕೊಡ ಹಿಡ್ದಿ ಓಡ್ತಾರ. ಸಾಳಿ ಛುಟ್ಟಿ ಅವಂತ ಆಯೀ-ಮುತ್ಯಾನ ಮನೀಗಿ ಬಂದಿನ ಮೊಮ್ಮಕ್ಕಳು ಬಾಯಿ-ಕೆರಿದಾಗ ಹೋಗಿ ಈಸುಲ ಆಡಕೊತಾ, ಗಿಡ-ಗಂಟಿ ತಿರಕೊತಾ ಮಜಾ ಮಾಡ್ತಾರ.
ಕಲ್ಯಾಣ ಕರ್ನಾಟಕ ಮಂದಿಗಿ ಸುಡು ಬಿಸಿಲಂದ್ರೆ ಭಯವಿಲ್ಲ, ಅದು ಚಾಳಿಸ್ ಪಾರ್ ಆದ್ರೂ ಚಿಂತಿಯಿಲ್ಲ, ಖರೇ ಮಳಗಾಲದಾಗ ಗೊಂಗಡಿ ತೊಯ್ಯೋಟ ಮಳಿ ಬಿದ್ದುರ್ ಸಾಕ್, ʼಇದೇನು ಮಳಿ ಸಾಕ್ ಮಾಡ್ಯಾದ್ʼ ಅನ್ಕೊತಾ ಕೆಸರಿನಾಗ ಕಾಲ ಇಡ್ಲಾಕ್ ಅಂಜಿ ಮನ್ಯಾಗೆ ಇರ್ತಾರ. ಈ ಕಡೆ ಮಂದಿ ಅದೇಟು ಪುಣ್ಯ ಮಾಡಿದೆವೋ ಏನೋ ಅಂದ್ಹಾಂಗ ʼಬ್ಯಾಸಕಿದಾಗ ಬಿಸಿಲು ಭಾಳಾಗಿ ಕುಡಿಲಾಕ ನೀರಿಗ ಬರ, ಮಳಗಾಲದಾಗ ಹೊಲ-ಮಣ್ಣು-ಬೆಳಿ ಎಲ್ಲ ಹರ್ಕೊಂಡಿ ಹೋಗೊಟ ಮಳಿ ಬಿಳ್ತುದ, ಚಳಗಾಲದಾಗ ಮದ್ಯಾಣ ಏಕ್, ದೀಡ್ ಆದ್ರೂ ಮೈದಾಗಿಂದ ಛಳಿ ಹೋಗಲ್ಲಾʼ. ಬೇಗನಾ ತಲೀಗಿ ಟೋಪಿ, ಮೈದಾಗ ಸ್ವೇಟರ್ ಹಾಕೊಂಡೇ ಇರ್ಬೇಕ. ಇದಕ್ಕೆಲ್ಲ ಲೆಕ್ಕ ಹಾಕಲ್ದೆ ಈ ʼಉತ್ತರ ದಿಕ್ಕಿನ ಮಂದಿ ಹ್ಯಾಂಗ ಜಿಂದಗಿ ಮಾಡ್ತಾರೋʼ ಯಪ್ಪಾ ಟೆನ್ಸನ್ ಮಾಡ್ಕೊಂಡಿ ದಕ್ಷಿಣ ದಿಕ್ಕಿನೊರಿಗಿ ನಿದ್ದಿ ಬರಲ್ಲ.!
ಕ್ವಾಟಿಗಿ ಹೋದಾಕಿ ನಿಂಗವ್ವ ಮದಿ ಹಚ್ಚಿ, ಉಂಡಿ ಮನೀಗಿ ಹೋಗರಿ ಅಂತ ಆಟೋದಾಗ ಬಸ್ ಸ್ಟ್ಯಾಂಡ್ ಹೋಗ್ಲಾತಿನಾಗ ಮಣ್ಣಿನ ಗಡಿಗಿ ನೋಡಿ ಆಟೊದಗಿಂದ ಕೆಳಗಿಳಿದು ಒಂದು ಕೊಡ ನೀರು ಹಿಡಿಯೊ ʼಸುರಾಯಿʼ ಖರೀದಿ ಮಾಡಿ ಬಸ್ಸಿಗಿ ಹತ್ತಿ ಮನೀಗಿ ಬಂದುಳ. ಮನೀಗಿ ಬರಾತನಕ ಬಿಸಿಲು ಹೋಗಿ ಮಾಡ ಮುಚ್ಕೊಂಡಿ ಬಂದು ಪೂರ್ತಿ ಕತ್ತುಲ ಆಗಿನ್ಹಾಂಗ ಆಗಿತು, ಘಾಡಗುಡ ಅಂತ ಮಿಂಚಲಾತಿತ, ಗಾಳಿಗಿ ಆಜುಬಾಜು ಮನಿ ತಗಡದ ಅವಾಜ್ ಹೊಂಟಿತ. ʼಈಸುಲ್ ಆಡ್ಲಾಕ್ ಹೋಗಬ್ಯಾಡ ಅಂದ್ರು ಹೋಗ್ಯಾನʼ ಅಂತ ಮಗನಿಗ ಬೈಯ್ಕೊತಾ ಮನೀ ಕೀಲಿ ತೆಗೆತನ್ಕಾ ಅವಖಳಿ ಮಳಿ ಚಾಲು ಆಯ್ತು, ಮಳಿ ಸಂಕ್ಟ ಗಾರ್ ಹೊಡಿಲತುವ.
