ಬೀದರ್ ಸೀಮೆಯ ಕನ್ನಡ | ‘ಬಿಸಿ-ಬಿಸಿ ರೊಟ್ಟಿ, ಬಳ್ಳೊಳ್ಳಿ ಖಾರಾ, ಇಲ್ಲಾ ಸೇಂಗಾದ್ ಹಿಂಡಿ…’

Date:

Advertisements
ನಾ ಅಕೀನ್ ಮಾರಿ ನೋಡ್ಕೋತಾ, "ನಿಮ್ ಉಮ್ಮರ್ ಏಟ್ ಅದಾ?" ಅಂತ ಕೇಳ್ದ. "ನಂದೂ... ಸತ್ರಿ ಮ್ಯಾಗ ನಾಕ್ ಆಗ್ಯಾವ್ರಿ. ನಮ್ದೇನು ಬರ್ದಿಟ್ಟಲ್ರಿ ನಾ ಚವ್ದಾ ವರ್ಷಿನಕಿ ಇದ್ದಾಗ ಮದಿ ಆಗ್ಯಾದ್ರಿ. ಅವಾಗ ಕುರುಬುರ್ ನಾಗಪ್ಪಂದು ಮಗ ಒಂದ್ ವರ್ಷಿನವ್ ಇದ್ದೀನು ನೋಡ್ರಿ..." ಅಂದುಳು

ನಾನು ಮತ್ ರೇಷ್ಮಾ ಖಿಡಕ್ಯಾಗ ನೋಡ್ಕೋತಾ ಕುಂತಿದೇವು. ಅಕಾಡಿಂದು ಒಬ್ಬಾಕಿ ಹೆಣ್ಮಗಳು ನಡ್ಕೋತಾ ಹೊಂಟಿಳು. ಅಕಿಗಿ ನೋಡಿ ರೇಷ್ಮಾ ಅಂದುಳು.

“ಏಟ್ ಉದ್ದುಕ್ ಹಳಾ ನೋಡ್ರಿ ಮೇಡಂ… ಹ್ಯಾಂಗ್ ಹೊಂಟಾಳ!” 

ಅದಕ್ ನಾ ಅಂದ… “ಹೊಯಿಂದಲಾ ರೇಷ್ಮಾ ಏಟರಾ ಹೈಟದಾ ಅಂತೆ?” 

Advertisements

ನಾವಿಬ್ರು ಇಷ್ಟಂದು ಮಾತ್ ಮುಗ್ಸದ್ರಾಗ ಆ ಹೆಣ್ಮಗುಳು ಒಳಗ ಬಂದಳು.

“ನಮಸ್ಕಾರಿ ಮೇಡಂ… ಹೊಸೋರು ಕಾಣ್ಸಲತೀರಿ ? ಹಳೇರು ಬಂದಿಲ್ಲೇನ್ರಿ?” ಅಂದುಳು.

“ಇಲ್ಲಮ್ಮ ಇನ್ ಮ್ಯಾಲ ನಾನೇ ಬರ್ತೀನಿ. ಹಳೇರು ರಿಟಾಯರ್ಡ ಆಗ್ಯಾರ,” ಅಂತಂದ ನಾ.

ಅದಕ್ಕಕಿ, “ಐ ತೋಲ್ ಛಲೋ ಹೆಣ್ಮಗಳ್ರಿ. ಸುರೂಸರು ಮದಿ ಮಾಡ್ಕೊಂಡು ಬಂದೀರು ನಮ್ಮೂರಿಗಿ. ಅವುರ್ ಪೂರಾ ನೌಕ್ರಿ  ಇಲ್ಲೇ ಮಾಡಿ ಮುಗ್ಸಿ ಹೋದುರ್ ನೋಡ್ರಿ. ಒಟ್ ಬದ್ಲಿನೇ ಆಗಿಲ್ರಿ ಅವರಿಗಿ. ನಮ್ಮೂರ್ ಮಗಳೇ ಅಂದಪ್ಲೇ ಆಗಿರು. ಭಾರಿ ಹೆಣ್ ಮಗುಳ್ರಿ ಪಾಪ. ಇರ್ಲಿ ಏನ್ಮಾಡ್ಲಾಕ್ ಬರ್ತದ್ರಿ? ಗೌರಮೆಂಟ್ ಹೋಗ್ ಅಂದುರ್ ಹೋಗ್ಬೇಕೈತುದಾ ಇರು ಅಂದರ್ ಇರ್ಬೇಕ್ ಐಯ್ತುದ. ಉಮ್ಮರ್ ಬಿ ಆಗಿತೇನೋ ನೌಕ್ರಿದು ಅದಕ್ ಮುಗ್ದದ್ ಅವರ್ದು ಹೋಗ್ಯಾರ. ನಾವೇ ರಾಜಾ ಮನಸ್ಸೇರು ನೋಡ್ರಿ. ನಮ್ಮ ಮನಸ್ ಒಲ್ಲಂದುರೇ ರಿಟಾರ್ಡಮೆಂಟ್ ಆಗಬೇಕ್ರಿ,” ಅಂತಂದು ನಕ್ಕುಳು. 

