- ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್
- ‘ಟಿವಿ ನಿರೂಪಕರು, ಬಿಜೆಪಿ ನಾಯಕರ ಮುಸ್ಲಿಂ ವಿರೋಧಿ ದ್ವೇಷ ಭಾಷಣ’ದ ಪರಿಣಾಮ ಎಂದ ರಾಣಾ ಅಯ್ಯೂಬ್
‘ನೀವು(ಮುಸ್ಲಿಮರು) ಭಾರತದಲ್ಲಿ ಜೀವಿಸಬೇಕಾದರೆ ಮೋದಿ ಹಾಗೂ ಯೋಗಿ ಹೇಳಿದಂತೆ ಕೇಳಬೇಕು’ ಎಂದು ಜೈಪುರ – ಮುಂಬೈ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಬಳಿಕ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಆರೋಪಿ, ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್, ಜೈಪುರ – ಮುಂಬೈ ರೈಲಿನಲ್ಲಿ ಸೋಮವಾರ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ತನ್ನ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿ, ಮತ್ತೊಬ್ಬ ಆರ್‌ಪಿಎಫ್ ಸಹೋದ್ಯೋಗಿ ಎಎಸ್‌ಐ ಟಿಕಾ ರಾಮ್ ಮೀನಾ ಹಾಗೂ ರೈಲಿನಲ್ಲಿ ಮುಂಬೈಗೆ ತೆರಳುತ್ತಿದ್ದ ಮೂವರು ಪ್ರಯಾಣಿಕರನ್ನು ಕೊಂದು, ಬಳಿಕ ಪರಾರಿಯಾಗಿದ್ದನು. ಆ ನಂತರ ಘಟನೆಯ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆರೋಪಿಯನ್ನು ಶಸ್ತಾಸ್ತ್ರ ಸಮೇತ ಪೊಲೀಸರು ಬಂಧಿಸಿದ್ದರು.
ಘಟನೆಯ ಬಳಿಕ ರೈಲಿನೊಳಗಿನ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಪತ್ರಕರ್ತ, ಆಲ್ಟ್ ನ್ಯೂಸ್‌ನ ಮುಹಮ್ಮದ್ ಝುಬೇರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೊಲ್ಲಲ್ಪಟ್ಟ ಮೂವರಲ್ಲಿ ಇಬ್ಬರನ್ನು ಅಬ್ದುಲ್ ಕದಿರ್, ಅಸ್ಗರ್ ಕೈ ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿಯ ಗುರುತು ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಝುಬೇರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಜೈಪುರ – ಮುಂಬೈ ರೈಲಿನಲ್ಲಿ ಗುಂಡು ಹಾರಿಸಿ ನಾಲ್ವರನ್ನು ಕೊಂದ ಆರ್‌ಪಿಎಫ್ ಸಿಬ್ಬಂದಿ
ವಿಡಿಯೋದಲ್ಲಿ ಇನ್ನೊಂದು ಬೋಗಿಯಲ್ಲಿದ್ದ ಮೂವರನ್ನು ಕೊಂದ ಬಳಿಕ ಚೇತನ್ ಸಿಂಗ್ ನೀಡಿರುವ ಮುಸ್ಲಿಂ ವಿರೋಧಿ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೊಂದು ಬೋಗಿಯಲ್ಲಿದ್ದ ಮುಸ್ಲಿಂ ವ್ಯಕ್ತಿಯನ್ನು ಕೊಂದ ಬಳಿಕ ಹಿಂದಿಯಲ್ಲಿ ಹೇಳಿಕೆ ನೀಡಿರುವ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್, ”ಹಮಾರೆ ದೇಶ್ ಕಿ ಮೀಡಿಯಾ ಯೆ ಖಬರೇ ದಿಖಾ ರಹೀ ಹೇ, ಪತಾ ಚಲ್ ರಹಾ ಹೈ ಉನ್ಕೊ, ಸಬ್ ಪತಾ ಚಲ್ ರಹಾ ಹೈ, ಇಂಕೆ ಆಕಾ ಹೆ ವಹಾ. ಅಗರ್ ಹಿಂದುಸ್ತಾನ್ ಮೆ ರೆಹನಾ ಹೈ ತೊ ಮೆ ಕೆಹೆತಾ ಹೂ ಮೋದಿ ಔರ್ ಯೋಗಿ, ಏ ದೋನೋಂ, ಔರ್ ಆಪ್‌ಕೆ ಥ್ಯಾಕ್‌ರೆ (ನಮ್ಮ ದೇಶದ ಮಾಧ್ಯಮಗಳು ಎಲ್ಲ ವಾರ್ತೆಗಳನ್ನು ತೋರಿಸುತ್ತಿದ್ದಾರೆ, ಅವರಿಗೆ ಗೊತ್ತಾಗುತ್ತಿದೆ, ಅವರಿಗೆ ಎಲ್ಲವೂ ಗೊತ್ತಾಗ್ತಾ ಇರುತ್ತದೆ. ಒಂದು ವೇಳೆ ಹಿಂದೂಸ್ತಾನದಲ್ಲಿ ಇರಬೇಕಾದರೆ ನಾನು ಹೇಳುತ್ತೇನೆ ಮೋದಿ ಹಾಗೂ ಯೋಗಿ ಮತ್ತು ನಿಮ್ಮ ಠಾಕ್ರೆ ಹೇಳಿದಂತೆ ಇರಬೇಕು) ಎಂದು ಹೇಳಿದ್ದಾನೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ರಾಣಾ ಅಯ್ಯೂಬ್, ಪ್ರಧಾನಿ ಮೋದಿಯವರೇ, ಇದು ನಿಮ್ಮ ಪಕ್ಷದ ನಾಯಕರ ಮುಸ್ಲಿಂ ವಿರೋಧಿ ದ್ವೇಷ ಭಾಷಣದ ಪರಿಣಾಮ. ಇಡೀ ಮುಸ್ಲಿಂ ಸಮುದಾಯವನ್ನು ರಾಕ್ಷಸರನ್ನಾಗಿ ತೋರಿಸುತ್ತಿರುವ ಗೋದಿ ಮಾಧ್ಯಮದ ರಕ್ತಪಿಪಾಸು ಟಿವಿ ನಿರೂಪಕರು ಕೂಡ ಇದಕ್ಕೆ ಕಾರಣ’ ಎಂದು ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.