ಮದೀಗಿ ಹೋಗಿ ಬಂದಿ ಸಾಕ್ ಆಗ್ಯಾದ್ ಜರಾ ಚಾss..ಮಾಡರ ಅಂತ ಹೋಗಿ ಗ್ಯಾಸ್ ಚಾಲು ಮಾಡ್ಲಾಕ್ ಹೋದುರ್ ಗ್ಯಾಸ್ ಬೀ ಖಾಲಿ ಆಗಿತ. ಈಗೇನ ಮಾಡ್ಲಾಕ್ ಆಯ್ತುದ್, ʼಬ್ಯಾರೆ ದೇಶದಾಗ ಹೊಡ್ಕೊಂಬದ ನಡ್ದುರ್ ನಂಬಲ್ಲಿ ಗ್ಯಾಸಿಗಿ ಬರ ಬಂತ, ಮತ್ ಈಗ ಒಲಿ ಹಚ್ಚದೇ ಪಾಳಿ ಬಂತʼ ಅನ್ಕೊತಾ ಒಲ್ಯಾಗ ಒಣಗಿನ ಬೇಸ್ರಂ ಕಟಗಿ ಹಾಕಿ ಕಡ್ಡಿ ಗೀರಿ ಉರಿ ಹಚ್ಚಿ ಚಾ ಇಟ್ಟುಳ. ಅದೇ ಟೈಮಿಗಿ ಬಾಜು ಮನಿ ಸುಬಕ್ಕ ಬಂದಿ, ʼಎಕ್ಕಾ ಇವತ್ ಬ್ಯಾಳಿ ಒಡೆರ ಅಂದಿದಾ, ಯಾಕೊ ಮಳಿ-ಮಾಡ ನೋಡಿ ಸುಮುನ್ ಕುಂತಿದಾ, ʼಇವತ್ತ ನೀ ಕ್ವಾಟಿಗಿ ಮದಿಗಿ ಹೋಗಿದಿ? ಅಂತ ಖುನಾ ಇದ್ರೂ ಮತ್ ಕೇಳ್ಕೊತಾ ಕುಂತಳು.

ಪಡಸಾಲಿದಾಗ ನಿಂಗವ್ವ-ಸುಬ್ಬಕ್ಕ ಗರಂ ಚಾ ಕುಡಿತಾ ಮಾತಾಡ್ಕೊತಾ ಕುಂತುರ. ಬರಾ ಪಂಚೀಸ್ ತಾರೀಕಿಗಿ ಮೂಲಿಮನಿ ಮಲ್ಲವ್ವನ ಮಗಳ ಮದಿ ಅದಲಾ, ನಾಳಿಗಿ ಸೆಂಡಗಿ ಹಾಕಲಾಕ್ ಬಾ ಅಂದಾರ ನೋಡ ನಿಂಗ ಬಿʼ ಅಂದುಳ. ಏನ್ ಮಾಡ್ಬೇಕ್ ಏನೊ ಸುಬಕ್ಕ ʼಈ ಬ್ಯಾಸಕಿದಾಗ ಥೊಡೆರಾ ಶಾಂವ್ಗಿ, ಹಪ್ಪುಳ ಹಾಕರೆನೊ ಅಂದುರ ಆಗಲೇ ಹೋಗ್ಯಾದ, ಬ್ಯಾಸಕ್ಯಾಗ ಮಂದಿ ಮಾಡ್ಕೊತ ನೆಂಟುರ ಮನೀ ತಿರಗದೇ ಆಯ್ತುದ್ʼ ನೋಡ ಅಂದುಳ ನಿಂಗವ್ವ. ಹ್ಹೂ..ಎಕ್ಕಾ, ʼನಂಬಲ್ಲಿ ಗ್ಯಾಸ್ ಮುಗಿದ್ಹೋಗಿ ಎಂಟ ದಿನಾ ಆಯ್ತು, ಒಲ್ಯಾಗಿಂದ ಕಟಗಿ ಮುಗದಾವ್, ಸಿವಾರದಾಗ ಹೋಗಿ ಕಟಗಿ-ಕುಳ್ಳು ಆಯ್ಕೊಂಡಿ ಬರರಿ ಅಂದುರ ಈ ಬಿಸಲೊಂದು ಬೆಂಕಿ ಆಗ್ಯಾದ್, ಹೋದೊರ್ಷ ಹಾಕಿಂದ ಕುಳಬಾನ ಪೂರ್ತಿ ಖಪ್ ಆಗ್ಯಾದ್, ಹಿನಾ ಥೊಡೆ ಇದ್ದುವ್, ಎಲ್ಲ ಒಯ್ದಿ ಹೋಳಿ ಸುಟ್ಟಾರ, ಅನ್ಕೊತಾ ಗಂಡ ಕರ್ದಿಂದ ಕೇಳಿ ಮನೀಗಿ ಹೋದುಳ ಸುಬ್ಬಕ್ಕ.