ಒಂಜರಾ ನಿಂತು, “ಈಗ್ ನೀವೇ ಇರ್ತೀರೇನ್ರಿ? ಇರ್ಲಿ ತೊಕೋರಿ ಯಾರ್ ಬಂದುರ್ಬಿ ನಮಗ ವೋಟೆ ಅದಾ. ನಾವ್ ನಿಮಗ ಜಿವಾ ಮಾಡ್ದುರಾ, ನೀವ್ ಬಿ ನಮಗ್ ಜಿವಾ ಮಾಡ್ತೀರಿ. ಬರೋಬರಿ ಅದಾ ಅಲ್ರಿ ನಾ ಅಂಬಾದು? ಜಿವಾ ಕೊಟ್ಟು ಜಿವಾ ತಕೋಮದ್ ಅದಾ. ಏನ್ ಒಯ್ಯದದಾ ರೀ ಈ ಜಿಂದಗಿದಾಗ? ಎಲ್ಲಾ ಕಿಲ್ಲೇ ಬಿಟ್ ಹೋಗದದಾ ನೋಡ್ರಿ ಮೇಡಂ,” ಅಂತ ತಾನೇ ಕೊಶನ್ ಕೇಳಿ ತಾನೇ ಉತ್ತರ ಹೇಳ್ಕೋತಾ ಕುಂತುಳು.

ನಾ ಅಕಿನ್ ಮಾತ್ಕೇಳಿ ಮೂಗಿನಾಗ ನಕ್ಕು ಸುಮ್ಮುನಾದ್.

ಈ ಕನ್ನಡ ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ರಾಜುಗನ ಬಂಗರ, ಕರಪ್ಪು ಚಾಟಿ

“ಈ ಹಿಂದ್ಕೀನ್ ಮಂದೀನೇ ಹಿಂಗ್ ಎದುರು ಯಾರ್ ಇರ್ತಾರ ಅವರ್ ಜೋಡಿ ಛಂದ್ ನಕ್ಕೋತ ಖೆಲ್ಕೋತ ಇರ್ತಾರ. ಜಿವಕ್ ಜಿವಾ ಕೊಡ್ತಾರ. ಯಾಳ್ಯಾ ಆಪತ್ತೀಗಿ ಒಬ್ಬರಿಗೊಬ್ಬುರು ಐಯ್ತಾರ. ಅಚಾನಕ್ ಊರ ಬಿಟ್ ಹೋದುರಂದರ್ ಥೋಡೆ ಹಳಹಳಿ ಮಾಡ್ಕೊಂಡು ಮತ್ ತಮ್ ಕೆಲ್ಸದಾಗ್ ತಾವ್ ಬಿಜಿ ಐಯ್ತಾರ. ಮತ್ ಹೊಸೋರು ಬಂದವರ್ ಜೋಡಿ  ಹಚ್ಕೊಂಡ್ ಹೊಂದ್ಕೊಂಡ್ ಇರ್ತಾರ ಒಟ್ ಯಾವದ್ ಬಿ ತಲಿಗಿ ಹಚ್ಕೊಂಡು ಕುಂದ್ರಾಲ. ಬಿಂದಾಸ್ ಇರ್ತಾರ ಅಂತ ಅನ್ಸತ್ ನನಗ…”

ಅಕಿ ಮತ್ ಮಾತ್ ಸುರು ಮಾಡ್ದುಳ್. “ಆಂ… ಮೇಡಂಮ್ಮೋರೆ ನಮ್ಮನಿ ಬಾಜು ಕುರುಬುರ ನಾಗಪ್ಪಂದ ಕಾಲು ಉಬ್ಬಿ ಹೋಗ್ಯಾದ್ರಿ ಮೇಡಂ. ಅವನ ಹೆಣ್ತಿಗಿ ಬಿ ಉಬ್ಬುಸ್ ಹೆಚ್ಚ ಆಗಿ ತೇಕೇ ತೇಕ್ಲತಳ. ನಾ ಇಕಾಡಿ ಬರಾಮುಂದ ಸಿಕ್ಕಿದ ರಿ, ನನಗ ನೋಡಿ, ‘ಗುರ್ತಾಯಿ ದವಾಖಾನಿ ಕಡಿಗಿ ಹೊಂಟಿರಿ? ದವಾಖಾನಿ ತನ್ಕ ನಡ್ಕೋತ ಬರಾದಾಗಲ್ ಹೊಂಟುದ ನನಗ.  ಥೋಡೆ ನಡ್ದುರ್ ಬಿ ದಮ್ಮ ಬರ್ಲತುದ. ಮುದುಕುಂದ್ ತಕ್ಲೀಪ್ ಬಕ್ಕೋಳ ನಡ್ದದ್ರಿ. ಕಾಲ್ ಉಬ್ಬಿ ನಗಾ ಆಗ್ಯಾದ. ಜರಾ ಬರಾಮುಂದ ಗೋಲಿ ಇಸ್ಕೊಂಡು ಬಂದುರ ಪುಣ್ಯ ಬರ್ತದ್ರಿ’ ಅಂತ ಅಂದುಳು ಅದ್ಕ ಬಂದಿದಾರಿ. ಪಾಪ ಮುದುಕುನ್ ಕಾಲಿಗಿ ಕೊಡ್ಡಿ ಹತ್ತಿತಂತ ಅಂವಾ ಕದು ಟೆಕ್ನಾಸಿಂದು ಟೀಕಾ ತಕೊಂಡಿಲ್ಲಂತರಿ. ಈಗದು ಕೀವಾ ತುಂಬ್ಕೋತಾ ಹೊಂಟುದಾ ಕಥೈಯಿ ಮಾಯಾಲೊಂಟುದ್ರಿ. ದವಾಖಾನಿಗಿ ಹೋದುರಾ, ‘ಸಕ್ರಿ ಬ್ಯಾನಿ ಅದಾ, ಕದು ಅದಾ, ಕಿದು ಅದಾ ಅಂತಾ ಶೆಂಬೋರ್ ಬ್ಯಾನಿ ಹೇಳಿ, ಉಲ್ಟಾ ಎದಿ ಒಡ್ಸತಾವ್ ನಾ ಹೋಗಲ್ಲೆಪ್ಪೊ’ ಅಂತಂದು, ಯಾರ್ ಏಟ್ ಹೇಳ್ದುರ್ ಬಿ ಹೋಗಲೇ ಹೊಂಟಾನ್ರಿ ಈಗ ಅದು ಭಿರ್ಸ ಆಗಿ ಹೈರಾಣ ಹೈರಾಣ ಆಗ್ಯಾದ್ರಿ. ಪೂರಾ ತೊಡಿತನ ಉಬ್ಬ್ಯಾದ್ ನೋಡ್ರಿ. ಸಾಯಾ ಮದ್ದು ಇದ್ದುರ ಕುಡ್ರಿ ಅಂತ ಅಳ್ತಾನ್ರಿ. ಪಾಪ ದುನ್ಯಾದ್ ಧಂದ್ಯಾ ಮಾಡಾ ಮನಶ್ಯಾರಿ ಮೇಡಂ. ಉಮ್ಮರ್ ಭಿ ತೋಲ್ ಆಗ್ಯಾದ್ರಿ ತಾಳಲೊಂಟನ್ರಿ. ನೆಳ್ಳೇ ನೆಳ್ತಾನ. ಯಾವರ ಬ್ಯಾನ್ರಿ ಸಾಯಾ ಗೋಲಿ ಇದ್ದುರಾ ಕುಡ್ರಿ ಒಯ್ದ ಕುಡ್ತಾ. ಗೋಲಿ ನುಂಗಿ ಥೋಡೆ ನಿವಾಂತ ನಿದ್ದಿ ಮಾಡ್ಲಿ ಪಾಪ,” ಅಂತಂದುಳು.