ಅವ್ವು ಮದಿಗಿ ಹೋಗ್ಯಾಳ, ಬಾಬಾ ದನ ಹೊಡ್ಕೊಂಡಿ ಹೊಲುಕ ಹೋಗ್ಯಾರ, ಕೇಳೋರು ಯಾರೂ ಇಲ್ಲಾಂತ ದೋಸ್ತುರ್ ಸಂಕ್ಟ ಸೀಮಿ ಬಾವಿದಾಗ ಈಸುಲ ಆಡ್ಲಾಕ ಹೋದ ಮಗ ಸೋಮ ಒಲಿಮ್ಯಾಲಿಂದ ಚಾ ಬೊಗಣಿ ಇಳಿಸೊ ಇಳಸಲಾಕ ಬಂದಾ. ಬೇಗನಾ ನೀರಾಗ ಆಡಿ, ಕಣ್ಣೆಲ್ಲ ಕೆಂಪುಗ ಆಗಿದುವ, ಹಸಿ ತಲಿ ತಕೊಂಡಿ ಹಂಗೇ ಬಂದಿದಾ.
ಇದನ್ನೂ ಓದಿ : ಔರಾದ್ ಸೀಮೆಯ ಕನ್ನಡ | ನಮ್ಮಾಯಿ-ಮುತ್ಯಾ ಒಂದೇ ದಿನಾ ಸರಿಹೋದ್ರೂ….!
ʼಅವ್ವು ಹೇಳಿಂದ ಮಾತ ಕೇಳಲದೇ ಹಂಗೇ ಹೋಗಿದಾ, ಹ್ಯಾಂಗ್ ಬಿ ಬೈಯ್ತಾಳʼ ಅಂತ ನೋಡಿ ನೋಡ್ಲದ್ಹಾಂಗ ಖಪ್ಪುರ ಇದ್ದಿಂದ ಮನ್ಯಾಗ ಹೋಗಿ ಕುಂತಾ. ಹಸಿವ ಭಾಳ ಆಗಿದುವ, ಒಣಗಿನ ಖಡಕ್ ರೊಟ್ಟಿ ಮೊಸುರ ಗಪಗಪ ಉಂಡಿ, ಗಟಗಟ ನೀರ ಕೊಂಡಿ ಮಕೊಂಡಾ. ಒಳಗ ಬಂದಿ ನೋಡಿ ನಿಂಗವ್ವ ʼಬೇಗಾನ ಧಂದ್ಯ ಮಾಡಿ ಬಂದಿ ಸಾಕಾಗ್ಯದಂತ ಮಕೊಂಡಿ ಏನ್? ಉಂಬದ, ತಿಂಬದ ಖಬರ ಇಲದ್ಹಾಂಗ ಹೋಗಿದೆನ್. ಮನ್ಯಾಗ್ ಗ್ಯಾಸ್ ಮುಗಿದುದ ಜಲ್ದಿ ಹೋಗಿ ಲೈನಿಗಿ ನಿಂತಿ ತಕೊಂಡಿ ಬಾʼ ಅಂತ ಮಗನಿಗ ಸಿಟ್ಟಿನಿಂದ ಬೈಯ್ಲಾಕ್ ಶುರು ಮಾಡ್ದುಳ.
ʼಹೊತ್ತು ಹೋಗ್ಯಾದ ನಿಮ್ಮವ್ವ ಏನರಾ ಅಡ್ಗಿ ಮಾಡ್ತಾಳ ಜರಾ ಮನೀ ಉಡ್ಕೊಂಡಿ ಬಾ, ಹಂಗೇ ದ್ಯಾವ್ರಿಗಿ ದೀಪಾ ಹಚ್ಚು, ಇವತ್ತು ಗರ್ಮಿ ಭಾಳ ಅದಾ ಅಂಗಳಾಗ ಹೊರ್ಸು ಹಾಕೊಂಡಿ ಇಲ್ಲೇ ಮಕೊಂಬರʼ ಅನ್ಕೊತಾ ಅಂಗಿ ತೆಗಿದಿ ಹಾಸಗಿ ತಕೊಂಡಿ ಬಂದಾ ಸೋಮನ ಅಪ್ಪ!
ಚಿತ್ರಗಳು : ಸಾಂಧರ್ಬಿಕ

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