ಈ ಕನ್ನಡ ಕೇಳಿದ್ದೀರಾ?: ಕೆ ಆರ್‌ ಪೇಟೆ ಸೀಮೆಯ ಕನ್ನಡ | ಸಿಟೀಲಿ ಕಾರ್ಮಿಕ್ರಂಗೆ ಅಳ್ಳೀಲೂ ಕೂಲಿಕಾರ್‍ರ ಸ್ರಮ ಈರ್ತರೆ

ನಾ ಅಕೀನ್ ಮಾರಿ ನೋಡ್ಕೋತಾ, “ನಿಮ್ ಉಮ್ಮರ್ ಏಟ್ ಅದಾ?” ಅಂತ ಕೇಳ್ದ. 

“ನಂದೂ… ಸತ್ರಿ ಮ್ಯಾಗ ನಾಕ್ ಆಗ್ಯಾವ್ರಿ. ನಮ್ದೇನು ಬರ್ದಿಟ್ಟಲ್ರಿ ನಾ ಚವ್ದಾ ವರ್ಷಿನಕಿ ಇದ್ದಾಗ ಮದಿ ಆಗ್ಯಾದ್ರಿ. ಅವಾಗ ಕುರುಬುರ್ ನಾಗಪ್ಪಂದು ಮಗ ಒಂದ್ ವರ್ಷಿನವ್ ಇದ್ದೀನು ನೋಡ್ರಿ. ಈಗ ಅವನೀಗಿ ಸಾಠಿ ಮುಗ್ದುವಂತ ಮನ್ನ ಪೆನ್ಚನ್ಕಾ ಫಾರಂ ತುಂಬ್ಯಾರ್ರಿ. ಅದರ ಹಿಸಾಬಿನ್ ಮ್ಯಾಗ ನನಗ ಸತ್ರಿ ಮ್ಯಾಗ ನಾಕ್ ಇಲ್ ಐದ್ ಆಗಿರ್ ಬೇಕ್ ನೋಡ್ರಿ,” ಅಂದುಳು.

“ಆ… ಸತ್ರಿ ಮ್ಯಾಗ ಇದ್ದೂರ್ ಬಿ ಏಟ್ ಖಡೀ ಇದ್ದೀರಿ? ಘಸಾ-ಘಸಾ ನಡ್ಕೋತ ಬಂದ್ರಿ? ಥೋಡೇ ಭಿ ಧಂಡಾ ಬಗ್ಗಿಲ್ಲ ನಿಮ್ದು. ಏನ್ ತಿಂದಿರಿ ಹಂಥಾದು?” ಅಂತ್ ಕೇಳ್ದ.

ಅದ್ಕಕಿ ಅಂದುಳು… “ನಿಮ್ಮೋಟ್ ಛಂದ್ ಛಂದ್ ನಮಗ್ ಸಿಕ್ಕಿಲ್ರಿ ಮೇಡಂಮ್ಮೋರೆ. ಕಂಡುದ್ ತಿಂದುರ ಖಂಡುಗ್ ತಾಕತ್ ಬರ್ತದಂತ. ಮೈ ತುಂಬಾ ಧಂದ್ಯಾ ಮಾಡಿ, ಕಣ್ತುಂಬಾ ನಿದ್ದಿ ಮಾಡ್ತಿದೇವ್ರಿ. ಮತ್ ಮಾಡಿದೇವ್. ನೋಡ್ರಿ ಇದ್ಕ ಬಿಟ್ಟುರ ನಮ್ಮ ಹೊಲ್ದಾಗ ಏನೇನ್ ಬೆಳಿತಿದೇವು ಕವೇ ಉಂಡಿದೇವು ನೋಡ್ರಿ. ಘಾಣ್ಗೇರು ಘಾಣದಾಗ್ ಹಿಡ್ದಿಂದು ಎಣ್ಣಿ ತರ್ತಿದೇವ್ರಿ. ಈಗಿನಪ್ಲೆ ಎನ್ ರಿಪಂಡ್ ಆಯಿಲ್ ಅಂಥಾವೇನ್ ಬಿ ಸಿಗ್ತಿದಿಲ್ರಿ. ಬಿಸಿ-ಬಿಸಿ ರೊಟ್ಟಿ, ಬಳ್ಳೊಳ್ಳಿ ಖಾರಾ, ಇಲ್ಲಾ ಸೇಂಗಾದ್ ಹಿಂಡಿ, ಕಾರೋಳ ಹಿಂಡಿ, ಅಗಸಿ ಹಿಂಡಿ ಇವತರ್ ಮ್ಯಾಗ ಥೋಡೆ ಎಣ್ಣಿ ಹಾಕ್ಕೊಂಡು ಉಣ್ತಿದೇವ್ರಿ. ಅವಾಗೆಲ್ಲ ನೋಡ್ರಿ ಖಗ್ಗ ಟಮಟಾಕಾಯಿ ಖಾರಾ, ಹಸಿಮೆಣಸಿನ್ ಕಾಯಿ ಖಾರಾ, ಆಯ್ತು ಮಾನಕಾಯಿ ಖಾರಾ, ಉಳ್ಳಾಗಡ್ಡಿ ಖಾರಾ, ನಿಂಬಿಕಾಯಿ ಖಾರಾ, ಗಜನಿಂಬಿ ಖಾರಾ, ಕಲ್ ಸಬ್ಸಗಿ ಪಲ್ಯ, ರಾಜಗೀರಿ ಪಲ್ಯಾ, ನುಚ್ಚ ಹಾಕಿಂದು ಫುಂಡಿಪಲ್ಯ, ಚೊಗ್ಚಿ ಪಲ್ಯ, ಜವಾರಿ ಭೆಂಡಿಕಾಯಿ ಬದ್ನಿಕಾಯಿ ಸೋರೆಕಾಯಿ, ತುಪ್ಪದ್ ಹೀರಿಕಾಯಿ, ಅವರಿಕಾಯಿ, ಇಕಾ ಕಿವೇ ಉಣತಿದೇವ್ ನೋಡ್ರಿ. ಮಜ್ಗಿ-ಮಸರು ನಮ್ಮನ್ಯಾಗ ಹಮೇಶಾ ಇರ್ತಿತ್ತು ಮೇಡಂ. ಭರಪೂರ್ ಹಾಲಾ ಮಸರು ಉಂಡಿದೇವ್ರಿ. ಮನಿ ಮುಂದಾ ಒಂದ್ ಮೂಲ್ಯಾಗ ಕುಂಬಳ ಬೆಳ್ಳಿ, ಅವರಿ ಬೆಳ್ಳಿ, ತುಪ್ಪದ್ ಹೀರಿಕಾಯಿ ಬೆಳ್ಳಿ ಹಾಕ್ತಿದೇವ್ರಿ. ಅವು ತರದೇ ಪಲ್ಯ ಮಾಡಾದು ಉಂಬಾದು. ಏನಬಿ ಸಿಗಲ್ಹೋದುರ್ ಹಿಟ್ಟಿನ ಪಲ್ಯನೇ ಗತಿರಿ ಮೇಡಂ. ಆಯ್ತು ಹಮೇಶ ಹುಣಸಿನ್ ಹುಳಿ ಹಾಕಿ ಬ್ಯಾಳಿ ಮಾಡ್ತಿದೇವು…”

ಈ ಕನ್ನಡ ಕೇಳಿದ್ದೀರಾ?: ಕಲಬುರಗಿ ಸೀಮೆಯ ಕನ್ನಡ | ‘ಹೆಣ್ಣಮಕ್ಕಳ ಮ್ಯಾಲ್ ದರ್ಪ ತೋರಸಾದೆ ಗಂಡಸ್ತನ’ ಅಂತ ನಾವೇ ನಮ್ ಮಕ್ಕಳಿಗಿ ಕಲಿಸಿದ್ದು…

“…ಸಜ್ಜಿ ರೊಟ್ಟಿ-ಜ್ವಾಳದ್ ರೊಟ್ಟಿ, ಜ್ವಾಳದ್ ಬಾನಾ, ಝುರಿ ಹಿಡ್ದು ಮಾಡ್ತೀರ್ರಿ ಅವಾಗ ತೋಲ್ ರುಚಿ ಆಯ್ತಿತ್ರಿ. ನವಣಿ, ಶಾವಿ, ಕಿವೆ ಇದ್ದೀವ್ ನೋಡ್ರಿ ಅವಾಗ ಕಳವಿ ಬಾನಾ ಅಂಬಾದು ಯಾರರ ನೆಂಟುರ್ ಬಂದುರೇ ಒಂದ್ ಹಿಡಿ ವೋಸ್ ಹಾಕ್ತೀರು. ಅಪರೂಪ್ ಅಂದುರ್ ಅಪರೂಪ್ರಿ ಮೇಡಂ ಅವಾಗ. ಈಗ ನೋಡ್ರಿ ಹೋಟಲ್ಗೋಳ್ ಏನ್ ಥ್ವಾಡೇ ಆಗ್ಯಾವ ಏನ ಸುದ್ದಿ? ರೊಕ್ಕ ಕೊಟ್ಟುರ ಮನಿ ಮುಂದ ದುನಿಯಾ ನೇ ಬಂದ ಬಿಳ್ಳತದ್ರಿ. ಪ್ಯಾಟ್ಯಾಗರ ಫೋನಿನಾಗ ಹೇಳ್ದುರ ಮನಿತನ ತಂದು ಕುಡ್ತಾರಂತ. ಸವಲತ್ತುಗೋಳು ಬಕ್ಕೋಳ್ ಆಗ್ಯಾವ್ರಿ. ಮಂದಿಗಿ ಆರಾಮ್ ಹೆಚ್ಚ ಆಗ್ಯಾದ ಶಂಬೋರ್ ಬ್ಯಾನಿ ಹೊಂಟಾವ್ರಿ. ಈ ಧಂಡಕಾ ದುಡ್ತಿ ಇರಬೇಕ್ರಿ ಯಾವ್ ಬೀಮಾರಿ ಬರಲ್ ನೋಡ್ರಿ. ಈ ಶರೀರಕ್ಕ ಆರಾಮ್ ಹೆಚ್ ಆದುರ ಅದ್ಕ ಅಂಜಕಿ ಇರಲ್ರಿ. ಬಿಂದಾಸ್ ಎಲ್ಲಾ ಬೀಮಾರಿಗೋಳಿಗಿ ಕರ್ದು ಕುಂದರ್ಸ್ಕೋತದ…”

“…ನಾವು ನೋಡ್ರಿ ಹಳಿದು ಬಿಟ್ಟಿಲ್ರಿ ಹೊಸದು ಹಿಡ್ದಿಲ್. ಇಗೋತಿಗಿ ಬಿ ಮನ್ಯಾಂದು ಹೊಲ್ದಾಗಿಂದು ಎಲ್ಲ ದಂದ್ಯಾ ನಾ ಸ್ವತಃ ಮಾಡ್ತಾ ನೋಡ್ರಿ ಇಕಾ. ಸೂರ್ಯ ಹುಟ್ಟಲ್ ಕಿಂತ ಪೈಲೇ ಏಳ್ತೇವು. ಕತ್ತಲ್ ಆಗಾದ್ರಾಗ್ ಉಂಡು ಮಕೋತೇವ್ರಿ. ನಮ ಹಿರ್ಯಾ ನಮ್ ಹಿರ್ಯಾ ಬಿ ರಿ ಇನ್ನಾ ಮಜಬೂತ್ ಹರಾ ಹಣಂದೇವ್ರ ಗುಡಿದು ಅವರೇ ಸೇವಾ ಮಾಡ್ತಾರ್. ನಸ್ಕೀನಾಗೆದ್ದು ಇಗೋತಿಗ್ಬಿ ತಣ್ಣೀರ ಮೈ ತೊಳ್ಕೊಂಡು ಗುಡಿಗಿ ಬರ್ತಾರ ಸೂರ್ಯಾ ಮೂಡದ್ರಾಗ ಪೂಜಾ ಮುಗ್ಸತಾರ. ಹಂಗಂತೆ ನಮಗ್ಯಾವ ಬ್ಯಾನಿ ಬ್ಯಾಸರ್ಕಿ ಏನೇನ್ ಇಲ್ಲ ನೋಡ್ರಿ. ಇನಾಬಿ ಕಟ್ಗಿ ಒಲಿ ಮ್ಯಾಲೇ ಅಡ್ಗಿ ಮಾಡ್ತಾ ನಾ. ಆ ಗ್ಯಾಸಿನ್ ಮ್ಯಾಗಿಂದು ನಮಗ್ ಪಸಂದ ಬರಲ್ರಿ. ಐ ಗಲೀಜ್ ಸಂಡಾಸ್ ದಿಂದೇ ಗ್ಯಾಸ್ ತಯ್ಯಾರ್ ಮಾಡ್ತಾರಂತ್ರಿ ಗಲೀಜು ನನಗಾ ಪಸಂದ ಬರಲ್ ನೋಡ್ರಿ…” ಅಂತ ಹಿಂಗೆ ಇನಾ ಏನೇನೋ ಹೇಳತೀಳು.

ಮತ್ತೊಬ್ಬಾಕಿ ಹೆಣ್ಮಗುಳು ಬಂದು, “ಕಾಲ್ ತೋಲ್ ಹರಿಲತಾವ್ರಿ ಒಂದ್ ಟೀಕಾ ಕುಡ್ರಿ ಮೇಡಂ,” ಅಂತ ಅಂದುಳು. ನೋಡ್ರಿ ನಮ್ಮುಂದ್ ಹುಟ್ಟಿದೋರಿವ್ರು. ಕಾಲ್ ಅಂತಾರ . ಕೂಡ್ ತಂಗಿ ನಾ ಬಂದು ತೋಲ್ ಯ್ಯಾಳಿ ಆಯ್ತು. ನನಗ, “ಆ ನಾಗಪ್ಪಂದು ಗೋಲಿ ಕುಡ್ರಿ ಮೇಡಂ. ಒಯ್ದ ಕುಡ್ತಾ…” ಅಂತಂದು‌ ಗೋಲಿ ಇಸ್ಗೊಂಡು ಘಸಾ-ಘಸಾ ನಡ್ಕೋತಾ ಹೋದುಳು.

ನಾ ಅಕಿ ಹೋಗಾದೇ ನೋಡ್ಕೋತಾ ಕುಂತ. ಖರೇನೆ ಅವ್ರು ಏಟ್ ಆರಾಮ ಹರಾ. ಅವರ್ದೇ ಜಿಂದಗಿ ಮಸ್ತ ಅದಾ. ಹರಾರತ್ ಅಂಬದೇ ಮಾಡ್ಕೋಮಲ್ ಅವ್ರು ಇದ್ದೋಟ್ರಾಗ ಆರಾಮ್ ಇರ್ತಾರ ಅನಸ್ತು.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ ಜೆ ಪಾರ್ವತಿ ವಿ ಸೋನಾರೆ
ಬಿ ಜೆ ಪಾರ್ವತಿ ವಿ ಸೋನಾರೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ ಎಂಬ ಕುಗ್ರಾಮದವರು. ಓದಿದ್ದು, ಬೆಳೆದದ್ದೆಲ್ಲ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ. ಅನೇಕ ನಾಟಕ, ಕಿರುಚಿತ್ರಗಳಲ್ಲಿ ಅಭಿನಯ. ಸಾಹಿತ್ಯ ಕೃತಿಗಳ ರಚನೆ.

2 COMMENTS

  1. ಹಳೆ ಕಾಲದ ಮಂದಿ ಅದಕ್ಕೆ ತುಂಬಾ ಗಟ್ಟಿಯಾಗಿರತ್ತಿದ್ರು ರೊಟ್ಟಿ ತಿಂದ್ರೆ ಗಟ್ಟಿ ಆಗ್ತಾರೆ. ಎಲ್ಲಾ ಕೆಮಿಕಲ್ ಮಿಕ್ಸ್ ಮಾಡಿರುವಂತಹ ಊಟ ತಿಂದು ದೇಹದ ತುಂಬೆಲ್ಲ ವಿಷವೇ ವಿಷ. ಕುಡಿಯೋ ನೀರಿಗೂ ದುಡ್ಡು ಕೊಡುವ ಪರಿಸ್ಥಿತಿ ಉಸಿರಾಡುವ ಗಾಳಿಗೂ ಬೆಲೆ ಕಟ್ಟುವ ದುಸ್ಥಿತಿಗೆ ಬಂದಿದ್ದೇವೆ. ಬೀದರ್ ಭಾಷೆಯಲ್ಲಿ ಮನಮುಟ್ಟುವಂತೆ ಈ ಲೇಖನ ಅಚ್ಚುಕಟ್ಟಾಗಿ ಮೂಡಿಬಂದಿದೆ.

    • ನಿಮ್ಮ ಮಾತು ಖರೇರಿ ಮೇಡಂ. ‘ಈದಿನ.ಕಾಮ್’ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತಿರುತ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X